75 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ಕಾರಿ ಬಸ್ ಸೌಲಭ್ಯ ಪಡೆದ ಗ್ರಾಮ ಇದು
ಚಿಕ್ಕಮಗಳೂರು, ಜೂನ್, 26: ರಾಜ್ಯದ ಹಲವು ಜಿಲ್ಲೆಗಳ ಕೆಲವು ಗ್ರಾಮಗಳ ಜನರು ಈಗಲೂ ಸರ್ಕಾರಿ (KSRTC) ಬಸ್‌ಗಳ ಸೌಲಭ್ಯ ಇಲ್ಲದೆ ಪರದಾಡುತ್ತಿದ್ದಾರೆ. ಅಂತಹದ್ದೇ ಸಾಲಿಗೆ ಸೇರಿದ್ದ ಚಿಕ್ಕಮಗಳೂರು ಜಿಲ್ಲೆಯ ಈ ಗ್ರಾಮಕ್ಕೆ 75 ವರ್ಷಗಳ ಬಳಿಕ ಇದೀಗ ಸರ್ಕಾರಿ ಬಸ್ ಸೌಲಭ್ಯವನ್ನು ಕಲ್ಪಿಸಲಾಗಿದೆ. ಇದರಿಂದ ಇಲ್ಲಿನ ಜನರ ಸಂಭ್ರಮಕ್ಕಂತೂ ಪಾರವೇ ಇಲ್ಲದಂತಾಗಿದೆ.
ಹೊಯ್ಸಳ ರಾಜವಂಶದ ಮೂಲ ಮೂಡಿಗೆರೆ ತಾಲೂಕಿನ ಹೊಯ್ಸಳಲು ಗ್ರಾಮಕ್ಕೆ 75 ವರ್ಷಗಳ ಇತಿಹಾಸದಲ್ಲೇ ಮೊದಲ ಬಾರಿಗೆ ಸರ್ಕಾರಿ (KSRTC) ಬಸ್ ಸೌಲಭ್ಯವನ್ನು ಒದಗಿಸಲಾಗಿದೆ. ಇನ್ನು ಮೊದಲ ಬಾರಿಗೆ ಸರ್ಕಾರಿ ಬಸ್ ನೋಡಿ ಇಲ್ಲಿನ ಜನರು ಕುಣಿದು ಕುಪ್ಪಳಿಸುವ ಮೂಲಕ ಸಂಭ್ರಮಿಸಿದ್ದಾರೆ.

ಕೆಎಸ್‌ಆರ್‌ಟಿಸಿ ಬಸ್ ಬರುತ್ತಿದ್ದಂತೆಯೇ ಇಲ್ಲಿನ ಗ್ರಾಮಸ್ಥರು ಬಸ್‌ಗೆ ಅಲಂಕಾರ ಮಾಡಿ ಪೂಜೆ ಮಾಡಿದ್ದಾರೆ. ದಶಕಗಳಿಂದ ಬಸ್ ವ್ಯವಸ್ಥೆ ಕಲ್ಪಿಸಿ ಎಂದು ಮನವಿ ಮಾಡಿಕೊಂಡು ಬರುತ್ತಿದ್ದರೂ ಕೂಡ ಇಲ್ಲಿನ ಅಧಿಕಾರಿಗಳು ಮಾತ್ರ ಜನರ ಮಾತಿಗೆ ಕ್ಯಾರೆ ಅನ್ನುತ್ತಿರಲಿಲ್ಲ. ಅಲ್ಲದೆ ಪ್ರತಿನಿತ್ಯ ಈ ಗ್ರಾಮಗ ವಿದ್ಯಾರ್ಥಿಗಳು ಮೂಡಿಗೆರೆಯಲ್ಲಿರುವ ಸರ್ಕಾರಿ ಶಾಲೆಗೆ ಬಸ್ ಇಲ್ಲದೆ 5 ಕಿ.ಮೀ.ನಡೆದುಕೊಂಡೇ ಹೋಗುವ ಪರಿಸ್ಥಿತಿ ನಿರ್ಮಾಣವಾಗಿತ್ತು.
ಆದರೆ ಇದೀಗ ಕೊನೆಗೂ ಮೂಡಿಗೆರೆ ಕೆ.ಎಸ್.ಆರ್.ಟಿ.ಸಿ. ವಿಭಾಗದಿಂದ ಕೇವಲ 200 ಜನರಿರುವ ಈ ಹೊಯ್ಸಳಲು ಕುಗ್ರಾಮಕ್ಕೆ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಶಾಲೆ ಮಕ್ಕಳು ಮತ್ತು ಇಲ್ಲಿನ ಜನರಿಗೆ ಅನುಕೂಲವಾಗುವಂತೆ ಪ್ರತಿನಿತ್ಯ ಬೆಳಗ್ಗೆಯಿಂದ ಸಂಜೆವರೆಗೂ ಹೊಯ್ಸಳಲು ಗ್ರಾಮಕ್ಕೆ ಮೂಡಿಗೆರೆ ಬಸ್ ನಿಲ್ದಾಣದಿಂದ ಬಸ್ಸುಗಳು ಸಂಚಾರ ಆರಂಭಿಸಿವೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಪ್ರಯಾಣಿಕರಿಗೆ ತೊಂದರೆ
ಕಾಂಗ್ರೆಸ್ ಸರ್ಕಾರ ಆರಂಭ ಮಾಡಿದ ಶಕ್ತಿ ಯೋಜನೆಯ ಉಚಿತ ಸಾರಿಗೆ ಬಸ್ ಪ್ರಯಾಣ ಮಹಿಳೆಯರಿಗೆ ಎಷ್ಟೋ ಲಾಭವಾಗಿದೆಯೋ ಅದೇ ರೀತಿ ಇತರ ಪ್ರಯಾಣಿಕರಿಗೆ ತೊಂದರೆ ಕೂಡ ಆಗುತ್ತಿದೆ. ಅದರಲ್ಲೂ ಮುಖ್ಯವಾಗಿ ಬಸ್ ರಶ್‌ನಿಂದ ವಿದ್ಯಾರ್ಥಿಗಳು ಪರದಾಡುವಂತಾಗಿದೆ.
ಕುಂದಗೋಳ ತಾಲೂಕಿನಲ್ಲೂ ಬಸ್ ಸಮಸ್ಯೆ ಹೆಚ್ಚಾಗುತ್ತಿದ್ದು, ವಿದ್ಯಾರ್ಥಿಗಳು ಸಾರಿಗೆ ಬಸ್‌ನ ಪುಟ್ ಬೋರ್ಡ್ ಮೇಲೆ ನಿಂತು ಅಪಾಯದಲ್ಲಿ ಪ್ರಯಾಣ ಮಾಡುತ್ತಿದ್ದಾರೆ. ಉಚಿತ ಬಸ್ ಪ್ರಯಾಣಕ್ಕಾಗಿ ಮಹಿಳೆಯರು ಮುಗಿಬಿದ್ದಿದ್ದು, ಸಾರಿಗೆ ಬಸ್ ಕಿಟಕಿಯಲ್ಲಿ ತಮ್ಮ ತಮ್ಮ ಮಕ್ಕಳನ್ನು ತೂರಿ ಆಸನ ಹಿಡಿಯುತ್ತಿದ್ದಾರೆ. ಮತ್ತೊಂದೆಡೆ ಸಂಪೂರ್ಣ ಬಸ್ ಪ್ರಯಾಣಿಕರಿಂದ ಭರ್ತಿಯಾದರೂ ವೇಗವಾಗಿ ಚಲಿಸುವ ಸಾರಿಗೆ ಬಸ್ ಪುಟ್ ಬೋರ್ಡ್ ಮೇಲೆ ನಿಂತು ಅಪಾಯದ ಭಯ ತೊರೆದು ವಿದ್ಯಾರ್ಥಿಗಳು, ನಾಗರಿಕರು ಪ್ರಯಾಣ ನಡೆಸುತ್ತಿದ್ದಾರೆ.
ಪ್ರತಿ ನಿತ್ಯ ಶಾಲಾ ಕಾಲೇಜು ಆರಂಭದ ಸಮಯ ಬೆಳಗ್ಗೆ ಮತ್ತು ಸಾಯಂಕಾಲ ವಾಪಸ್ ಆಗುವ ವೇಳೆ ಸಾರಿಗೆ ಬಸ್ ಏರುವುದೇ ವಿದ್ಯಾರ್ಥಿಗಳಿಗೆ ಸವಾಲಾಗಿದೆ. ಎಂದಿಗಿಂತ ದುಪ್ಪಟ್ಟು ಪ್ರಯಾಣಿಕರು ಸಾರಿಗೆ ಬಸ್ ಏರುತ್ತಿರುವ ಕಾರಣ ಬಸ್ ಪ್ರಯಾಣಿಕರಿಂದ ತುಂಬಿ ತುಳುಕುವ ದುಸ್ಥಿತಿ ಉಂಟಾಗಿ ಶಕ್ತಿ ಯೋಜನೆ ಆರಂಭವಾಗಿ ಎರಡು ವಾರ ಕಳೆದರೂ ಮಹಿಳೆಯರ ಪ್ರಮಾಣ ಹೆಚ್ಚುತ್ತಲೇ ಇದೆ.












Click it and Unblock the Notifications