ಚಿಕ್ಕಮಗಳೂರಲ್ಲಿ ಅಕ್ರಮ ಭೂ ಮಂಜೂರಾತಿ; ಅಧಿಕಾರಿಗಳಿಗೆ ನಡುಕ
ಚಿಕ್ಕಮಗಳೂರು, ನವೆಂಬರ್ 22: ಚಿಕ್ಕಮಗಳೂರು ಜಿಲ್ಲೆಯಲ್ಲಿ ಅಧಿಕಾರಿಗಳು ನಡೆಸಿರುವ ಅಕ್ರಮ ಭೂಮಂಜೂರಾತಿ ರಾಜ್ಯಾದ್ಯಂತ ಚರ್ಚೆಯ ವಿಷಯ. ನಕಲಿ ದಾಖಲೆ, ಅರಣ್ಯ ಭೂಮಿ ಹೀಗೆ ಹಲವು ಕಡೆ ಭೂಮಿಯನ್ನು ವಿದೇಶಿಯರಿಗೆ ಸಹ ಮಂಜೂರು ಮಾಡಲಾಗಿದೆ. ಇದನ್ನು ಕಂದಾಯ ಇಲಾಖೆ ಗಂಭೀರವಾಗಿ ಪರಿಣಿಸಿದೆ.
ಕಂದಾಯ ಇಲಾಖೆ ಪ್ರಧಾನ ಕಾರ್ಯದರ್ಶಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾದ ರಾಜೇಂದ್ರ ಕುಮಾರ್ ಕಟಾರಿಯಾ ಈ ಕುರಿತು ಮಾತನಾಡಿದ್ದಾರೆ. "ಜಿಲ್ಲೆಯಲ್ಲಿ ನಡೆದಿರುವ ಅಕ್ರಮ ಭೂಮಂಜೂರಾತಿಗೆ ಸಂಬಂಧಿಸಿದಂತೆ ತಪ್ಪುಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಸೇರಿದಂತೆ ಮೂರು ರೀತಿಯ ಕ್ರಮ ಜರುಗಿಸಲಾಗುವುದು" ಎಂದು ಹೇಳಿದ್ದಾರೆ.

ಚಿಕ್ಕಮಗಳೂರು ಪ್ರೆಸ್‍ಕ್ಲಬ್‍ವತಿಯಿಂದ ಹಮ್ಮಿಕೊಂಡಿದ್ದ ತಿಂಗಳ ಅತಿಥಿ ಪತ್ರಕರ್ತರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, "ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದೆ. ತಪ್ಪುಮಾಡಿರುವ ಅಧಿಕಾರಿ ವಿರುದ್ಧ ಕಂದಾಯ ಕಾಯ್ದೆ, ಕ್ರಿಮಿನಲ್‍ಕಾಯ್ದೆ ದಾಖಲಾಗುವುದರೊಂದಿಗೆ ಕಾನೂನು ಬಾಹಿರವಾಗಿ ಮಂಜೂರು ಮಾಡಿದ್ದ ಭೂಮಿಯನ್ನು ರದ್ದುಗೊಳಿಸಿ ಕಂದಾಯ ಇಲಾಖೆಗೆ ವಾಪಸ್ ಪಡೆದುಕೊಳ್ಳಲಾಗುವುದು" ಎಂದರು.
"ಅಕ್ರಮ ಭೂ ಮಂಜೂರಾತಿ ಸಂಬಂಧ ಜಿಲ್ಲೆಗೆ ಆಗಮಿಸಿದ್ದ 15 ಮಂದಿ ತಹಶೀಲ್ದಾರ್ ದರ್ಜೆಯ ಅಧಿಕಾರಿಗಳ ತಂಡ ಸಂಗ್ರಹಿಸಿದ್ದ 10ಸಾವಿರ ದಾಖಲೆಗಳು ಪೆಟ್ಟಿಗೆಯಲ್ಲಿ ಭದ್ರವಾಗಿದ್ದು, ತನಿಖೆಗೆ ಸಂಬಂಧಿಸಿದ ಸಮಗ್ರ ವರದಿ ಸರ್ಕಾರದ ಕೈಸೇರಿದೆ. ತಾರಾತುರಿಯಲ್ಲಿ ಕ್ರಮ ಕೈಗೊಳ್ಳಲು ಸಾಧ್ಯವಿಲ್ಲ. ಎಲ್ಲ ದಾಖಲಾತಿಗಳನ್ನು ಪರಿಶೀಲಿಸಿ ಸರಕಾರ ಪ್ರಕರಣದಲ್ಲಿ ತಪ್ಪಿತಸ್ಥರಾಗಿರುವವರ ವಿರುದ್ಧ ಕಾನೂನು ಕ್ರಮಕೈಗೊಳ್ಳಲಿದೆ" ಎಂದು ಭರವಸೆ ನೀಡಿದರು.
"ಈ ಪ್ರಕರಣ ಒಂದು ಹಂತ ತಲುಪಿದ್ದು, ಮುಂದಿನ ದಿನಗಳಲ್ಲಿ ಏನಾಗಲಿದೆ ಎಂಬ ಮಾಹಿತಿ ತಿಳಿಯಲಿದೆ. ಜಿಲ್ಲೆಯಲ್ಲಿ ಅಕ್ರಮ ಭೂಮಂಜೂರಾತಿಯಲ್ಲಿ ಆಗಿರುವ ತಪ್ಪನ್ನು ಸರಿಪಡಿಸಲಾಗುವುದು" ಎಂದು ಐಎಎಸ್ ಅಧಿಕಾರಿಗಳು ತಿಳಿಸಿದರು.
ರೈತರಿಗೆ ಅಧಿಕಾರಿಗಳ ಮನವಿ; ರೈತರ ಜಮೀನಿನ ವಿವರಗಳನ್ನು ಫ್ರೂಟ್ಸ್ ತಂತ್ರಾಂಶದಲ್ಲಿ ಆಳವಡಿಸಿ ರೈತರ ನೋಂದಣಿ ಸಂಖ್ಯೆ ಮಾಡಿಸಲು ಅಗತ್ಯ ಕ್ರಮ ವಹಿಸುವಂತೆ ರಾಜೇಂದ್ರ ಕುಮಾರ್ ಕಟಾರಿಯಾ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.
ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ನಡೆದ ಜಿಲ್ಲೆಯ ಸಮಗ್ರ ಅಭಿವೃದ್ಧಿ ಕುರಿತು ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಫ್ರೂಟ್ಸ್ ತಂತ್ರಾಂಶದಲ್ಲಿ ರೈತರು ತಮ್ಮ ಜಮೀನಿನ ಮಾಹಿತಿಯನ್ನು ನೋಂದಣಿ ಮಾಡಿಕೊಳ್ಳದಿದ್ದರೆ, ಬರ ಪರಿಹಾರವಾಗಲಿ ಅಥವಾ ಸರ್ಕಾರದಿಂದ ಸಿಗುವ ಯಾವುದೇ ಸಹಾಯಧನದ ಸೌಲಭ್ಯಸಿಗುವುದಿಲ್ಲಎಂದರು.
ನೋಂದಣಿ ಮಾಡದೆ ಇರುವ ರೈತರು ಕೂಡಲೇ ತಮ್ಮ ಸಮೀಪದ ಸಾಮಾನ್ಯ ಸೇವಾ ಕೇಂದ್ರ ಅಥವಾ ಹೋಬಳಿಯ ರೈತ ಸಂಪರ್ಕ ಕೇಂದ್ರಕ್ಕೆ ಭೇಟಿ ನೀಡಿ ನೋಂದಣಿ ಮಾಡಿಸುವಂತೆ ತಿಳಿಸಿದ ಅವರು ಗ್ರಾಮೀಣ ಮಟ್ಟದಲ್ಲಿ ಗ್ರಾಮ ಲೆಕ್ಕಾಧಿಕಾರಿಗಳು ಪ್ರತಿ ಗ್ರಾಮಗಳಿಗೆ ತೆರಳಿ ಎಷ್ಟು ರೈತರು ಫ್ರೂಟ್ಸ್ ತಂತ್ರಾಂಶದಲ್ಲಿ ನೋಂದಾಯಿಸಿಕೊಂಡಿದ್ದಾರೆ, ನೋಂದಾಯಿಸಿಕೊಳ್ಳದೆ ಇರುವ ರೈತರನ್ನು ಗುರುತಿಸಿ ನೋಂದಾಯಿಸಲು ಕ್ರಮವಹಿಸಲು ವಿಶೇಷ ಆಂದೋಲನದ ಮಾಡಬೇಕು ಎಂದು ಸೂಚಿಸಿದರು.












Click it and Unblock the Notifications