ಚಿಕ್ಕಮಗಳೂರು: ಆಸ್ತಿ ಕಬಳಿಸಲು ಬದುಕಿರುವಾಗಲೇ ವೃದ್ಧೆಯ ಮರಣ ಪತ್ರ ಪಡೆದ ಸಂಬಂಧಿಕರು
ಚಿಕ್ಕಮಗಳೂರು, ಫೆ.3: ವೃದ್ಧೆಯೊಬ್ಬರು ಬದುಕಿರುವಾಗಲೇ ಆರೋಗ್ಯಾಧಿಕಾರಿ ಮರಣ ಪತ್ರ ನೀಡಿ ಯಡವಟ್ಟು ಮಾಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಎನ್.ಆರ್.ಪುರ ಪಟ್ಟಣದಲ್ಲಿ ನಡೆದಿದೆ.
ಆಸ್ತಿ ಕಬಳಿಕೆಗಾಗಿ ಎನ್.ಆರ್.ಪುರ ಪಟ್ಟಣದ ನಿವಾಸಿ ಸಾರಮ್ಮ ಸಂಬಂಧಿಕರು ವೃದ್ಧೆಯ ಮರಣ ಪತ್ರ ಸೃಷ್ಟಿಸಿ ಆಸ್ತಿ ಕಬಳಿಸುವ ಯತ್ನ ಮಾಡಿದ್ದು, ಇದರಲ್ಲಿ ಅಧಿಕಾರಿಗಳೂ ಶಾಮೀಲು ಆಗಿರುವ ಸಾಧ್ಯತೆ ಇದೆ.
ಸಾರಮ್ಮ ಬಾಳೆಕೊಪ್ಪ ಗ್ರಾಮದ ಸರ್ವೇ ನಂ 26 ರಲ್ಲಿ ಒಂದು ಎಕರೆ 16 ಗುಂಟೆಯಲ್ಲಿ ರಬ್ಬರ್, ಬಾಳೆ ಸೇರಿದಂತೆ ವಿವಿಧ ಬೆಳೆಗಳನ್ನ ಬೆಳೆದಿದ್ದರು. ಕೊರೋನಾ ಸಮಯದಲ್ಲಿ ಪಾಸಿಟಿವ್ ಬಂದ ಕಾರಣ ಮಗಳ ಮನೆಗೆ ಹೋಗಿದ್ದರು. ಈ ವೇಳೆ ಜಮೀನು ಸಂಬಂಧಿರೊಬ್ಬರಿಗೆ ಉಳುವೆ ಮಾಡಲು ಹೇಳಿ ಹೋಗಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ಸಾರಮ್ಮ ಸಂಬಂಧಿ ಇ.ಟಿ.ಬಾಬು ಹಾಗೂ ಶ್ರೀಜಾ ನಕಲಿ ದಾಖಲೆಗಳನ್ನು ಸೃಷ್ಟಿಸಿ ಅಜ್ಜಿಯ ಜಮೀನು ಕಬಳಿಕೆ ಮಾಡಲು ಯತ್ನಿಸಿದ್ದಾರೆ. ಈ ಸಂಬಂಧ ಆರೋಗ್ಯಾಧಿಕಾರಿಗಳನ್ನ ಬುಕ್ ಮಾಡಿಕೊಂಡು ಮರಣ ಪತ್ರ ಪಡೆದಿದ್ದಾರೆ. ಇಷ್ಟೇ ಅಲ್ಲದೇ ತಾಲೂಕು ಕಚೇರಿಯಲ್ಲಿ ನಮ್ಮ ತಾಯಿ ಮರಣ ಹೊಂದಿದ್ದಾರೆಂದು ವಂಶವೃಕ್ಷ ಕೂಡ ಪಡೆದಿದ್ದಾರೆ. ಸದ್ಯ ವೃದ್ಧೆ ಸಾರಮ್ಮ ಗ್ರಾಮಕ್ಕೆ ತೆರಳಿ ನ್ಯಾಯಬೆಲೆ ಅಂಗಡಿ ಪಡಿತರ ಪಡೆಯುವ ವೇಳೆ ನಿಮ್ಮ ರೇಷನ್ ಕಾರ್ಡ್ ಸ್ಥಗಿತಗೊಂಡಿದೆ ಎಂದು ತಿಳಿಸಿದಾಗ ಸಾರಮ್ಮ ತಾಲೂಕು ಕಚೇರಿಗೆ ತೆರಳಿ ವಿಚಾರಿಸಿದ್ದಾಗ ಪ್ರಕರಣ ಬಯಲಿದೆ ಬಂದಿದೆ.

ಅಷ್ಟೇ ಅಲ್ಲದೇ ಇ.ಟಿ.ಬಾಬು, ಶ್ರೀಜಾ ನಕಲಿ ದಾಖಲೆಗಳನ್ನು ಸೃಷ್ಟಿಸಿ ಫೌತಿ ಖಾತೆಗೂ ತಾಲೂಕು ಕಚೇರಿಗೆ ಅರ್ಜಿ ಸಲ್ಲಿಸಿದ್ದಾರೆ. ಅಜ್ಜಿ ಬದುಕಿರುವಾಗಲೇ ನಕಲಿ ದಾಖಲಿ ಸೃಷ್ಟಿ ಮಾಡಿ ಆಸ್ತಿ ಕಬಳಿಕೆಗೆ ಯತ್ನ ಮಾಡಿದ್ದಲ್ಲದೇ ಸಾರಮ್ಮ ಕುಟುಂಬಸ್ಥರಿಗೆ ಜೀವ ಭಯ ಕೂಡ ಹಾಕಿದ್ದಾರೆ. ನೀವು ಜಮೀನಿನ ಬಗ್ಗೆ ತಲೆಕೆಡಿಸಿಕೊಂಡರೇ ನಿಮ್ಮನ್ನ ಉಳಿಸಿವುದಿಲ್ಲ ಎಂದು ಬೆದರಿಕೆ ಹಾಕಿದ್ದಾರೆಂದು ಸಾರಮ್ಮ ಗಂಭೀರ ಆರೋಪ ಮಾಡಿದ್ದಾರೆ.
ಒನ್‌ಇಂಡಿಯಾ ಕನ್ನಡ ಬಳಿ ಆಳಲು ತೋಡಿಕೊಂಡ ಸಾರಮ್ಮ:
ಈ ಬಗ್ಗೆ ಒನ್‌ಇಂಡಿಯಾ ಕನ್ನಡಕ್ಕೆಪ್ರತಿಕ್ರಿಯೆ ನೀಡಿರುವ ಸಾರಮ್ಮ, "ನಾನು ಕೂಲಿ ಕೆಲಸ ಮಾಡಿಕೊಂಡು ಬದುಕುತ್ತಿದ್ದೇನೆ. ನನಗೆ ಬಾಳೆಕೊಪ್ಪ ಗ್ರಾಮದ ಸರ್ವೇ ನಂ 26 ರಲ್ಲಿ ಒಂದು ಎಕರೆ 16 ಗುಂಟೆ ಜಮೀನು ಮಂಜುರಾಗಿತ್ತು. ಕೊರೋನಾ ಬಂದ ಕಾರಣ ನಾನು ಮಗಳ ಮನೆಗೆ ಹೋಗಿದ್ದೆ. ಇದನ್ನ ಇ.ಟಿ.ಬಾಬು ಹಾಗೂ ಶ್ರೀಜಾಗೆ ಉಳುಮೆ ಮಾಡಲು ಹೇಳಿ ಹೋಗಿದ್ದೆ. ಇದನ್ನು ಬಂಡವಾಳ ಮಾಡಿಕೊಂಡ ನಾನು ಸತ್ತಿದ್ದೀನಿ ಎಂದು ಮರಣ ಪತ್ರ ಸೃಷ್ಟಿ ಮಾಡಿದ್ದಾರೆ. ದಯಮಾಡಿ ಅಧಿಕಾರಿಗಳು ನನಗೆ ನ್ಯಾಯ ಕೊಡಿಸಬೇಕು, ತಪ್ಪಿಸ್ಥರಿಗೆ ಶಿಕ್ಷೆ ನೀಡಬೇಕು'' ಎಂದು ಮನವಿ ಮಾಡಿದ್ದಾರೆ.
ಪ್ರಕರಣ ಬಯಲಿಗೆ ಬಂದಿದ್ದು ಹೇಗೆ:
ನಕಲಿ ದಾಖಲೆ ಸೃಷ್ಟಿಸೋ ಯತ್ನದಲ್ಲಿರುವಾಗ ಗ್ರಾಮ ಲೆಕ್ಕಾಧಿಕಾರಿ ಹತ್ತಿರ ಪ್ರಕರಣ ಹೋಗುತ್ತೆ. ಗ್ರಾಮ ಲೆಕ್ಕಾಧಿಕಾರಿ ಅಜ್ಜಿ ಬದುಕಿರುವಾಗಲೇ ಯಾಕೆ ಈ ರೀತಿ ದಾಖಲೆ ತಂದಿದ್ದೀರಾ ಎಂದು ಎಚ್ಚರಿಕೆ ನೀಡಿ ಕಳಿಸಿದ್ದಾರೆ. ಅಷ್ಟೇ ಅಲ್ಲದೆ ಸಹಿ ಮಾಡುವುದಿಲ್ಲ. ನಖಲಿ ದಾಖಲೆ ಸೃಷ್ಟಿಸುವ ಪ್ರಯತ್ನವನ್ನು ಇಲ್ಲಿಗೆ ನಿಲ್ಲಿಸಿ ಎಂದು ವೃದ್ಧೆಯ ಸಂಬಂಧಿಕರಿಗೆ ಎನ್.ಆರ್.ಪುರ ಗ್ರಾಮ ಲೆಕ್ಕಾಧಿಕಾರಿ ಖಡಕ್ ಸೂಚನೆ ಕೊಟ್ಟು ಕಳುಹಿಸಿದ್ದಾರೆ.

ಇನ್ನು ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎನ್.ಆರ್.ಪುರ ತಹಶೀಲ್ದಾರ್ ಗೀತಾ, "ಪ್ರಕರಣ ನನ್ನ ಗಮನಕ್ಕೆ ಬಂದಿದೆ. ಈ ಬಗ್ಗೆ ನಮ್ಮ ಕಚೇರಿಗೆ ಅರ್ಜಿ ಕೂಡ ಬಂದಿದೆ. ಈ ಸಂಬಂಧ ತನಿಖೆ ಮಾಡಿ ತಪ್ಪು ಕಾಣಿಸುತ್ತದೋ ಅಂತಹವರ ವಿರುದ್ಧ ಎಫ್‌ಐಆರ್ ದಾಖಲಿಸಲಾಗುವುದು. ಸಂಬಂಧಿಕರ ಆಗಿರಬಹುದು, ಮರಣ ಪತ್ರ ನೀಡಿರುವವರ ಬಗ್ಗೆ ಕೂಡ ಎಫ್ ಐ ಆರ್ ದಾಖಲಿಸಲಾಗುವುದು. ತಪ್ಪಿಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು'' ಎಂದು ಹೇಳಿದರು.
ಒಟ್ಟಾರೆ, ವೃದ್ಧೆ ಬದುಕಿರುವಾಗಲೇ ಮರಣ ಪತ್ರ ನೀಡಿದ್ದ ವೈದ್ಯ ನ ತಪ್ಪು ಎದ್ದು ಕಾಣುತ್ತಿದ್ದು, ವೈದ್ಯನ ವಿರುದ್ಧ ಅಜ್ಜಿ ಆಕ್ರೋಶ ಹೊರಹಾಕಿದ್ದಾರೆ. ಅಷ್ಟೇ ಅಲ್ಲದೇ ನಕಲಿ ವಂಶವೃಕ್ಷ , ಫೌತಿ ಖಾತೆಗೂ ಯತ್ನ ಮಾಡಿರೋದು ನಿಜಕ್ಕೂ ದುರಂತವೇ ಸರಿ. ರಾಜಕಾರಣಿಗಳ ಬೆಂಬಲದಿಂದ ಇ.ಟಿ.ಬಾಬು ಹಾಗೂ ಶ್ರೀಜಾ ಈ ರೀತಿ ಮೆರೆಯುತ್ತಿದ್ದಾರೆಂಬ ಅನುಮಾನಗಳು ಸಹ ಕೇಳಿಬರುತ್ತಿವೆ. ವೃದ್ಧೆಗೆ ಜಮೀನು ಬಿಡಿಸಿಕೊಡಬೇಕು, ಜೊತೆ ಪಡಿತರ ಚೀಟಿ ನೀಡಬೇಕೆಂದು ಎಲ್ಲರ ಆಶಯ.












Click it and Unblock the Notifications