ದತ್ತ ಜಯಂತಿಗೆ ದಿನಗಣನೆ: ಚಿಕ್ಕಮಗಳೂರಿನಲ್ಲಿ ದತ್ತ ಭಕ್ತರಿಂದ ಬೃಹತ್ ಬೈಕ್ ರ್ಯಾಲಿ
ಚಿಕ್ಕಮಗಳೂರು, ಡಿಸೆಂಬರ್ 22: ದತ್ತ ಜಯಂತಿಗೆ ದಿನಗಣನೆ ಆರಂಭವಾಗುತ್ತಿದ್ದಂತೆ ಚಿಕ್ಕಮಗಳೂರಿನಲ್ಲಿ ಕೇಸರಿ ಕಲರವ ಕಾಣತೊಡಗಿದೆ. ನಗರದಲ್ಲಿ ಇಂದು ನೂರಾರು ದತ್ತಭಕ್ತರು ಬೈಕ್ ರ್ಯಾಲಿ ಮಾಡುವ ಮೂಲಕ ದತ್ತಜಯಂತಿ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸಿದರು.
ಚಿಕ್ಕಮಗಳೂರು ನಗರದ ಶ್ರೀರಾಮ ದೇವಸ್ಥಾನದಿಂದ ಹೊರಟ ಬೈಕ್ ರ್ಯಾಲಿ ಜಾಲಿ ಫ್ರೆಂಡ್ ಸರ್ಕಲ್ ಮೂಲಕ ಬಸವನಹಳ್ಳಿ ಮುಖ್ಯ ರಸ್ತೆ ಹನುಮಂತಪ್ಪ ವೃತ್ತ ಎಂ.ಜಿ ರಸ್ತೆ ಬೇಲೂರು ರಸ್ತೆ ಐ.ಬಿ ಮೂಲಕ ಬೋಳರಾಮೇಶ್ವರ ದೇವಸ್ಥಾನ ಸರ್ಕಾರಿ ಬಸ್ ನಿಲ್ದಾಣದಿಂದ ಐ.ಜಿ ರಸ್ತೆಯಲ್ಲಿ ಸಾಗಿತು. ನೂರಾರು ಬೈಕ್‌ಗಳಲ್ಲಿ ಭಗವಾಧ್ವಜ ಹಿಡಿದು ದತ್ತ ಪೀಠ ನಮ್ಮದು ಎಂಬ ಘೋಷಣೆ ಕೂಗುತ್ತಾ ದತ್ತ ಭಕ್ತರು ತೆರಳಿದರು.

ವಿವಾದಿತ ಇನಾಂ ದತ್ತಾತ್ರೇಯ ಬಾಬಾ ಬುಡನ್ ಸ್ವಾಮಿ ದರ್ಗಾದಲ್ಲಿ ದತ್ತಜಯಂತಿ ಭಾನುವಾರದಿಂದ ಆರಂಭಗೊಳ್ಳಲಿದೆ. 300ಕ್ಕೂ ಅಧಿಕ ಬೈಕ್‌ನಲ್ಲಿ ದತ್ತ ಮಾಲಾಧಾರಿಗಳು ಸಾಗಿದ್ದರಿಂದ ಪೊಲೀಸ್ ಬಿಗಿ ಭದ್ರತೆಯಲ್ಲಿ ರ್ಯಾಲಿ ಸಾಗಿತು. ಚಿಕ್ಕಮಗಳೂರು ನಗರದಾದ್ಯಂತ ಸಂಚರಿಸಿದ ದತ್ತ ಭಕ್ತರು ಸಂಪೂರ್ಣ ಹಿಂದೂ ಪೀಠಕ್ಕಾಗಿ ಆಗ್ರಹಿಸಿ ಘೋಷಣೆ ಕೂಗಿದರು.
ವಿಶ್ವ ಹಿಂದೂ ಪರಿಷತ್, ಭಜರಂಗದಳ ನೇತೃತ್ವದಲ್ಲಿ ನಡೆಯುತ್ತಿರುವ ದತ್ತ ಜಯಂತಿಗೆ ಸಲಕ ಸಿದ್ದತೆ ನಡೆಯುತ್ತಿದ್ದು ನಗರ ಸಂಪೂರ್ಣ ಕೇಸರಿಮಯಗೊಳ್ಳುತ್ತಿದ್ದು ಪ್ರಮುಖ ಸರ್ಕಲ್‌ಗಳು ಭಗವಾಧ್ವಜದಿಂದ ಅಲಂಕೃತಗೊಳ್ಳುತ್ತಿವೆ. ಜಿಲ್ಲೆಯಲ್ಲಿ ಡಿಸೆಂಬರ್ 24 ರಿಂದ 3 ದಿನಗಳವರೆಗೆ ನಡೆಯಲಿರುವ ದತ್ತ ಜಯಂತಿಗೆ ಪೊಲೀಸ್ ಇಲಾಖೆ ಬಿಗಿ ಬಂದೋಬಸ್ತ್ ಆಯೋಜನೆ ಮಾಡಲಾಗಿದೆ.

ನಾಗೇನಹಳ್ಳಿ ದರ್ಗಾದಲ್ಲಿ ಶ್ರೀರಾಮ ಸೇನೆ ನೇತೃತ್ವದಲ್ಲಿ ದತ್ತಜಯಂತಿಗೆ ನಿರ್ಧಾರ - ಗಂಗಾಧರ್ ಕುಲಕರ್ಣಿ
ಚಿಕ್ಕಮಗಳೂರು ತಾಲೂಕಿನ ನಾಗೇನಹಳ್ಳಿ ಗ್ರಾಮದಲ್ಲಿರುವ ದರ್ಗಾದಲ್ಲಿ ಶ್ರೀರಾಮ ಸೇನೆ ನೇತೃತ್ವದಲ್ಲಿ ದತ್ತಜಯಂತಿಗೆ ಆಚರಣೆ ನಿರ್ಧಾರ ಮಾಡಿದ್ದೇವೆ ಎಂದು ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಗಂಗಾಧರ್ ಕುಲಕರ್ಣಿ ತಿಳಿಸಿದ್ದಾರೆ.
ಚಿಕ್ಕಮಗಳೂರಿನಲ್ಲಿ ಮಾತಾನಾಡಿದ ಅವರು ದತ್ತಪೀಠ ಬಿಟ್ಟು ಮತ್ತೊಂದೆಡೆ ದತ್ತಜಯಂತಿಗೆ ನಿರ್ಧಾರ ಮಾಡಿದ್ದೇವೆ, ಡಿಸೆಂಬರ್ 26ರಂದು ದತ್ತಜಯಂತಿ ಆಚರಣೆ ಮಾಡಲು ಶ್ರೀ ರಾಮಸೇನೆ ನಿರ್ಧಾರ ಮಾಡಿದೆ. ಮುಸ್ಲಿಮರು ನಮ್ಮ ದತ್ತಪೀಠದಲ್ಲಿ ಉರುಸ್ ಆಚರಣೆ ಮಾಡುತ್ತಾರೆ. ನಾವು ಅವರಂತೆ ನಾಗೇನಹಳ್ಳಿ ದರ್ಗಾದಲ್ಲಿ ದತ್ತಜಯಂತಿ ಆಚರಣೆ ಮಾಡುತ್ತೇವೆ ಎಂದರು.
ಇನ್ನು ದತ್ತಪೀಠದಲ್ಲಿ ಉರುಸ್ ಆಗುವುದಾದರೆ ನಾವು ನಾಗೇನಹಳ್ಳಿ ದರ್ಗಾದಲ್ಲಿ ಯಾಕೆ ಮಾಡಬರದು ಎಂದು ಪ್ರಶ್ನೆ ಮಾಡಿದ ಅವರು ನಾಗೇನಹಳ್ಳಿ ದರ್ಗಾದಲ್ಲಿ ಇದೇ ಮೊದಲ ಬಾರಿಗೆ ದತ್ತಜಯಂತಿ ಆಚರಣೆಗೆ ಪ್ಲಾನ್ ಮಾಡಿದ್ದೇವೆ ಎಂದರು. ಈ ಬಗ್ಗೆ ಇಂದು ಘೋಷಣೆ ಮಾಡಿದ್ದೇವೆ ಎಂದು ತಿಳಿಸಿದರು.












Click it and Unblock the Notifications