Breaking: ಚಿಕ್ಕಮಗಳೂರು ನಗರದಲ್ಲಿ ಗಾಂಜಾ ಗಿಡ ಪತ್ತೆ, ಪೊಲೀಸರಿಗೆ ಅಚ್ಚರಿ
ಚಿಕ್ಕಮಗಳೂರು, ಆಗಸ್ಟ್ 29: ಚಿಕ್ಕಮಗಳೂರು ನಗರದಲ್ಲಿ ಗಾಂಜಾ ಗಿಡಗಳು ಪತ್ತೆಯಾಗಿದೆ. ಬಾಳೆ ಗಿಡದ ನಡುವೆ ಗಾಂಜಾ ಗಿಡಗಳನ್ನು ನೋಡಿ ಪೊಲೀಸರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ನಗರದಲ್ಲಿಯೇ ಒಟ್ಟು 11 ಗಿಡಗಳನ್ನು ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದಿದ್ದು, ಸೈಟ್ ಮಾಲೀಕರ ವಿರುದ್ಧ ಕೇಸ್ ದಾಖಲಿಸಿದ್ದಾರೆ.
ಚಿಕ್ಕಮಗಳೂರು ನಗರದ ಗಾಂಧಿ ನಗರದಲ್ಲಿ ಬಾಳೆ ತೋಟದಲ್ಲಿ ಗಾಂಜಾ ಗಿಡಗಳು ಗುರುವಾರ ಪತ್ತೆಯಾಗಿದೆ. ಗಾಂಧಿ ನಗರದ 6ನೇ ಕ್ರಾಸ್‌ನ ಸೈಟ್ ಒಂದರಲ್ಲಿ ಸಿಲ್ವರ್ ಹಾಗೂ ಬಾಳೆಗಿಡಗಳ ನಡುವೆ ಗಾಂಜಾ ಗಿಡಗಳನ್ನು ಬೆಳೆಸಲಾಗಿತ್ತು.

ಖಚಿತವಾದ ಮಾಹಿತಿ ಆಧರಿಸಿ ಪೊಲೀಸರು, ಅಬಕಾರಿ ಅಧಿಕಾರಿಗಳು ಅಬಕಾರಿ ಉಪನಿರೀಕ್ಷಕರ ನೇತೃತ್ವದಲ್ಲಿ ದಾಳಿಯನ್ನು ನಡೆಸಿದರು. ಸೈಟಿನಲ್ಲಿ ಒಟ್ಟು 11 ಗಾಂಜಾ ಗಿಡಗಳು ಪತ್ತೆಯಾಗಿದ್ದು, ಒಟ್ಟು 450 ಗ್ರಾಂ ಹಸಿ ಗಾಂಜಾ ಗಿಡಗಳನ್ನು ವಶಕ್ಕೆ ಪಡೆಯಲಾಗಿದೆ.
ನಗರದೊಳಗೆ ತೋಟದಲ್ಲಿ ಗಾಂಜಾ ಗಿಡ ಬೆಳೆದ ಕುರಿತು ಪೊಲೀಸರು ಅಚ್ಚರಿ ವ್ಯಕ್ತಪಡಿಸಿದ್ದಾರೆ. ಅಕ್ಕಪಕ್ಕದವರಿಗೂ ಸಹ ದಾಳಿ ನಡೆದ ಬಳಿಕವೇ ಗಾಂಜಾ ಗಿಡ ಬೆಳೆಸಿರುವ ಮಾಹಿತಿ ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂರೆ ಸೈಟ್ ಮಾಲೀಕರ ವಿರುದ್ದ ಪ್ರಕರಣ ದಾಖಲು ಮಾಡಲಾಗಿದೆ.
ಹೈಕೋರ್ಟ್‌ಗೆ ಬಂದಿದ್ದ ಒಂದು ಪ್ರಕರಣ: ಚಿಕ್ಕಮಗಳೂರು ಜಿಲ್ಲೆಯಲ್ಲಿ ಕಾಫಿ ತೋಟದ ಮಧ್ಯೆ 8 ಗಾಂಜಾ ಗಿಡ ಬೆಳೆದಿದ್ದ ಪ್ರಕರಣವೊಂದು ಕೆಲವು ದಿನಗಳ ಹಿಂದೆ ಹೈಕೋರ್ಟ್‌ಗೆ ಬಂದಿತ್ತು. ಗಾಂಜಾ ಗಿಡ ಬೆಳೆದ ಆರೋಪದ ಮೇಲೆ ಬಂಧನಕ್ಕೊಳಗಾಗಿದ್ದ ಆರೋಪಿಗೆ ಹೈಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ಪೊಲೀಸರು 2024ರ ಮಾ.6ರಂದು ಆವತಿ ಹೋಬಳಿಯ ಕೆಳಹೋಲಗದ್ದೆ ಗ್ರಾಮದ ನಿವಾಸಿ ರಾಜೇಂದ್ರ ಎಂಬಾತನ ಕಾಫಿ ತೋಟದ ಮೇಲೆ ದಾಳಿ ಮಾಡಿದ್ದರು. ಆಗ ಮಾರಾಟ ಮಾಡುವ ಉದ್ದೇಶದಿಂದ ಕಾಫಿ ಗಿಡಗಳ ನಡುವೆ 8 ಗಾಂಜಾ ಗಿಡ ಬೆಳೆದಿರುವುದು ತಿಳಿದುಬಂದಿತ್ತು. 1 ಸಾವಿರ ರೂ. ಬೆಲೆಬಾಳುವ 100 ಗ್ರಾಂ ನಷ್ಟು ಗಾಂಜಾ ಗಿಡ, ಅದರ ಹಸಿ ಬೇರು, ಕಾಂಡಾ, ಕಡ್ಡಿ ಮತ್ತು ಸೊಪ್ಪು, ಹೂವು ಮೊಗ್ಗು ವಶಕ್ಕೆ ಪಡೆಯಲಾಗಿತ್ತು.
ಪೊಲೀಸರು ರಾಜೇಂದ್ರ ಬಂಧಿಸಿದ್ದರು. ಗಾಂಜಾ ಗಿಡ ಬೆಳೆಸಿಕೊಡುವಂತೆ ಹೇಳಿದ್ದ ಅದೇ ಗ್ರಾಮದ ಲಕ್ಷ್ಮಣ್ ಎಂಬಾತನನ್ನು ಪೊಲೀಸರು ಎರಡನೇ ಆರೋಪಿಯನ್ನಾಗಿಸಿದ್ದರು. ಜಾಮೀನು ಕೋರಿ ರಾಜೇಂದ್ರ ಹೈಕೋರ್ಟ್ ಮೊರೆ ಹೋಗಿದ್ದರು. ಕೋರ್ಟ್ ಜಾಮೀನು ಮಂಜೂರು ಮಾಡಿತ್ತು.
ಸ್ಮಶಾನದಲ್ಲಿ ಗಾಂಜಾ ಗಿಡ: ಎರಡು ದಿನಗಳ ಹಿಂದೆ ಬೆಂಗಳೂರು ನಗರದ ಯಲಹಂಕದಲ್ಲಿ ಸ್ಮಶಾನದಲ್ಲಿ ಗಾಂಜಾ ಗಿಡ ಬೆಳೆದಿದ್ದನ್ನು ಪೊಲೀಸರು ಪತ್ತೆ ಹಚ್ಚಿದ್ದರು. ಯಲಹಂಕ ಬಳಿಯ ಅಟ್ಟೂರು ಸ್ಮಶಾನದಲ್ಲಿ ಗಾಂಜಾ ಗಿಡಗಳನ್ನು ಬೆಳೆಸಲಾಗಿತ್ತು. ಪೊಲೀಸರು ದಾಳಿ ನಡೆಸಿ ಗಿಡಗಳನ್ನು ವಶಕ್ಕೆ ಪಡೆದುಕೊಂಡಿದ್ದರು. ಈ ಕುರಿತು ಪ್ರಕರಣ ದಾಖಲು ಮಾಡಿಕೊಂಡು ತನಿಖೆಯನ್ನು ಕೈಗೊಂಡಿದ್ದರು. ಸ್ಥಳೀಯ ಯುವಕರು ಸ್ಮಶಾನಕ್ಕೆ ಯಾರೂ ಬರುವುದಿಲ್ಲ ಎಂಬ ಕಾರಣಕ್ಕೆ ಇಲ್ಲಿ ಗಾಂಜಾ ಗಿಡಗಳನ್ನು ಬೆಳೆಸಿರುವ ಕುರಿತು ಪೊಲೀಸರು ಸಂಶಯ ವ್ಯಕ್ತಪಡಿಸಿದ್ದರು. ಸ್ಮಶಾನದಲ್ಲಿ ರೌಂಡ್ ಹಾಕಿದ ಸಿಬ್ಬಂದಿಗೆ ಹಲವಾರು ಗಾಂಜಾ ಗಿಡಗಳು ಕಂಡಿದ್ದವು.











Click it and Unblock the Notifications