ಚಿಕ್ಕಮಗಳೂರಿನಲ್ಲಿ ಕುಟುಂಬ ಸಮೇತ ಮತ ಚಲಾಯಿಸಿ ಭವಿಷ್ಯ ನುಡಿದ ಸಿ.ಟಿ.ರವಿ
ಚಿಕ್ಕಮಗಳೂರು, ಮೇ, 10: ರಾಜ್ಯ ವಿಧಾನಸಭೆ ಚುನಾವಣೆಯ ಮತದಾನ ಬಿರುಸಿನಿಂದ ಸಾಗಿದ್ದು, ರಾಜಕೀಯ ನಾಯಕರು ಕೂಡ ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತ ಚಲಾವಣೆ ಮಾಡಿದ್ದಾರೆ. ಅದೇ ರೀತಿ ಶಾಸಕ ಸಿ.ಟಿ.ರವಿ ಅವರು ಚಿಕ್ಕಮಗಳೂರು ನಗರದ ಬಸವನಹಳ್ಳಿ ಶಾಲೆಯಲ್ಲಿ ಮತದಾನ ಮಾಡಿದರು.
ಪತ್ನಿ, ತಾಯಿ ಜೊತೆ ಆಗಮಿಸದ ಸಿ.ಟಿ.ರವಿ ಅವರು ಚಿಕ್ಕಮಗಳೂರಿನ ಬಸವನಹಳ್ಳಿ ಶಾಲೆ ಮತಗಟ್ಟೆ ಸಂಖ್ಯೆ 200 ರಲ್ಲಿ ಮತ ಚಲಾಯಿಸಿದರು.

ಇನ್ನು ಇದೇ ವೇಳೆ ಮಾತನಾಡಿದ ಅವರು, ಚಿಕ್ಕಮಗಳೂರು ಸೇರಿದಂತೆ ರಾಜ್ಯದಲ್ಲಿ ಉತ್ಸಾಹದಿಂದ ಮತದಾನ ನಡೆಯುತ್ತಿದೆ. ಮತ್ತೆ ಡಬಲ್ ಇಂಜಿನ್ ಸರ್ಕಾರವೇ ಆಡಳಿತ ನಡೆಸಲಿದೆ ಎಂದು ಭವಿಷ್ಯ ನುಡಿದರು.
ಬಿಜೆಪಿಯೇ ಭರವಸೆ ಎಂದು ರಾಜ್ಯದ ಜನರಿಗೆ ತಿಳಿದಿದೆ. ಹಾಗೆಯೆ ಬಿಜೆಪಿಗೆ ಸ್ಪಷ್ಟ ಬಹುಮತ ನೀಡಿ ಎಂದು ಮತದಾರರಿಗೆ ಮನವಿ ಮಾಡಿದರು. ಅಲ್ಲೆ ಅತಿ ಹೆಚ್ಚು ಮತಗಳ ಅಂತರದಿಂದ ಗೆಲ್ಲುತ್ತೇನೆ ಎನ್ನುವ ವಿಶ್ವಾಸವನ್ನು ಕೂಡ ವ್ಯಕ್ತಪಡಿಸಿದರು.
ಮತದಾನ ಮಾಡಿದ ವಿ.ಸೋಮಣ್ಣ ದಂಪತಿ
ರಾಜ್ಯದ ಎಲ್ಲೆಡೆ ವಿಧಾನಸಭೆ ಚುನಾವಣೆಯ ಮತದಾನ ಬಿರುಸಿನಿಂದ ಸಾಗಿದ್ದು, ಕಣದಲ್ಲಿರುವ ಅಭ್ಯರ್ಥಿಗಳು ಕೂಡ ಕುಟುಂಬ ಸಮೇತರಾಗಿ ಬಂದು ಮತ ಚಲಾವಣೆ ಮಾಡುತ್ತಿದ್ದಾರೆ. ಅದೇ ರೀತಿ ಚಾಮರಾಜನಗರದಲ್ಲಿ ಮೊದಲ ಬಾರಿ ದಂಪತಿ ಸಮೇತ ಆಗಮಿಸಿ ಸಚಿವ ವಿ.ಸೋಮಣ್ಣ ಅವರು ಮತದಾನ ಮಾಡಿದರು.
ಚಾಮರಾಜನಗರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ವಿ.ಸೋಮಣ್ಣ ಅವರು, ನಗರದ ಪೇಟೆ ಪ್ರೈಮರಿ ಶಾಲೆಯ ಬೂತ್ ನಂ 74ರಲ್ಲಿ ಮತದಾನ ಮಾಡಿದರು. 9:30ಕ್ಕೆ ಮತಗಟ್ಟೆಗೆ ಕುಟುಂಬ ಸಮೇತ ಆಗಮಿಸಿದ ವಿ.ಸೋಮಣ್ಣ ಸರದಿ ಸಾಲಿನಲ್ಲಿ ನಿಂತು ಮತ ಚಲಾವಣೆ ಮಾಡಿ ಗಮನ ಸೆಳೆದರು.












Click it and Unblock the Notifications