ಚಿಕ್ಕಮಗಳೂರು ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಿಗೆ ಕುಟುಂಬ ಸಮೇತ ಭೇಟಿ ನೀಡಿದ ರಾಜ್ಯಪಾಲರು
ಚಿಕ್ಕಮಗಳೂರು, ಜುಲೈ, 20: ಮಳೆಗಾಲ ಬಂತೆಂದರೆ ಸಾಕು ಕಾಫಿನಾಡಿನ ಪ್ರಕೃತಿ ಸೊಬಗು ಹೆಚ್ಚಾಗುತ್ತಾ ಹೋಗುತ್ತದೆ. ಹಾಗೆಯೇ ಈ ಸಮಯದಲ್ಲಿ ಇಲ್ಲಿನ ಪ್ರವಾಸಿ ತಾಣಗಳನ್ನು ನೋಡಲು ಪ್ರವಾಸಿಗರ ದಂಡೇ ಬರುತ್ತದೆ. ಅದೇ ರೀತಿ ಇಂದು ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೊಟ್ ಅವರು ಕುಟುಂಬ ಜಿಲ್ಲೆಯ ಧಾರ್ಮಿಕ ಸ್ಥಳಗಳಿಗೆ ಭೇಟಿ ನೀಡಿ ಗಮನ ಸೆಳೆದಿದ್ದಾರೆ.
ರಾಜ್ಯಪಾಲರಾದ ಥಾವರ್‌ಚಂದ್ ಗೆಹ್ಲೊಟ್ ಅವರು ಜಾರ್ಖಂಡ್ ರಾಜ್ಯಪಾಲೆಯಾದ ಪತ್ನಿ ಸುಮತಿ ಹಾಗೂ ಕುಟುಂಬ ಸಮೇತರಾಗಿ ಕಳಸದ ಕಳಸೇಶ್ವರ, ಹೊರನಾಡಿನ ಅನ್ನಪೂರ್ಣೇಶ್ವರಿ, ಶೃಂಗೇರಿ ಶಾರದಾಂಬೆ ದರ್ಶನ ಪಡೆದಿದ್ದಾರೆ. ರಾಜ್ಯಪಾಲರ ಒಟ್ಟು 14 ಜನ ಕುಟುಂಬ ಸದಸ್ಯರು ಚಿಕ್ಕಮಗಳೂರು ಪ್ರವಾಸ ಕೈಗೊಂಡಿದ್ದು, ಈ ಜಿಲ್ಲಾ ಪೊಲೀಸರಿಂದ ಬಿಗಿ ಭದ್ರತೆ ಒದಗಿಸಲಾಗಿದೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಮಂಜುನಾಥ ಸ್ವಾಮಿ ದರ್ಶನ ಪಡೆದ ರೆಡ್ಡಿ
ಇನ್ನು ಇತ್ತೀಚೆಗಷ್ಟೇ ಶಾಸಕ ಗಾಲಿ ಜನಾರ್ದನ ರೆಡ್ಡಿ ಅವರು ಕುಟುಂಬ ಸಮೇತ ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಯ ದರ್ಶನ ಪಡೆದಿದ್ದರು.
ಪತ್ನಿ ಅರುಣಾ ಲಕ್ಷ್ಮಿ, ಮಗಳು ರಮಿಣಿ, ಆಳಿಯ ರಾಜೀವ್ ಜೊತೆ ಜನಾರ್ದನ ರೆಡ್ಡಿ ಅವರು ಧರ್ಮಸ್ಥಳಕ್ಕೆ ಭೇಟಿ ನೀಡಿ ಮಂಜುನಾಥ ಸ್ವಾಮಿಗೆ ವಿಶೇಷ ಪೂಜೆ ಸಲ್ಲಿಸಿದ್ದರು. ನಂತರ ಕುಟುಂಬ ಸಮೇತ ಧರ್ಮಸ್ಥಳದಿಂದ ನೇರವಾಗಿ ಶ್ರೀಕ್ಷೇತ್ರ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳಿದ್ದರು.
ಇನ್ನು ಇದೆ ವೇಳೆ ಜನಾರ್ದನ್ ರೆಡ್ಡಿ ದಂಪತಿಗಳ ಆಸ್ತಿ ಮುಟ್ಟುಗೋಲು ಹಾಕಿಕೊಳ್ಳಲು ಸಿಬಿಐ ವಿಶೇಷ ಕೋರ್ಟ್ ಆದೇಶ ನೀಡಿತ್ತು. ಈ ಬಗ್ಗೆ ಧರ್ಮಸ್ಥಳದಲ್ಲಿ ಪ್ರತಿಕ್ರಿಯಿದ್ದ ಜನಾರ್ದನ್ ರೆಡ್ಡಿ ಅವರು, ನನ್ನ 150 ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡಿದ್ದರು. ಅದರಲ್ಲಿ 80ಕ್ಕೂ ಹೆಚ್ಚು ಆಸ್ತಿಗಳನ್ನು ಕೋರ್ಟ್ ನಿನ್ನೆ ಬಿಡುಗಡೆ ಮಾಡಿದೆ. ಉಳಿದ 72 ಆಸ್ತಿಗಳು ಕೇಸ್ ಇತ್ಯರ್ಥ ಆದ ಮೇಲೆ ಪರಿಹಾರ ಆಗುತ್ತದೆ ಎಂದಿದ್ದರು.
ನನಗೆ ನ್ಯಾಯ ವ್ಯವಸ್ಥೆ ಮೇಲೆ ಮೊದಲಿನಿಂದಲೂ ನಂಬಿಕೆ ಇತ್ತು. ನಿನ್ನೆ 80ಕ್ಕೂ ಹೆಚ್ಚು ಆಸ್ತಿಗಳ ಬಿಡುಗಡೆ ಮಾಡಲಾಗಿದೆ. 2009ರ ಪೂರ್ವದ ಆಸ್ತಿಯನ್ನು ಸಿಬಿಐ ಮುಟ್ಟುಗೋಲು ಹಾಕಿತ್ತು, ಅದನ್ನೇ ಕೋರ್ಟ್ ಬಿಡುಗಡೆ ಮಾಡಿದೆ ಎಂದರು. ಅಲ್ಲದೆ ಮೊಮ್ಮಗಳ ಅಕ್ಷರಾಭ್ಯಾಸಕ್ಕೆ ಶೃಂಗೇರಿಗೆ ಬಂದಿದ್ದೆ, ನಂತರ ಧರ್ಮಸ್ಥಳಕ್ಕೂ ಬಂದು ಮಂಜುನಾಥನ ಆಶೀರ್ವಾದ ಮತ್ತು ತಾಯಿಯ ಆಶೀರ್ವಾದ ಪಡೆದಿದ್ದೇನೆ ಎಂದಿದ್ದರು.
ನಾನು ನ್ಯಾಯವಾಗಿ ಬದುಕಿದ್ದೇನೆ, ಹಾಗಾಗಿ ಮಂಜುನಾಥ ನ್ಯಾಯ ಕೊಡುತ್ತಾನೆ. ಆರು ವರ್ಷಗಳಿಂದ ಧರ್ಮಸ್ಥಳಕ್ಕೆ ಬರಲು ಆಗಿರಲಿಲ್ಲ, ಈಗ ಕುಟುಂಬ ಸಮೇತ ಬಂದಿದ್ದೇನೆ ಎಂದು ಶಾಸಕ ಜನಾರ್ದನ ರೆಡ್ಡಿ ಹೇಳಿದ್ದರು.
ಕುಟುಂಬ ಸಮೇತರಾಗಿ ಶೃಂಗೇರಿಗೆ ತೆರಳಿ ವಿದ್ಯಾ ಅಧಿದೇವತೆ ತಾಯಿ ಶಾರದಾಂಬೆಯ ದರ್ಶನ ಪಡೆದು ಪುನೀತನಾದೆ. ಶಾರದಾ ಪೀಠದ ಉಭಯ ಜಗದ್ಗುರುಗಳ ಆಶೀರ್ವಾದ ಪಡೆದು ಮೊಮ್ಮಗಳು ಬ್ರಮರಳ ಹುಟ್ಟು ಹಬ್ಬದ ದಿನ ಅಕ್ಷರಾಭ್ಯಾಸ ಮಾಡಿಸಿದ್ದು ವಿಶೇಷವಾಗಿತ್ತು. ಶೃಂಗೇರಿಯ ನರಸಿಂಹವನದಲ್ಲಿ ಸನ್ನಿಧಾನ ಶ್ರೀ ಜಗದ್ಗುರು ವಿಧುಶೇಖರ ಭಾರತಿಗಳ ದರ್ಶನ ಪಡೆದು, ಹಲವಾರು ವಿಚಾರಗಳನ್ನು ಚರ್ಚಿಸಿ ಆಶೀರ್ವಾದ ಪಡೆದಿದ್ದು ನನ್ನ ಪೂರ್ವಜನ್ಮದ ಪುಣ್ಯವೆಂದೇ ಭಾವಿಸಿದ್ದೇನೆ ಎಂದಿದ್ದರು.
ಹಾಗೆಯೇ ಶೃಂಗೇರಿ ಪೀಠದ ಆಡಳಿತಾಧಿಕಾರಿಗಳಾದ ಪದ್ಮಶ್ರೀ ಗೌರಿ ಶಂಕರ್ ಅವರನ್ನು ಈ ಸಂದರ್ಭದಲ್ಲಿ ನೆನೆಯುತ್ತಿದ್ದೇನೆ. ಶೃಂಗೇರಿ ಮಠದ ಬಳ್ಳಾರಿ ಶಾಖೆಯ ಮಠಾಧಿಕಾರಿ ಶ್ರೀ ಬಿ.ಕೆ.ಬಿ.ಎನ್.ಮೂರ್ತಿ ಹಾಗೂ ಶ್ರೀ ಮೋಹನ್ ಶಾಸ್ತ್ರಿ ಅವರ ಸಹಕಾರಕ್ಕಾಗಿ ಧನ್ಯವಾದಗಳನ್ನು ತಿಳಿಸುತ್ತಿದ್ದೇನೆ. ಎಂದಿನಂತೆ ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಆಶೀರ್ವಾದ ಸದಾ ನನ್ನ ಕುಟುಂಬದ ಮೇಲಿರಲಿ ಎಂದು ಪ್ರಾರ್ಥಿಸುತ್ತಿದ್ದೇನೆ ಎಂದಿದ್ದರು.












Click it and Unblock the Notifications