ಬೆಳಗಾವಿಯಲ್ಲಿ ಎಂಇಎಸ್ ಜೊತೆ ಸೇರಿ ಕಾಂಗ್ರೆಸ್ ಕುತಂತ್ರ; ಶೋಭಾ ಕರಂದ್ಲಾಜೆ
ಚಿಕ್ಕಮಗಳೂರು, ಡಿಸೆಂಬರ್ 22: ಬಿಜೆಪಿ ಸರ್ಕಾರಕ್ಕೆ ಕೆಟ್ಟ ಹೆಸರು ತರಬೇಕು ಹಾಗೂ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ವಿಧಾನಸಭೆ ಅಧಿವೇಶನವನ್ನು ವಿಫಲ ಮಾಡಬೇಕು ಎಂಬ ಕಾರಣಕ್ಕೆ ಬೆಳಗಾವಿಯಲ್ಲಿ ಎಂಇಎಸ್ ಜೊತೆ ಕಾಂಗ್ರೆಸ್ ಸೇರಿಕೊಂಡಿದೆ ಎಂಬ ಅನುಮಾನ ಇದ್ದು, ಈ ಬಗ್ಗೆ ತನಿಖೆಯಾಗಬೇಕು ಎಂದು ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದರು.
ಬುಧವಾರ ಚಿಕ್ಕಮಗಳೂರು ನಗರದಲ್ಲಿ ನಗರಸಭೆ ಚುನಾವಣೆ ಹಿನ್ನೆಲೆ ಬಿಜೆಪಿ ಅಭ್ಯರ್ಥಿ ಪರ ಪ್ರಚಾರದ ಸಂದರ್ಭದಲ್ಲಿ ಮಾತನಾಡಿದ ಅವರು, ಕರ್ನಾಟಕದಲ್ಲಿ ಮರಾಠಿಗರು ಹಾಗೂ ಕನ್ನಡಿಗರು ಎಂಬ ಭೇದ ಭಾವ ಮಾಡಿಲ್ಲ. ಯಾವುದೇ ಯೋಜನೆಯನ್ನು ಕೊಡುವಾಗ ಕನ್ನಡಿಗರು, ಮರಾಠಿಗರು ಅಷ್ಟೇ ಅಲ್ಲ ಹಿಂದೂ, ಮುಸ್ಲೀಂ, ಕ್ರೈಸ್ತ ಸೇರಿದಂತೆ ಎಲ್ಲರಿಗೂ ಬಿಜೆಪಿ ಸರ್ಕಾರ ಏಕಪ್ರಕಾರದಲ್ಲಿ ಅನುದಾನ ನೀಡಲಾಗಿದೆ ಹಾಗೂ ಹಲವು ಯೋಜನೆಗಳನ್ನು ಸಹ ರೂಪಿಸಲಾಗಿದೆ ಎಂದರು.
ಬೆಳಗಾವಿ, ಬೀದರ್, ಚಿಕ್ಕೋಡಿ, ವಿಜಯಪುರದಲ್ಲಿರುವಂತಹ ಮರಾಠಿಗರಿಗೆ ಕರ್ನಾಟಕ ಸರ್ಕಾರ ಅನ್ಯಾಯ ಮಾಡಿಲ್ಲ. ಅವರನ್ನು ಒಂದೇ ತಾಯಿಯ ಮಕ್ಕಳಂತೆ ನೋಡಿದ್ದೇವೆ. ಆದರೆ ಅನವಶ್ಯಕವಾಗಿ ರಾಜಕೀಯ ಗಲಭೆ ಉಂಟುಮಾಡುವವರ ವಿರುದ್ಧ ನಾವು ಎಚ್ಚರಿಕೆಯಿಂದ ಇರಬೇಕು ಹಾಗೂ ಈ ಬಗ್ಗೆ ಉಗ್ರವಾದ ಕ್ರಮವನ್ನು ತಗೆದುಕೊಳ್ಳಬೇಕು. ಜೊತೆಗೆ ಆರೋಪಿಗಳ ವಿರುದ್ಧ ಗೂಂಡಾ ಕಾಯ್ದೆ ಅಡಿಯಲ್ಲಿ ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಿದ್ದು, ಇದ್ಯಾವುದು ಸಹ ದೇಶಕ್ಕೆ ಒಳಿತಲ್ಲ ನಾವೆಲ್ಲರೂ ಪರಸ್ಪರ ಅಣ್ಣ- ತಮ್ಮಂದಿರ ಬದುಕಬೇಕಾಗುತ್ತದೆ ಎಂದು ಹೇಳಿದರು.

ಮಹಾರಾಷ್ಟ್ರ ಸರ್ಕಾರ ಇದಕ್ಕೆ ಕುಮ್ಮಕ್ಕು ನೀಡಿದ ಸಲುವಾಗಿ ಈ ಘಟನೆಗಳು ನಡೆಯುತ್ತಿದೆ. ಉದ್ಧವ್ ಠಾಕ್ರೆ ಕೇವಲ ಮರಾಠಿಗರಿಗೆ ಮುಖ್ಯಮಂತ್ರಿ ಅಲ್ಲ, ಇಡೀ ಮಹಾರಾಷ್ಟ್ರಕ್ಕೆ ಮುಖ್ಯಮಂತ್ರಿ. ಈ ಹಿನ್ನೆಲೆಯಲ್ಲಿ ಅಕ್ಕಪಕ್ಕ ರಾಜ್ಯಗಳ ಜೊತೆಗೆ ಚೆನ್ನಾಗಿರುವುದು ಅವರ ಜವಾಬ್ದಾರಿ. ಆದರೆ ಅವರೇ ಅನವಶ್ಯಕವಾಗಿ ವಿಷ ಬೀಜ ಬಿತ್ತುವ ಹಾಗೂ ಷಡ್ಯಂತ್ರ ಮಾಡುತ್ತಿರುವುದು ಖಂಡನೀಯವಾಗಿದ್ದು, ಈ ಕುರಿತು ಕ್ಷಮೆಯಾಚಿಸಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಆಗ್ರಹಿಸಿದರು.
ವೋಟ್ ಬ್ಯಾಂಕ್‌ಗಾಗಿ ಕಾಂಗ್ರೆಸ್ ವಿರೋಧ
ಒಂದು ಜನಾಂಗ ಅಥವಾ ಒಂದು ಧರ್ಮೀಯರನ್ನು ಕೇವಲ ವೋಟ್ ಬ್ಯಾಂಕ್ ಮಾಡಿಕೊಳ್ಳುವ ಕಾರಣಕ್ಕೆ ಕಾಂಗ್ರೆಸ್ ಮತಾಂತರ ನಿಷೇಧ ಕಾಯ್ದೆಯನ್ನು ಉಲ್ಲಂಘಿಸುತ್ತಿದೆ. ವೋಟ್ ಬ್ಯಾಂಕ್ ಮೂಲಕ ಕುರ್ಚಿ ಹಿಡಿಯಬೇಕು, ದೇಶ ಏನಾದರೂ ಆಗಲಿ, ಸಮಾಜ ಏನಾದರೂ ಆಗಲಿ ಎಂಬ ಕಾಂಗ್ರೆಸ್‌ನ ಕೆಟ್ಟ ಮನಸ್ಥಿತಿಯಿಂದ ಮತಾಂತರ ನಿಷೇಧ ಕಾಯ್ದೆಯನ್ನು ಕಾಂಗ್ರೆಸ್ ನಾಯಕರು ವಿರೋಧಿಸುತ್ತಿದ್ದಾರೆ. ಕಾಂಗ್ರೆಸ್ ಈ ಕುರಿತು ಒಳಿತು, ಕೆಡುಕಿನ ಚರ್ಚೆ ಮಾಡಿ ಸಲಹೆ ನೀಡಬೇಕು. ಇದರ ಬದಲಾಗಿ ವಿರೋಧ ಮಾಡುತ್ತಿರುವುದು ಸಮಾಜಕ್ಕೆ ಮಾಡುತ್ತಿರುವ ದ್ರೋಹ ಎಂದರು.

ಯಾವುದೋ ಧರ್ಮದವರು ಸಮಾಜದ ಬಡತನ, ಇನ್ನಿತರ ಸಮಸ್ಯೆಗಳನ್ನು ದುರಪಯೋಗಪಡಿಸಿಕೊಂಡು, ಯುವತಿಯರನ್ನು ಮನ ಪರಿವರ್ತಿಸಿ ಲವ್ ಜಿಹಾದ್ ಹೆಸರಿನಲ್ಲಿ ಮತಾಂತರ ಮಾಡುತ್ತಿದ್ದರೆ ನಾವು ಸುಮ್ಮನೆ ಕೂರಲು ಸಾಧ್ಯವಿಲ್ಲ. ಈ ಕುರಿತು ಇನ್ನು ಕಠಿಣ ನಿಯಮಗಳನು ಅಳವಡಿಸಿಕೊಂಡು ಮತಾಂತರ ಕಾಯ್ದೆ ಜಾರಿ ಆಗಬೇಕು ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಒತ್ತಾಯಿಸಿದರು.












Click it and Unblock the Notifications