C T Ravi: ಆಪ್ತನನ್ನೇ ಎದುರಿಸುವ ಅನಿವಾರ್ಯತೆಗೆ ಬಿದ್ದ ಸಿ.ಟಿ.ರವಿ: ಕಾಂಗ್ರೆಸ್ ಮಾಸ್ಟರ್ ಸ್ಟ್ರೋಕ್?
ಬೆಂಗಳೂರು, ಏಪ್ರಿಲ್ 18: ಬೆಂಗಳೂರು, ಏಪ್ರಿಲ್ 18: ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಸೋಲಿಲ್ಲದ ಸರದಾನಂತೆ ಇರುವ ಬಿಜೆಪಿ ಶಾಸಕ ಸಿ.ಟಿ ರವಿಗೆ ಸೋಲುಣಿಸಲು ಕಾಂಗ್ರೆಸ್ ಮಾಸ್ಟರ್ ಪ್ಲಾನ್ ಮಾಡಿದ್ದು, ಈ ಹಿಂದೆ ಸಿ.ಟಿ ರವಿ ಆಪ್ತರಾಗಿದ್ದ ಎಚ್.ಡಿ ತಮ್ಮಯ್ಯಗೆ ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಕಾಂಗ್ರೆಸ್ ಟಿಕೆಟ್ ನೀಡಿದೆ.
ಕರ್ನಾಟಕ ವಿಧಾನಸಭಾ ಚುನಾವಣೆಗೆ ಕಾಂಗ್ರೆಸ್ 4ನೇ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಏಳು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದೆ. ಏಳು ಕ್ಷೇತ್ರಗಳಲ್ಲಿ ಚಿಕ್ಕಮಗಳೂರು ಕ್ಷೇತ್ರಕ್ಕೆ ಅಭ್ಯರ್ಥಿ ಅಂತಿಮವಾಗಿದ್ದು, ಎಚ್.ಡಿ ತಮ್ಮಯ್ಯಗೆ ಕಾಂಗ್ರೆಸ್ ಮಣೆ ಹಾಕಿದೆ.

ಈ ಹಿಂದೆ ಬಿಜೆಪಿ ಶಾಸಕ ಸಿ.ಟಿ ರವಿ ಅವರ ಗೆಲುವಿಗೆ ರೂವಾರಿಯಂತಿದ್ದ ಎಚ್.ಡಿ.ತಮ್ಮಯ್ಯಗೆ ಕಾಂಗ್ರೆಸ್ ಟಿಕೆಟ್ ನೀಡಬಾರದು ಎಂದು ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದ್ದರು. ಇತ್ತೀಚಿಗೆ ಕಾಂಗ್ರೆಸ್ ಸೇರ್ಪಡೆಯಾದ ಎಚ್.ಡಿ.ತಮ್ಮಯ್ಯಗೆ ಕಾಂಗ್ರೆಸ್ ಟಿಕೆಟ್ ನೀಡಬಾರದು ಎಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದರು. ಆದರೆ ಸದ್ಯ ಕಾರ್ಯಕರ್ತರ ವಿರೋಧದ ನಡುವೆಯೇ ಎಚ್.ಡಿ ತಮ್ಮಯ್ಯಗೆ ಟಿಕೆಟ್ ನೀಡಲಾಗಿದೆ. ಇದೀಗ ಶಾಸಕ ಸಿ.ಟಿ ರವಿಗೆ ಆಪ್ತ ಎಚ್.ಡಿ ತಮ್ಮಯ್ಯ ಅವರನ್ನೇ ಕ್ಷೇತ್ರದಲ್ಲಿ ಎದುರಿಸುವ ಸಂದರ್ಭ ಎದುರಾಗಿದೆ.
ಈ ಹಿಂದೆಯೇ ಕರ್ನಾಟಕ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸುವ ಕಾಂಗ್ರೆಸ್ ಅಭ್ಯರ್ಥಿ ಆಯ್ಕೆ ಕುರಿತು ಚಿಕ್ಕಮಗಳೂರು ಕಾಂಗ್ರೆಸ್ ಕಾರ್ಯಕರ್ತರು ಅಸಮಧಾನಗೊಂಡಿದ್ದರು. ಅಭ್ಯರ್ಥಿ ಪಟ್ಟಿಯಲ್ಲಿ ಅರ್ಜಿ ಹಾಕದವರ ಹೆಸರು ಯಾಕೆ ಕೇಳಿ ಬರುತ್ತಿದೆ ಎಂದು ಕಾರ್ಯಕರ್ತರು ಪ್ರಶ್ನೆ ಮಾಡಿದ್ದರು. ಇನ್ನು ಎಚ್.ಡಿ ತಮ್ಮಯ್ಯಗೆ ಕಾಂಗ್ರೆಸ್ ಟಿಕೆಟ್ ಅಂತಿಮವಾಗಲಿದೆ ಎನ್ನುವ ವಿಚಾರ ಕೇಳಿಯೇ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದರು.
ಜಿಲ್ಲೆಯಲ್ಲಿ ಮೂಲ ಕಾಂಗ್ರೆಸ್ ನಾಯಕರಿಗೆ ಅನ್ಯಾಯವಾಗುತ್ತಿದೆ. ಟಿಕೆಟ್ ಬೇಕಾದವರು ಐದರಿಂದ ಹತ್ತು ವರ್ಷ ಪಕ್ಷದಲ್ಲಿ ದುಡಿಯಲಿ, ಆಮೇಲೆ ಅವರಿಗೆ ಟಿಕೆಟ್ ಕೊಡಲಿ. ಅರ್ಜಿ ಹಾಕಿಲ್ಲ, ಬಂದ ಕೂಡಲೇ ಟಿಕೆಟ್ ನೀಡುವುದು ಅಂದರೆ ಹತ್ತು-ಇಪ್ಪತ್ತು ವರ್ಷದಿಂದ ಪಕ್ಷ ಸಂಘಟನೆ ಮಾಡಿದವರು ಏನು ಮಾಡಬೇಕು ಎಂದು ತೀವ್ರ ಕಿಡಿಕಾರಿದ್ದರು. ಇದೇ ವಿಚಾರವಾಗಿ ಈ ಹಿಂದೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಗಲಾಟೆ ಕೂಡ ನಡೆದಿದ್ದು, ಕಾರ್ಯಕರ್ತರು ಕೈ-ಕೈ ಮಿಲಾಯಿಸಿದ್ದರು.
ನಿನ್ನ ಮೊನ್ನೆ ಪಕ್ಷಕ್ಕೆ ಸೇರಿಕೊಂಡಿರುವ ಎಚ್.ಡಿ ತಮ್ಮಯ್ಯಗೆ ಟಿಕೆಟ್ ನೀಡಿದರೆ ಮುಸ್ಲಿಂ ಸಮುದಾಯ ಕಾಂಗ್ರೆಸ್ ಬೆಂಬಲಿಸುವುದಿಲ್ಲ ಎಂದು ತಮ್ಮಯ್ಯ ವಿರುದ್ಧ ಕಿಸಾನ್ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷರಾಗಿದ್ದ ರಸೂಲ್ ಖಾನ್ ನೇರವಾಗಿ ಆಕ್ರೋಶ ಹೊರಹಾಕಿದ್ದರು. ಅಲ್ಲದೇ ಒಂದು ವೇಳೆ ಎಚ್.ಡಿ ತಮ್ಮಯ್ಯಗೆ ಟಿಕೆಟ್ ನೀಡಿದರೆ ಸಿ.ಟಿ ರವಿಯೇ ಗೆಲ್ಲುವುದು ಎಂದು ಹೇಳಿದ್ದರು.
ಇಷ್ಟೆಲ್ಲಾ ಕಾರ್ಯಕರ್ತರ ವಿರೋಧದ ನಡುವೆಯೇ ಕಾಂಗ್ರೆಸ್ ಹೈಕಮಾಂಡ್ ಎಚ್.ಡಿ ತಮ್ಮಯ್ಯಗೆ ಟಿಕೆಟ್ ನೀಡಿದ್ದು, ಬಿಜೆಪಿ ಶಾಸಕ ಸಿ.ಟಿ ರವಿಗೆ ಸೋಲುಣಿಸಲು ತಂತ್ರ ರಚಿಸಿದೆ. ಇನ್ನು ಕಾಂಗ್ರೆಸ್ ಟಿಕೆಟ್ ಘೋಷಣೆ ಬಳಿಕ ಕಾರ್ಯಕರ್ತರ ಅಸಮಾಧಾನ ಹೆಚ್ಚಾಗುವ ಸಾಧ್ಯತೆ ಇದೆ.












Click it and Unblock the Notifications