ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ಡಿ.ಕೆ.ಶಿವಕುಮಾರ್ ಕೊತ್ವಾಲ್ ರಾಮಚಂದ್ರನ ಶಿಷ್ಯ ಎಂದ ಸಿ.ಟಿ.ರವಿ
ಚಿಕ್ಕಮಗಳೂರು, ಆಗಸ್ಟ್, 15: ಸಿ.ಟಿ.ರವಿ ಅವರಿಗೆ ಟ್ರೀಟ್ಮೆಂಟ್‌ನ ಅಗತ್ಯವಿದೆ ಎಂದು ಡಿ.ಕೆ.ಶಿವಕುಮಾರ್ ಹೇಳಿದ್ದರು. ಇದಕ್ಕೆ ಇಂದು ಚಿಕ್ಕಮಗಳೂರಿನಲ್ಲಿ ಪ್ರತಿಕ್ರಿಯಿಸಿದ ಸಿ.ಟಿ.ರವಿ, ನಾನು ಸಂಘದ ಸ್ವಯಂ ಸೇವಕ, ಅವರು ಕೊತ್ವಾಲ್ ರಾಮಚಂದ್ರನ ಶಿಷ್ಯ ಆಗಿದ್ದು, ಎಲ್ಲರಿಗೂ ಟ್ರೀಟ್ಮೆಂಟ್ ಕೊಡುತ್ತಾರೆ ಎಂದು ಹೇಳುವ ಮೂಲಕ ತಿರುಗೇಟು ನೀಡಿದ್ದಾರೆ.
ಅವರ ಕೊತ್ವಾಲ್ ಮಾದರಿ ಟ್ರೀಟ್ಮೆಂಟ್ ಅಂತಾ ನನಗೆ ಭಯ. ಅದಕ್ಕಾಗಿ ರಕ್ಷಣೆಗೆ ಮುಖ್ಯಮಂತ್ರಿಗಳಿಗೆ ಮನವಿ ಮಾಡುತ್ತೇನೆ. ನಾನೊಬ್ಬ ಸಾಮಾನ್ಯ ಕಾರ್ಯಕರ್ತ, ಅವರು ದೇಶದ ಶ್ರೀಮಂತ ಶಾಸಕ. ಅಲ್ಲದೆ ಬೆಂಗಳೂರು ಅಭಿವೃದ್ಧಿ, ಉಸ್ತುವಾರಿ, ನೀರಾವರಿ ಖಾತೆ ಎಲ್ಲಾ ಇದೆ ಎಂದರು.

ನಾನು ಸೋತಿದ್ದೀನಿ, ಅವರು ಗೆದ್ದಿದ್ದಾರೆ. ಅಧಿಕಾರ ಮದ ನಿರ್ಮಾಣ ಮಾಡುತ್ತದೆ. ಬಹುಶಃ, ಅಧಿಕಾರದ ಅಹಂ ಭಾವದಲ್ಲಿ ಎಲ್ಲರಿಗೂ ಟ್ರೀಟ್ಮೆಂಟ್ ಕೊಡುವ ಹುಮ್ಮಸ್ಸು ಬಂದಿರಬಹುದು. ಅದೇ ಹುಮ್ಮಸ್ಸಿನಿಂದಲೇ ನನಗೂ ಟ್ರೀಟ್ಮೆಂಟ್ ಕೊಡುವ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ ನಾನು ಸೋತಿರುವ ಸಾಮಾನ್ಯ ಕಾರ್ಯಕರ್ತನಾಗಿದ್ದು, ನನ್ನ ಟಾರ್ಗೆಟ್ ಮಾಡಿ ಸಿಎಂ ಆಗುವುದಕ್ಕೆ ಆಗಲ್ಲ. ನೀವು ಸಿಎಂ ಆಗುವುದಕ್ಕೆ ಬೇರೆಯವರನ್ನು ಟಾರ್ಗೆಟ್ ಮಾಡಬೇಕು ಎಂದು ವ್ಯಂಗ್ಯವಾಡಿದರು.
ಇತ್ತೀಚೆಗಷ್ಟೇ ಬಿಬಿಎಂಪಿ ಗುತ್ತಿಗೆದಾರರ ಬಿಲ್ ಪಾಸ್ ಮಾಡದೇ ಇರುವುದಕ್ಕೆ ಬಿಬಿಎಂಪಿ ಗುತ್ತಿಗೆದಾರ ಮಹೇಶ್ ಎಂಬುವವರು ಡಿ.ಕೆ.ಶಿವಕುಮಾರ್ ವಿರುದ್ಧ ಆರೋಪ ಮಾಡಿದ್ದರು. ಬಿಲ್ ಕ್ಲಿಯರ್ ಮಾಡುವಂತೆ ತಾವು ಡಿ.ಕೆ.ಶಿ ಅವರಲ್ಲಿ ಮನವಿ ಮಾಡಿದಾಗ ಅವರು, ಶೇಕಡಾ 15ರಷ್ಟು ಕಮಿಷನ್ ನೀಡುವಂತೆ ಒತ್ತಾಯಿಸಿದ್ದರು ಎಂದು ಹೇಳಿದ್ದರು. ಅಲ್ಲದೆ ಈ ಆರೋಪ ಸುಳ್ಳು ಎನ್ನುವುದಾದರೆ ಅವರು ತುಂಬಾ ನಂಬುವ ಅಜ್ಜಯ್ಯನ ಸನ್ನಿಧಾನಕ್ಕೆ ಬಂದು ದೇವರ ಮೇಲೆ ಪ್ರಮಾಣ ಮಾಡಲಿ ಎಂದು ಹೇಳಿದ್ದರು.
ಆದರೆ ಅಜ್ಜಯ್ಯನ ಸನ್ನಿಧಾನಕ್ಕೆ ಬಂದು ಪ್ರಮಾಣ ಮಾಡುವ ವಿಚಾರವನ್ನು ಡಿ.ಕೆ.ಶಿವಕುಮಾರ್ ತಳ್ಳಿಹಾಕಿದ್ದಲ್ಲದೆ, ಯಾವ ಬಿಲ್, ಯಾವ ಗುತ್ತಿಗೆದಾರ ನನಗೆ ಗೊತ್ತಿಲ್ಲ ಎಂದಿದ್ದರು. ಇದು ರಾಜ್ಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿತ್ತು. ಇನ್ನು ಈ ಬಗ್ಗೆ ವಿಪಕ್ಷಗಳ ನಾಯಕರು ಒಂದೊಂದು ರೀತಿಯ ಹೇಳಿಕೆ ನೀಡಿದ್ದರು.
ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಹೇಳಿಕೆ ನೀಡಿದ್ದ ಸಿ.ಟಿ.ರವಿ, ಕಮಿಷನ್ ಕೇಳಿಲ್ಲ ಎಂದಾದರೆ ಡಿ.ಕೆ.ಶಿವಕುಮಾರ್ ಅವರಿಗೆ ಅಜ್ಜಯ್ಯನ ಸನ್ನಿಧಾನಕ್ಕೆ ಹೋಗಿ ಪ್ರಮಾಣ ಮಾಡಲು ಅಡ್ಡಿಯೇನಿದೆ ಎಂದು ಕೇಳಿದ್ದರು. ಅಲ್ಲದೆ ಆ ರೀತಿ ಪ್ರಮಾಣ ಮಾಡುವ ಮೂಲಕ ತಾವು ಪರಿಶುದ್ಧರೆಂಬುದನ್ನು ಸಾಬೀತುಪಡಿಸಲಿ ಎಂಬರ್ಥದಲ್ಲಿ ಅವರು ಪ್ರತಿಕ್ರಿಯೆ ನೀಡಿದ್ದರು.












Click it and Unblock the Notifications