11 ವರ್ಷದ ನಂತರ ತುಂಬಿದ ಕಳಸಾಪುರ ದೊಡ್ಡ ಕೆರೆ
ಚಿಕ್ಕಮಗಳೂರು, ಅಕ್ಟೋಬರ್ 12: ಬರೋಬ್ಬರಿ 11 ವರ್ಷಗಳ ಬಳಿಕ ಚಿಕ್ಕಮಗಳೂರು ತಾಲೂಕಿನ ಕಳಸಾಪುರ ದೊಡ್ಡ ಕೆರೆ ಭರ್ತಿಯಾಗಿ ಕೋಡಿ ಬೀಳುವ ಮೂಲಕ ಈ ಭಾಗದ ರೈತರಲ್ಲಿ ಸಂತೋಷ ತಂದಿದೆ.
ಹನ್ನೊಂದು ವರ್ಷಗಳಿಂದ ತೀರ್ವ ಬರಗಾಲಕ್ಕೆ ತುತ್ತಾಗಿ ಬಳಲಿ ಬೆಂಡಾಗಿದ್ದ ಗಾಳಿಕೆರೆ, ಹಿರೆಹಳ್ಳಿ, ಕಳಸಾಪುರ ಗ್ರಾಮಗಳಲ್ಲಿ ಕೆರೆ ತುಂಬಿದ್ದಕ್ಕೆ ಪ್ರತಿ ಮನೆಗಳಲ್ಲೂ ಹಬ್ಬದ ವಾತಾವರಣ ನಿರ್ಮಾಣವಾಗಿದೆ. ಕರಗಡ ಯೋಜನೆಯಲ್ಲಿ ಪೈಪ್ ಗಳ ಮೂಲಕ ಕಳೆದ 2 ತಿಂಗಳಿನಿಂದಲೂ ನೀರು ಹಾಯಿಸಲಾಗುತ್ತಿತ್ತು. ಆದರೂ ಕೆರೆ ತುಂಬದೆ ಜನರಲ್ಲಿ ನಿರಾಸೆ ಮೂಡಿಸಿತ್ತು.

ಆದರೆ ಕಳೆದ ಮೂರ್ನಾಲ್ಕು ದಿನಗಳಿಂದ ಈ ಭಾಗದಲ್ಲಿ ಸುರಿದ ಭಾರೀ ಮಳೆಗೆ ಕಳಸಾಪುರ ಕೆರೆ ತುಂಬಿ ಕೋಡಿ ಒಡೆದಿದೆ. ಒಂದು ದಶಕದಿಂದ ಕೆರೆಯಲ್ಲಿ ನೀರಿಲ್ಲದೆ ಸುತ್ತಲಿನ ಬೋರ್ ವೆಲ್ ಗಳಲ್ಲಿ ಅಂತರ್ಜಲ ಮಟ್ಟ ಪಾತಾಳಕ್ಕಿಳಿದು ರೈತರ ತೋಟಗಳು ಸಂಪೂರ್ಣ ಒಣಗಿ ಹೋಗಿದ್ದವು. ಆದರೆ ಈ ವರ್ಷದ ಉತ್ತಮ ಮಳೆಗೆ ಕೆರೆ ಭರ್ತಿಯಾಗಿದೆ. ಇನ್ನೂ ಎರಡು ಕೆರೆಗಳು ತುಂಬುವ ನಿರೀಕ್ಷೆಯಿದ್ದು, ಜನರಲ್ಲಿ ಆಶಾಭಾವನೆ ಮೂಡಿಸಿದೆ.












Click it and Unblock the Notifications