ಮತದಾನದ ದಿನವೂ ಕೇಸರಿ ಶಾಲು ಕಿತ್ತಾಟ: ಚಿಕ್ಕಮಗಳೂರಿನಲ್ಲಿ ಕಾಂಗ್ರೆಸ್-ಬಿಜೆಪಿ ಕಾರ್ಯಕರ್ತರ ಗಲಾಟೆ
ಚಿಕ್ಕಮಗಳೂರು, ಮೇ 10: ರಾಜ್ಯ ವಿಧಾನಸಭೆ ಚುನಾವಣೆಗೆ ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳಿಗೆ ಶಾಸಕರನ್ನು ಆಯ್ಕೆ ಮಾಡಲು ಮತದಾರರು ಉತ್ಸಾಹದಿಂದ ಆಗಮಿಸಿ ತಮ್ಮ ಹಕ್ಕು ಚಲಾಯಿಸುತ್ತಿದ್ದಾರೆ.
ಒಂದೆಡೆ ಮತದಾನ ಪ್ರಕ್ರಿಯೆ ಭರದಿಂದ ಸಾಗುತ್ತಿದ್ದರೆ, ಇನ್ನೊಂದೆಡೆ ಕಾಂಗ್ರೆಸ್ ಮತ್ತು ಬಿಜೆಪಿ ಕಾರ್ಯಕರ್ತರ ನಡುವೆ ಮಾತಿನ ಚಕಮಕಿ ನಡೆದಿದೆ. ಚಿಕ್ಕಮಗಳೂರು ನಗರದ ಬಸವನಹಳ್ಳಿ ಶಾಲೆ ಮತಗಟ್ಟೆಯ ಬಳಿ ಬಿಜೆಪಿ ಕಾರ್ಯಕರ್ತರು ಕೇಸರಿ ಶಾಲು ಧರಿಸಿ ಓಡಾಡಿದ್ದಾರೆ. ಮತಗಟ್ಟೆ ಮುಂಭಾಗದಲ್ಲಿ ಬಿಜೆಪಿ ಕಾರ್ಯಕರ್ತರು ಕೇಸರಿ ಶಾಲು ಧರಿಸಿದನ್ನು ಕಾಂಗ್ರೆಸ್ ಕಾರ್ಯಕರ್ತರು ಖಂಡಿಸಿದ್ದು, ಕೇಸರಿ ಶಾಲು ತೆಗೆಯುವಂತೆ ಹೇಳಿದ್ದಾರೆ. ಇದೇ ವಿಚಾರಕ್ಕೆ ಗಲಾಟೆ ಆರಂಭವಾಗಿದ್ದು, ಎರಡೂ ಪಕ್ಷಗಳ ನಡುವೆ ಮಾತಿನ ಚಕಮಕಿ ನಡೆದಿದೆ.

ಕೇಸರಿ ಶಾಲು ತೆಗೆಯಿರಿ ಎಂದವರ ವಿರುದ್ಧ ನಗರಸಭೆ ಅಧ್ಯಕ್ಷ ವೇಣುಗೋಪಾಲ್ ಕಿಡಿಕಾರಿದ್ದು 'ಇದು ಹಿಂದುತ್ವದ ಶಾಲು ನಿಮ್ಮ ಅಪ್ಪನ ಮನೆಯ ಶಾಲಲ್ಲ' ಎಂದು ಗುಡುಗಿದ್ದಾರೆ. ಈ ವೇಳೆ ಎರಡೂ ಪಕ್ಷದ ಕಾರ್ಯಕರ್ತರು ಜಗಳಕ್ಕೆ ಇಳಿದಿದ್ದು, ಮಧ್ಯೆ ಪ್ರವೇಶಿಸಿದ ಪೊಲೀಸರು ಗುಂಪುಗಳನ್ನು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಇನ್ನು ಜಿಲ್ಲೆಯ ಐದು ವಿಧಾನಸಭಾ ಕ್ಷೇತ್ರ ಒಟ್ಟು 1224 ಮತಗಟ್ಟೆಗಳಲ್ಲಿ ಮತದಾನ ನಡೆಯಲಿದೆ. ಜಿಲ್ಲೆಯಲ್ಲಿ ಒಟ್ಟು 945151 ಮತದಾರರಿದ್ದ ಪುರುಷರು 4,68,599, ಮಹಿಳೆಯರು 4,76,516 ಮತದಾರರಿದ್ದಾರೆ. ಮತಗಟ್ಟೆಗಳಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಬಿಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದೆ. ಜಿಲ್ಲೆಯಲ್ಲಿ ಮೋಡಕವಿದ ವಾತವರಣವಿದ್ದು, ಮಳೆ ಬಂದರೆ ಮತದಾನಕ್ಕೆ ಕೊಂಚ ಹಿನ್ನೆಡೆಯಾಗುವ ಸಾಧ್ಯತೆ ಇದೆ.












Click it and Unblock the Notifications