ಚಿಕ್ಕಮಗಳೂರು: ಮುಳ್ಳಯ್ಯನಗಿರಿಯಲ್ಲಿ ಕಾಡ್ಗಿಚ್ಚು, ಸಸ್ಯ ಸಂಪತ್ತು ನಾಶ
ಚಿಕ್ಕಮಗಳೂರು, ಫೆಬ್ರವರಿ 11: ಚಿಕ್ಕಮಗಳೂರು ತಾಲೂಕಿನ ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ನೂರಾರು ಎಕರೆ ಅಪರೂಪದ ಸಸ್ಯ ಸಂಪತ್ತು ಬೆಂಕಿಗೆ ಆಹುತಿಯಾಗಿದ್ದು, ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.
ಬಿಸಿಲಿನ ತಾಪ ಜೋರಾಗಿದ್ದು ಚಿಕ್ಕಮಗಳೂರಿನ ಪ್ರಮುಖ ಬೆಟ್ಟ ಪ್ರದೇಶವಾದ ಮುಳ್ಳಯ್ಯನಗಿರಿ ಪ್ರದೇಶದಲ್ಲಿ ಕಾಡ್ಗಿಚ್ಚು ಕಾಣಿಸಿಕೊಂಡಿದೆ. ದಟ್ಟವಾದ ಹೊಗೆ ಆವರಿಸಿದ್ದು, ಅಪಾರವಾದ ಸಸ್ಯ ಸಂಪತ್ತು ಸುಟ್ಟು ಭಸ್ಮವಾಗಿದೆ.
ಬಿಸಿಲಿನ ತಾಪಕ್ಕೆ ಬೆಂಕಿ ಬೇಗ ವ್ಯಾಪಿಸಿದ ಪರಿಣಾಮ ಮುಳ್ಳಯ್ಯನಗಿರಿ ಬೆಟ್ಟ ಧಗಧಗಿಸಿ ಉರಿದಿದೆ. ಅರಣ್ಯ ಇಲಾಖೆ ಸಿಬ್ಬಂದಿ, ಅಗ್ನಿಶಾಮಕದಳ ಮತ್ತು ಸ್ಥಳೀಯರು ಬೆಂಕಿ ನಂದಿಸಲು ಹರಸಾಹಸ ಪಟ್ಟಿದ್ದಾರೆ.

ಸೀತಾಳಯ್ಯನಗಿರಿ ಸಮೀಪ ಗುಡ್ಡ ಹೊತ್ತಿ ಉರಿದಿದೆ. ಬೆಟ್ಟ ಪ್ರದೇಶದಲ್ಲಿ ದಟ್ಟ ಹೊಗೆ ಆವರಿಸಿಕೊಂಡಿದೆ. ಅಗ್ನಿ ಶಾಮಕದಳದ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ ತಕ್ಷಣ ಬೆಂಕಿ ನಂದಿಸಲು ಕಾರ್ಯಾಚರಣೆಯನ್ನು ಕೈಗೊಂಡರು.
ಕಡಿದಾದ ಬೆಟ್ಟ ಪ್ರದೇಶ ಮತ್ತು ದಟ್ಟವಾಗಿ ಆವರಿಸಿದ ಹೊಗೆಯ ಕಾರಣ ಬೆಂಕಿ ನಂದಿಸಲು ಅಗ್ನಿ ಶಾಮಕದಳದ ಸಿಬ್ಬಂದಿ, ಅರಣ್ಯ ಇಲಾಖೆ ಸಿಬ್ಬಂದಿ ಸಹ ಕೆಳಕ್ಕೆ ಹೋಗಲು ಸಾಧ್ಯವಾಗಲಿಲ್ಲ. ಬೆಟ್ಟದ ಮೇಲಿಂದಲೇ ನೀರನ್ನು ಹಾಕುವ ಮೂಲಕ ಬೆಂಕಿಯನ್ನು ಹತೋಟಿಗೆ ತರಲು ಶ್ರಮಿಸಿದರು.
ಜೋರಾಗಿ ಗಾಳಿ ಬೀಸುತ್ತಿರುವ ಪರಿಣಾಮ ಬೆಂಕಿ ಬೆಟ್ಟದಲ್ಲಿ ವ್ಯಾಪ್ತಿಸುತ್ತಲೇ ಇದೆ. ಭಾನುವಾರದ ರಜೆಯ ಕಾರಣ ನೂರಾರು ಪ್ರವಾಸಿಗರು ಸಹ ಮುಳ್ಳಯ್ಯನಗಿರಿ ಪ್ರದೇಶಕ್ಕೆ ಆಗಮಿಸಿದ್ದಾರೆ. ಬೆಂಕಿಯನ್ನು ಹತೋಟಿಗೆ ತರುವ ಪ್ರಯತ್ನ ನಡೆಯುತ್ತಿದೆ.
ಬೆಟ್ಟ ಪ್ರದೇಶದಿಂದ ಮೇಲಕ್ಕೆ ಹಬ್ಬುತ್ತಿರುವ ಬೆಂಕಿ ಬೆಟ್ಟದ ರಸ್ತೆ ತನಕ ಬಂದಿರುವ ಕಾರಣ ಕೆಲವು ವಾಹನಗಳು ಸಂಚಾರ ನಡೆಸದೇ ಕಾಯಬೇಕಾದ ಪರಿಸ್ಥಿತಿ ಉಂಟಾಗಿದೆ. ಅರಣ್ಯ ಅಧಿಕಾರಿಗಳು ವಾಹನ ಸವಾರರಿಗೆ ಧೈರ್ಯ ತುಂಬಿ ಅಲ್ಲಿಯೇ ನಿಲ್ಲುವಂತೆ ಸಲಹೆ ನೀಡುತ್ತಿದ್ದಾರೆ.
ಕಾಡ್ಗಿಚ್ಚಿನಿಂದಾಗಿ ಯಾವುದೇ ಪ್ರವಾಸಿಗರಿಗೆ ತೊಂದರೆಯಾಗಿಲ್ಲ. ಆದರೆ ಒಣಗಿ ನಿಂತಿರುವ ಸಸ್ಯಗಳು, ಹುಲ್ಲಿನಿಂದಾಗಿ ಬೆಂಕಿ ಬಹು ಬೇಗ ವ್ಯಾಪಿಸುತ್ತಿದ್ದು, ಅದನ್ನು ಹತೋಟಿಗೆ ತರುವುದು ಸವಾಲಿನ ಕೆಲಸವಾಗಿದೆ.
ಹಲವಾರು ಅಪರೂಪದ ಸಸ್ಯಗಳು ಬೆಂಕಿಗೆ ಆಹುತಿಯಾಗಿವೆ. ಹಲವಾರು ಪ್ರಾಣಿಗಳು ಸಹ ಬೆಂಕಿಗೆ ಸಿಲುಕಿ ಮೃತಪಟ್ಟಿರುವ ಸಾಧ್ಯತೆ ಇದೆ. ಬೆಂಕಿಯನ್ನು ಹತೋಟಿಗೆ ತರಲು ಸಿಬ್ಬಂದಿಗಳು ಶ್ರಮಿಸುತ್ತಿದ್ದಾರೆ.
ಬೇಸಿಗೆ ಆರಂಭವಾಗುತ್ತಿದ್ದಂತೆಯೇ ಅರಣ್ಯಾಧಿಕಾರಿಗಳು ಮತ್ತು ಸಿಬ್ಬಂದಿಗಳು ಕಾಡ್ಗಿಚ್ಚು ಕುರಿತು ಎಚ್ಚರ ವಹಿಸುತ್ತಾರೆ. ಆದರೆ ಕೆಲವು ಸಲ ಅರಣ್ಯಕ್ಕೆ ಬೆಂಕಿ ತಗಲಿ ದೊಡ್ಡ ಅನಾಹುತವಾಗುತ್ತದೆ. ಎಲ್ಲ ಅರಣ್ಯ ಪ್ರದೇಶಗಳಲ್ಲಿ ಬೆಂಕಿ ರೇಖೆ ನಿರ್ಮಿಸುವ ಮೂಲಕ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ.












Click it and Unblock the Notifications