ಹಿರಿಯರ ಸ್ಥಾನಕ್ಕೆ ಗೌರವ ಕೊಡಬೇಕು: ಅನಂತ್ ಕುಮಾರ್ ಹೆಗಡೆ ಹೇಳಿಕೆ ವಿರುದ್ಧ ಸಿ.ಟಿ.ರವಿ ಅಸಮಾಧಾನ
ಚಿಕ್ಕಮಗಳೂರು, ಜನವರಿ 16: ಹಿರಿಯರು ಮತ್ತು ಅವರ ಸ್ಥಾನಕ್ಕೆ ಗೌರವ ಕೊಡಬೇಕು. ಯಾರೇ ಆದರೂ ಗೌರವವನ್ನು ಕೊಡಲೇಬೇಕು. ಅನಂತ್ ಕುಮಾರ್ ಹೆಗಡೆ ಕಾರ್ಯಶೈಲಿ ಭಿನ್ನವಿದೆ ಹಾಗೆಂದ ಮಾತ್ರಕ್ಕೆ ಇನ್ನೊಬ್ಬರ ಮನಸ್ಸಿಗೆ ನೋವುಂಟು ಮಾಡಬಾರದು ಎಂದು ಮಾಜಿ ಶಾಸಕ ಸಿ.ಟಿ.ರವಿ ಹೇಳಿದರು.
ಮಂಗಳವಾರ ನಗರದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಇಂತಹ ಹೇಳಿಕೆಗಳನ್ನು ನಾವು ಸಮರ್ಥಿಸುವುದಿಲ್ಲ. ಅನಂತ್ ಕುಮಾರ್ ಹೆಗಡೆ ಅವರು ಮುಖ್ಯಮಂತ್ರಿಗಳ ಬಗ್ಗೆ ಏಕವಚನದಲ್ಲಿ ಹೇಳಿಕೆ ನೀಡಿರುವುದನ್ನು ಒಪ್ಪಿಕೊಳ್ಳುವುದಿಲ್ಲ ಎಂದರು.

ಅನಂತ್ ಕುಮಾರ್ ಹೆಗಡೆ ಅವರು ನೀಡಿದ ಹೇಳಿಕೆ ಅವರ ಭಾವನೆ ಇರಬಹುದು. 42 ಸಾವಿರ ದೇವಾಲಯಗಳನ್ನು ಘಜನಿ, ಘೋರಿ, ಖಿಲ್ಜಿ, ಅವರಂಗಜೇಜ್ ಮೊಗಲ್ ಕಾಲಘಟ್ಟದಲ್ಲಿ, ದಕ್ಷಿಣದಲ್ಲಿ ಮಲ್ಲಿಖಾಫರ್ ದಾಳಿ ಸಂದರ್ಭದಲ್ಲಿ, ಆದಿಲ್ ಷಾಹಿ ಕಾಲಘಟ್ಟದಲ್ಲಿ ನಿಜಾಮರು, ಟಿಪ್ಪು ಸುಲ್ತಾನ್ ಆಳ್ವಿಕೆಯ ಸಂದರ್ಭದಲ್ಲಿ, ದೇವಾಲಯಗಳನ್ನು ಧ್ವಂಸ ಮಾಡಿ ಮಸೀದಿ ನಿರ್ಮಿಸಿರುವುದು ನಿಜ, ವಾಸ್ತವ ಸತ್ಯ.
ಭಾರತೀಯ ಮುಸ್ಲೀಮರು, ದಾಳಿಕೋರರ ಜೊತೆ ತಮ್ಮ ಅಸ್ಮಿತೆಯನ್ನು ಗುರುತಿಸಿಕೊಳ್ಳುವುದಿಲ್ಲ. ಭಾರತೀಯತೆಯ ಸನಾತನ ಪರಂಪರೆಯ ಮೇಲೆ ವಿಶ್ವಾಸವಿಟ್ಟು ಇಲ್ಲಿ ಉಳಿದುಕೊಂಡಿದ್ದಾರೆ ಎನ್ನುವ ವಿಶ್ವಾಸ ನನಗಿದೆ. ಅವರಿಗೂ ಮನ ಪರಿವರ್ತನೆ ದಿನ ಬರಬಹುದು. ಆಕ್ರಮಣ ಮಾಡಿ ಇನ್ನೊಬ್ಬರ ಮನಸ್ಸಿಗೆ ಘಾಸಿ ಮಾಡಿ ಕಟ್ಟಿದ ಮಂದಿರದಲ್ಲಿ ನಮಾಜ್ ಮಾಡಿದರೇ ಅದು ಹರಮ್ ಆಗುತ್ತದೆ ಎಂದು ಅನಿಸಬಹುದು. ಅಂದು ಅವರು ಉದಾರತೇಯನ್ನು ಪ್ರದರ್ಶನ ಮಾಡಬಹುದು ಎಂದರು.

ಇಲ್ಲಿ ಘಜನಿ, ಘೋರಿ ಮೊಗಲ್ ಜೊತೆ ಗುರುತಿಸಿಕೊಳ್ಳುವ ಮಾನಸಿಕತೆ ಅಪಾಯಕಾರಿ ಅದನ್ನು ನಾವು ಸಹಿಸಿಕೊಳ್ಳುವುದಿಲ್ಲ. ಅದರ ವಿರುದ್ಧ ನಮ್ಮ ಭಾವನೆಗಳು ಇವೆ. ಎಲ್ಲಾ ಮುಸ್ಲಿಮರನ್ನು ಒಂದೇ ತಕಡಿಯಲ್ಲಿಟ್ಟು ತೂಗುವುದಿಲ್ಲ. ಮುಸ್ಲಿಮರು ಘಜನಿ, ಘೋರಿ, ಬಾಬರ್ ಮಾನಸಿಕತೆಯಿಂದ ಹೊರಗೆ ಬರಬೇಕು. ಅವರಿಗೆ ಶಿಶುನಾಳ ಶರೀಪರು, ಎಪಿಜೆ ಅಬ್ದುಲ್ ಕಲಾಂ ಅಂತವರು ಆದರ್ಶ ಆಗಬೇಕು. ಆಗ ನಮ್ಮಲ್ಲಿ ಸಹೋದರತ್ವ ಭಾವನೆ ಗಟ್ಟಿಯಾಗುತ್ತದೆ ಎಂದರು.
ಯಾರಿಗೆ ಆಗಲಿ ಏಕವಚನದಲ್ಲಿ ಮಾತನಾಡುವುದನ್ನು, ಅಗೌರವ ತರುವುದನ್ನು ಒಪ್ಪಿಕೊಳ್ಳುವುದಿಲ್ಲ. ಅನಂತ್ ಕುಮಾರ್ ಹೆಗಡೆ ಅವರು ಹೀಗೆ ಹೇಳಿದರು ಎಂದು ಅವರನ್ನು ಟೀಕೆ ಮಾಡುವ ಭರದಲ್ಲಿ ಸಚಿವ ಶಿವರಾಜ್ ತಂಗಡಗಿ ಅವರು ನಾಯಿಗೆ ಹೋಲಿಸಿರುವುದು ಕೂಡ ತಪ್ಪೇ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನ ಮಂತ್ರಿ ಅವರನ್ನು ಏಕವಚನದಲ್ಲಿ ಮಾತನಾಡುವುದು, ಸರ್ಜಿಕಲ್ ಸ್ಟ್ರೈಕ್ ಅನ್ನು ಹೀಯಾಳಿಸಿದ್ದಾರೆ ಅದು ಕೂಡ ತಪ್ಪೇ. ಹಿರಿಯರಾಗಿ ಗೌರವ ನೀಡಬೇಕು ಆಗ ಉಳಿದವರಿಗೆ ಮಾದರಿಯಾಗುತ್ತದೆ ಎಂದರು.
ಇದೇ ವೇಳೆ ಅಯೋಧ್ಯೆಯಲ್ಲಿ ಶ್ರೀರಾಮಮಂದಿರ ಉದ್ಘಾಟನೆ ಹಿನ್ನಲೆಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರ ಕರೆ ಮೇರೆಗೆ ದೇವಾಲಯಗಳ ಸ್ವಚ್ಛತಾ ಕಾರ್ಯ ನಡೆಸುತ್ತಿದ್ದು ಮಂಗಳವಾರ ಹಿರೇಮಗಳೂರು ಶ್ರೀ ಕೋದಂಡ ರಾಮಚಂದ್ರ ಸ್ವಾಮಿ ದೇವಸ್ಥಾನದಲ್ಲಿ ಮಾಜಿ ಸಚಿವ ಸಿ.ಟಿ ರವಿ ಸ್ವಚ್ಛತೆ ಕಾರ್ಯಕೈಗೊಂಡರು. ಪ್ರಧಾನಿಯವರ ಆಶಯದಂತೆ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಕರೆ ನೀಡಿದರು.












Click it and Unblock the Notifications