ಚಿಕ್ಕಮಗಳೂರು: ರಾಜ್ಯದಲ್ಲಿ 1 ಲಕ್ಷ ಜನರಿಗೆ ಜಾಗೃತಿ ಕಾರ್ಯಕ್ರಮ, ಯೋಜನೆಗಳ ವಿವರ ಇಲ್ಲಿದೆ
ಚಿಕ್ಕಮಗಳೂರು, ಜನವರಿ, 10: ಇಡೀ ರಾಜ್ಯದಲ್ಲಿ ಶುದ್ಧ ಜಲ ಅಭಿಯಾನ ಹಮ್ಮಿಕೊಂಡು 1 ಲಕ್ಷ ಜನರಿಗೆ ಜಾಗೃತಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆಯ ಸಮುದಾಯ ಅಭಿವೃದ್ಧಿ ವಿಭಾಗದ ಪ್ರಾದೇಶಿಕ ನಿರ್ದೇಶಕ ಆನಂದ್ ಸುವರ್ಣ ಚಿಕ್ಕಮಗಳೂರಿನಲ್ಲಿ ಹೇಳಿದರು.
ಮಂಗಳವಾರ ನಗರದ ಹೌಸಿಂಗ್ ಬೋರ್ಡ್ ಬಡಾವಣೆಯ ಸರ್ಕಾರಿ ಪ್ರೌಢ ಶಾಲೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಶುದ್ಧಜಲ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು ಶಾಲಾ ಮಕ್ಕಳು ಸಾಧ್ಯವಾದಷ್ಟು ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಬಳಸಿಕೊಳ್ಳಬೇಕು. ಅಶುದ್ಧವಾದ ನೀರು ಬಳಿಸಿದರೆ ಆರೋಗ್ಯ ಸಮಸ್ಯೆ ಎದುರಿಸಬೇಕಾಗುತ್ತದೆ ಎಂದರು.
ಒಂದು ಲೀಟರ್ ಹಾಲಿಗೆ 30 ರಿಂದ 50 ರೂಪಾಯಿ ಇದ್ದರೆ, ಒಂದು ಲೀಟರ್ ನೀರಿಗೆ 20 ರೂಪಾಯಿ ಕೊಡಬೇಕಿದೆ. ಆದರೆ ಶುದ್ಧ ಕುಡಿಯುವ ನೀರಿನ ಘಟಕಗಳಲ್ಲಿ 15 ಪೈಸೆಗೆ 1 ಲೀಟರ್ ನೀರು ಲಭಿಸುತ್ತದೆ. ಇದರ ಪ್ರಯೋಜನ ಪಡೆದರೆ ಆರೋಗ್ಯಕರ ಬದುಕು ಸಾಗಿಸಲು ಸಾಧ್ಯವಿದೆ ಎಂದರು.

ಪ್ಲಾಸ್ಟಿಕ್ ಬಳಕೆ ಕಡಿಮೆ ಆಗಬೇಕಿದೆ
ಅತಿಯಾಗಿ ಪ್ಲಾಸ್ಟಿಕ್ ಬಳಕೆ ಮಾಡುವುದನ್ನು ಬಿಡಬೇಕಿದೆ. ಪ್ಲಾಸ್ಟಿಕ್ ಅನ್ನು ಮಣ್ಣಿನಲ್ಲಿ ಹೂತರೂ ಮಣ್ಣು ಹಾಳಾಗುತ್ತದೆ. ರಾಶಿ ಹಾಕಿ ಬೆಂಕಿ ಹಾಕಿದರೆ ಗಾಳಿ ಹಾಗೂ ವಾತಾವರಣ ಹಾಳಾಗುತ್ತದೆ. ಆದ್ದರಿಂದ ಪ್ಲಾಸ್ಟಿಕ್ ಬಳಕೆಯನ್ನೇ ಕಡಿಮೆ ಮಾಡುವುದೇ ಉತ್ತಮ ಪರಿಹಾರ ಆಗಿದೆ. ಹಾಗೆಯೇ ಬಟ್ಟೆ ಬ್ಯಾಗ್‍ಗಳನ್ನು ಹೆಚ್ಚಾಗಿ ಬಳಸುವಂತಾಗಬೇಕು ಎಂದರು.
ನೀರನ್ನು ಮಿತವಾಗಿ ಬಳಸಲು ಮನವಿ
ನಗರಸಭಾ ಸದಸ್ಯೆ ಕವಿತಾ ಶೇಖರ್ ಮಾತನಾಡಿ, ನೀರು ಎಲ್ಲದಕ್ಕೂ ಅತ್ಯವಶ್ಯಕವಾಗಿದೆ. ನೀರನ್ನು ಮಿತವಾಗಿ ಬಳಸಬೇಕು. ಜೊತೆಗೆ ಶುದ್ಧ ನೀರನ್ನೇ ಬಳಸುವ ಮೂಲಕ ಆರೋಗ್ಯವನ್ನೂ ಕಾಪಾಡಿಕೊಳ್ಳಬೇಕು. ಈ ವಿಚಾರದಲ್ಲಿ ಜಾಗೃತಿ ಅಭಿಯಾನ ಹಮ್ಮಿಕೊಂಡಿರುವ ಧರ್ಮಸ್ಥಳ ಶ್ರೀ ವೀರೇಂದ್ರ ಹೆಗ್ಡೆ ಅವರ ಕಾರ್ಯ ಶ್ಲಾಘನೀಯವಾಗಿದೆ ಎಂದು ತಿಳಿಸಿದರು. ಇನ್ನು ಚಿಕ್ಕಮಗಳೂರು ನಗರದಲ್ಲಿ ನಮ್ಮ ವಾರ್ಡ್‍ನಲ್ಲೇ ಮೊದಲ ಶುದ್ಧ ಗಂಗಾ ಘಟಕ ಸ್ಥಾಪಿಸಿದ ಹೆಮ್ಮೆ ನಮಗಿದೆ. ಲೋಕಸಭಾ ಸದಸ್ಯರಾದ ವೆಂಕಯ್ಯ ನಾಯ್ಡು ಅವರು ಅದಕ್ಕೆ ಅನುದಾನ ಕೊಟ್ಟಿದ್ದರು. ಘಟಕ ಸ್ಥಾಪಿಸಿದ ನಂತರ ನಿರಂತರವಾಗಿ ಅದರ ನಿರ್ವಹಣೆ ಬಗ್ಗೆ ಗಮನಹರಿಸುತ್ತಾ ಬಂದಿದ್ದೇವೆ. ಸಾರ್ವಜನಿಕರಿಗೆ ಹಲವು ವರ್ಷಗಳಿಂದ ಶುದ್ಧ ಕುಡಿಯುವ ನೀರು ಲಭಿಸುತ್ತಿದೆ ಎಂದರು.
ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಭಾರತಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಕಳಸಪ್ಪ ಪೂಜಾರಿ, ಶಿವಾನಂದಾಚಾರಿ, ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮುಖ್ಯ ಶಿಕ್ಷಕ ಶ್ರೀನಿವಾಸ್, ಡಾ.ಅನಿಲ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.












Click it and Unblock the Notifications