ವಿದ್ಯಾರ್ಥಿಗಳ ಜೊತೆಗೂಡಿ ಪುನೀತ್ ಸ್ಮರಿಸಿದ ಕಾಫಿನಾಡು ಚಂದು
ಚಿಕ್ಕಮಗಳೂರು, ಅಕ್ಟೋಬರ್, 28: ಚಿಕ್ಕಮಗಳೂರು ನಗರದ ಸುಭಾಷ್ ಚಂದ್ರ ಬೋಸ್ ಕ್ರೀಡಾಂಗಣದಲ್ಲಿ ಕೋಟಿಕಂಠ ಗಾಯನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಅಲ್ಲಿ ನೆರೆದಿದ್ದ ವಿದ್ಯಾರ್ಥಿಗಳು ಕಾಫಿನಾಡು ಚಂದು ಅವರನ್ನು ಅಭಿಮಾನದಿಂದ ಮುತ್ತಿಕೊಂಡಿದ್ದು, ವಿದ್ಯಾರ್ಥಿಗಳ ಅಭಿಮಾನಕ್ಕೆ ಕಾಫಿನಾಡು ಚಂದು ಕಣ್ಣೀರಿಟ್ಟಿದ್ದಾರೆ. ಚಂದುನನ್ನು ಮುತ್ತಿಕೊಂಡ ವಿದ್ಯಾರ್ಥಿಗಳನ್ನು ಸಂಭಾಳಿಸುವಲ್ಲಿ ಶಿಕ್ಷಕರು ಹೈರಾಣಾಗಿದ್ದಾರೆ.
ಭಾವುಕನಾದ ಕಾಫಿನಾಡು ಚಂದು
ಡಾ.ಪುನೀತ್ ರಾಜ್‌ಕುಮಾರ್ ಅಭಿನಯದ ಗಂಧದಗುಡಿ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಈ ಬಗ್ಗೆ ಚಿಕ್ಕಮಗಳೂರಿನಲ್ಲಿ ಕಾಫಿನಾಡ ಚಂದು ಮಾತನಾಡಿ, ಸಿನಿಮಾವನ್ನು ಎಲ್ಲರೂ ನೋಡಬೇಕು. ಪ್ರತಿಯೊಬ್ಬರು ಚಿತ್ರ ನೋಡಿ ಯಶಸ್ವಿಯಾಗುವಂತೆ ಮಾಡಬೇಕು. ನನಗೆ ಅಪ್ಪ ಅಮ್ಮ ಇಲ್ಲ, ಪುನೀತಣ್ಣ, ಶಿವಣ್ಣ ನನಗೆ ಅಪ್ಪ ಅಮ್ಮ ಇದ್ದಹಾಗೆ. ಓಂ ಸಿನಿಮಾ ಹೇಗೆ ಹೆಸರು ಮಾಡಿತ್ತೋ ಹಾಗೆಯೇ ಗಂಧದಗುಡಿ ಹೆಸರು ಮಾಡಲಿ ಎಂಬುದು ನಮ್ಮ ಆಶಯವಾಗಿದೆ. ಥಿಯೇಟರ್ ಹೊರಗೆ ಅಣ್ಣನ ಪೋಟೋವನ್ನು ಹಾಕಲು ಅವಕಾಶ ಕೊಡಲಿಲ್ಲ. ಬ್ಯಾನರ್ ಹಾಕಲು ಅವಕಾಶ ಕೊಡದಿದ್ದಕ್ಕೆ ಊಟ ಮಾಡಿಲ್ಲ ಎಂದು ಪುನೀತ್ ನೆನಪಿಸಿಕೊಂಡು ಕಾಫಿನಾಡು ಚಂದು ಭಾವುಕರಾಗಿದ್ದಾರೆ.
10 ನಿಮಿಷ ಚಿತ್ರ ಪ್ರದರ್ಶನ ಸ್ಥಗಿತ
ಇಂದು (ಅಕ್ಟೋಬರ್ 28)ಕ್ಕೆ ಬೆಳಗ್ಗೆ ಅಪ್ಪು ಅಭಿನಯದ ಗಂಧದಗುಡಿ ಸಿನಿಮಾ ರಾಜ್ಯಾದ್ಯಂತ ಬಿಡುಗಡೆ ಆಗಿದೆ. ಚಿಕ್ಕಮಗಳೂರಿನ ನಾಗಲಕ್ಷ್ಮಿ ಚಿತ್ರಮಂದಿರದಲ್ಲಿ 10 ನಿಮಿಷಕ್ಕೂ ಹೆಚ್ಚು ಕಾಲ ಚಿತ್ರ ಪ್ರದರ್ಶನ ಸ್ಥಗಿತವಾಗಿದೆ. ಅಭಿಮಾನಿಗಳು ಹೂವಿನ ಕುಂಡ, ಪಟಾಕಿ ಸಿಡಿಸಿದ್ದ ಕಾರಣ ಚಿತ್ರಮಂದಿರದಲ್ಲಿ ಹೊಗೆ ಆವರಿಸಿದೆ. ಈ ಹಿನ್ನೆಲೆ ಚಿತ್ರಪ್ರದರ್ಶನ ಸ್ಥಗಿತವಾಗಿದೆ ಎನ್ನಲಾಗಿದೆ.

ಚಿಕ್ಕಮಗಳೂರಿನ ಐಜಿ ರಸ್ತೆ ಯಲ್ಲಿರುವ ನಾಗಲಕ್ಷ್ಮಿ ಚಿತ್ರಮಂದಿರಕ್ಕೆ ಗಂಧದಗುಡಿ ಚಿತ್ರ ವೀಕ್ಷಿಸಲು ಮಹಿಳೆಯರು, ಮಕ್ಕಳು, ವಿದ್ಯಾರ್ಥಿಗಳು ಹಾಗೂ ಕುಟುಂಬಸ್ಥರು ಆಗಮಿಸಿದ್ದರು. ಈ ವೇಳೆ ಅಭಿಮಾನಿಗಳು ಹೂವಿನ ಕುಂಡ, ಪಟಾಕಿ ಸಿಡಿಸಿದ್ದಾರೆ. ಆದ ಕಾರಣ ಚಿತ್ರಮಂದಿರದಲ್ಲಿ ಹೊಗೆ ಆವರಿಸಿದ್ದು, ಚಿತ್ರಪ್ರದರ್ಶನವನ್ನು ಸ್ಥಗಿತಗೊಳಿಸಲಾಗಿದೆ. 10 ನಿಮಿಷದ ಬಳಿಕ ಸಿನಿಮಾ ಆರಂಭ ಮಾಡಲಾಗಿದೆ ಎಂದು ಅಲ್ಲಿನ ಮಾಲೀಕರು ಹೇಳುತ್ತಿದ್ದಾರೆ.












Click it and Unblock the Notifications