ಕಾಂಗ್ರೆಸ್‌ನವರು ವೋಟ್ ಕೇಳೋಕೆ ಬಂದ್ರೆ ನಾಯಿ ಚೂ ಬಿಡ್ತೀವಿ: ಕಾಫಿನಾಡ ಬಜರಂಗದಳದಿಂದ ಎಚ್ಚರಿಕೆ ಸಂದೇಶ
ಚಿಕ್ಕಮಗಳೂರು, ಮೇ, 02: ವಿಧಾನಸಭೆ ಚುನಾವಣೆ ಹಿನ್ನೆಲೆ ಮತದಾರರನ್ನು ತಮ್ಮತ್ತ ಸೆಳೆಯುವ ವಿಚಾರದಲ್ಲಿ ಬಿಜೆಪಿ, ಕಾಂಗ್ರೆಸ್ ನಡುವೆ ವಾಗ್ಯುದ್ಧಗಳೇ ನಡೆಯುತ್ತಿವೆ. ಅದೇ ರೀತಿ ಇದೀಗ ಚಿಕ್ಕಮಗಳೂರಿನ ಜಿಲ್ಲೆಯ ಹಲವು ಮನೆಗಳ ಮುಂದೆ ಕಾಂಗ್ರೆಸಿಗರು ಮತ ಕೇಳಲು ಬಂದರೆ ಅವರ ಮೇಲೆ "ನಾಯಿ ಬಿಡಲಾಗುವುದು ಎಚ್ಚರ" ಎಂಬ ಬೋರ್ಡ್ ಹಾಕಿ ಕಾಂಗ್ರೆಸ್‌ನ ಪ್ರಣಾಳಿಕೆಗೆ ಹಿಂದೂ ಸಂಘಟನೆಗಳ ಕಾರ್ಯಕರ್ತರು ಆಕ್ರೋಶ ಹೊರಹಾಕಿದ್ದಾರೆ.
ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ರಾಜ್ಯದಲ್ಲಿ ಹಿಂದೂ ಸಂಘಟನೆ, ಬಜರಂಗದಳವನ್ನು ನಿಷೇಧ ಮಾಡುತ್ತೇವೆ ಎನ್ನುವ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಹಿಂದೂ ಸಂಘಟನೆ ಕಾರ್ಯಕರ್ತರು ಕೆಂಡವಾಗಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್ ಹೋಬಳಿಯ ಗುಡ್ಡಟ್ಟಿ ಎಂಬ ಗ್ರಾಮದಲ್ಲಿ ಅರುಣ್ ಎಂಬ ಬಜರಂಗದಳ ಕಾರ್ಯಕರ್ತ ತಮ್ಮ ಮನೆ ಮುಂದೆ ಬೋರ್ಡ್ ಹಾಕಿ ಮತ ಕೇಳಲು ಬರುವ ಕಾಂಗ್ರೆಸಿಗರಿಗೆ ಎಚ್ಚರಿಕೆ ನೀಡಿದ್ದಾರೆ.

ಇದು ಬಜರಂಗದಳದವರ ಮನೆ. ಕಾಂಗ್ರೆಸಿಗರು ಮತ ಕೇಳಲು ಅವಕಾಶವಿಲ್ಲ. ಅವರು ಮತ ಕೇಳಲು ಬಂದರೆ ನಾಯಿ ಚೂ ಬಿಡಲಾಗುವುದು ಎಚ್ಚರ ಎಂದು ಬೋರ್ಡ್ ಹಾಕಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆ ಬಿಡುಗಡೆ ಮಾಡಿದ ಬೆನ್ನಲ್ಲೇ ಚಿಕ್ಕಮಗಳೂರು ಜಿಲ್ಲೆಯಲ್ಲಿ ಹಿಂದೂ ಸಂಘಟನೆ ಬಲಿಷ್ಠವಾಗಿದೆ.
ದತ್ತಪೀಠದ ಹೋರಾಟ ಆರಂಭಗೊಂಡ ಮೇಲೆ ಮಲೆನಾಡು ಭಾಗದಲ್ಲಿ ಹಿಂದೂ ಸಂಘಟನೆ ಮತ್ತಷ್ಟು ಗಟ್ಟಿಯಾಗಿತ್ತು. ಇದೀಗ ಕಾಂಗ್ರೆಸ್ ಪ್ರಣಾಳಿಕೆ ವಿರುದ್ಧ ಕೆರಳಿ ಕೆಂಡವಾಗಿರುವ ಬಜರಂಗದಳ ಕಾರ್ಯಕರ್ತರು ನಾನಾ ರೀತಿ ಕಾಂಗ್ರೆಸ್ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಸದ್ಯ ಈ ಪ್ರಣಾಳಿಕೆ ಮಲೆನಾಡು ಭಾಗದಲ್ಲಿ ಕಾಂಗ್ರೆಸಿಗೆ ಮುಳ್ಳಾಗೋದು ಗ್ಯಾರಂಟಿ ಎನ್ನುವ ಮಾತುಗಳು ಕೇಳಿಬರುತ್ತಿವೆ.
ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ಕಿಡಿ
ಪ್ರಧಾನಿ ನರೇಂದ್ರ ಮೋದಿ ಎಲ್ಲೇ ಹೋದರೂ ತಮ್ಮ ಬಗ್ಗೆಯೇ ಮಾತ್ರ ಮಾತನಾಡುತ್ತಾರೆ. ಜನರ ಸಮಸ್ಯೆಗಳ ಬಗ್ಗೆ ಏನೂ ಚಕಾರವನ್ನೇ ಎತ್ತಲ್ಲ ಎಂದು ರಾಹುಲ್ ಗಾಂಧಿ ಹರಿಹರದಲ್ಲಿ ವಾಗ್ದಾಳಿ ನಡೆಸಿದ್ದಾರೆ.
ಶೇಕಡಾ 60ರಷ್ಟು ಹೇಳಿಕೊಳ್ಳಿ. ಕನಿಷ್ಠ 30 ರಷ್ಟಾದರೂ ಅಭಿವೃದ್ಧಿ, ಜನಪರ ಕಾಳಜಿ ಬಗ್ಗೆ ತಿಳಿಸಿ ಎಂದು ಎಐಸಿಸಿ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದರು. ಹರಿಹರ ಪಟ್ಟಣದ ಗಾಂಧಿನಗರ ಮೈದಾನದಲ್ಲಿ ಕಾಂಗ್ರೆಸ್ ಅಭ್ಯರ್ಥಿ ನಂದಿಗಾವಿ ಶ್ರೀನಿವಾಸ್ ಪರ ಚುನಾವಣಾ ಪ್ರಚಾರದ ಬಹಿರಂಗ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.
24 ಗಂಟೆಯೂ ಕುಡಿಯುವ ನೀರಿನ ಸೌಕರ್ಯ ಕೊಡುವ ಯೋಜನೆ ಜಲಸಿರಿಯನ್ನು ದಾವಣಗೆರೆಯಲ್ಲಿ ಅನುಷ್ಠಾನಗೊಳಿಸಿಲ್ಲ. ದಾವಣಗೆರೆ - ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆಯೂ ಪ್ರಧಾನಿ ಮೋದಿ ಅವರು ಮಾತನಾಡಬೇಕು. 600 ಮನೆಗಳನ್ನು ಹಂಚಿಕೆ ಮಾಡುವುದಾಗಿ ಆಶ್ವಾಸನೆ ಕೊಟ್ಟಿದ್ದರು. ಆದರೆ ಇದುವರೆಗೂ ಭೂಮಿಯೂ ಖರೀದಿಯಾಗಿಲ್ಲ. ಅಷ್ಟೇ ಅಲ್ಲ, ರೈತರ ಕಡೆಯಿಂದ ಭೂಮಿಯನ್ನು ಕಸಿದುಕೊಳ್ಳುವ ಯತ್ನವನ್ನು ಕೂಡ ನಡೆಸಲಾಗುತ್ತಿದೆ. ಪ್ರಧಾನಿಯವರು ಇಂತಹ ವಿಚಾರಗಳ ಬಗ್ಗೆಯೂ ಮಾತನಾಡಬೇಕು ಎಂದು ಸವಾಲು ಹಾಕಿದರು.
ಪ್ರಧಾನಿ ಮೋದಿ ಅವರಿಗೆ ಅವರ ಬಗ್ಗೆ ಹೇಳಿಕೊಳ್ಳುವುದು ತುಂಬಾನೇ ಖುಷಿ ಆಗಬಹುದು. ಎಲ್ಲಿ ಹೋದರೂ ನಿಮ್ಮ ಬಗ್ಗೆಯೇ ಹೇಳಿಕೊಳ್ಳುತ್ತೀರಾ. ಜನರಿಗೆ ಏನು ಮಾಡಿದ್ದೀರಾ? ಏನು ಮಾಡಬೇಕು ಎಂದುಕೊಂಡಿದ್ದೀರಾ. ಏನು ತಪ್ಪು ಮಾಡಿದ್ದೀರಾ ಎಂಬ ಬಗ್ಗೆ ರಾಜ್ಯದ ಜನರಿಗೆ ಮಾಹಿತಿ ನೀಡಿ. ಬಿಜೆಪಿಯವರಿಗೆ 40 ಸಂಖ್ಯೆ ತುಂಬಾನೇ ಇಷ್ಟ. ಎಲ್ಲಿ ಹೋದರೂ 40 ಮಾತ್ರನೇ ಹೇಳುತ್ತಾರೆ ಎಂದು ವ್ಯಂಗ್ಯವಾಡಿದರು.
ಇನ್ನು ಸರ್ಕಾರಿ ಕೆಲಸ, ಕಾಲೇಜಿಗೆ ಸೇರಲು, ಸಬ್ ಇನ್ಸ್‌ಸ್ಪೆಕ್ಟರ್ ನೇಮಕಾತಿ, ಗುತ್ತಿಗೆದಾರರು ಸೇರಿದಂತೆ ಎಲ್ಲದರಲ್ಲಿಯೂ ಶೇಕಡಾ 40 ರಷ್ಟು ಕಮಿಷನ್ ಕೇಳುತ್ತಾರೆ. ಹಾಗಾಗಿ ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಗೆ ಕೇವಲ 40 ಸ್ಥಾನಗಳನ್ನು ಮಾತ್ರ ನೀಡುವ ಕೆಲಸ ಮಾಡಿ. 150 ಸ್ಥಾನಗಳನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಿ. ಇಲ್ಲದಿದ್ದರೆ ಬಿಜೆಪಿಯು ಆಪರೇಷನ್ ಮಾಡುವ ಸಾಧ್ಯತೆಯಿದೆ. ಬಹುಮತಕ್ಕಿಂತ ಹೆಚ್ಚು ಸ್ಥಾನ ಬಂದರೆ ಸರ್ಕಾರ ಕೆಡವಲು ಆಗದು ಎಂದು ಹೇಳಿದರು. ಬಿಜೆಪಿ ಸರ್ಕಾರ ಕಳೆದ ಮೂರು ವರ್ಷಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಹಣವನ್ನು ಲೂಟಿ ಹೊಡೆದಿದೆ. ಬರುವ ಐದು ವರ್ಷಗಳಲ್ಲಿ ಜನರ ಸಾವಿರಾರು ಕೋಟಿ ರೂಪಾಯಿ ಲೂಟಿ ಹೊಡೆಯಲು ಯೋಜನೆ ಹಾಕಿಕೊಂಡಿದ್ದಾರೆ. ಮುಂಬರುವ ಸರ್ಕಾರ ಅಭದ್ರಗೊಳಿಸಲು ಸಂಚು ರೂಪಿಸಿದ್ದಾರೆ. ಹಾಗಾಗಿ ಕಾಂಗ್ರೆಸ್‌ಗೆ ದೊಡ್ಡ ಬಹುಮತ ಕೊಡಿ. ಆಗ ಸರ್ಕಾರ ಅಭದ್ರಗೊಳಿಸಲು ಸಾಧ್ಯವಾಗಲ್ಲ. ಇದಕ್ಕಾಗಿ ಕೋಟ್ಯಂತರ ಹಣ ವ್ಯಯಿಸಲು ಬಿಜೆಪಿ ಸಿದ್ಧವಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.












Click it and Unblock the Notifications