ಕಾಡಾನೆಗಳ ಹಾವಳಿ; ಸಿಎಂ ವಿರುದ್ಧ ಮಲೆನಾಡಿಗರ ಆಕ್ರೋಶ
ಚಿಕ್ಕಮಗಳೂರು, ನವೆಂಬರ್ 24: ಕಾಡಿನ ಜಿಲ್ಲೆ ಕಾಫಿನಾಡಲ್ಲಿ ಕಾಡಾನೆ ದಾಳಿಗೆ ಕಳೆದ 2 ತಿಂಗಳಲ್ಲಿ ಮೂವರು ಸಾವನ್ನಪ್ಪಿದ್ದಾರೆ. ಒಂದೂವರೆ ತಿಂಗಳ ಹಿಂದೆ ಕಿನ್ನಿ. 20 ದಿನದ ಹಿಂದೆ ವೀಣಾ. ಬುಧವಾರ ಕಾರ್ತಿಕ್. ಎಲ್ಲರೂ ಮೂಡಿಗೆರೆ ತಾಲೂಕಿನವರು. ಆದರೆ ಸರ್ಕಾರ ಹಾಗೂ ಅರಣ್ಯ ಇಲಾಖೆ 15 ಲಕ್ಷ ಕೊಟ್ಟು ಕೈ ತೊಳೆದುಕೊಂಡಿದೆ ವಿನಃ ಆನೆ ಹಾವಾಳಿಗೆ ಶಾಶ್ವತ ಪರಿಹಾರ ಕಲ್ಪಿಸಿಲ್ಲ.
ಕಾಡಾನೆ ದಾಂಧಲೆ ನಿಂತಿಲ್ಲ. ಆದರೆ ಜಿಲ್ಲಾ ಉಸ್ತುವಾರಿ ಸಚಿವರು ಸೌಜನ್ಯಕ್ಕೂ ಒಬ್ಬರ ಮನೆಗೂ ಹೋಗಿ ಸಾಂತ್ವಾನ ಹೇಳಿಲ್ಲ. ಈ ನಡುವೆ 20 ದಿನಗಳ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಜಿಲ್ಲೆಗೆ ಭೇಟಿ ನೀಡಿದ ದಿನವೇ ವೀಣಾ ಎಂಬ ಮಹಿಳೆಯನ್ನು ಆನೆ ಸಾಯಿಸಿತ್ತು. ಆವತ್ತು ಸಿದ್ದರಾಮಯ್ಯ ಇನ್ನೊಂದು ವಾರದಲ್ಲಿ ಅರಣ್ಯ ಸಚಿವರೇ ಇಲ್ಲಿಗೆ ಬಂದು ಸಭೆ ನಡೆಸಿ ಆನೆ ಹಾವಳಿಗೆ ಶಾಶ್ವತ ಪರಿಹಾರ ಕಲ್ಪಿಸುತ್ತಾರೆ ಎಂದು ಭವರಸೆ ನೀಡಿದ್ದರು.

ಆದರೆ ಯಾವ ಸಚಿವರು ಬಂದಿಲ್ಲ. ಯಾವ ಸಭೆಯನ್ನು ನಡೆಸಿಲ್ಲ. ಮಲೆನಾಡಿಗರಿಗೆ ಮುಖ್ಯಮಂತ್ರಿಗಳು ಸುಳ್ಳು ಹೇಳಿ ಹೋದರಾ? ಎಂಬ ಪ್ರಶ್ನೆ ಮೂಡಿದೆ. ಈ ಮಧ್ಯೆ ಜಿಲ್ಲಾ ಉಸ್ತುವಾರಿ ಸಚಿವ ಕೆ. ಜೆ. ಜಾರ್ಜ್ ಮೂರು ಜನ ಸತ್ತರೂ ಕೂಡ ಒಬ್ಬರ ಮನೆಗೂ ಹೋಗಿ ಸಾಂತ್ವಾನ ಹೇಳಿಲ್ಲ.
ಜಿಲ್ಲಾ ಉಸ್ತುವಾರಿ ಸಚಿವರು ಸರ್ಕಾರಿ ಕಾರ್ಯಕ್ರಮ ಹಾಗೂ ತಮ್ಮ ತೋಟಕ್ಕಷ್ಟೆ ಸೀಮಿತವಾಗಿದ್ದಾರೆ ಎಂದು ಮಲೆನಾಡಿಗರು ವ್ಯಂಗ್ಯವಾಡಿದ್ದಾರೆ. ಮೃತ ಕಾರ್ತಿಕ್ ಮನೆಗೆ ಅರಣ್ಯ ಅಧಿಕಾರಿಗಳು 25 ಲಕ್ಷ ಕೊಟ್ಟಿದ್ದಾರೆ. ಇನ್ನು 25 ಲಕ್ಷ ಕೊಡಬೇಕು. ತಿಂಗಳಿಗೆ 10 ಸಾವಿರ ಮಾಸಾಶನ ನೀಡಬೇಕು. ಇಲ್ಲವಾದರೆ, ಸರ್ಕಾರದ ವಿರುದ್ಧ ಉಗ್ರ ಹೋರಾಟ ಮಾಡುತ್ತೇವೆ ಎಂದು ಮಲೆನಾಡಿಗರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಶಾಶ್ವತ ಪರಿಹಾರ ಕಲ್ಪಿಸಿ; ಆನೆ ದಾಳಿಯಿಂದ ಸತ್ತ ವ್ಯಕ್ತಿಗೆ ಸರ್ಕಾರ ಕೊಡುವ ಪರಿಹಾರದ ಬಗ್ಗೆಯೂ ಜನ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸರ್ಕಾರದ 15 ಲಕ್ಷ ಪರಿಹಾರವೇ ಪರಿಹಾರವಲ್ಲ. 15 ಲಕ್ಷ ಹಣ ಒಂದು ಜೀವವನ್ನು ತಂದು ಕೊಡಲ್ಲ. ನಮಗೆ ಪರಿಹಾರ ಬೇಡ. ಆನೆ ಹಾವಾಳಿಗೆ ಶಾಶ್ವತ ಪರಿಹಾರ ಬೇಕು ಎಂದು ಆಗ್ರಹಿಸಿದ್ದಾರೆ.
ಸಕಲೇಶಪುರಲ್ಲಿ ಸತ್ತ ಶಾರ್ಪ್ ಶೂಟರ್‌ಗೆ 50 ಲಕ್ಷ ಪರಿಹಾರ ಕೊಡುತ್ತೀರಾ? ಆನೆ ನಿಗ್ರಹ ಪಡೆಯಲ್ಲಿ ಕೆಲಸ ಮಾಡುತಿದ್ದ ಕಾರ್ತಿಕ್‌ಗೆ ಏಕೆ 25 ಲಕ್ಷ. ಆತನ ತಾಯಿಗೂ 50 ಲಕ್ಷ ನೀಡಬೇಕು, ಆತ ಒಬ್ಬನೇ ಮಗ. 26 ವರ್ಷ ವಯಸ್ಸು. ಆತನ ತಾಯಿಯನ್ನು ಯಾರು ನೋಡಿಕೊಳ್ಳುತ್ತಾರೆ. 50 ಲಕ್ಷ ಪರಿಹಾರ ನೀಡಿ, ತಿಂಗಳಿಗೆ ಮಾಸಾಶನ 10 ಸಾವಿರ ನೀಡಬೇಕೆಂದು ಜನರು ಆಗ್ರಹಿಸಿದ್ದಾರೆ.
ಆನೆ ದಾಳಿಯಿಂದ ಸತ್ತವರಿಗೆಲ್ಲಾ 15 ಲಕ್ಷ ಪರಿಹಾರವಲ್ಲ. ಸಮಸ್ಯೆಗೆ ಪರಿಹಾರವೇ ಶಾಶ್ವತ ಪರಿಹಾರ. ಮೊದಲು ಅದನ್ನು ಮಾಡಿ. ನರಹಂತಕ ಆನೆಯನ್ನು ಗುಂಡಿಕ್ಕಿ ಕೊಲ್ಲಿ ಎಂದು ಸರ್ಕಾರಕ್ಕೆ ಜನರು ಒತ್ತಾಯಿಸಿದ್ದಾರೆ.
ಒಟ್ಟಾರೆ, ಕಾಫಿನಾಡಲ್ಲಿ ಆನೆ ಹಾವಳಿ ಕಡಿಮೆಯಾಗುತ್ತಿಲ್ಲ. ಆನೆಯಿಂದ ಸಾಯುವವರ ಸಂಖ್ಯೆಯು ನಿಲ್ಲುತ್ತಿಲ್ಲ. ಆದರೆ, ಅರಣ್ಯ ಇಲಾಖೆ ಅಧಿಕಾರಿಗಳು ಮಾತ್ರ ಈ ಸಾವಿಗೂ ನಿಮಗೂ ಸಂಬಂಧವಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ.
ಯಾರಾದರೂ ಸತ್ತಾಗ. ಸ್ಥಳಕ್ಕೆ ಹೋಗಿ ಆಕ್ರೋಶಿತರ ಮುಖ-ಮೂತಿಗೆ ಬೆಣ್ಣೆಸವರಿ, ಪರಿಹಾರ ನೀಡಿ ಕೈತೊಳೆದುಕೊಳ್ತಾರೆ. ಆನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸುವ ಗೋಜಿಗೆ ಹೋಗುತ್ತಿಲ್ಲ. ಇದು ಮಲೆನಾಡಿಗರ ನಿಜವಾದ ಸಮಸ್ಯೆ.
ಈ ಸಮಸ್ಯೆಗೆ ಸಿಎಂ, ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರ ಬಳಿಯೂ ಉತ್ತರವಿಲ್ಲ. ಬರೀ ಸುಳ್ಳು ಹೇಳಿಕೊಂಡು ತಿರುಗುತಾರೆ. ಜನ ಮಾತ್ರ ನಿತ್ಯ ಆನೆ ಆತಂಕದಲ್ಲಿ ಜೀವವನ್ನು ಕೈನಲ್ಲಿ ಇಟ್ಟುಕೊಂಡು ಓಡಾಡುತ್ತಿದ್ದಾರೆ. ಸರ್ಕಾರ ಏನು ಮಾಡುತ್ತದೆಯೋ ಕಾದು ನೋಡಬೇಕಿದೆ.












Click it and Unblock the Notifications