ಹೇ ಮಾದೇವಪ್ಪ ನಿಂಗೂ ಫ್ರೀ.. ನಂಗೂ ಫ್ರೀ ಅಂದಿದ್ರು, ಆದ್ರೆ ಸಿದ್ದರಾಮಯ್ಯ ಮತ್ತು ಮಹದೇವಪ್ಪನದ್ದು BPL ಕಾರ್ಡ್ ಅಲ್ಲ: ಸಿ.ಟಿ.ರವಿ
ಚಿಕ್ಕಮಗಳೂರು, ಮೇ, 29: ಕಾಂಗ್ರೆಸ್‌ನವರು ನಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ 5 ಗ್ಯಾರಂಟಿಳನ್ನು ಘೋಷಿಸುವುದಾಗಿ ಹೇಳಿದ್ದರು. ಹಾಗೆಯೆ ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದೆ, ಆದರೆ ಯಾಕೆ ಇನ್ನು ಗ್ಯಾರಂಟಿಗಳನ್ನು ಘೋಷಣೆ ಮಾಡುತ್ತಿಲ್ಲ ಎಂದು ಬಿಜೆಪಿ ನಾಯಕರು ಟೀಕಾಪ್ರಹಾರವನ್ನೇ ಮುಂದುವರೆಸಿದ್ದಾರೆ. ಇದೀಗ ಹೇ ಮಾದೇವಪ್ಪ ನಿಂಗೂ ಫ್ರೀ.. ನಂಗೂ ಫ್ರೀ ಅಂದಿದ್ದರು. ಆದರೆ ಸಿಎಂ ಅವರದ್ದು ಬಿಪಿಎಲ್ ಕಾರ್ಡ್ ಅಲ್ಲ, ಮಹದೇವಪ್ಪನದ್ದೂ ಬಿಪಿಎಲ್ ಕಾರ್ಡ್ ಅಲ್ಲ ಎಂದು ಚಿಕ್ಕಮಗಳೂರಿನಲ್ಲಿ ಸಿ.ಟಿ.ರವಿ ವ್ಯಂಗ್ಯವಾಡಿದರು.
ಕಾಂಗ್ರೆಸ್‌ನ ಸ್ಥಿತಿ ಈಗ ಕಳ್ಳನಿಗೊಂದು ಪಿಳ್ಳೆ ನೆವ ಎಂಬಂತಾಗಿದೆ. ಕಾನೂನು ಸುವ್ಯವಸ್ಥೆಗೆ ಧಕ್ಕೆ ಬರುವ ಮುನ್ನ ಗ್ಯಾರಂಟಿಗಳನ್ನು ಜಾರಿ ಮಾಡಿ.ಜನರನ್ನು ನಂಬಿಸಿದ್ದೀರಾ, ಕೊಟ್ಟ ಮಾತನ್ನು ಉಳಿಸಿಕೊಳ್ಳಿ ಎಂದು ವಾಗ್ಧಾಳಿ ನಡೆಸಿದರು. ಅಲ್ಲದೆ ಈಗ ಕಾಂಗ್ರೆಸ್ ಪಕ್ಷ ನೆಪ ಹುಡುಕುತ್ತಿದೆ. ಮೊದಲು ಕಂಡೀಷನ್ ಹಾಕಿರಲಿಲ್ಲ, ಎಲ್ಲರಿಗೂ ಎಲ್ಲಾ ಫ್ರೀ ಎಂದಿದ್ದರು. ಸಂಪುಟ ವಿಸ್ತರಣೆ, ಖಾತೆ ಹಂಚಿಕೆಯೂ ಆಯಿತು ತಡ ಯಾಕೆ ಘೋಷಣೆ ಮಾಡಿ ಎಂದು ಒತ್ತಾಯಿಸಿದರು.

ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡಿ
ಸಬೂಬು, ತಕರಾರು ಇಲ್ಲದೆ ಎಲ್ಲಾ ಗ್ಯಾರಂಟಿಗಳನ್ನು ಜಾರಿ ಮಾಡಿ. ಅಂದು ನಿರ್ಬಂಧ ಇರಲಿಲ್ಲ, ಈಗ ಏಕೆ ಕಾರಣ ಹುಡುಕುತ್ತಿದ್ದೀರಾ? ಎಂದು ಕಾಂಗ್ರೆಸ್ ನಾಯಕರ ವಿರುದ್ಧ ಸಿ.ಟಿ.ರವಿ ಚಿಕ್ಕಮಗಳೂರಿನಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ವಿರೋಧ ಪಕ್ಷದ ನಾಯಕ ಸ್ಥಾನ ಆಯ್ಕೆಯ ಬಗ್ಗೆ ಮಾತನಾಡಿ, ಇದರಿಂದ ಕಾಂಗ್ರೆಸ್ಸಿಗರಿಗೆ ಒಳ್ಳೆದೇ ಆಯಿತಲ್ಲ. ವಿಪಕ್ಷ ನಾಯಕನ ಸ್ಥಾನ ಆಗಿಲ್ಲ ಅಂದರೆ ಸಂತೋಷ ಪಡಬೇಕು, ಸಂಕಟ ಯಾಕೆ? ಕಾಂಗ್ರೆಸ್‌ನಲ್ಲೇ ಅವರ ಆಡಳಿತಕ್ಕೆ ವಿರೋಧ ಮಾಡುವವರು ಬಹಳ ಜನ ಇದ್ದಾರೆ. ಅದೇ ಕಾರಣಕ್ಕೆ ನಾವು ಇನ್ನೂ ವಿಪಕ್ಷ ನಾಯಕನ ಸ್ಥಾನ ಆಯ್ಕೆ ಮಾಡಿಲ್ಲ ಎಂದರು.
ರೈತರ ಖಾತೆಗೆ 10 ಸಾವಿರ ರೂ. ಹಾಕಿದ್ದೇವೆ
15 ಲಕ್ಷ ರೂಪಾಯಿ ಕೊಡುತ್ತೇವೆ ಅಂತಾ ಮನೆಗೆ ಹೋಗಿ, ಕಾರ್ಡ್ ಹಂಚಿ, ಸಹಿ ಮಾಡಿಸಿಕೊಂಡು ಬಂದಿದ್ವಾ? ಕಿಸಾನ್ ಸಮ್ಮಾನ್ ಯೋಜನೆಯಲ್ಲಿ ಹೇಳದೇ ರೈತರ ಖಾತೆಗೆ 10 ಸಾವಿರ ರೂಪಾಯಿ ಹಾಕಿದ್ದೇವೆ. ನಾವೇನು ನಿಮ್ಮ ರೀತಿ ಮೊದಲೇ ಡಂಗೂರ ಹೊಡೆದಿಲ್ಲ.
ವೋಟ್ ಹಾಕಿದರೆ ಮಾತ್ರ ಶೌಚಾಲಯ ನಿರ್ಮಾಣ ಮಾಡಿಕೊಡುತ್ತೇವೆ ಅಂತಲೂ ಹೇಳಿಲ್ಲ. 12 ಕೋಟಿ ರೂಪಾಯಿ ವೆಚ್ಚದಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಿಕೊಟ್ಟಿದ್ದೇವೆ ಎಂದರು.
ಈ ನಮ್ಮ ಸಾಧನೆಯ ಬಗ್ಗೆ ಡಿ.ಕೆ.ಶಿವಕುಮಾರ್ ಅವರಿಗೆ ಮರೆತುಹೋಗಿದ್ದರೆ ನೆನಪು ಮಾಡುತ್ತೇನೆ. ನಾವು 12 ಕೋಟಿ ರೂಪಾಯಿ ವೆಚ್ಚದಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಿದ್ದೇವೆ. ಫ್ರೀ ಗ್ಯಾಸ್ ಕನೆಕ್ಷನ್ ಕೊಟ್ಟಿದ್ದೇವೆ. ಆದರೆ ನೀವು 500 ರೂಪಾಯಿ ಗ್ಯಾಸ್ ಎಂದಿದ್ದೀರಿ, ಮೊದಲು ಅದನ್ನು ಕೊಡಿ. ಹಾಗೆಯೆ ಮನೆಗೆ 2 ಸಾವಿರ ಅಂದಿದ್ರು, ಅದನ್ನೂ ಕೊಡಲಿ ಈಗ ಎಂದು ತಿವಿದರು.
ಬಿಜೆಪಿ ಗೆದ್ದರೆ ಇವಿಎಂ ಅಂತಿದ್ದರು. ಈಗ ಏಕೆ ಇವಿಎಂ ಎಂದು ದೂರುತ್ತಿಲ್ಲ. ಕಾಂಗ್ರೆಸ್ ಗೆಲುವಿಗೆ ಮೋಸ ಕಾರಣವೋ, ಇವಿಎಂ ಕಾರಣವೋ ಹೇಳಬೇಕಲ್ಲವಾ ಅವರು. ಅದೇ ಬಿಜೆಪಿ ಗೆದ್ದಿದ್ದರೆ ಇವಿಎಂ ಮೇಲೆ ಗೂಬೆ ಕೂರಿಸುತ್ತಿದ್ದರೋ ಇಲ್ಲವೋ. ಇವಿಎಂ ಮೇಲೆ ಸುಳ್ಳು ಹೇಳಿದ್ದೇವೆ, ದೋಷ ಹೊರಿಸಿದ್ದೇವೆ ಅಂತಾ ರಾಜ್ಯದ ಜನರ ಕ್ಷಮೆ ಕೇಳಬೇಕು ಎಂದರು.












Click it and Unblock the Notifications