ಬದುಕನ್ನೇ ಬದಲಾಯಿಸಿದ ಶಬರಿಮಲೆ ಪ್ರಸಾದ: ಚಿಕ್ಕಮಗಳೂರಿನ ವ್ಯಕ್ತಿಯಿಂದ ಅಪರೂಪದ ಅಯ್ಯಪ್ಪನ ಸೇವೆ
ಚಿಕ್ಕಮಗಳೂರು, ಜನವರಿ 12: ಶಬರಿಮಲೆ ಅಯ್ಯಪ್ಪ ಸ್ವಾಮಿಯ ಮಹಿಮೆ ಅಪಾರ. ಲಕ್ಷಾಂತರ ಭಕ್ತರು ಅಯ್ಯಪ್ಪ ಸ್ವಾಮಿಯ ದರ್ಶನದಿಂದ ಒಳಿತನ್ನು ಕಂಡಿದ್ದಾರೆ. ಸನ್ಮಾರ್ಗದ ಜೀವನ ಕಂಡುಕೊಂಡಿದ್ದಾರೆ. ಅಯ್ಯಪ್ಪನ ಕಾರಣಿಕ ಒಬ್ಬರ ಬಾಳಲ್ಲಿ ಒಂದೊಂದು ರೀತಿ ಪ್ರಭಾವ ಬೀರಿದೆ.
ಚಿಕ್ಕಮಗಳೂರು ಜಿಲ್ಲೆಯ ಗ್ರಾಮ ಪಂಚಾಯತ್ ಸದಸ್ಯನೋರ್ವರ ಬಾಳಲ್ಲಿ ಅಯ್ಯಪ್ಪ ಸ್ವಾಮಿ ಬೆಳಕಾಗಿದ್ದು, ಕಳೆದ 24 ವರ್ಷಗಳಿಂದ ಪ್ರತೀ ಮಂಡಲ ಪೂಜಾ ಮಹೋತ್ಸವದ ಸಂಧರ್ಭದಲ್ಲಿ ಶಬರಿಮಲೆಯಲ್ಲಿ ನಿಸ್ವಾರ್ಥ ಸೇವೆಯನ್ನು ಮಾಡುತ್ತಿದ್ದಾರೆ. ಅಯ್ಯಪ್ಪನ ಗರ್ಭಗುಡಿಯಿಂದ ಮೇಲ್ ಶಾಂತಿ ನೀಡಿದ್ದ ಭಸ್ಮ ಪ್ರಸಾದ ಇಡೀ ಜೀವನವನ್ನೇ ಬದಲಾಯಿಸಿದರಿಂದ ಶಬರಿಮಲೆಯಲ್ಲಿ ಇಂದಿಗೂ ನಿಸ್ವಾರ್ಥ ಸೇವೆಯನ್ನು ಅವರು ಮಾಡುತ್ತಿದ್ದಾರೆ.

ಕೋಟ್ಯಾಂತರ ಭಕ್ತರ ಆರಾಧ್ಯದೈವ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಸ್ಥಾನಕ್ಕೆ ಭಕ್ತ ಜನಸಾಗರವೇ ಹರಿದುಬರುತ್ತಿದೆ. ಅಯ್ಯಪ್ಪನ ಆಲಯ ಭಕ್ತರಿಂದ ತುಂಬಿದೆ. ಭಕ್ತರು ಅಲೆಗಳ ರೀತಿ ಶಬರಿಮಲೆಗೆ ಬರುತ್ತಿದ್ದು, ಭಕ್ತರನ್ನು ನಿಯಂತ್ರಿಸಲು ಪೊಲೀಸರು, ದೇವಸ್ವಂ ಬೋರ್ಡ್ ಹರಸಾಹಸ ಪಡುತ್ತಿದ್ದಾರೆ.
ಅಯ್ಯಪ್ಪನ ದೇವಸ್ಥಾನದಲ್ಲಿ ತಮ್ಮ ತಂಡದಿಂದ ತಪ್ಪಿಸಿಕೊಂಡ ಸ್ವಾಮಿಗಳಿಗೆ ಚಿಕ್ಕಮಗಳೂರಿನ ಮಲ್ಲಂದೂರು ಗ್ರಾಮದ ಬ್ಯಾರವಳ್ಳಿ ಗ್ರಾಮ ಪಂಚಾಯತಿಯ ಸದಸ್ಯ ಕುಮಾರ್ ಅವರು ನೆರವಾಗುತ್ತಿದ್ದಾರೆ. ಶಬರಿಮಲೆಯಲ್ಲಿ ಮಾಹಿತಿ ಕೇಂದ್ರದಲ್ಲಿ ಉದ್ಘೋಷಕರಾಗಿರುವ ಕುಮಾರ್ ಕಳೆದ 24 ವರ್ಷಗಳಿಂದ ಪ್ರತಿ ಸಂಕ್ರಮಣ ಕಾಲದಲ್ಲಿ ಶಬರಿಮಲೆಗೆ ಬಂದು, ಮಲೆಯಲ್ಲಿಯೇ ನೆಲೆಸಿ ಉದ್ಘೋಷಕರಾಗಿ ಸೇವೆ ಮಾಡುತ್ತಿದ್ದಾರೆ.
ಕುಮಾರ್ ಅವರು ಅಯ್ಯಪ್ಪನ ಸೇವೆಗೆ ತೊಡಗಿಸಿಕೊಂಡ ರೀತಿಯೇ ಕುತೂಹಲಕಾರಿಯಾಗಿದೆ. 1993 ರಲ್ಲಿ ಮೊದಲು ಮಂಡಲ ಕಾಲ ವೃತ ಮಾಡಿ ಅಯ್ಯಪ್ಪ ದರ್ಶನ ಮಾಡಿದ ಕುಮಾರ್ 2000 ಸೇವೆ ಆರಂಭಿಸಿದ್ದಾರೆ. ಮೊದಲ ಬಾರಿ ದರ್ಶನ ಪಡೆದಾಗ ಮೇಲ್ ಶಾಂತಿ ನೀಡಿದ ಭಸ್ಮ ಪ್ರಸಾದ ಬದುಕಿನಲ್ಲಿ ಬದಲಾವಣೆ ತಂದಿದೆ. ಬದುಕಿನಲ್ಲಿ ಬದಲಾವಣೆ ಮಾಡಿದ ಅಯ್ಯಪ್ಪ ಸೇವೆ ಮಾಡಬೇಕೆಂದು ಮೊದಲು ಪಂಪಾದಿಂದ ನೀಲಿಮಲೆಯವರೆಗೆ ಕಸಗುಡಿಸಿ ಸೇವೆ ಮಾಡಿದ್ದರು.

ಈ ಸಂಧರ್ಭದಲ್ಲಿ ಮಾಹಿತಿ ಕೇಂದ್ರದಲ್ಲಿ ಸೇವೆ ಸಲ್ಲಿಸುತ್ತಿದ್ದ ಚಿಕ್ಕಮಗಳೂರು ಮೂಲದ ಮಂಜುನಾಥ್ ಎಂಬುವವರ ಪರಿಚಯವಾಗಿತ್ತು. ಆ ಬಳಿಕ ಕ್ಷೇತ್ರದ ಪಿಆರ್ ಒ ಅವರನ್ನು ಕೇಳಿ 19 ವರ್ಷ ಪಂಪಾದಲ್ಲಿ ಉದ್ಘೋಷಕರಾಗಿ ಸೇವೆ ಸಲ್ಲಿಸಿದರು. 4 ವರ್ಷ ನೀಲಿಕಲ್‌ನಲ್ಲಿ ಸೇವೆ ಮಾಡಿದ್ದರು. ಈ ವೇಳೆ ನಾಪತ್ತೆಯಾದವರ ಮಾಹಿತಿಯನ್ನು ಮೈಕ್ ಮೂಲಕ ಕುಮಾರ್ ಹೇಳುತ್ತಿದ್ದರು. ಇದೀಗ ಶಬರಿಮಲೆ ಕ್ಷೇತ್ರದಲ್ಲಿ ಉದ್ಘೋಷಕರಾಗಿ ಸೇವೆ ಸಲ್ಲಿಸಲು ಕುಮಾರ್ ಅವರಿಗೆ ಅವಕಾಶ ಒದಗಿ ಬಂದಿದೆ.
ಆರಂಭದಲ್ಲಿ ಕನ್ನಡ ಭಾಷೆ ಮಾತ್ರ ಬರುತ್ತಿದ್ದ ಕುಮಾರ್ ಅವರು ಈಗ ತಮಿಳು,ತೆಲುಗು,ತುಳು,ಇಂಗ್ಲಿಷ್, ಹಿಂದಿ ಭಾಷೆಯಲ್ಲಿ ಸ್ಪಷ್ಟವಾಗಿ ಮೈಕ್ ಮೂಲಕ ಅನೌನ್ಮೆಂಟ್ ಮಾಡುತ್ತಿದ್ದಾರೆ. ಜೀವ ಇರುವ ತನಕ ಅಯ್ಯಪ್ಪ ಸ್ವಾಮಿ ಸೇವೆ ಮಾಡುವುದಾಗಿ ಕುಮಾರ್ ಹೇಳಿದ್ದಾರೆ. ಮಂಡಲ ಕಾಲ ವೃತ ಮಾಡಿ ಮಾಲೆ ಧರಿಸಿ ಶಬರಿಮಲೆಗೆ ಬರುವ ಕುಮಾರ್, ನಿಸ್ವಾರ್ಥದಿಂದ ಅಯ್ಯಪ್ಪನ ಸೇವೆ ಮಾಡುತ್ತಿದ್ದಾರೆ. ಭಕ್ತ ಸಾಗರದಲ್ಲಿ ತಮ್ಮವರಿಂದ ತಪ್ಪಿಸಿಕೊಂಡ ಭಕ್ತರಿಗೆ ಕುಮಾರ್ ನೆರವಾಗುವ ಮೂಲಕ ಸ್ವಾಮಿ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.












Click it and Unblock the Notifications