ನಮ್ಮವರು ಜನಸಾಮಾನ್ಯರ ಜೊತೆ ಇದ್ದರೆ ಕಾಂಗ್ರೆಸಿಗರಿಗೆ ಹೊಟ್ಟೆಉರಿ: ಸಿ.ಟಿ.ರವಿ ಹೀಗೆ ಹೇಳಿದ್ದೇಕೆ?
ಚಿಕ್ಕಮಗಳೂರು, ಆಗಸ್ಟ್, 26: ಇಂದು ಬೆಂಗಳೂರಿಗೆ ಪ್ರಧಾನಿ ಮೋದಿ ಭೇಟಿ ವೇಳೆ ಬಿಜೆಪಿ ಶಾಸಕರು ಅವರನ್ನು ಸ್ವಾಗತಿಸಿದ್ದು, ಈ ಬಗ್ಗೆ ಟ್ವೀಟ್ ಮೂಲಕ ವ್ಯಂಗ್ಯವಾಡಿದ ಕಾಂಗ್ರೆಸ್ ನಾಯಕರಿಗೆ ಸಿ.ಟಿ.ರವಿ ಚಿಕ್ಕಮಗಳೂರಿನಲ್ಲಿ ತಿರುಗೇಟು ನೀಡಿದ್ದಾರೆ.
ಚಂದ್ರಯಾನ 140 ಕೋಟಿ ಜನರಿಗೆ ಸೇರಿದ್ದು ಎಂದು ಪ್ರಧಾನಿಯೇ ಹೇಳಿದ್ದಾರೆ. ದೇಶದ 140 ಕೋಟಿಯಲ್ಲಿ ಕಾಂಗ್ರೆಸ್ ಇದೆ ಎಂದು ಭಾವಿಸಿದ್ದೇನೆ. ಇಲ್ಲ ಎಂದುಕೊಂಡರೆ ಅದು ಅವರ ದುರ್ದೈವ. ಅವರು ಯಾಕೆ ನಾವಿಲ್ಲ ಎಂದುಕೊಳ್ಳುತ್ತಾರೆಯೋ, ಇದು ನನಗೆ ಅರ್ಥವಾಗದ ಸಂಗತಿ ಎಂದು ಚಿಕ್ಕಮಗಳೂರಿನಲ್ಲಿ ಹೇಳಿದ್ದಾರೆ.

ಜನಸಾಮಾನ್ಯರ ಜೊತೆ ಇರುವುದು ನಮಗೆ ಸಂತೋಷ ತರುವ ಸಂಗತಿ. ಆದರೆ ಕಾಂಗ್ರೆಸಿಗರಿಗೆ ಅಪರಾಧ ಅನಿಸುತ್ತದೆ. ಕಾಂಗ್ರೆಸಿಗರಿಗೆ ನಾವು ಜನಸಾಮಾನ್ಯರ ಜೊತೆ ಇದ್ದರೆ ಕೀಳಿರಿಮೆಯ ಭಾವನೆ ಬರುತ್ತದೆ ಎಂದು ತಿರುಗೇಟು ನೀಡಿದ್ದಾರೆ. ಹಾಗೆಯೇ ಚಂದ್ರಯಾನ-3 ಬಗ್ಗೆ ದೇಶವೇ ಸಂಭ್ರಮಿಸಿದೆ. ಇದು ಒಂದು ಪಕ್ಷಕ್ಕೆ ಸೀಮಿತವಾದುದ್ದಲ್ಲ ಎಂದು ಹೇಳಿದರು.
ಪ್ರಧಾನಿ ಮೋದಿ ಅವರು ವಿಜ್ಞಾನಿಗಳಿಗೆ ಅಭಿನಂದನೆ ಸಲ್ಲಿಸಲು ಬಂದಿದ್ದರು. ಈ ವೇಳೆ ನಮ್ಮವರು ಜನರ ಜೊತೆ ಇದ್ದು ಪ್ರಧಾನಿ ಅವರನ್ನು ಸ್ವಾಗತಿಸಿದ್ದಾರೆ ಎಂದರು. ಅಲ್ಲದೆ ಪ್ರಧಾನಿ ನೇತೃತ್ವದಲ್ಲಿ ಜಾಗತಿಕವಾಗಿ ಭಾರತಕ್ಕೆ ಗೌರವ ಸಿಗುತ್ತಿದೆ ಅಂತಾ ಹೇಳಿದರು.
ಬಿಜೆಪಿಗರು ಪಕ್ಷ ತೊರೆದು ಕಾಂಗ್ರೆಸ್ ಸೇರ್ಪಡೆಯ ಚರ್ಚೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಯಾರಾದರೂ ಪಕ್ಷ ತೊರೆದು ಬಂದರೆ ಹಿಂದಿನ ಬೆಂಚ್ ಎಂದು ಕಾಂಗ್ರೆಸ್ ಹೇಳಿದೆ. ಕಾಂಗ್ರೆಸ್ಸಿಗರು ಗೌರವದಿಂದ ಕರೆಯುತ್ತಿಲ್ಲ, ಗೌರವ ಇಲ್ಲದ ಜಾಗಕ್ಕೆ ಏಕೆ ಹೋಗಬೇಕು. ಯಾರೂ ಹೋಗಲ್ಲ ಅನ್ನುವು ನನ್ನ ನಂಬಿಕೆ. ಒಂದು ವೇಳೆ ಹೋದರೆ ನಾವು ಯಾವ ಪರಿಸ್ಥಿತಿಯನ್ನು ಬೇಕಾದರೂ ಎದುರಿಸುತ್ತೇವೆ ಎಂದರು.
ಸೋಮಶೇಖರ್, ಕೆಲವರು ನನ್ನನ್ನ ಕಳಿಸಲು ನೋಡುತ್ತಿದ್ದಾರೆ ಎಂದಿದ್ದಾರೆ. ನಾನು ಅದೇ ದಾಟಿಯಲ್ಲಿ ಉತ್ತರಿಸಿದರೆ, ಕಳಿಸುವುದಕ್ಕೆ ನೋಡುತ್ತಿದ್ದೇವೆ ಅನ್ನಿಸುತ್ತದೆ. ಆದರೆ ನಾವು ಯಾರನ್ನು ಕಳಿಸುವ ಪ್ರಯತ್ನ ಮಾಡುವುದಿಲ್ಲ. ಬದಲಾಗಿ ಉಳಿಸಿಕೊಳ್ಳಲು ಪ್ರಯತ್ನ ಮಾಡುತ್ತಿದ್ದೇನೆ. ಇದರ ಮೇಲೂ ಉಳಿಯೋದು-ಹೋಗೋದು ಅವರಿಗೆ ಬಿಟ್ಟದ್ದು ಎಂದರು.
ಇನ್ನು ಕಾಂಗ್ರೆಸ್ ನಾಯಕರನ್ನು ಕೆಲ ಬಿಜೆಪಿ ನಾಯಕರು ಭೇಟಿಯಾಗಿರುವ ವಿಚಾರಕ್ಕೆ ಪ್ರತಿಕ್ರಿಯಿಸಿ, ಅವರು ಯಾವ ಕಾರಣಕ್ಕೆ ಭೇಟಿ ಮಾಡಿದ್ದಾರೆಯೋ ಗೊತ್ತಿಲ್ಲ, ಅಪಾರ್ಥವಾಗುವ ರೀತಿಯಲೂ ಕಲ್ಪಿಸುವುದಿಲ್ಲ. ಯಾವುದೇ ಪರಿಸ್ಥಿತಿ ಎದುರಿಸಲು ಬಿಜೆಪಿ ಸಿದ್ಧವಾಗಿದೆ.ಕಾರ್ಯಕರ್ತರ ಬಲದ ಮೂಲಕ ಪಕ್ಷ ಕಟ್ಟಿದ್ದೇವೆ, ಕಾರ್ಯಕರ್ತರಿಂದಲೇ ಎಲ್ಲವನ್ನು ಎದುರಿಸುತ್ತೇವೆ ಎಂದರು.












Click it and Unblock the Notifications