Karnataka Budget 2023 Expectations: ಕಾಫಿನಾಡು ಚಿಕ್ಕಮಗಳೂರು ನಿರೀಕ್ಷೆಗಳೇನು?
ಫೆಬ್ರವರಿ 10ರಂದು ವಿಧಾನಮಂಡಲ ಅಧಿವೇಶನ ಆರಂಭವಾಗಲಿದ್ದು, ಫೆಬ್ರವರಿ 17ರಂದು ಮುಖ್ಯಮಂತ್ರಿ ರಾಜ್ಯ ಬಜೆಟ್ ಮಂಡನೆ ಆಗಲಿದೆ. ಕರ್ನಾಟಕ ಬಜೆಟ್ 2023ರ ಮೇಲಿನ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಜನತೆಯ ಉದ್ಯಮ ಕ್ಷೇತ್ರದ ನಿರೀಕ್ಷೆಗಳೇನು ಎನ್ನುವುದು ಇಲ್ಲಿದೆ.
ರಾಜ್ಯ ಬಜೆಟ್ ಹಿನ್ನೆಲೆ ಕಾಫಿನಾಡಿಗರು ನೂರಾರು ನಿರೀಕ್ಷೆ ಮಹಾಪೂರವೇ ಇಟ್ಟುಕೊಂಡಿದ್ದಾರೆ. ಸಹಕಾರ ಕ್ಷೇತ್ರದಲ್ಲಿ ಛಾಪು ಮೂಡಿಸಿದ್ದ ಕೊಪ್ಪದ ಸಹಕಾರ ಸಾರಿಗೆ ಸಂಸ್ಥೆ ಆರ್ಥಿಕ ಸಂಕಷ್ಟದಿಂದ ಮೂರು ವರ್ಷಗಳಿಂದ ಮೂಲೆ ಗುಂಪಾಗಿದೆ. ಸಂಸ್ಥೆಯ ಪುನಶ್ಚೇತನಕ್ಕೆ ಈ ಬಾರಿ ಬಜೆಟ್‌ನಲ್ಲಿ ಅನುದಾನ ಘೋಷಿಸಬಹುದು ಎಂಬ ನಿರೀಕ್ಷೆಯಿದೆ.
1. ಸಹಕಾರ ಸಾರಿಗೆ ಬಸ್‌ಗಳು ಮಲೆನಾಡಿನ ಸಂಪರ್ಕ ಕೊಂಡಿಯಾಗಿದ್ದವು. ಈ ಸಾರಿಗೆಯಲ್ಲಿ 300ಕ್ಕೂ ಹೆಚ್ಚು ನೌಕರರು ಇದ್ದರು. ಇದೀಗ ಬಸ್‌ಗಳ ಸಂಚಾರ ಸ್ಥಗಿತದಿಂದ ನೌಕರರು ಬೀದಿಪಾಲಾಗಿದ್ದಾರೆ. ಸರ್ಕಾರ ನೆರವು ಘೋಷಿಸಿ ಮತ್ತೆ ಬಸ್‌ಗಳ ಸಂಚಾರಕ್ಕೆ ಅವಕಾಶ ನೀಡಬೇಕು ಎಂಬುದು ಸಂಸ್ಥೆಯ ಮನವಿಯಾಗಿದೆ.
2. ಅಡಿಕೆಗೆ ಹಳದಿ ಎಲೆ, ಎಲೆ ಚುಕ್ಕಿ ರೋಗ ಕಾಡುತ್ತಿದ್ದು, ಸಂಕಷ್ಟದ ಸುಳಿಯಲ್ಲಿ ಬೆಳೆಗಾರರು ವಿಶೇಷ ಪ್ಯಾಕೇಜ್ ನಿರೀಕ್ಷೆಯಲ್ಲಿದ್ದಾರೆ. ಬೆಳೆಗಾರರ ಸಾಲ, ಬಡ್ಡಿ ಮನ್ನಾ ಮಾಡಬೇಕು. ಮತ್ತು ಹಳದಿ ಎಲೆ, ಎಲೆಚುಕ್ಕಿ ರೋಗದಿಂದ ಅಡಿಕೆ ಪಾರು ಮಾಡುವ ಮಾರ್ಗೋಪಾಯ ಸೂಚಿಸಬೇಕು ಎಂಬುದು ಬೆಳೆಗಾರರ ಒತ್ತಾಯವಾಗಿದೆ.

3. ಹಣ್ಣು, ತರಕಾರಿ ಬೆಳೆಗಳು ಕೊಳೆತು ರೈತರಿಗೆ ನಷ್ಟವಾಗುವುದನ್ನು ತಪ್ಪಿಸಲು ಶೈತ್ಯಾಗಾರ ಮಂಜೂರು ಮಾಡಬೇಕು. ಬಯಲುಸೀಮೆ ಭಾಗದಲ್ಲಿ ಶೈತ್ಯಾಗಾರ ಸ್ಥಾಪಿಸಬೇಕು ಎಂಬ ಕೋರಿಕೆ ಇದೆ.
4. ತುಂಗಾ, ಭದ್ರಾ, ಹೇಮಾವತಿ, ವೇದಾವತಿ, ನೇತ್ರಾವತಿ ನದಿಗಳು ತ್ಯಾಜ್ಯ, ಪ್ಲಾಸ್ಟಿಕ್ ಇತ್ಯಾದಿ ಸೇರಿ ಮಲಿನವಾಗುತ್ತಿವೆ. ಮಾಲಿನ್ಯ ತಡೆಗೆ ಯೋಜನೆ ರೂಪಿಸಬೇಕು ಎಂಬುದು ಇಲ್ಲಿನ ಜನರ ನಿರೀಕ್ಷೆಯಾಗಿದೆ.
5. ಶೃಂಗೇರಿಯಲ್ಲಿ 100 ಹಾಸಿಗೆ ಸೌಲಭ್ಯವುಳ್ಳ ಆಸ್ಪತ್ರೆ ನಿರ್ಮಾಣ ಮಾಡುವ ನಿಟ್ಟಿನಲ್ಲಿ ಇರುವ ಜಾಗದ ಸಮಸ್ಯೆ ಪರಿಹರಿಸಿ ತಾನೇ ಬಂದು ಶಂಕುಸ್ಥಾಪನೆ ನೆರವೇರಿಸುವುದಾಗಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಕೊಪ್ಪದಲ್ಲಿ ಸಂಕಲ್ಪ ಯಾತ್ರೆಯಲ್ಲಿ ಭರವಸೆ ನೀಡಿದ್ದರು. ಆಸ್ಪತ್ರೆಗೆ ಜಾಗ, ಅನುದಾನ ಘೋಷಿಸಬೇಕು ಎಂಬುದು ಈ ಭಾಗದ ಜನರ ಆಗ್ರಹವಾಗಿದೆ.

6. ಇನ್ನು ಬಾಳೆಹೊನ್ನೂರಿನ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೇರಿಸಿ 50 ಹಾಸಿಗೆ ಸೌಲಭ್ಯದ ಸಮುದಾಯ ಆರೋಗ್ಯ ಕೇಂದ್ರವನ್ನು ಸ್ಥಾಪನೆ ಮಾಡಬೇಕು ಎಂಬ ಬೇಡಿಕೆ ಇದೆ.
7. ಎನ್.ಆರ್.ಪುರ, ಕೊಪ್ಪ, ಶೃಂಗೇರಿ ತಾಲೂಕು ವ್ಯಾಪ್ತಿಗೆ ಉಪವಿಭಾಗಾಧಿಕಾರಿ ಕಚೇರಿ ಮಂಜೂರು ಮಾಡಬೇಕು. ಕೊಪ್ಪದಲ್ಲಿ ಅರಣ್ಯ ವ್ಯವಸ್ಥಾಪನಾಧಿಕಾರಿ (ಎಫ್‌ಎಸ್‌ಒ) ಕಚೇರಿ ಸ್ಥಾಪಿಸಬೇಕು. ಹಾಗೆಯೇ ಪ್ರತಿ ವರ್ಷ ಏಪ್ರಿಲ್ 15 ರಂದು "ಮಲೆನಾಡು ದಿನ" ಆಚರಿಸಬೇಕು ಎಂಬ ಬೇಡಿಕೆಗಳು ಇವೆ.
8. ಇನ್ನು ಜಿಲ್ಲೆಗೆ ಒಂದು ಹಾಲಿನ ಡೈರಿ ತರಬೇಕು ಎಂಬುದು ಕಾಫಿನಾಡಿನ ಜನರ ನಿರೀಕ್ಷೆಯಾಗಿದೆ. ಹಾಗೆಯೇ ಇಂಜಿನಿಯರಿಂಗ್ ಕಾಲೇಜನ್ನು ಕೂಡ ತರಬೇಕು ಎನ್ನುವುದು ಇಲ್ಲಿನ ಸ್ಥಳಿಯರು ಹಾಗೂ ವಿದ್ಯಾರ್ಥಿಗಳ ಮನವಿಯಾಗಿದೆ.












Click it and Unblock the Notifications