Datta Jayanthi : ಚಿಕ್ಕಮಗಳೂರಿನಲ್ಲಿ ನವೆಂಬರ್ 28ರಿಂದ ಡಿ. 8ರವರೆಗೆ ದತ್ತ ಜಯಂತಿ ಕಾರ್ಯಕ್ರಮ, ಇಲ್ಲಿದೆ ವಿವರ
ಚಿಕ್ಕಮಗಳೂರು, ನವೆಂಬರ್, 25: ಚಿಕ್ಕಮಗಳೂರು ಜಿಲ್ಲೆಯಲ್ಲಿ ನವೆಂಬರ್ 28ರಿಂದ ಡಿಸೆಂಬರ್ 8ರವರೆಗೆ ದತ್ತಜಯಂತಿ ಕಾರ್ಯಕ್ರಮ ನಡೆಯಲಿದೆ. ನವೆಂಬರ್ 28ರಂದು ನಗರದ ಕಾಮಧೇನು ಗಣಪತಿ ದೇವಾಲಯದಲ್ಲಿ ದತ್ತಮಾಲಾಧಾರಣೆಗೆ ಚಾಲನೆ ನೀಡಲಾಗುವುದು ಎಂದು ಭಜರಂಗದಳದ ಪ್ರಾಂತ ಸಹ ಸಂಚಾಲಕ ರಘು ಸಕಲೇಶಪುರ ತಿಳಿಸಿದರು.
ಶುಕ್ರವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ 28ರಂದು ಬೆಳಗ್ಗೆ 9:15ಕ್ಕೆ ನಗರದ ಕಾಮಧೇನು ಗಣಪತಿ ದೇವಸ್ಥಾನದಲ್ಲಿ ಹೋಮ ಮತ್ತು ದತ್ತಮಾಲಾಧಾರಣೆಗೆ ಚಾಲನೆ ದೊರೆಯಲಿದೆ. ಇನ್ನು ಡಿಸೆಂಬರ್ 6ರಂದು ಅನಸೂಯ ಮಾತೆ ಪೂಜೆ ನಡೆಯಲಿದೆ. ಸಾವಿರಾರು ಮಹಿಳೆಯರು ಚಿಕ್ಕಮಗಳೂರು ನಗರದ ಬೋಳರಾಮೇಶ್ವರ ದೇವಸ್ಥಾನದಿಂದ ಐ.ಜಿ.ರಸ್ತೆ ಮಾರ್ಗವಾಗಿ ಪಾಲಿಟೆಕ್ನಿಕ್ ಕಾಲೇಜು ಆವರಣದವರೆಗೂ ಮೆರವಣಿಗೆ ನಡೆಸಲಿದ್ದಾರೆ. ನಂತರ ದತ್ತಪೀಠಕ್ಕೆ ತೆರಳಿ ದತ್ತಪಾದುಕೆ ಮತ್ತು ಅನುಸೂಯ ಮಾತೆಯ ಗದ್ದುಗೆ ದರ್ಶನ ಪಡೆಯುತ್ತಾರೆ ಎಂದು ತಿಳಿಸಿದರು.
ಚಿಕ್ಕಮಗಳೂರಿನ ದತ್ತಪೀಠಕ್ಕೆ ಆಡಳಿತ ಮಂಡಳಿ ರಚನೆ: ರಾಜ್ಯ ಸರ್ಕಾರದಿಂದ ಮಹತ್ವದ ಆದೇಶ
ಡಿ. 7ರಂದು ಬೃಹತ್ ಶೋಭಾಯಾತ್ರೆ
ಡಿಸೆಂಬರ್ 7ರಂದು ಚಿಕ್ಕಮಗಳೂರು ನಗರದಲ್ಲಿ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳದಿಂದ ಬೃಹತ್ ಶೋಭಾಯಾತ್ರೆಯನ್ನು ಹಮ್ಮಿಕೊಳ್ಳಲಾಗಿದೆ. ನಗರದ ಕಾಮಧೇನು ಗಣಪತಿ ದೇವಸ್ಥಾನದಿಂದ ಆರಂಭಗೊಳ್ಳುವ ಶೋಭಾಯಾತ್ರೆ ಪ್ರಮುಖ ರಸ್ತೆಗಳಲ್ಲಿ ಸಾಗಿ ಆಜಾದ್ ಪಾರ್ಕ್ ವೃತ್ತದಲ್ಲಿ ತಂಗಲಿದೆ.
ಶೋಭಾಯಾತ್ರೆಯಲ್ಲಿ 23ಕ್ಕೂ ಹೆಚ್ಚು ಕಲಾತಂಡಗಳು ಪಾಲ್ಗೊಳ್ಳಲಿದ್ದು, ಇದು ಮೆರವಣಿಗೆಯ ಮೆರಗನ್ನು ಹೆಚ್ಚಿಸಲಿದೆ. ಹಾಗೂ ಡಿಸೆಂಬರ್ 8ರಂದು ಗುರುವಾರ ದತ್ತಪೀಠಕ್ಕೆ ತೆರಳುವ ದತ್ತಭಕ್ತರು ದತ್ತಪಾದುಕೆ ಮತ್ತು ಅನಸೂಯ ದೇವಿಯ ದರ್ಶನ ಪಡೆದುಕೊಳ್ಳಲಿದ್ದಾರೆ. ದತ್ತಪೀಠದಲ್ಲಿ ಗಣಪತಿ ಹೋಮ, ದತ್ತಹೋಮ ಹಾಗೂ ಧಾರ್ಮಿಕ ಸಭೆ ನಡೆಯಲಿದೆ. ಹೋಮ ಪೂರ್ಣಾಹುತಿಯೊಂದಿಗೆ ದತ್ತಜಯಂತಿ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ ಎಂದರು.
ಇನ್ನು ದತ್ತಪೀಠಕ್ಕೆ ರಾಜ್ಯ ಸರ್ಕಾರ ವ್ಯವಸ್ಥಾಪನಾ ಸಮಿತಿ ರಚಿಸಿರುವುದು ಸ್ವಾಗತಾರ್ಹವಾಗಿದೆ. ಶೀಘ್ರವೇ ಹಿಂದೂ ಅರ್ಚಕರನ್ನು ನೇಮಿಸಬೇಕು. ದಶಕಗಳಿಂದ ವಿಶ್ವಹಿಂದೂ ಪರಿಷತ್ ಮತ್ತು ಭಜರಂಗದಳ ನಡೆಸಿದ ಹೋರಾಟಕ್ಕೆ ದೊರಕಿದ ಜಯ ಇದಾಗಿದೆ. ರಾಜ್ಯ ಸರ್ಕಾರ ತಕ್ಷಣ ಹಿಂದೂ ಅರ್ಚಕರನ್ನು ನೇಮಿಸಲು ಮುಂದಾಗಬೇಕು ಎಂದರು.
ಶಾಸಕ ಎಂ.ಪಿ.ಕುಮಾರಸ್ವಾಮಿ ಮೇಲೆ ಹಲ್ಲೆ ಆರೋಪ ತಳ್ಳಿ ಹಾಕಿದ ಪೊಲೀಸರು
ದತ್ತಪೀಠಕ್ಕೆ ಆಡಳಿತ ಮಂಡಳಿ ರಚನೆ
ಇನ್ನು ನವೆಂಬರ್ 18ರಂದು ಕರ್ನಾಟಕದ ಅಯೋಧ್ಯೆ ಎಂದೇ ಕರೆಸಿಕೊಳ್ಳುವ ಮೂಲಕ ವಿವಾದಿತ ಕೇಂದ್ರವೂ ಆಗಿದ್ದ ಚಿಕ್ಕಮಗಳೂರು ತಾಲೂಕಿನ ದತ್ತಪೀಠಕ್ಕೆ ಸರ್ಕಾರ ಆಡಳಿತ ಮಂಡಳಿ ರಚನೆ ಮಾಡಿ ಆದೇಶ ಹೊರಡಿಸಿತ್ತು. ದತ್ತಪೀಠಕ್ಕೆ ಅರ್ಚಕರ ನೇಮಕ ಕುರಿತಂತೆ ನಿರ್ಧಾರ ಮಾಡುವ ಅಧಿಕಾರ ಈ ಆಡಳಿತ ಮಂಡಳಿಗೆ ಇದೆ. ಆಡಳಿತ ಮಂಡಳಿಗೆ ಸದಸ್ಯರಾಗಲು 42 ಜನ ಅರ್ಜಿ ಸಲ್ಲಿಸಿದ್ದರು.
ಚಿಕ್ಕಮಗಳೂರು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿ ಅರ್ಜಿದಾರರ ಅರ್ಹತೆ, ಅನರ್ಹತೆ, ವಿದ್ಯಾಭ್ಯಾಸ, ವಿಳಾಸ ಸೇರಿದಂತೆ ಒಟ್ಟಾರೆ ಮಾಹಿತಿಯನ್ನು ಸಂಗ್ರಹಿಸಿದ್ದರು. ರಾಜ್ಯ ಸರ್ಕಾರ ಎಂಟು ಜನರ ಆಡಳಿತ ಮಂಡಳಿ ಸದಸ್ಯರನ್ನು ನೇಮಕ ಮಾಡಿತ್ತು. ಇಬ್ಬರು ಮಹಿಳೆಯರು, ಓರ್ವ ಮುಸ್ಲಿಂ ಸೇರಿದಂತೆ ಆಡಳಿತ ಮಂಡಳಿಯಲ್ಲಿ ಒಟ್ಟು ಎಂಟು ಜನ ಸದಸ್ಯರಿದ್ದಾರೆ.

ಈ ಸಮಿತಿ ಶೀಘ್ರದಲ್ಲೇ ಸಭೆ ಸೇರಿ ದತ್ತಪೀಠದಲ್ಲಿ ಪೂಜೆ ಹೇಗಿರಬೇಕು, ಅಲ್ಲಿನ ಆಡಳಿತ ವ್ಯವಸ್ಥೆ ಹೇಗಿರಬೇಕು, ಹಿಂದೂ-ಮುಸ್ಲಿಮರು ವಾರದಲ್ಲಿ ಯಾರು ಎಷ್ಟು ದಿನ ಪೂಜೆ ಮಾಡಬೇಕು. ಯಾರು ಮಾಡಬೇಕು ಎಂಬೆಲ್ಲಾ ಅಂಶಗಳ ಅಂತಿಮ ಪಟ್ಟಿಯನ್ನು ಸರ್ಕಾರಕ್ಕೆ ರವಾನಿಸಲಿದೆ ಎನ್ನುವ ಮಾಹಿತಿ ಹೊರಬಿದ್ದಿತ್ತು.
ಸರ್ಕಾರ ಆಡಳಿತ ಮಂಡಳಿ ಮನವಿಗೆ ಅಂಕಿತ ಹಾಕಿದರೆ ದತ್ತಪೀಠದಲ್ಲಿ ಇನ್ಮುಂದೆ ಹಿಂದೂ ಅರ್ಚಕರು ಪೂಜೆ ಮಾಡಲಿದ್ದಾರೆ. ಹಿಂದೂ ಅರ್ಚಕರ ನೇಮಕಕ್ಕೆ ಹಿಂದೂ ಸಂಘಟನೆಗಳ ದಶಕಗಳ ಹೋರಾಟಕ್ಕೆ ಫಲ ಸಿಕ್ಕಂತಾಗಲಿದೆ. ಕಳೆದ ಫೆಬ್ರವರಿಯಲ್ಲಿ ರಾಜ್ಯ ಸರ್ಕಾರದ ಸಚಿವ ಸಂಪುಟದ ಉಪಸಮಿತಿ ಕೂಡ ಚಿಕ್ಕಮಗಳೂರಿಗೆ ಭೇಟಿ ನೀಡಿತ್ತು. ಆಗ ಪೂಜಾ ಪದ್ಧತಿಯ ಬಗ್ಗೆ ಜನರ ಅಭಿಪ್ರಾಯವನ್ನು ಸಂಗ್ರಹಿಸಿ ಸರ್ಕಾರಕ್ಕೆ ವರದಿ ನೀಡಿತ್ತು. ಆ ವರದಿಯನ್ನು ಆಧರಿಸಿ ರಾಜ್ಯ ಸರ್ಕಾರ ದತ್ತಪೀಠದ ವಿಚಾರದಲ್ಲಿ ಮಹತ್ವದ ಆದೇಶವನ್ನು ಹೊರಡಿಸಿತ್ತು.
ದತ್ತಮಾಲೆ ಅಭಿಯಾನಕ್ಕೆ ಶಾಂತಿಯುತ ತೆರೆ
ಇತ್ತೀಚೆಗಷ್ಟೇ ದತ್ತಪಾದುಕೆ ದರ್ಶನ ಪಡೆಯುವ ಮೂಲಕ ಶ್ರೀರಾಮಸೇನೆ ದತ್ತಮಾಲೆ ಅಭಿಯಾನಕ್ಕೆ ಶಾಂತಿಯುತ ತೆರೆ ಬಿದ್ದಿತ್ತು. ದತ್ತಮಾಲೆ ಅಭಿಯಾನದ ಹಿನ್ನೆಲೆ ಶ್ರೀರಾಮಸೇನೆ ಕಾರ್ಯಕರ್ತರು ದತ್ತದೀಪೋತ್ಸವ, ಪಡಿಸಂಗ್ರಹ ಮತ್ತಿತರೆ ಧಾರ್ಮಿಕ ಕಾರ್ಯ ನಡೆಸಿ ನಗರದಲ್ಲಿ ಶೋಭಾಯಾತ್ರೆಯನ್ನು ನಡೆಸಿದ್ದರು. ಕಳೆದ ವರ್ಷ ನಿಷೇಧ ಹೇರಿದ್ದ ದತ್ತವಿಗ್ರಹವನ್ನು ಈ ಬಾರಿ ಶೋಭಾಯಾತ್ರೆಯಲ್ಲಿ ಕೊಂಡೊಯ್ಯಲು ಅವಕಾಶ ನೀಡಿದ್ದರಿಂದ ದತ್ತವಿಗ್ರಹದ ಮೆರವಣಿಗೆ ಎಂಜಿ ರಸ್ತೆಯಲ್ಲಿ ಸಾಗಿತ್ತು.
ರಾಜ್ಯದ ವಿವಿಧ ಜಿಲ್ಲೆಯಿಂದ ಬಂದಿದ್ದ ದತ್ತಮಾಲಾಧಾರಿಗಳು ಕೇಸರಿ ಧ್ವಜ, ಕೇಸರಿ ವಸ್ತ್ರ ಧರಿಸಿ ಘೋಷಣೆ ಕೂಗಿದ್ದರು. ಆಜಾದ್ ವೃತ್ತದಲ್ಲಿ ಶೋಭಾಯಾತ್ರೆ ಸಮಾಪನಗೊಂಡು ಅಲ್ಲಿಂದ ವಿವಿಧ ವಾಹನಗಳಲ್ಲಿ ಗಿರಿಯತ್ತ ಕಾರ್ಯಕರ್ತರು ಪ್ರಯಾಣ ಬೆಳೆಸಿದರು. ಸ್ವಾಮೀಜಿಗಳ ನೇತೃತ್ವದಲ್ಲಿ ದತ್ತಪಾದುಕೆಗಳಿಗೆ ಹೂಹಾಕಿ ಪೂಜೆ ಸಲ್ಲಿಸಲಾಗಿತ್ತು.
ಹೊರಾಂಗಣದಲ್ಲಿರುವ ತಾತ್ಕಾಲಿಕ ಮಂದಿರದಲ್ಲಿ ದತ್ತ ಹೋಮ, ಗಣಪತಿ ಹೋಮದ ಪೂರ್ಣಾಹುತಿ, ಸ್ವಾಮೀಜಿಗಳ ಸಮ್ಮುಖದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ದತ್ತಪೀಠವನ್ನು ಹಿಂದೂಗಳಿಗೆ ಒಪ್ಪಿಸಬೇಕು ಎಂಬ ಆಗ್ರಹ ಕೇಳಿಬಂದುತ್ತು. ಆದ್ದರಿಂದ ದತ್ತಪೀಠಕ್ಕೆ ಸರ್ಕಾರ ಆಡಳಿತ ಮಂಡಳಿ ರಚನೆ ಮಾಡಿ ಆದೇಶ ನೀಡಿತ್ತು.