ಕಾಫಿನಾಡಿನಲ್ಲಿ ಹೆಚ್ಚಿದ ಕಾಡು ಪ್ರಾಣಿಗಳ ಹಾವಳಿ: ಬೃಹತ್ ಕಾಳಿಂಗ ಸರ್ಪ ಸೆರೆ
ಚಿಕ್ಕಮಗಳೂರು, ಅಕ್ಟೋಬರ್ 20: ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನ ಬಾಳೆಹೊಳೆಯ ಹೆರಟೆ ಗ್ರಾಮದಲ್ಲಿ ಪದೇ ಪದೇ ಕಾಣಿಸಿಕೊಳ್ಳುವ ಮೂಲಕ ಭಯ ಹುಟ್ಟಿಸಿದ್ದ ಕಾಳಿಂಗ ಸರ್ಪವನ್ನು ಕಳಸದ ಸ್ನೇಕ್ ರಿಜ್ವಾನ್ ಸೆರೆ ಹಿಡಿದಿದ್ದಾರೆ.
ಕಳೆದ ನಾಲ್ಕು ದಿನಗಳಿಂದ ಹೆರಟೆ ಸೀತಾರಾಮ ಆಚಾರ್ಯ ಮನೆಯ ಹತ್ತಿರ ಕಾಳಿಂಗ ಸರ್ಪ ಕಾಣಿಸಿಕೊಂಡಿತ್ತು. ಕಾಳಿಂಗ ಸರ್ಪವನ್ನು ಕಂಡ ಗ್ರಾಮದ ಜನರು ಮನೆಯಿಂದ ಹೊರಬರಲು ಹಿಂದೇಟು ಹಾಕುತ್ತಿದ್ದರು. ಹೀಗಾಗಿ ಸೀತಾರಾಮ ಆಚಾರ್ಯ ಅವರು ಸ್ನೇಕ್ ರಿಜ್ವಾನ್ ಅವರಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾರೆ. ವಿಷಯ ತಿಳಿದು ಕಳಸದ ರಿಜ್ವಾನ್ ಹಾಗೂ ಅರಣ್ಯ ಇಲಾಖೆಯ ನಂದನ್ ಮತ್ತು ಓಂ ಪ್ರಕಾಶ್ ಸ್ಥಳಕ್ಕೆ ಆಗಮಿಸಿದರು.
ಇನ್ನು ಅರಣ್ಯ ಇಲಾಖೆಯ ಅಧಿಕಾರಿಗಳ ಸಮ್ಮುಖದಲ್ಲಿ ಸುಮಾರು ಒಂದು ಗಂಟೆಯ ಕಾರ್ಯಚರಣೆ ನಡೆಸಿ ಸ್ನೇಕ್ ರಿಜ್ವಾನ್ ಕಾಳಿಂಗ ಸರ್ಪವನ್ನು ಸೆರೆ ಹಿಡಿದಿದ್ದಾರೆ. ಬಾಳೆಹೊಳೆಯ ಹೆರಟೆ ಗ್ರಾಮದ ಜನರು ತಂಡೋಪಾದಿಯಲ್ಲಿ ಸೆರೆಯಾದ ಕಾಳಿಂಗ ಸರ್ಪವನ್ನು ಕಂಡು ನಿಟ್ಟುಸಿರು ಬಿಟ್ಟಿದ್ದಾರೆ. ನಂತರ ಸೆರೆ ಹಿಡಿದ ಕಾಳಿಂಗ ಸರ್ಪವನ್ನು ಸ್ನೇಕ್ ರಿಜ್ವಾನ್ ಹಾಗೂ ಅರಣ್ಯ ಅಧಿಕಾರಿಗಳು ಸುರಕ್ಷಿತವಾಗಿ ಕಾಡಿಗೆ ಬಿಟ್ಟಿದ್ದಾರೆ.

ಕಾಫಿನಾಡು ಚಿಕ್ಕಮಗಳೂರಿನಲ್ಲಿ ಇತ್ತೀಚಿನ ದಿನಗಳಲ್ಲಿ ಕಾಡು ಪ್ರಾಣಿಗಳ ಹಾವಳಿ ಮಿತಿ ಮೀರುತ್ತಿದೆ. ಜಿಲ್ಲೆಯ ಅನೇಕ ಗ್ರಾಮಗಳಲ್ಲಿ ಕಾಡಾನೆ ಕಾಟ ಹೆಚ್ಚಾಗುತ್ತಿದ್ದು, ಕಾರ್ಮಿಕರು ಕಾಫಿ ತೋಟಗಳಿಗೆ ಹೋಗಲು ಭಯಪಡುತ್ತಿದ್ದಾರೆ. ಕಾಫಿ, ಭತ್ತ ಸೇರಿದಂತೆ ಅನೇಕ ಬೆಳೆಗಳು ಕಾಡಾನೆ ದಾಳಿಯಿಂದ ನಾಶವಾಗಿದೆ.
ಮೂಡಿಗೆರೆ ತಾಲೂಕಿನಲ್ಲಿ ಚಿರತೆ ಸೆರೆ
ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಡಾನೆಗಳ ಜೊತೆಗೆ ಚಿರತೆಗಳ ಹಾವಳಿಯೂ ಹೆಚ್ಚಾಗಿದ್ದು, ಜನರು ಆತಂಕಗೊಂಡಿದ್ದಾರೆ. ನಿನ್ನೆ ಅಕ್ಟೋಬರ್ 19 ಮೂಡಿಗೆರೆ ತಾಲೂಕಿನಲ್ಲಿ ಚಿರತೆಯೊಂದನ್ನು ಅರಣ್ಯಾಧಿಕಾರಿಗಳು ಸೆರೆ ಹಿಡಿದಿದ್ದಾರೆ. ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದ ರಮೇಶ್ ಎಂಬುವರ ತೋಟದಲ್ಲಿ ಕೆಲ ದಿನಗಳ ಹಿಂದೆ ಚಿರತೆ ಕಾಣಿಸಿಕೊಂಡಿತ್ತು. ಚಿರತೆ ಹಾವಳಿಯಿಂದ ತೋಟದ ಮಾಲೀಕರು, ಕೂಲಿ ಕಾರ್ಮಿಕರು ಕಂಗಾಲಾಗಿದ್ದರು. ಈ ಕುರಿತು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಅಲ್ಲಿನ ಸ್ಥಳೀಯರು ಮಾಹಿತಿ ನೀಡಿದ್ದರು. ಸ್ಥಳೀಯರ ಮಾಹಿತಿ ಆಧರಿಸಿ ಸ್ಥಳಕ್ಕೆ ಬಂದ ಅರಣ್ಯ ಇಲಾಖೆ ಅಧಿಕಾರಿಗಳು ಸತತ ಕಾರ್ಯಾಚರಣೆ ನಡೆಸಿ ಚಿರತೆಯನ್ನು ಸೆರೆ ಹಿಡಿಯುವಲ್ಲಿ ಯಶಸ್ವಿಯಾದರು.












Click it and Unblock the Notifications