ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಅಳಿವಿನಂಚಿಗೆ ತಲುಪಿದ್ದ ಸರ್ಕಾರಿ ಶಾಲೆಗೆ ಜೀವಕಳೆ ತುಂಬಿದ ಎಂ. ಚೋಮನಹಳ್ಳಿ ಗ್ರಾಮಸ್ಥರು

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಆಗಸ್ಟ್ 21: ಅದು ದಶಕಗಳ ಕಾಲ ಸಾವಿರಾರು ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಿದ ಸರ್ಕಾರಿ ಶಾಲೆ. ಇತ್ತೀಚಿಗೆ ಖಾಸಗಿ ಶಾಲೆಗಳ ಪ್ರಭಾವದಿಂದ ಆ ಶಾಲೆಗೆ ವಿದ್ಯಾರ್ಥಿಗಳು ಸೇರ್ಪಡೆಗೊಳ್ಳದ ಕಾರಣ ಆ ಶಾಲೆ ಅಳಿವಿನ ಅಂಚಿಗೆ ಬಂದಿತ್ತು. ಸ್ನೇಹ ಸಿಂಚನ ಟ್ರಸ್ಟ್ ಹಾಗೂ ಸ್ಥಳೀಯರು ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಪಣತೊಟ್ಟಿದ್ದು, ಈಗ ಆ ಶಾಲೆ ಎಲ್ಲರ ಆಕರ್ಷಣೀಯ ಕೇಂದ್ರವಾಗಿದೆ.

ಕೊರೊನಾ ಸೋಂಕು ಕಾಲದಲ್ಲಿ ಕಳೆದ ಎರಡು ವರ್ಷಗಳಿಂದ ಯಾವುದೇ ಶಾಲೆಗಳು ಭೌತಿಕ ಶಿಕ್ಷಣಕ್ಕೆ ಮುಂದಾಗಿಲ್ಲ. ಈಗೇನಿದ್ದರೂ ಆನ್‌ಲೈನ್ ಶಿಕ್ಷಣ. ಈ ಹಿನ್ನೆಲೆಯಲ್ಲಿ ಸಾಕಷ್ಟು ಮಂದಿ ಖಾಸಗಿ ಶಾಲೆಯನ್ನು ತೊರೆದು ಸರ್ಕಾರಿ ಶಾಲೆಗಳಿಗೆ ಸೇರ್ಪಡೆಗೊಳ್ಳುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಕಡೂರು ತಾಲೂಕಿನ ಎಂ. ಚೋಮನಹಳ್ಳಿ ಗ್ರಾಮದಲ್ಲಿ ಗ್ರಾಮಸ್ಥರು ಅವಸಾನದ ಅಂಚಿಗೆ ತಲುಪಿದ್ದ ಶಾಲೆಯನ್ನು ನವೀಕರಣ ಮಾಡಿ ಮಕ್ಕಳನ್ನು ಸರ್ಕಾರಿ ಶಾಲೆಯತ್ತ ಸೆಳೆಯುವ ಜೊತೆಗೆ ಶಾಲೆಯನ್ನು ಉಳಿಸುವ ಪ್ರಯತ್ನಕ್ಕೆ ಕೈ ಹಾಕಿ ಸೈ ಎನಿಸಿಕೊಂಡಿದ್ದಾರೆ.

ಗ್ರಾಮಸ್ಥರ ಆಸೆಗೆ ಸ್ನೇಹ ಸಿಂಚನ ಟ್ರಸ್ಟ್ ಆಸರೆ

ಗ್ರಾಮಸ್ಥರ ಆಸೆಗೆ ಸ್ನೇಹ ಸಿಂಚನ ಟ್ರಸ್ಟ್ ಆಸರೆ

ಕಡೂರು ತಾಲೂಕಿನ ಎಂ. ಚೋಮನಹಳ್ಳಿ ಕಿರಿಯ ಪ್ರಾಥಮಿಕ ಶಾಲೆ ಕಳೆದ ನಾಲ್ಕು ವರ್ಷಗಳಿಂದ ಸಂಪೂರ್ಣ ಬಂದ್ ಆಗಿತ್ತು. ಪಕ್ಕದ ಅಜ್ಜಂಪುರ, ಗಿರಿಯಾಪುರ ಗ್ರಾಮಗಳಲ್ಲಿ ಖಾಸಗಿ ಶಾಲೆಗಳು ತಲೆ ಎತ್ತಿದ ಪರಿಣಾಮ ಈ ಗ್ರಾಮದ ಕನ್ನಡ ಸರ್ಕಾರಿ ಶಾಲೆ ಸಂಪೂರ್ಣ ಬಾಗಿಲು ಹಾಕಿಕೊಂಡಿತ್ತು. ಈ ಹಿನ್ನೆಲೆಯಲ್ಲಿ ತಮ್ಮೂರ ಶಾಲೆಯನ್ನು ಮತ್ತೆ ಆರಂಭಿಸಬೇಕು ಎಂದು ಪಣತೊಟ್ಟ ಶ್ರೀಚನ್ನಬಸವೇಶ್ವರ ಗೆಳೆಯರ ಬಳಗ ಹಾಗೂ ಗ್ರಾಮಸ್ಥರ ಆಸೆಗೆ ಸ್ನೇಹ ಸಿಂಚನ ಟ್ರಸ್ಟ್ ಆಸರೆಯಾದ ಪರಿಣಾಮ ಸರ್ಕಾರಿ ಶಾಲೆ ಮತ್ತೆ ಶಿಕ್ಷಣ ನೀಡಲು ತಲೆ ಎತ್ತಿ ನಿಲ್ಲುವಂತಾಗಿದೆ.

ಶಾಲೆಗೆ ಬಂತು ಹೊಸ ಲುಕ್

ಶಾಲೆಗೆ ಬಂತು ಹೊಸ ಲುಕ್

ಕಳೆದ ನಾಲ್ಕೈದು ತಿಂಗಳ ಹಿಂದೆ ಈ ಶಾಲೆಯನ್ನು ನೋಡಿದರೆ ಯಾವ ಪೋಷಕರೂ ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸಬೇಕು ಅಂದುಕೊಳ್ಳುತ್ತಿರಲಿಲ್ಲ. ಶಾಲೆಯ ಹಂಚುಗಳು ಹಾರಿ ಹೋಗಿದ್ದವು, ಗೋಡೆಗಳು ಶಿಥಿಲಾವಸ್ಥೆ ತಲುಪಿದ್ದವು. ಸುಣ್ಣ- ಬಣ್ಣ ಕಾಣದೇ ಶಾಲೆ ಸಂಪೂರ್ಣ ಕಳೆಗುಂದಿತ್ತು. ಜೊತೆಗೆ ಮಕ್ಕಳು ಕೂರುತ್ತಿದ್ದ ಮಣಿಗಳು, ಬೆಂಚ್‍ಗಳು ಯಾವಾಗ ಬೇಕಾದರೂ ಮುರಿದು ಹೋಗುವ ಭಯದಲ್ಲಿಯೇ ಮಕ್ಕಳು ಕುಳಿತುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆದರೆ ಈಗ ನಮ್ಮೂರ ಶಾಲೆಯನ್ನು ಉಳಿಸಬೇಕು ಎಂಬ ಛಲದಿಂದ ಶಿಥಿಲಾವಸ್ಥೆಗೆ ತಲುಪಿದ ಶಾಲೆಯನ್ನು ಟ್ರಸ್ಟ್ ಸಹಾಯ ಹಾಗೂ ಗ್ರಾಮಸ್ಥರು ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಸಹಕಾರದಿಂದ ಶಾಲೆಯನ್ನು ದುರಸ್ಥಿ ಮಾಡಲಾಗಿದೆ.

ಶಾಲೆಯ ಪರಿಸ್ಥಿತಿಯನ್ನು ಅರಿತ ಯುವಕರು

ಶಾಲೆಯ ಪರಿಸ್ಥಿತಿಯನ್ನು ಅರಿತ ಯುವಕರು

ಈ ಗ್ರಾಮದಲ್ಲಿ ಮೊದಲು ಶಾಲೆ ತುಂಬಿ ತುಳುಕುತ್ತಿತ್ತು. ಇಂತಹ ಶಾಲೆಗೆ ಏಕೆ ಮಕ್ಕಳು ದಾಖಲಾಗುತ್ತಿಲ್ಲ ಎಂದು ಗ್ರಾಮದ ಕೆಲ ಯುವಕರು ಯೋಚಿಸಿದಾಗ ಶಾಲೆಯ ಪರಿಸ್ಥಿತಿಯನ್ನು ಅರಿತ ಯುವಕರು ಶಾಲೆಯ ದುರಸ್ಥಿಗೆ ಮುಂದಾದರು. ಶಿಕ್ಷಣ ಇಲಾಖೆಯ ಗಮನ ಸೆಳೆದು ನಮ್ಮೂರ ಶಾಲೆಯನ್ನು ಅಭಿವೃದ್ಧಿಗೊಳಿಸುತ್ತೇವೆ ಶಿಕ್ಷಕರನ್ನು ನೇಮಿಸಿ ಎಂದು ಮನವಿ ಸಲ್ಲಿಸಿದರು. ಶಾಲೆಯನ್ನು ದುರಸ್ಥಿ ಕಾರ್ಯ ನಡೆಸುತ್ತಿದ್ದಂತೆ ಯುವಕರ ಮನವಿಗೆ ಸ್ಪಂದಿಸಿದ ಶಿಕ್ಷಣ ಇಲಾಖೆ ಶಿಕ್ಷಕರನ್ನು ನೇಮಕ ಮಾಡಿದೆ. ಈಗ ಶಾಲೆಗೆ ವಿದ್ಯಾರ್ಥಿಗಳು ದಾಖಲಾಗಿದ್ದು ಗ್ರಾಮಸ್ಥರಲ್ಲಿ ಸಂತಸ ಮನೆಮಾಡಿದೆ.

ವಿಶೇಷ ಚಟುವಟಿಕೆಗಳಿಗೆ ಆದ್ಯತೆ ನೀಡಲು ಚಿಂತನೆ

ವಿಶೇಷ ಚಟುವಟಿಕೆಗಳಿಗೆ ಆದ್ಯತೆ ನೀಡಲು ಚಿಂತನೆ

ಒಮ್ಮೆ ಮುಚ್ಚಿದ ಶಾಲೆ ಈಗ ಎಲ್ಲರ ಸಹಕಾರದಿಂದ ಮತ್ತೆ ಪ್ರಾರಂಭವಾಗಿದೆ. ಈಗ ಖಾಸಗಿ ಶಾಲೆಗಳ ಪೈಪೋಟಿಯ ನಡುವೆ ಶಾಲೆಯನ್ನು ಉಳಿಸಿಕೊಳ್ಳುವ ಛಲ ಗ್ರಾಮಸ್ಥರಲ್ಲಿ ಮನೆಮಾಡಿದೆ. ಸ್ನೇಹ ಸಿಂಚನ ಟ್ರಸ್ಟ್ ಈ ಶಾಲೆಗೆ ಆಸರೆಯಾಗಿದ್ದು ಈಗ ಶಾಲೆಯಲ್ಲಿ ಎಲ್‍ಕೆಜಿ ಪ್ರಾರಂಭಿಸಲು ಚಿಂತಿಸಲಾಗಿದೆ. ಇಂಗ್ಲೀಷ್ ಶಿಕ್ಷಣಕ್ಕೂ ಒತ್ತು ನೀಡಿ ಪೋಷಕರನ್ನು ಶಾಲೆಯತ್ತ ಸೆಳೆಯಲು ಯೋಜನೆ ರೂಪಿಸಲಾಗಿದೆ.

ಒಟ್ಟಿನಲ್ಲಿ ಇನ್ನೇನು ಸರ್ಕಾರಿ ಶಾಲೆಯೊಂದರ ಕಥೆ ಮುಗಿದೇ ಹೋಯ್ತು ಎನ್ನುವಷ್ಟರಲ್ಲಿ, ನಮ್ಮೂರ ಶಾಲೆಯನ್ನು ಉಳಿಸಬೇಕು ಎಂಬ ಗ್ರಾಮಸ್ಥರ ಛಲ ಕನ್ನಡ ಶಾಲೆಯೊಂದು ಮತ್ತೆ ಬಾಗಿಲು ತೆರೆದು ಜ್ಞಾನ ನೀಡಲು ಮುಂದಾಗಿದ್ದು. ಈ ಗ್ರಾಮಸ್ಥರ ರೀತಿ ಎಲ್ಲಾ ಗ್ರಾಮಗಳಲ್ಲಿಯೂ ಸರ್ಕಾರಿ ಶಾಲೆಗಳ ಮೇಲೆ ಪ್ರೀತಿ ಹೆಚ್ಚಾದರೆ ಮತ್ತಷ್ಟು ಶಾಲೆಗಳಿಗೆ ಬಾಗಿಲು ಬೀಳುವುದು ತಪ್ಪಿದಂತಾಗುತ್ತದೆ.

Recommended Video

ಈತನ ಎಂಟ್ರಿಯಿಂದ ಪವರ್ಫುಲ್ ಆಗಲಿದೆ ಟೀಮ್ ಇಂಡಿಯಾ ಬ್ಯಾಟಿಂಗ್ | Oneindia Kannada

English summary
M. Chomanahalli villagers In Kadur taluk of Chikkamagaluru district have Revamps 60 Year Old government Primary school.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X