ಕಾಫಿನಾಡಿನಲ್ಲಿ ಕಾಡಾನೆ ದಾಳಿಗೆ ಮತ್ತೊಂದು ಬಲಿ, ಅರಣ್ಯ ಇಲಾಖೆ ವಿರುದ್ಧ ಜನಾಕ್ರೋಶ
ಚಿಕ್ಕಮಗಳೂರು, ಡಿಸೆಂಬರ್, 25: ಕಾಡಾನೆ ದಾಳಿಗೆ ಕಾಫಿನಾಡಿನಲ್ಲಿ ಮತ್ತೊಂದು ಬಲಿಯಾಗಿದೆ. ರಾಗಿ ಫಸಲು ಕಾಯುತ್ತಾ ಜಮೀನಿನ ಗುಡಿಸಲಿನಲ್ಲಿ ಮಲಗಿದ್ದ ರೈತನ ಮೇಲೆ ಕಾಡಾನೆ ಏಕಾಏಕಿ ದಾಳಿ ಮಾಡಿದೆ. ಮಲಗಿದ್ದ ರೈತನನ್ನು ಕಾಲಿನಲ್ಲಿ ತುಳಿದು ಸಾಯಿಸಿರುವ ಘಟನೆ ಜಿಲ್ಲೆಯ ತರೀಕೆರೆ ತಾಲೂಕಿನ ಹಾದಿಕೆರೆ ಗ್ರಾಮಪಂಚಾಯತಿ ಸಮೀಪದ ರಾಗಿ ಬಸವನಹಳ್ಳಿಯಲ್ಲಿ ಭಾನುವಾರ ಮುಂಜಾನೆ ನಡೆದಿದೆ.
ನಿರ್ಲಕ್ಷ್ಯ, ರೈತನ ಜೀವ ತೆಗೆದ ಕಾಡಾನೆ
ಈರಪ್ಪ (60) ಕಾಡಾನೆ ದಾಳಿಯಿಂದ ಮೃತಪಟ್ಟ ರೈತರಾಗಿದ್ದಾರೆ. ರೈತ ಈರಪ್ಪ ತಮ್ಮ ಹೊಲದಲ್ಲಿ ಬೆಳೆದಿದ್ದ ರಾಗಿ ಫಸಲನ್ನು ಕಾವಲು ಕಾಯುತ್ತಿದ್ದರು. ಅವರು ಕಾಡುಪ್ರಾಣಿಗಳಿಂದ ರಾಗಿ ಬೆಳೆಯನ್ನು ರಕ್ಷಿಸಿಕೊಳ್ಳಲು ರಾತ್ರಿ ಇಡೀ ಜಮೀನಿನ ಗುಡಿಸಲಿನಲ್ಲಿ ಮಲಗಿದ್ದರು. ಆದರೆ ಭಾನುವಾರ ಮುಂಜಾನೆ ಗುಡಿಸಲಿನ ಮೇಲೆ ಕಾಡಾನೆ ದಿಢೀರ್ ದಾಳಿ ನಡೆಸಿದೆ. ನಂತರ ಕಾಡಾನೆ ಗುಡಿಸಲು ಧ್ವಂಸ ಮಾಡಿ ರೈತ ಈರಪ್ಪನನ್ನು ಅಡಿಕೆ ತೋಟದವರೆಗೂ ಎಳೆದುತಂದು ತುಳಿದು ಸಾಯಿಸಿದೆ.
ಅರಣ್ಯ ಇಲಾಖೆ ವಿರುದ್ದ ರೊಚ್ಚಿಗೆದ್ದ ಜನ
ಘಟನೆ ಸಂಭವಿಸಿದ ಬೆನ್ನಲ್ಲೇ ಅರಣ್ಯ ಇಲಾಖೆ ವಿರುದ್ಧ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ದುರ್ಘಟನೆ ಸಂಭವಿಸಿದರೂ ಕೂಡ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿಲ್ಲ ಎಂದು ಕೆಂಡಕಾರಿದರು. ಜಿಲ್ಲೆಯ ಮಲೆನಾಡು ಭಾಗದಲ್ಲಿ ಈ ಬಾರಿ ಕಾಡಾನೆಗಳ ದಾಳಿ ತೀವ್ರವಾಗಿ ಹೆಚ್ಚಿದ್ದು, ಮೂಡಿಗೆರೆ ತಾಲೂಕು ಒಂದರಲ್ಲೇ ಈವರೆಗೂ ಕಾಡಾನೆ ದಾಳಿಗೆ 6 ಮಂದಿ ಬಲಿಯಾಗಿದ್ದಾರೆ. ಮಲೆನಾಡಿನಲ್ಲಿ ಕಾಡಾನೆಗಳ ಸೆರೆಗೆ ಅರಣ್ಯ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ. ಇದೀಗ ಬಯಲು ಭಾಗದಲ್ಲೂ ಕಾಡಾನೆಗಳ ದಾಳಿ ಆರಂಭವಾಗಿರುವುದು ರೈತರ ನಿದ್ದೆಗೆಡಿಸಿದೆ. ಭಾನುವಾರ ಕಾಡಾನೆ ದಾಳಿಯಿಂದ ಮೃತಪಟ್ಟ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ಒದಗಿಸಿ. ಹಾಗೂ ನರಹಂತಕ ಆನೆಯನ್ನು ಸೆರೆ ಹಿಡಿದು ಸ್ಥಳಾಂತರ ಮಾಡಬೇಕು ಎಂದು ಗ್ರಾಮಸ್ಥರು, ರೈತರು ಆಗ್ರಹಿಸಿದ್ದಾರೆ.

ಹಾಸನ ಜಿಲ್ಲೆಯಲ್ಲೂ ಕಾಡಾನೆಗಳ ದಾಳಿ
ಅಲ್ಲದೇ ಹಾಸನ ಜಿಲ್ಲೆಯ ಹಲವು ಗ್ರಾಮಗಳಲ್ಲಿ ಮತ್ತೆ ಕಾಡಾನೆಗಳ ದಾಳಿ ಮುಂದುವರೆದಿದೆ. ಕಾಡಾನೆಗಳ ದಾಳಿಯಿಂದ ಇಲ್ಲಿನ ಜನರು ಮತ್ತಷ್ಟು ಆತಂಕಕ್ಕೆ ಒಳಗಾಗಿದ್ದಾರೆ. ಹಗಲು, ರಾತ್ರಿ ವೇಳೆ ಗುಮ್ಮನಹಳ್ಳಿ ಗ್ರಾಮದೊಳಗೆ ಕಾಡಾನೆಗಳು ದಾಳಿ ಮಾಡುತ್ತಲೇ ಇವೆ. ರೈತರು ಬೆಳೆದಿದ್ದ ಬೆಳೆಗಳನ್ನು ನಾಶ ಮಾಡುವುದಲ್ಲದೆ, ಮಾನವನ ಮೇಲೂ ದಾಳಿ ನಡೆಸಿದ ಹಲವು ಉದಾಹರಣೆಗಳಿವೆ. ಹೀಗೆ ಸತತವಾಗಿ ಕಾಡಾನೆಗಳ ದಾಳಿಯಿಂದ ಇಲ್ಲಿನ ಜನರು ಬೇಸತ್ತು ಹೋಗಿದ್ದಾರೆ. ಕಳೆದ ರಾತ್ರಿ ಸಕಲೇಶಪುರ ತಾಲೂಕಿನ ಗುಮ್ಮನಹಳ್ಳಿ ಗ್ರಾಮಕ್ಕೆ ಒಂಟಿಸಲಗ ಆಗಮಿಸಿದೆ. ನಂತರ ಕಾಡಾನೆಯನ್ನು ಹಿಂಬಾಲಿಸಿದ ಟಾಸ್ಕ್ ಫೋರ್ಸ್ ಸಿಬ್ಬಂದಿ, ಗ್ರಾಮಸ್ಥರಿಗೆ ಮನೆಯಿಂದ ಹೊರಬಾರದಂತೆ ಎಚ್ಚರಿಕೆ ನೀಡಿದೆ.

ಕೆಲವು ದಿನಗಳ ಕಾಲ ಕಾಡಾನೆಗಳ ಹಾವಳಿ ಕಡಿಮೆ ಆಗಿತ್ತು. ಆಗಿನಿಂದ ಗ್ರಾಮಸ್ಥರು ನಿರ್ಭಯವಾಗಿ ಮನೆಯಿಂದ ಹೊರಬರಲು ಆರಂಭಿಸಿದ್ದರು. ಹಾಗೆಯೇ ಜಮೀನು ಕೆಲಸದಲ್ಲಿಯೂ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಆದರೆ ನಿನ್ನೆ ಮತ್ತೆ ಕಾಡಾನೆ ಗುಮ್ಮನಹಳ್ಳಿ ಗ್ರಾಮದೊಳಗೆ ಹಾದು ಹೋದ ಕಾರಣ ಸ್ಥಳೀಯರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ.












Click it and Unblock the Notifications