Kadur: ನಾಮಪತ್ರ ಸಲ್ಲಿಸಲು ಎತ್ತಿನ ಗಾಡಿಯಲ್ಲಿ ಹೊರಟ ಕಡೂರು ಜೆಡಿಎಸ್ ಅಭ್ಯರ್ಥಿ ವೈ.ಎಸ್.ವಿ. ದತ್ತ
ಚಿಕ್ಕಮಗಳೂರು, ಏಪ್ರಿಲ್, 18: ವೈ.ಎಸ್.ವಿ.ದತ್ತ ಅವರು ನಾಮಪತ್ರ ಸಲ್ಲಿಸಲು ಕಡೂರು ತಾಲೂಕು ಕಚೇರಿಗೆ ಎತ್ತಿನ ಗಾಡಿಯಲ್ಲಿ ಹೊರಟು ಗಮನ ಸೆಳೆದಿದ್ದಾರೆ.
ದತ್ತಾಗೆ ಜೊತೆಗೆ ಎತ್ತಿನ ಗಾಡಿಯಲ್ಲಿ ಪ್ರಜ್ವಲ್ ರೆವಣ್ಣ ಅವರು ಹತ್ತಿಕೊಂಡಿದ್ದು, ಈ ವೇಳೆ ಅವರಿಗೆ 10 ಸಾವಿರಕ್ಕೂ ಹೆಚ್ಚು ಅಭಿಮಾನಿಗಳು ಸಾಥ್ ನೀಡಿದ್ದಾರೆ. ಈ ಎತ್ತಿನ ಗಾಡಿ ಮೆರವಣಿಗೆ ವೇಳೆ ಹೆದ್ದಾರಿ 206ರಲ್ಲಿ 1 ಕಿ.ಮೀಟರ್‌ವರೆಗೂ ಟ್ರಾಫಿಕ್ ಜಾಮ್ ಆಗಿದ್ದು, ವಾಹನ ಸವಾರರು ಪರದಾಡಿದ್ದಾರೆ.

ಹೀಗೆ ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದಲ್ಲಿ 39 ಡಿಗ್ರಿ ಸೆಲ್ಸಿಯಸ್ ಸುಡು ಬಿಸಿಲಿನಲ್ಲೂ ನೆರೆದ ಜನ ದತ್ತಾ ಅವರ ಪರ ಜೈಕಾರವನ್ನು ಹಾಕಿದರು. ಅಷ್ಟೇ ಅಲ್ಲದೆ ದೇವೇಗೌಡರ ಉಪಸ್ಥಿತಿಯಲ್ಲಿ ವೈ.ಎಸ್.ವಿ ದತ್ತಾ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.
ಮರಳಿ ಜೆಡಿಎಸ್ ಗೂಡಿಗೆ ಸೇರಿದ ವೈ.ಎಸ್.ವಿ ದತ್ತ
ಕಡೂರೂ ಕ್ಷೇತ್ರದಲ್ಲಿ ವೈ.ಎಸ್.ವಿ ದತ್ತ ಅವರು ಇತ್ತೀಚೆಗಷ್ಟೆ ಮರಳಿ ಜೆಡಿಎಸ್ ಗೂಡಿಗೆ ಸೇರಿದ್ದರು. ಈ ಮೊದಲು ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಮಾಜಿ ಶಾಸಕ ವೈಎಸ್‍ವಿ ದತ್ತ ಅವರು ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಹಿನ್ನೆಲೆಯಲ್ಲಿ ಏಪ್ರಿಲ್ 13ಎಂದು ಅಚ್ಚರಿಯ ಬೆಳವಣಿಗೆಯಲ್ಲಿ ಮತ್ತೆ ಜೆಡಿಎಸ್ ಪಕ್ಷವನ್ನು ಸೇರ್ಪಡೆಯಾಗಿದ್ದರು.
ಜೆಡಿಎಸ್ ತೊರೆದು ಕಾಂಗ್ರೆಸ್ ಸೇರಿದ್ದ ಅವರಿಗೆ ಕಾಂಗ್ರೆಸ್ ಪಕ್ಷದಿಂದ ಟಿಕೆಟ್ ಸಿಗುತ್ತದೆ ಎಂಬ ವಿಶ್ವಾಸವಿತ್ತು. ಆದರೆ ಕಡೆ ಗಳಿಗೆಯಲ್ಲಿ ಟಿಕೆಟ್ ವಂಚಿತರಾದ ಅವರು ಕಾರ್ಯಕರ್ತರು ಮತ್ತು ಅಭಿಮಾನಿಗಳ ಸ್ವಾಭಿಮಾನಿ ಸಮಾವೇಶ ನಡೆಸಿ ಪಕ್ಷೇತರರಾಗಿ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದರು. ದತ್ತ ಅವರ ಅಸಮಾಧಾನದ ನಡೆಯ ಬಗ್ಗೆ ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿದ್ದಂತೆ ಮಾಜಿ ಪ್ರಧಾನಿ ದೇವೇಗೌಡ ಅವರು, ದತ್ತ ಅವರನ್ನು ಕರೆಸಿಕೊಂಡು ಮಾತುಕತೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು.
ಇದರ ಪರಿಣಾಮವಾಗಿ ಯಗಟಿಯಲ್ಲಿರುವ ದತ್ತ ಅವರ ಮನೆಗೆ ಮಾಜಿ ಸಚಿವ ಎಚ್.ಡಿ.ರೇವಣ್ಣ, ಸಂಸದ ಪ್ರಜ್ವಲ್ ರೇವಣ್ಣ ಭೇಟಿ ನೀಡಿದ್ದರು. ಈ ವೇಳೆ ಅವರು ದತ್ತ ಮತ್ತು ಕಾರ್ಯಕರ್ತರೊಂದಿಗೆ ಸಮಾಲೋಚಿಸಿ ದತ್ತ ಅವರನ್ನು ಜೆಡಿಎಸ್‍ಗೆ ಬರುವಂತೆ ಮನವಿ ಮಾಡಿದರು. ಈ ಎಲ್ಲಾ ಬೆಳವಣಿಗೆಗಳ ಬಳಿಕ ಅಭಿಮಾನಿಗಳು ಮತ್ತು ಕಾರ್ಯಕರ್ತರ ಬಳಿ ಕ್ಷಮೆ ಯಾಚಿಸಿದ ವೈಎಸ್‍ವಿ ದತ್ತ, ಮಾಜಿ ಪ್ರಧಾನಿ ದೇವೇಗೌಡ ಮತ್ತು ತಮ್ಮ ನಡುವಿನ ಸಂಬಂಧ ತಂದೆ ಮಗನ ರೀತಿ ಇದೆ.
ದೇವೇಗೌಡರ ಮನೆಯ ಬಾಗಿಲು ಬಡಿಯುವ ಆವಶ್ಯಕತೆ ತಮಗಿಲ್ಲ. ಅವರ ಮನೆಯಲ್ಲಿ ಮುಕ್ತವಾಗಿ ಓಡಾಡುವ ಅವಕಾಶ ತಮಗಿದೆ. ಒಂದು ಅತ್ಯಂತ ಕೆಟ್ಟ ವ್ಯವಸ್ಥೆಯನ್ನು ಕಿತ್ತೊಗೆಯಲು ಕಾಂಗ್ರೆಸ್ ಸೇರಬೇಕಾದ ಅನಿವಾರ್ಯತೆ ಎದುರಾಗಿತ್ತು ಎಂದಿದ್ದರು.
ಅಲ್ಲದೇ ಎರಡು ದೊಡ್ಡ ರಾಜಕೀಯ ಪಕ್ಷಗಳನ್ನು, ಅಲ್ಲಿನ ವ್ಯವಸ್ಥೆಯನ್ನು ಮಣಿಸಲು ಈ ಚುನಾವಣೆ ತಮಗೆ ಅನಿವಾರ್ಯವಾಗಿತ್ತು. ಹಾಗಾಗಿ ಪಕ್ಷೇತರನಾಗಿ ಸ್ಫರ್ಧಿಸುವ ನಿರ್ಧಾರವನ್ನು ತೆಗೆದುಕೊಂಡಿದ್ದೆ. ಮಾಜಿ ಪ್ರಧಾನಿ ದೇವೇಗೌಡರ ಇಚ್ಛೆಯಂತೆ ಮರಳಿ ಗೂಡಿಗೆ ಬಂದಿದ್ದೇನೆ. ಹಾಗೂ ಕಾರ್ಯಕರ್ತರ ರಕ್ಷಣೆ ನನ್ನ ಹೊಣೆ ಎಂದು ಹೇಳಿದ್ದರು.
ಇನ್ನು ಎಚ್.ಡಿ. ರೇವಣ್ಣ ಮಾತನಾಡಿ, ಕಾಂಗ್ರೆಸ್ ಪಕ್ಷವು ದತ್ತ ಅವರಂತೆ ಬಹಳಷ್ಟು ಜನರಿಗೆ ಟೋಪಿ ಹಾಕಿದೆ. ದತ್ತ ಅವರನ್ನು ಈ ಸಮಯದಲ್ಲಿ ಕೈ ಬಿಡುವುದು ಬೇಡ ಎಂಬ ದೇವೇಗೌಡರ ಸೂಚನೆಯಂತೆ ಇಲ್ಲಿಗೆ ನಾವು ಬಂದಿದ್ದೇವೆ. ಇಲ್ಲಿ ಸೇರಿರುವ ಎಲ್ಲಾ ಕಾರ್ಯಕರ್ತರು ಒಂದೇ ನಿರ್ಣಯದಿಂದ ದೇವೇಗೌಡರ ಆಸೆಯಂತೆ ದತ್ತ ಅವರನ್ನು ಬೆಂಬಲಿಸಬೇಕು. ದೇವೇಗೌಡರು ಮತ್ತು ಕುಮಾರಸ್ವಾಮಿಯವರನ್ನು ಅಷ್ಟೇ ಅಭಿಮಾನದಿಂದ ನೋಡಬೇಕು ಎಂದು ಮನವಿ ಮಾಡಿದ್ದರು.












Click it and Unblock the Notifications