ಚಿಕ್ಕಮಗಳೂರು ಭಾರೀ ಮಳೆ, ಪ್ರವಾಸಿಗರ ಹುಚ್ಚಾಟ
ಚಿಕ್ಕಮಗಳೂರು, ಜುಲೈ 15: ನೈಋತ್ಯ ಮುಂಗಾರು ಮಳೆ ಕಾಫಿನಾಡು ಚಿಕ್ಕಮಗಳೂರು ಜಿಲ್ಲೆಯ ಹಲವೆಡೆ ಆರ್ಭಟಿಸುತ್ತಿದೆ. ಮಳೆಯಿಂದಾಗಿ ಮಲೆನಾಡಿನಾದ್ಯಂತ ಜನಜೀವನ ಅಸ್ತವ್ಯಸ್ತಗೊಂಡಿದೆ. ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಹುಚ್ಚಾಟವೂ ಮುಂದುವರೆದಿದೆ.
ಸೋಮವಾರ ಬೆಳಗ್ಗೆಯಿಂದಲೂ ನಿರಂತರವಾಗಿ ಮೂಡಿಗೆರೆ, ಚಾರ್ಮಾಡಿ ಕೊಟ್ಟಿಗೆಹಾರ, ಚಿಕ್ಕಮಗಳೂರು ನಗರ, ಕೊಪ್ಪ, ಎನ್ಆರ್ ಪುರ ಭಾಗಗಳಲ್ಲಿ ಗಾಳಿ ಸಹಿತ ಮಳೆಯಾಗುತ್ತಿದೆ. ಮೂಡಿಗೆರೆ, ಕೊಪ್ಪ ತಾಲೂಕಿನ ಹಲವೆಡೆ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿದೆ.

ಶನಿವಾರ, ಭಾನುವಾರವೂ ಮಳೆ ಸುರಿಯುತ್ತಿತ್ತು. ಸೋಮವಾರ ಬೆಳಗ್ಗೆಯಿಂದ ಮಳೆ ಮತ್ತಷ್ಟು ಬಿರುಸು ಪಡೆದುಕೊಂಡಿದೆ. ಚಿಕ್ಕಮಗಳೂರು ನಗರದಲ್ಲಿ ಬಿಟ್ಟುಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ವಾಹನ ಸವಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ.
ಭಾರೀ ಮಳೆಯ ಕಾರಣ ಜಿಲ್ಲೆಯ ನದಿಗಳಲ್ಲಿ ನೀರಿನ ಮಟ್ಟದಲ್ಲಿ ಏರಿಕೆ ಕಂಡುಬಂದಿದೆ. ಅಪಾಯದ ಮಟ್ಟವನ್ನು ಮೀರಿ ತುಂಗಾ, ಭದ್ರಾ, ಹೇಮಾವತಿ ನದಿಗಳು ಹರಿಯುತ್ತಿವೆ. ಕೆರೆ, ಹಳ್ಳ-ಕೊಳ್ಳಗಳು ತುಂಬಿವೆ.
ಪ್ರವಾಸಿಗರ ಹುಚ್ಚಾಟ: ಮಳೆಗಾಲದಲ್ಲಿ ಚಿಕ್ಕಮಗಳೂರು ಪ್ರವಾಸಕ್ಕೆ ಆಗಮಿಸುವ ಕೆಲವು ಪ್ರವಾಸಿಗರ ಹುಚ್ಚಾಟ ಮುಂದುವರೆದಿದೆ. ಇದರಿಂದಾಗಿ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ರೀಲ್ಸ್, ಸೆಲ್ಫಿ ಹುಚ್ಚಿಗೆ ಬಿದ್ದ ಪ್ರವಾಸಿಗರು ಅಪಾಯವನ್ನು ಲೆಕ್ಕಿಸದೇ ಕಂಡ ಕಂಡಲ್ಲಿ ಫೋಟೋ ತೆಗೆಸಿಕೊಳ್ಳಲು ಪ್ರಯತ್ನ ನಡೆಸುತ್ತಿದ್ದಾರೆ.
ಪ್ರವಾಸಿಗರ ಹುಚ್ಚಾಟ ಚಾರ್ಮಾಡಿ ಘಾಟ್, ದೇವರಮನೆ ಗುಡ್ಡ, ರಾಣಿಝರಿ ಬಳಿ ಮುಂದುವರೆದಿದೆ. ಮದ್ಯದ ಅಮಲಿನಲ್ಲಿ ಅವರು ಮಾಡುತ್ತಿರುವ ಹುಚ್ಚಾಟ ನೋಡಿ ಸ್ಥಳೀಯರು ಬೇಸತ್ತು ಹೋಗಿದ್ದಾರೆ. ಮಂಗಳೂರಿನಿಂದ ಆಗಮಿಸಿದ ಯುವಕರ ಗುಂಪು ಮೂಡಿಗೆರೆ ತಾಲೂಕಿನ ರಾಣಿಝರಿ ಬಳಿ ಬೈಕ್‌ನಲ್ಲಿ ಸ್ಟಂಟ್ ಮಾಡಿ ರಸ್ತೆಯನ್ನು ಹಾಳು ಮಾಡಿದ್ದಾರೆ.
ಸುಮಾರು 5 ಕಿ. ಮೀ. ರಸ್ತೆಯಲ್ಲಿ ನೂರಕ್ಕೂ ಹೆಚ್ಚು ಬಾರಿ ಬೈಕ್‌ನಲ್ಲಿ ಸ್ಟಂಟ್ ಮಾಡಿ, ಅದನ್ನು ರೀಲ್ಸ್ ಮಾಡಲು ಹೋಗಿ ಕರ್ಕಶ ಶಬ್ದದೊಂದಿಗೆ ರಸ್ತೆ ಮಧ್ಯೆ ಹುಚ್ಚಾಟ ನಡೆಸಿದ್ದಾರೆ. ಒಬ್ಬರಾದ ಮೇಲೊಬ್ಬರು ಮೋಜಿನ ಬೈಕ್ ರೈಡ್ ಮಾಡಿ ರಸ್ತೆ ಸಂಪೂರ್ಣ ಕೆಸರುಗದ್ದೆಯಂತಾಗಿದೆ.
ಈ ರಸ್ತೆ ರಾಣಿಝರಿ ಬಳಿ ಇದೆ. ಪ್ರವಾಸಿಗರ ಮೋಜಿಗೆ ಹೇಳುವವರು, ಕೇಳುವವರು ಇಲ್ಲ ಎಂಬಂತೆ ಆಗಿದೆ. ಫೋಟೋ, ವಿಡಿಯೋ ಸರಿಯಾಗಿ ಬರುವ ತನಕ ಬೈಕ್ ರೈಡಿಂಗ್, ವೀಲ್ಹಿಂಗ್ ಮಾಡಿದ ಯುವಕರ ಹುಚ್ಚಾಟಕ್ಕೆ ಸ್ಥಳೀಯರು ಅಸಮಾಧಾನಗೊಂಡಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಗೆ ಆಗಮಿಸುವ ಪ್ರವಾಸಿಗರ ಮೋಜಿಗೆ ತಡೆ ಹಾಕಲು ಪೊಲೀಸರು ಸಹ ಹಲವಾರು ಕ್ರಮಗಳನ್ನು ಕೈಗೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲಾ ಪೊಲೀಸ್ ಮತ್ತು ಚಿಕ್ಕಮಗಳೂರು ಅಡ್ವೆಂಚರ್ ಸ್ಪೋರ್ಟ್ಸ್ ಕ್ಲಬ್ ವತಿಯಿಂದ ಮುಳ್ಳಯ್ಯನಗಿರಿಗೆ ಹೋಗುವ ರಸ್ತೆ ಸೇರಿದಂತೆ ಇತರ ಕಡೆ ಪ್ರವಾಸಿ ವಾಹನಗಳ ತಪಾಸಣೆ ನಡೆಸಲಾಗುತ್ತಿದೆ.
ಪ್ರವಾಸಿ ವಾಹನಗಳಲ್ಲಿ ಪ್ಲಾಸ್ಟಿಕ್, ಮದ್ಯ ಮತ್ತು ತಂಬಾಕು ಉತ್ಪನ್ನಗಳಿಗಾಗಿ ತಪಾಸಣೆ ನಡೆಸಲಾಗುತ್ತಿದೆ. ಜಿಲ್ಲೆಯಾದ್ಯಂತ ಕೆ.ಪಿ.ಆಕ್ಟ್ ಮತ್ತು ಸಂಚಾರಿ ನಿಯಮ ಉಲ್ಲಂಘನೆ ವಿರುದ್ಧ 225 ಪ್ರಕರಣಗಳನ್ನು ಪೊಲೀಸರು ದಾಖಲಿಸಿದ್ದಾರೆ. ಮದ್ಯಪಾನ ಮಾಡಿ ವಾಹನ ಚಲಾಯಿಸುತ್ತಿದ್ದ ವಿರುದ್ಧ 2 ಪ್ರಕರಣಗಳು, ಕೋಟ್ಪಾ ಕಾಯ್ದೆಯಡಿಯಲ್ಲಿ 10 ಪ್ರಕರಣಗಳು ಮತ್ತು ಅಬಕಾರಿ ಕಾಯ್ದೆಯಡಿಯಲ್ಲಿ 2 ಪ್ರಕರಣಗಳನ್ನು ದಾಖಲಿಸಲಾಗಿರುತ್ತದೆ.
ಪ್ರವಾಸಿಗರಿಗೆ ಸೂಚನೆಗಳು: ಅಲ್ಲದೇ ಚಿಕ್ಕಮಗಳೂರು ಜಿಲ್ಲಾ ಪೊಲೀಸರು ದಯವಿಟ್ಟು ಪ್ರವಾಸಿ ಸ್ಥಳಗಳಲ್ಲಿ ಸಾರ್ವಜನಿಕರಿಗೆ ಕಿರಿಕಿರಿ ಉಂಟುಮಾಡುವ ಯಾವುದೇ ರೀತಿಯಲ್ಲಿ ತೊಂದರೆಯನ್ನುಂಟು ಮಾಡುವ ಉಪದ್ರವದಲ್ಲಿ ತೊಡಗಬೇಡಿ. ಪ್ರವಾಸಿ ಸ್ಥಳಗಳಲ್ಲಿ ಮದ್ಯಪಾನ ಮಾಡಬೇಡಿ. ಇತರರಿಗೆ ಅನಾನುಕೂಲತೆಯನ್ನುಂಟು ಮಾಡುವ ರೀತಿಯಲ್ಲಿ ನಿಮ್ಮ ವಾಹನಗಳನ್ನು ನಿಲ್ಲಿಸಬೇಡಿ ಎಂದು ಮನವಿ ಮಾಡಿದ್ದಾರೆ.
ಪ್ರವಾಸಿತಾಣಗಳಲ್ಲಿ ಜವಾಬ್ದಾರಿಯುತವಾಗಿ ವರ್ತಿಸಿ. ಪ್ರವಾಸಿ ತಾಣಗಳಲ್ಲಿ ಮಹಿಳೆಯರು ಅಥವಾ ಹೆಣ್ಣು ಮಕ್ಕಳನ್ನು ಚುಡಾಯಿಸಬೇಡಿ. ಪ್ಲಾಸ್ಟಿಕ್ ಬಾಟಲ್ ಅಥವಾ ಇತರೆ ಅನುಪಯುಕ್ತ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಡಬೇಡಿ. ಪ್ರಕೃತಿ ಮತ್ತು ಅದರ ಉತ್ತಮ ನಿರ್ವಹಣೆ ಪ್ರತಿಯೊಬ್ಬ ನಾಗರೀಕರ ಜವಾಬ್ದಾರಿ ಎಂದು ಹೇಳಿದ್ದಾರೆ.
ಪ್ರವಾಸಿಗರು ಅರಣ್ಯ ಇಲಾಖೆ, ಜಿಲ್ಲಾಡಳಿತದ ಸೂಚನೆಗಳನ್ನು ತಪ್ಪದೆ ಪಾಲಿಸಿ. ಅಪಾಯಕಾರಿ ಸ್ಥಳಗಳಲ್ಲಿ ಸೆಲ್ಫಿ ತೆಗೆದುಕೊಳ್ಳಲು ಪ್ರಯತ್ನಿಸಬೇಡಿ. ದಯವಿಟ್ಟು ಪ್ರವಾಸಿ ಸ್ಥಳಗಳಲ್ಲಿ ಪ್ಲಾಸ್ಟಿಕ್ ವಸ್ತುಗಳನ್ನು ಬಳಸಬೇಡಿ/ ಎಸೆಯಬೇಡಿ. ನಿಮ್ಮ ಸುರಕ್ಷತೆ ಮತ್ತು ನಿಮ್ಮ ಪ್ರೀತಿಪಾತ್ರರ ಸುರಕ್ಷತೆಯ ಬಗ್ಗೆ ಸದಾ ಜಾಗರೂಕರಾಗಿರಿ ಎಂದು ಪೊಲೀಸರು ಮನವಿ ಮಾಡಿದ್ದಾರೆ.












Click it and Unblock the Notifications