ಚಿಕ್ಕಮಗಳೂರು ಜಿಲ್ಲೆಯಲ್ಲಿ ಬರ; ಸಭೆ ನಡೆಸಿ, ಖಡಕ್ ಸೂಚನೆ ಕೊಟ್ಟ ಸಚಿವ
ಚಿಕ್ಕಮಗಳೂರು, ನವೆಂಬರ್ 28: "ಬರಗಾಲ ಪೀಡಿತ ಪ್ರದೇಶಗಳಲ್ಲಿ ಪ್ರಸ್ತುತ ಯಾವುದೇ ರೀತಿಯ ಮೂಲಭೂತ ಸೌಕರ್ಯಗಳ ಕೊರತೆಯಾಗದಂತೆ ಮುಂಜಾಗ್ರತ ಕ್ರಮಗಳನ್ನು ಕೈಗೊಳ್ಳಬೇಕು" ಎಂದು ಇಂಧನ ಹಾಗೂ ಚಿಕ್ಕಮಗಳೂರು ಜಿಲ್ಲಾ ಉಸ್ತುವಾರಿ ಸಚಿವ ಕೆ. ಜೆ. ಜಾರ್ಜ್ ಅಧಿಕಾರಿಗಳಿಗೆ ಸೂಚಿಸಿದರು.
ಮಂಗಳವಾರ ಜಿಲ್ಲೆಯ ಕೊಪ್ಪ ತಾಲ್ಲೂಕಿನ ಪುರಭವನದಲ್ಲಿ ಶೃಂಗೇರಿ ವಿಧಾನಸಭಾ ಕ್ಷೇತ್ರ ಹಾಗೂ ಮೂಡಿಗೆರೆ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಬರ ನಿರ್ವಹಣೆ ಕುರಿತು ನಡೆದ ಅಧಿಕಾರಿಗಳ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

"ಬರ ಪರಿಹಾರ ಕಾಮಗಾರಿ ಹಾಗೂ ಕಾರ್ಯಕ್ರಮಗಳನ್ನು ವಿಳಂಬ ಮಾಡದೆ ಅಧಿಕಾರಿಗಳು ಅನುಷ್ಠಾನಗೊಳಿಸಬೇಕು. ಪ್ರತಿ ಗ್ರಾಮ ಮತ್ತು ಪಟ್ಟಣಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಮುಂಜಾಗ್ರತಾ ಕ್ರಮ ವಹಿಸಬೇಕು. ದನಕರುಗಳಿಗೆ ಅಗತ್ಯವಿರುವ ಮೇವು 21 ರಿಂದ 23 ವಾರಗಳಿಗೆ ಸಾಕಾಗುವಷ್ಟು ಇದ್ದು, ಮುಂದೆ ಮೇವಿಗೆ ಕೊರತೆಯಾಗದಂತೆ ರೈತರಿಗೆ ಮೇವು ಕಿಟ್‌ಗಳನ್ನು ವಿತರಿಸಿ ನಮ್ಮ ಜಿಲ್ಲೆಗೆ ಸಾಕಾಗುವಷ್ಟು ಮೇವನ್ನು ಬೆಳೆಯಬೇಕು" ಎಂದರು.
"ಮಲೆನಾಡು ಪ್ರದೇಶದಲ್ಲಿ ಮೇವು ಬೆಳೆಯಲು ಉತ್ತಮ ವಾತಾವರಣವಿದ್ದು, ಪಕ್ಕದ ಜಿಲ್ಲೆಯಿಂದ ಮೇವು ಪೂರೈಕೆಗೆ ಬೇಡಿಕೆ ಬಂದ ಸಂದರ್ಭದಲ್ಲಿ ಮೇವು ಲಭ್ಯತೆಗನುಗುಣವಾಗಿ ಮೇವು ಬೆಳೆದು ಒದಗಿಸಬೇಕು. ನಮ್ಮ ಜಿಲ್ಲೆಗೆ ಮೇವು ಕೊರತೆಯಾಗದಂತೆ ಎಚ್ಚರವಹಿಸಬೇಕು" ಎಂದು ಹೇಳಿದರು.
ಸಭೆಗೆ ಶಾಸಕಿ ಗೈರು; ಬರ ಪರಿಸ್ಥಿತಿ ಬಗ್ಗೆ ಸಚಿವರ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಮೂಡಿಗೆರೆಯ ಕಾಂಗ್ರೆಸ್ ಶಾಸಕಿ ನಯನಾ ಮೋಟಮ್ಮ ಗೈರಾಗಿದ್ದರು. ಶಾಸಕಿ ತೆಲಂಗಾಣ ವಿಧಾನಸಭೆ ಚುನಾವಣೆಯ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ.
ಮಲೆನಾಡಲ್ಲಿ ಮಳೆ ಕೊರತೆ, ಬೆಳೆ ಹಾನಿಯಾಗಿ ರೈತರು ಆತಂಕದಲ್ಲಿದ್ದಾರೆ. ಬರದಿಂದ ಸಂಕಷ್ಟಕ್ಕೀಡಾಗಿರುವ ಬೆಳೆಗಾರರು, ರೈತರು ಅಧಿಕಾರಿಗಳಿಂದ ಮಾಹಿತಿ ಪಡೆಯಲು ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಜಾರ್ಜ್ ಮೂಡಿಗೆರೆಯ ಬಗ್ಗೆ ಸಭೆ ನಡೆಸಿದರೂ ಶಾಸಕಿ ಗೈರಾಗಿದ್ದರು.
ಹಗರಣದ ಬಗ್ಗೆ ಪ್ರತಿಕ್ರಿಯೆ; "ವಿದ್ಯುತ್ ಗುತ್ತಿಗೆದಾರ ಮಂಜುನಾಥ್ ಮಾಡಿರುವ ಆರೋಪ ನನಗೆ ಗೊತ್ತಿಲ್ಲ" ಎಂದು ಚೆಸ್ಕಾಂನಲ್ಲಿ ನಡೆದಿದೆ ಎನ್ನಲಾದ ಹಗರಣದ ಬಗ್ಗೆ ಇಂಧನ ಸಚಿವ ಕೆ. ಜೆ. ಜಾರ್ಜ್ ಪ್ರತಿಕ್ರಿಯೆ ನೀಡಿದರು.
"ಮಂಜುನಾಥ್ ಮಾಡಿರೋ ಆರೋಪ ನನಗೆ ಗೊತ್ತಿಲ್ಲ. ಪ್ರತಿ ವರ್ಷ 1000 ಹಾಗೂ 1200 ಕೋಟಿ ಕೆಲಸ ಮಾಡುತ್ತಿದ್ದರು. ಅದು 2004 ರಿಂದಲೂ ನಡೆದುಕೊಂಡು ಬಂದಿದೆ. ಇಷ್ಟು ವರ್ಷ ಕ್ಯಾಬಿನೆಟ್ ತೀರ್ಮಾನವಿಲ್ಲದೇ ಮಾಡಿಕೊಂಡು ಬಂದಿದ್ದರೂ ಸುಮಾರು 6000 ಕೋಟಿ ರೆಗ್ಯುಲೈಜ್ ಮಾಡಲು ಮುಂದಾಗಿದ್ದೇವೆ. ನಾನು ಬಂದ ಮೇಲೆ ಬೋರ್ಡಿಗೆ ಟೆಂಡರ್ ಬಂದಿತ್ತು, ನಾನು ಅದನ್ನು ಬಾಕಿ ಇಟ್ಟಿದ್ದೇನೆ" ಎಂದರು.
"ಈಗ ಅವರು ಗುತ್ತಿಗೆ ಕೊಟ್ಟಿದ್ದೇವೆ ಕೆಲಸ ಆರಂಭಿಸುತ್ತೇವೆ ಎಂದಿದ್ದಾರೆ. ಹೊಸದಾಗಿ ಯೋಜನಾ ವೆಚ್ಚ ಮಾಡಿ ಎಲ್ಲಾ ಎಸ್ಕಾಂನವರಿಗೂ ಕಳುಹಿಸಿದ್ದೇನೆ. ನಾನೇ ಬಾಕಿ ಇಟ್ಟಿದ್ದೇನೆ. ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ಆಗಿಲ್ಲ, ಆಗಬೇಕು" ಎಂದು ಹೇಳಿದರು.












Click it and Unblock the Notifications