ಚಿಕ್ಕಮಗಳೂರು; ಸಂಭ್ರಮದ ದತ್ತಜಯಂತಿಗೆ ಶಾಂತಿಯುತ ತೆರೆ
ಚಿಕ್ಕಮಗಳೂರು, ಡಿಸೆಂಬರ್ 27: ಕಾಫಿನಾಡು ಚಿಕ್ಕಮಗಳೂರಿನಲ್ಲಿ ಕಳೆದ ಒಂದು ವಾರದಿಂದ ನಡೆಯುತ್ತಿದ್ದ ಅದ್ಧೂರಿ ದತ್ತ ಜಯಂತಿಗೆ ಮಂಗಳವಾರ ಶಾಂತಿಯುತ ತೆರೆ ಬಿದ್ದಿದೆ. ರಾಜ್ಯದ ಮೂಲೆ ಮೂಲೆಗಳಿಂದ ಆಗಮಿಸಿದ್ದ ಸಾವಿರಾರು ದತ್ತ ಮಾಲಾಧಾರಿಗಳು ಪಾದುಕೆ ದರ್ಶನ ಪಡೆದರು.
ದತ್ತಮಾಲೆ ಧರಿಸಿದ್ದ ಭಕ್ತರು ಶ್ರದ್ಧಾಭಕ್ತಿಯಿಂದ ಪೂಜೆ ನೆರವೇರಿಸಿ, ಮುಂಜಾನೆಯಿಂದಲೇ ಸರತಿ ಸಾಲಿನಲ್ಲಿ ನಿಂತು ದತ್ತಾತ್ರೇಯನ ಘೋಷವಾಕ್ಯ ಮೊಳಗಿಸುತ್ತ ದತ್ತಪಾದುಕೆ ದರ್ಶನ ಪಡೆದರು. ದತ್ತ ಜಯಂತಿ ಹಿನ್ನೆಲೆ ಜಿಲ್ಲಾಡಳಿತ ಸಕಲ ವ್ಯವಸ್ಥೆಯನ್ನು ಮಾಡಿತ್ತು.

ದತ್ತಪೀಠದ ತುಳಸಿ ಕಟ್ಟೆಯ ಬಳಿ ಹಿಂದೂ ಮುಖಂಡರು ಹಾಗೂ ಬಿಜೆಪಿ ನಾಯಕ ಸಿ. ಟಿ. ರವಿ ಹೋಮ ಹವನ ನಡೆಸಿ ಪೂಜೆ ನೆರವೇರಿಸಿದರು. ಪೂಜೆಯಲ್ಲಿ ವಿವಿಧ ಮಠಗಳ ಶ್ರೀಗಳು ಭಾಗವಹಿಸಿ ದತ್ತಪೀಠ ಹಿಂದುಗಳ ಪೀಠವಾಗಬೇಕೆಂದು ಎಲ್ಲರೂ ಒಗ್ಗಟ್ಟಿನ ಮೂಲಕ ಕೊನೆವರೆಗೂ ಹೋರಾಟ ಮಾಡುವುದಾಗಿ ಸಂಕಲ್ಪ ಮಾಡಿದರು.
ದತ್ತಪೀಠದಲ್ಲಿ ಪೊಲೀಸರ ಭದ್ರಕೋಟೆಯಲ್ಲಿ ಈ ಬಾರಿಯ ದತ್ತ ಜಯಂತಿ ನಡೆಯಿತು. ಪೀಠದಲ್ಲಿ ಹೆಜ್ಜೆ ಹೆಜ್ಜೆಗೂ ಪೊಲೀಸರನ್ನು ನಿಯೋಜನೆ ಮಾಡಲಾಗಿತ್ತು. ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ವಿವಾದಿತ ಇನಾಂ ದತ್ತಾತ್ರೇಯ ಪೀಠದ ಗೋರಿಗಳ ಸುತ್ತ ಪೊಲೀಸರನ್ನು ಹಾಕಲಾಗಿತ್ತು. ರಾಜ್ಯ ಸೇರಿದಂತೆ ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಸುಮಾರು 10 ಸಾವಿರಕ್ಕೂ ಹೆಚ್ಚು ದತ್ತ ಭಕ್ತರು ಪಾದುಕೆಯ ದರ್ಶನ ಪಡೆದು ಪುನೀತರಾದರು.
ದರ್ಗಾದ ಬಳಿ ಅನುಚಿತ ವರ್ತನೆ; ದತ್ತಜಯಂತಿಯಂದೇ ದತ್ತಮಾಲಾಧಾರಿಗಳು ರಸ್ತೆ ಬದಿಯಲ್ಲಿದ್ದ ದರ್ಗಾದ ಬಳಿ ಅನುಚಿತವಾಗಿ ವರ್ತಿಸಿ ದರ್ಗಾಕ್ಕೆ ಹಾನಿ ಮಾಡಿರುವ ಘಟನೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯ ಸಂತವೇರಿ ಗ್ರಾಮದಲ್ಲಿ ಮಂಗಳವಾರ ಬೆಳಗ್ಗೆ ನಡೆದಿದೆ.
ಚಿಕ್ಕಮಗಳೂರು, ತರೀಕೆರೆ ರಾಜ್ಯ ಹೆದ್ದಾರಿ ಬದಿಯಲ್ಲಿರುವ ದರ್ಗಾದ ಬಳಿ ಭದ್ರಾವತಿ ತಾಲೂಕಿನಿಂದ ಸುಮಾರು 25 ಬೈಕುಗಳಲ್ಲಿ ಆಗಮಿಸಿದ್ದ ದತ್ತಮಾಲಾಧಾರಿಗಳು ಬೈಕ್ ನಿಲ್ಲಿಸಿಕೊಂಡು ಜೈ ಶ್ರೀರಾಮ್ ಘೋಷಣೆ ಕೂಗುತ್ತ ಗೊಂದಲ ಸೃಷ್ಟಿಸಿದ್ದಾರೆ.
ಈ ವೇಳೆ ದರ್ಗಾದ ಬಳಿ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸರು ದತ್ತಮಾಲಾಧಾರಿಗಳನ್ನು ಮುಂದೆ ಹೋಗುವಂತೆ ತಿಳಿಸಿದ್ದಾರೆ. ಪೊಲೀಸರ ಸೂಚನೆ ಧಿಕ್ಕರಿಸಿದ ದತ್ತಮಾಲಾಧಾರಿಗಳು ದರ್ಗಾದ ಬಳಿ ಆಗಮಿಸಿ ಹಸಿರು ಬಾವುಟವನ್ನು ಕಿತ್ತು ಹಾಕಿದ್ದಲ್ಲದೇ ಅಲ್ಲಿದ್ದ ಕಾಣಿಕೆ ಡಬ್ಬಿಗೂ ಹಾನಿ ಮಾಡಿದ್ದಾರೆ.
ಅಲ್ಲದೇ ದರ್ಗಾದ ಮೇಲಿದ್ದ ಸಣ್ಣ ಗುಮ್ಮಟಕ್ಕೂ ಹಾನಿ ಮಾಡಿದ್ದಾರೆಂದು ತಿಳಿದು ಬಂದಿದ್ದು, ದತ್ತಮಾಲಾಧಾರಿಗಳು ದರ್ಗಾದ ಒಳಗೆ ನುಗ್ಗಲು ಯತ್ನಿಸಿದ್ದಾರೆ. ಈ ವೇಳೆ ಸ್ಥಳೀಯ ಮುಸ್ಲಿಂ ಸಮುದಾಯದವರು ಹಾಗೂ ದಲಿತ ಸಂಘಟನೆಗಳ ಮುಖಂಡರು ಸ್ಥಳಕ್ಕೆ ಬರುತ್ತಿದ್ದಂತೆ ದತ್ತಮಾಲಾಧಾರಿಗಳು ಬೈಕ್ ಏರಿ ಪರಾರಿಯಾಗಿದ್ದಾರೆ.
ದರ್ಗಾಕ್ಕೆ ಹಾನಿಯಾಗುವುದನ್ನು ತಡೆಯಲು ಮುಂದಾದ ಪೊಲೀಸರ ಮೇಲೂ ದತ್ತಮಾಲಾಧಾರಿಗಳು ಹಲ್ಲೆ ಮಾಡಿದ್ದು, ಓರ್ವ ಪೊಲೀಸರಿಗೆ ಸಣ್ಣಪುಟ್ಟ ಗಾಯವಾಗಿದೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.
ದರ್ಗಾದ ಆವರಣದಲ್ಲಿ ಸಿಸಿ ಕ್ಯಾಮರ ಅಳವಡಿಸಿದ್ದು , ಕಟ್ಟಡಕ್ಕೆ ಹಾನಿಮಾಡಿದ ಕಿಡಿಗೇಡಿತನದ ದೃಶ್ಯ ಸಿಸಿ ಕ್ಯಾಮಾರದಲ್ಲಿ ಸೆರೆಯಾಗಿದೆ. ಪೊಲೀಸರು ಸಿಸಿ ಕ್ಯಾಮರ ಪರಿಶೀಲಿಸಿ ಕಿಡಿಗೇಡಿಗಳ ವಿರುದ್ಧ ಕಾನೂನು ಕ್ರಮವಹಿಸಬೇಕು, ದರ್ಗಾಕ್ಕೆ ಹೆಚ್ಚಿನ ಭದ್ರತೆ ಒದಗಿಸಬೇಕು, ತಪ್ಪಿದಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗುವುದು ಎಂದು ಮುಖಂಡರು ಎಚ್ಚರಿದ್ದಾರೆ.












Click it and Unblock the Notifications