ಚಿಕ್ಕಮಗಳೂರಿನಲ್ಲಿ ಭಾರೀ ಮಳೆ:ಸಿಡಿಲು ಬಡಿದು ದಂಪತಿ ಬಲಿ
ಚಿಕ್ಕಮಗಳೂರು, ಏಪ್ರಿಲ್ 29:ಕಾಫಿನಾಡಲ್ಲಿ ಅರ್ಧ ಗಂಟೆಗಳ ಕಾಲ ಬಿಟ್ಟು-ಬಿಟ್ಟು ಸುರಿದ ಭಾರೀ ಮಳೆಗೆ ಜನಜೀವನ ಕಂಗಾಲಾದರೆ, ಇತ್ತ ಸಿಡಿಲು ಬಡಿದು ದಂಪತಿ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ತಾಲೂಕಿನ ತೇಗೂರು ಗ್ರಾಮದಲ್ಲಿ ನಡೆದಿದೆ.
ಮೃತರನ್ನು ಮಂಜುನಾಥ್ ಆಚಾರ್ (50) ಹಾಗೂ ಭಾರತಿ (43) ಎಂದು ಗುರುತಿಸಲಾಗಿದೆ. ಮೃತ ದಂಪತಿಗಳಿಬ್ಬರು ಬೆಳಗ್ಗೆಯಿಂದ ಸಂಜೆವರೆಗೆ ತೇಗೂರು ಬಳಿಯ ತಮ್ಮ ಜಮೀನಿನಲ್ಲಿ ಕೆಲಸ ಮಾಡಿ, ನಂತರ ಮಳೆ ಬರುತ್ತಿದ್ದರಿಂದ ಮೇಯಲು ಬಿಟ್ಟಿದ್ದ ಹಸುಗಳನ್ನ ಹೊಡೆದುಕೊಂಡು ಮನೆಗೆ ಬರುವಾಗ ತೇಗೂರು ಕೆರೆ ಏರಿ ಮೇಲೆ ಸಿಡಿಲು ಬಡಿದು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಸುರಿದ ಮಳೆಗೆ ಚಿಕ್ಕಮಗಳೂರಿಗರು ಹೈರಾಣಾಗಿದ್ದಾರೆ. 35-38 ಡಿಗ್ರಿ ಬಿಸಿಲಿನ ತಾಪಕ್ಕೆ ಬಸವಳಿದಿದ್ದ ಚಿಕ್ಕಮಗಳೂರು ಜನರು, ಭಾರೀ ಗುಡುಗು-ಸಿಡಿಲು ಸಮೇತ ಮಳೆ ಕಂಡು ಆತಂಕಕ್ಕೊಳಗಾದರು.

ತೋಟಗಾರಿಕೆ ಹಾಗೂ ಕೃಷಿ ಬೆಳೆಗೆ ಈಗ ಮಳೆಯ ಅಗತ್ಯವಿತ್ತು.ಹಾಗಾಗಿ, ಮಳೆ ಕಂಡ ಜನ ಹಾಗೂ ರೈತರು ಸಂತಸ ವ್ಯಕ್ತಪಡಿಸಿದ್ದಾರೆ.ಅಷ್ಟೇ ಅಲ್ಲ, ಈ ಮಳೆ ಹೀಗೆ ಬರಲೆಂದು ವರುಣದೇವನಲ್ಲಿ ಪ್ರಾರ್ಥಿಸಿಕೊಂಡಿದ್ದಾರೆ.












Click it and Unblock the Notifications