ಜಾತಿ ಕಾರಣಕ್ಕೆ ಪ್ರೀತಿಗೆ ಅಡ್ಡಿ: ಮದುವೆಯಾಗಿ ವಿಷ ಸೇವಿಸಿದ ಪ್ರೇಮಿಗಳು
ಚಿಕ್ಕಮಗಳೂರು, ಅಕ್ಟೋಬರ್ 02: ಎಂಟು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರೇಮಿಗಳ ವಿವಾಹಕ್ಕೆ ಪೋಷಕರು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆ ಪ್ರೇಮಿಗಳಿಬ್ಬರು ಆತ್ಮಹತ್ಯೆಗೆ ಶರಣಾಗಿರೋ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ.
ಮೃತರನ್ನ 25 ವರ್ಷದ ನೂತನ್ ಹಾಗೂ 22 ವರ್ಷದ ಅಪೂರ್ವ ಎಂದು ಗುರುತಿಸಲಾಗಿದೆ. ಆತ್ಮಹತ್ಯೆಗೂ ಮುನ್ನ ಇಬ್ಬರು ಮದುವೆಯಾಗಿ ನಂತರ ಆತ್ಮಹತ್ಯೆಗೆ ಶರಣಾಗಿದ್ದಾರೆಂದು ಹೇಳಲಾಗುತ್ತಿದೆ.
ನೂತನ್ ಒಕ್ಕಲಿಗ ಸಮುದಾಯಕ್ಕೆ ಸೇರಿದ್ದು, ಅಪೂರ್ವ ಬಿಲ್ಲವ ಜಾತಿಗೆ ಸೇರಿದ್ದವರಾಗಿದ್ದಾರೆ. ಇಬ್ಬರೂ ಬೇರೆ-ಬೇರೆ ಜಾತಿಯಾಗಿದ್ದರಿಂದ ಹೆತ್ತವರು ಇವರ ವಿವಾಹಕ್ಕೆ ವಿರೋಧ ವ್ಯಕ್ತಪಡಿಸಿದ್ದರು.

ನೂತನ್ ಮನೆ ಕಡೆ ಅನುಕೂಲಸ್ಥವಾಗಿದ್ದು, ಹತ್ತಾರು ಎಕರೆ ಕಾಫಿ ತೋಟವಿತ್ತು. ಆದರೆ, ಅಪೂರ್ವಳದ್ದು ಮಧ್ಯಮ ಕುಟುಂಬವಾಗಿದ್ದು ತಾಯಿ ಶಾಲೆಯಲ್ಲಿ ಅಡಿಗೆ ಕೆಲಸ ಮಾಡುತ್ತಿದ್ದರು.
ಇಬ್ಬರ ಮದುವೆಗೆ ಹೆತ್ತವರು ವಿರೋಧ ವ್ಯಕ್ತಪಡಿಸಿದ ಕಾರಣ ಎರಡು ದಿನಗಳ ಹಿಂದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ಕೂಡಲೇ ಅವರನ್ನ ಹೆಚ್ವಿನ ಚಿಕಿತ್ಸೆಗೆ ಮಂಗಳೂರಿಗೆ ದಾಖಲಿಸಿದ್ದರು. ಆದರೆ, ಚಿಕಿತ್ಸೆ ಫಲಕಾರಿಯಾಗದ ಕಾರಣ ಇಬ್ಬರೂ ಸಾವನ್ನಪ್ಪಿದ್ದಾರೆ. ಬಣಕಲ್ ಹಾಗೂ ಗೋಣಿಬೀಡು ಎರಡೂ ಠಾಣೆಯಲ್ಲೂ ಯುಡಿಆರ್ ಅಡಿಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿದೆ.












Click it and Unblock the Notifications