ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಕಾರ್ಯಕರ್ತನ ಮೇಲೆ ಮಾರಣಾಂತಿಕ ಹಲ್ಲೆ
ಕಾಫಿನಾಡಿನಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿದ್ದು, ವಿಧಾನಸಭಾ ಚುನಾವಣೆಗಾಗಿ ಭರ್ಜರಿ ಸಿದ್ಧತೆ ಆರಂಭಗೊಂಡಿದೆ. ಈ ನಡುವೆ ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಸೇರ್ಪಡೆಯಾಗಿದ್ದ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಚಿಕ್ಕಮಗಳೂರು, ಫೆಬ್ರವರಿ 2: ಕಾಂಗ್ರೆಸ್ ಪಕ್ಷ ತೊರೆದು ಬಿಜೆಪಿ ಪಕ್ಷ ಸೇರ್ಪಡೆಯಾಗಿದ್ದ ಕಾರ್ಯಕರ್ತನ ಮೇಲೆ ಕಾಂಗ್ರೆಸ್ ಕಾರ್ಯಕರ್ತರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ತಾಲೂಕಿನ ನಾಗಲಾಪುರ ಸಮೀಪದ ರಾವುರು ಗ್ರಾಮದಲ್ಲಿ ನಡೆದಿದೆ.
ಶಿವು ಮಾರಣಾಂತಿಕವಾಗಿ ಹಲ್ಲೆಗೊಳಗಾಗಿ ಆಸ್ಪತ್ರೆಗೆ ದಾಖಲಾದ ಬಿಜೆಪಿ ಕಾರ್ಯಕರ್ತನಾಗಿದ್ದು, ಕಾಂಗ್ರೆಸ್ ಶಾಸಕ ಟಿ.ಡಿ. ರಾಜೇಗೌಡ ಹಿಂಬಾಲಕರು ಹಲ್ಲೆ ನಡೆಸಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.
ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯ ಕಾರ್ಯಕರ್ತನಾಗಿದ್ದ ಶಿವು ಕಳೆದ ತಿಂಗಳು ಪಕ್ಷ ತೊರೆದು ಬಿಜೆಪಿಗೆ ಸೇರ್ಪಡೆಗೊಂಡಿದ್ದರು. ಇದು ಶಾಸಕ ಟಿ.ಡಿ.ರಾಜೇಗೌಡ ಅವರ ಬೆಂಬಲಿಗರ ಕಣ್ಣು ಕೆಂಪಗಾಗಿಸಿದ್ದವು. ಬಿಜೆಪಿ ಸೇರಿದ ವಿಚಾರವಾಗಿ ಶಿವು ಜೊತೆ ಶಾಸಕರ ಹಿಂಬಾಲಕರು ಗಲಾಟೆ ಕೂಡ ಮಾಡಿದ್ದರು. ಕಿಡಿಗೇಡಿಗಳು ಬುಧವಾರ ಮನೆಗೆ ನುಗ್ಗಿ ಶಿವು ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಪರಾರಿಯಾಗಿದ್ದಾರೆ. ಗಾಯಾಳು ಶಿವುನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಪ್ರಕರಣ ಸಂಬಂಧ ನಾಲ್ವರು ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಎನ್.ಆರ್ ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಸಿ.ಟಿ.ರವಿ ಸೊಲ್ತಾರೋ, ಗೆಲ್ತಾರೋ: ದೇವರ ಮೊರೆ ಹೋದ ಬಿಜೆಪಿ ಕಾರ್ಯಕರ್ತರು
ಚಿಕ್ಕಮಗಳೂರು ಕ್ಷೇತ್ರದ ಶಾಸಕ ಸಿ.ಟಿ.ರವಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸೋಲುತ್ತಾರೋ ಅಥವಾ ಗೆಲ್ಲುತ್ತಾರೋ ಎಂದು ತಿಳಿಯಲು ಸಿ.ಟಿ.ರವಿ ಬೆಂಬಲಿಗರು ದೇವರ ಮೊರೆ ಹೋಗಿದ್ದಾರೆ.
ಶಾಸಕ ಸಿ.ಟಿ.ರವಿ ಸೋಲು ಗೆಲುವಿನ ಲೆಕ್ಕಚಾರವನ್ನು ಕಾರ್ಯಕರ್ತರು ಚಿಕ್ಕಮಗಳೂರು ನಗರದ ಶಾಂತಿನಗರದ ಚೌಡೇಶ್ವರಿ ದೇವಿಯ ಮುಂದಿಟ್ಟಿದ್ದಾರೆ. ಸಿ.ಟಿ.ರವಿ ಬೆಂಬಲಿಗರು ಬುಧವಾರ ಚಿಕ್ಕಮಗಳೂರು ಚೌಡೇಶ್ವರಿ ದೇವಾಸ್ಥಾನಕ್ಕೆ ತೆರಳಿ ತಮ್ಮ ನಾಯಕನ ರಾಜಕೀಯ ಭವಿಷ್ಯದ ಬಗ್ಗೆ ದೇವರ ಬಳಿ ಅಪ್ಪಣೆ ಕೇಳಿದ್ದಾರೆ. ಹಗ್ಗ ಬಲಕ್ಕೆ ತಿರುಗಿದರೆ ಬಿಜೆಪಿ. ಎಡಕ್ಕೆ ತಿರುಗಿದರೆ ಕಾಂಗ್ರೆಸ್ ಗೆಲುವು ಎಂದು ಅಪ್ಪಣೆ ನೀಡುವಂತೆ ದೇವಿಯ ಮೊರೆ ಹೋಗಿದ್ದಾರೆ.

ತಾಯಿಗೆ ಪೂಜೆ ಸಲ್ಲಿಸಿ ನಂತರ ಹಗ್ಗ ಕೈಯಲ್ಲಿ ಹಿಡಿದು ಅರ್ಚಕ ನಿಂತಿದ್ದು ಈ ವೇಳೆ ಸಿ.ಟಿ.ರವಿ ಗೆಲ್ಲುತ್ತಾರೆ ಎಂದು ತಾಯಿ ಚೌಡೇಶ್ವರಿ ಅಪ್ಪಣೆ ನೀಡಿದ್ದಾರಂತೆ. ಅರ್ಚಕ ರವಿ, ಸಿ.ಟಿ.ರವಿ ಅಭಿಮಾನಿಗಳ ಬೇಡಿಕೆಯಂತೆ ಚೌಡೇಶ್ವರಿ ಅಪ್ಪಣೆ ಕೇಳಿದ್ದರು. ಸದ್ಯ ಚೌಡೇಶ್ವರಿ ನೀಡಿದ ಅಪ್ಪಣೆಯಿಂದ ಸಿ.ಟಿ.ರವಿ ಅಭಿಮಾನಿಗಳು ಖುಷಿ ಆಗಿದ್ದಾರೆ. ಇನ್ನು ಚಿಕ್ಕಮಗಳೂರಿನ ಶಾಂತಿನಗರದ ಚೌಡೇಶ್ವರಿ ದೇವಸ್ಥಾನಕ್ಕೆ ಸಾಕಷ್ಟು ಭಕ್ತರು ಅಪ್ಪಣೆಗಾಗಿಯೇ ಭೇಟಿ ನೀಡುತ್ತಾರೆ ಎನ್ನುವ ಪ್ರತೀತಿ ಇದೆ.












Click it and Unblock the Notifications