ಹಾಸನದಲ್ಲಿ ಮುಂದುವರಿದ ಟಿಕೆಟ್ ಗೊಂದಲ: ಪ್ರಚಾರ ಆರಂಭಿಸಿದ ಹೆಚ್.ಪಿ ಸ್ವರೂಪ್
2023ರ ವಿಧಾನಸಭೆ ಚುನಾವಣೆಗೆ ಇನ್ನೇನು ಕೆಲವೇ ತಿಂಗಳು ಬಾಕಿಯಿದ್ದು, ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಗರಿಗೆದರಿದೆ. ಜೆಡಿಎಸ್‌ನಲ್ಲಿ ಹಾಸನ ಕ್ಷೇತ್ರದಲ್ಲಿ ಟಿಕೆಟ್ ಗೊಂದಲ ಮುಂದುವರಿದಿದೆ. ಟಿಕೆಟ್ ಆಕಾಂಕ್ಷಿ ಹೆಚ್.ಪಿ.ಸ್ವರೂಪ್ ಹಾಸನಾಂಬೆ ಸೇರಿ ಹಲವು ದೇವಾಲಯಗಳಿಗ
ಹಾಸನ, ಫೆಬ್ರವರಿ 17: ಹಾಸನ ವಿಧಾನಸಭಾ ಕ್ಷೇತ್ರದ ಜೆಡಿಎಸ್ ಟಿಕೆಟ್ ಗೊಂದಲ ಮುಂದುವರೆದಿದ್ದು, ಶಿವರಾತ್ರಿ ಬಳಿಕ ಹಾಸನ ಸೇರಿದಂತೆ ಎರಡನೇ ಪಟ್ಟಿಯನ್ನು ಜೆಡಿಎಸ್ ಬಿಡುಗಡೆ ಮಾಡಲಿದೆ. ಹಾಸನದಿಂದ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಸ್ಪರ್ಧೆ ಮಾಡುವುದು ಬಹುತೇಕ ಖಚಿತವಾಗಿದೆ ಎನ್ನಲಾಗುತ್ತಿದೆ.
ಇತ್ತ ಜೆಡಿಎಸ್‌ನ ಪ್ರಬಲ ಟಿಕೆಟ್ ಆಕಾಂಕ್ಷಿ ಹೆಚ್.ಪಿ. ಸ್ವರೂಪ್ ಕೂಡಾ ತನಗೆ ಟಿಕೆಟ್ ಸಿಗುತ್ತದೆ ಎನ್ನುವ ಭರವಸೆಯಲ್ಲಿ ಹಾಸನಾಂಬೆಗೆ ಪೂಜೆ ಸಲ್ಲಿಸಿ ಅಧಿಕೃತವಾಗಿ ಗುರುವಾರದಿಂದ ಪ್ರಚಾರ ಆರಂಭಿಸಿದ್ದಾರೆ.
ಹಾಸನ ವಿಧಾನಸಭಾ ಕ್ಷೇತ್ರದ ಟಿಕೆಟ್ ಗೊಂದಲ ದಿನಕ್ಕೊಂದು ತಿರುವು ಪಡೆದುಕೊಳ್ತಿದ್ದು, ಯಾರಿಗೆ ಟಿಕೆಟ್ ಎನ್ನುವುದು ಇನ್ನೂ ನಿಗೂಢವಾಗಿಯೇ ಉಳಿದಿದೆ. ಆದರೆ ಮಾಜಿ ಸಚಿವ ಹೆಚ್.ಡಿ.ರೇವಣ್ಣ ಅವರೇ ಹಾಸನದಿಂದ ಸ್ಪರ್ಧೆ ಮಾಡೋದು ಬಹುತೇಕ ಖಚಿತವಾಗಿದೆ. ಈ ಬಗ್ಗೆ ಈಗಾಗಲೇ ಮಾಜಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಈ ಬಗ್ಗೆ ಹೆಚ್.ಡಿ. ರೇವಣ್ಣ ನಗರಸಭೆ ಸದಸ್ಯರು ಹಾಗೂ ಮುಖಂಡರೊಂದಿಗೆ ಸಭೆ ನಡೆಸಿ ಅಭಿಪ್ರಾಯ ಸಂಗ್ರಹಿಸಿದ್ದಾರೆ.

ಹೊಳೆನರಸೀಪುರದಿಂದಾದರೂ ಭವಾನಿ ರೇವಣ್ಣಗೆ ಟಿಕೆಟ್ ನೀಡಿ ಅಂತಾ ರೇವಣ್ಣ ಕುಮಾರಸ್ವಾಮಿ ಮನವೊಲಿಸಲು ಪ್ರಯತ್ನ ಮಾಡಿದ್ದು, ಭವಾನಿ ರೇವಣ್ಣ ಈ ಚುನಾವಣೆಯಲ್ಲಿ ಸ್ಪರ್ಧೆ ಬೇಡ ಎಂದು ಕುಮಾರಸ್ವಾಮಿ ಅಭಿಪ್ರಾಯಪಟ್ಟಿದ್ದಾರೆ ಎನ್ನಲಾಗಿದೆ. ಟಕೆಟ್ ಗೊಂದಲದ ಬಗ್ಗೆ ಮಾತನಾಡಿರುವ ಕುಮಾರಸ್ವಾಮಿ ಹಾಸನ ಸೇರಿ ಎರಡನೇ ಪಟ್ಟಿಯನ್ನು ಶೀಘ್ರ ಬಿಡುಗಡೆ ಮಾಡುತ್ತೇವೆ ಎಂದಿದ್ದಾರೆ.
ಭವಾನಿ ರೇವಣ್ಣ ಹಾಗೂ ಸ್ವರೂಪ್ ಇಬ್ಬರಲ್ಲಿ ಯಾರಿಗೆ ಟಿಕೆಟ್ ಕೊಟ್ಟರೂ ಗೊಂದಲ ಮುಂದುವರಿಯುವುದು ಖಚಿತ ಎನ್ನುತ್ತಿರುವ ಕುಮಾರಸ್ವಾಮಿ ರೇವಣ್ಣ ಅವರನ್ನೇ ಎರಡೂ ಕಡೆ ಸ್ಪರ್ಧಿಸುವಂತೆ ಸೂಚಿಸಿದ್ದಾರೆ. ಈ ಬಗ್ಗೆ ಶಿವರಾತ್ರಿ ಹಬ್ಬದ ಬಳಿಕ ಘೋಷಣೆ ಮಾಡಲಿದ್ದಾರೆ.

ಇದರ ನಡುವೆ ಪ್ರಬಲ ಟಿಕೆಟ್ ಆಕಾಂಕ್ಷಿ ಹೆಚ್.ಪಿ.ಸ್ವರೂಪ್ ಹಾಸನಾಂಬೆ ಸೇರಿ ಹಲವು ದೇವಾಲಯಗಳಿಗೆ ಭೇಟಿ ನೀಡಿ, ಪೂಜೆ ಸಲ್ಲಿಸಿ ಅಧಿಕೃತವಾಗಿ ಪ್ರಚಾರ ಆರಂಭಿಸಿದ್ದಾರೆ. ಹಳೇ ಹಾಸನ, ವಲ್ಲಭಭಾಯಿ ರಸ್ತೆ ಸೇರಿದಂತೆ ಹಲವು ಬಡಾವಣೆಗಳ ಮನೆಗಳಿಗೆ ನೂರಾರು ಕಾರ್ಯಕರ್ತರೊಂದಿಗೆ ಭೇಟಿ ನೀಡಿ ಪ್ರಚಾರ ನಡೆಸಿದರು. ಇದೇ ಮಾತನಾಡಿದ ಸ್ವರೂಪ್, ಪಕ್ಷ ಸಂಘಟನೆಯ ದೃಷ್ಟಿಯಿಂದ ಪ್ರಚಾರ ಆರಂಭಿಸಿದ್ದೇವೆ, ಟಿಕೆಟ್ ಬಗ್ಗೆ ಪಕ್ಷ ನಿರ್ಧಾರ ಮಾಡುತ್ತದೆ ಎಂದಿದ್ದಾರೆ.
ಇನ್ನು ಈ ಬಾರಿ ಭವಾನಿ ರೇವಣ್ಣ ಅವರನ್ನು ಕಣಕ್ಕಿಳಿಸಲೇ ಬೇಕು ಎಂದು ಎಚ್.ಡಿ ರೇವಣ್ಣ, ಪ್ರಜ್ವಲ್ ರೇವಣ್ಣ ಹಾಗೂ ಸೂರಜ್ ರೇವಣ್ಣ ಪ್ರಯತ್ನ ಮಾಡುತ್ತಿದ್ದು, ಇದಕ್ಕೆ ಕುಮಾರಸ್ವಾಮಿ ಒಪ್ಪದೇ ಇರುವುದುಇಷ್ಟೆಲ್ಲಾ ಬೆಳವಣಿಗೆಗಳಿಗೆ ಕಾರಣವಾಗಿದೆ ಎನ್ನುವುದು ಕಾರ್ಯಕರ್ತರ ಅಭಿಪ್ರಯಾಯವಾಗಿದ್ದು, ಅಂತಿಮವಾಗಿ ಟಿಕೆಟ್ ಯಾರಿಗೆ ಕೊಡುತ್ತಾರೆ ಎನ್ನುವುದು ರಾಜ್ಯದ ಜನರ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications