ಸಹೋದರನ ಮಗನ ಕೊಲೆ ಸುದ್ದಿ ಕೇಳಿ ಹೃದಯಾಘಾತ: ದೊಡ್ಡಪ್ಪ ಸಾವು
ಚಿಕ್ಕಮಗಳೂರು, ನವೆಂಬರ್ 21 : ಸಹೋದರನ ಮಗನ ಕೊಲೆಯಾದ ಸುದ್ದಿ ಕೇಳಿ ದೊಡ್ಡಪ್ಪ ಹೃದಯಾಘಾತದಿಂದ ಮೃತಪಟ್ಟಿರುವ ದಾರುಣ ಘಟನೆ ಜಿಲ್ಲೆಯ ತರೀಕೆರೆ ಪಟ್ಟಣದಲ್ಲಿ ನಡೆದಿದೆ.
ಭಾನುವಾರ ಹಣಕಾಸಿನ ವಿಚಾರಕ್ಕೆ ಓಂಕಾರ್ ಎಂಬ 30 ವರ್ಷದ ಯುವಕನನ್ನು ಐವರು ಸ್ನೇಹಿತರು ಕೊಲೆ ಮಾಡಿದ್ದಾರೆ. ಆರೋಪಿಗಳು ಹಾಗೂ ಕೊಲೆಯಾಗಿದ್ದ ಓಂಕಾರ್ ಫೈನಾನ್ಸ್ ವ್ಯವಹಾರ ಮಾಡುತ್ತಿದ್ದರು. ವ್ಯವಹಾರದ ವಿಚಾರವಾಗಿ ಮಾತುಕತೆಗೆ ಭಾನುವಾರ ರಾತ್ರಿ ಕರೆದುಕೊಂಡು ಹೋಗಿದ್ದರು. ಈ ವೇಳೆ ಮಾತಿಗೆ ಮಾತಿಗೆ ಬೆಳೆದು ಓಂಕಾರ್‌ರನ್ನು ಸ್ನೇಹಿತರೆಲ್ಲರೂ ಕಲ್ಲಿನಿಂದ ಜಜ್ಜಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ.
ಇನ್ನು ಓಂಕಾರ್ ಕೊಲೆಯಾದ ವಿಷಯ ತಿಳಿದ ಆಘಾತದಲ್ಲೇ ಸೋಮವಾರ ಅವರ ದೊಡ್ಡಪ್ಪ ಪ್ರಕಾಶ್ (55) ಹೃದಯಾಘಾತದಿಂದ ಸೋಮವಾರ ಕೊನೆಯುಸಿರೆಳೆದಿದ್ದಾರೆ. ಮನೆಮಗನನ್ನು ಕಳೆದುಕೊಂಡಿದ್ದ ಕುಟುಂಬಕ್ಕೆ ಮತ್ತೊಂದು ಸಾವು ತೀವ್ರ ಆಘಾತವನ್ನುಂಟು ಮಾಡಿದೆ.

ಅತ್ತೆ ಸಾವಿನ ಸುದ್ದಿ ಕೇಳಿ ಅಳಿಯನಿಗೆ ಹೃದಯಾಘಾತ
ಸಾಗರ: ಅತ್ತೆಯ ಸಾವಿನ ಸುದ್ದಿ ಕೇಳಿ ಆಘಾತಗೊಂಡ ಅಳಿಯ ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿರುವ ಘಟನೆ ಸಾಗರ ತಾಲೂಕಿನ ಲಿಂಗನಮಕ್ಕಿಯಲ್ಲಿ ನಡೆದಿದೆ. 58 ವರ್ಷದ ಲಕ್ಷ್ಮಮ್ಮ, ಅವರ ಸೋದರಳಿಯ ಗುಲ್ಫತ್ ಸಿಂಗ್ ನಿಧನರಾಗಿರುವವರು.
ಗುಲ್ಫತ್ ಸಿಂಗ್ ತಮ್ಮ ಸೋದರತ್ತೆ ಲಕ್ಷ್ಮಮ್ಮರನ್ನು ಬೆಂಗಳೂರಿಗೆ ಬಸ್ ಹತ್ತಿಸಿ ಕಳುಹಿಸಿದ್ದರು. ಆದರೆ ಬಸ್ ಆನಂದಪುರ ಸಮೀಪ ಹೋಗುತ್ತಿರುವಾಗ ಲಕ್ಷ್ಮಮ್ಮರಿಗೆ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ. ಈ ವಿಷಯವನ್ನು ಬಸ್ ನಿರ್ವಾಹಕ ಗುಲ್ಫತ್ ಸಿಂಗ್‌ರಿಗೆ ತಿಳಿಸಿದ್ದಾರೆ.
ಈ ಸುದ್ದಿ ಕೇಳಿ ಆಘಾತಕ್ಕೊಳಗಾದ ಗುಲ್ಫತ್ ಮನೆಗೆ ಬರುವುದರೊಳಗೆ ಹೃದಯಾಘಾತವಾಗಿ ದಾರಿಮಧ್ಯದಲ್ಲೇ ಸಾವನ್ನಪ್ಪಿದ್ದಾರೆ.












Click it and Unblock the Notifications