Chikkamagaluru: ಈದ್ ಮಿಲಾದ್ ಡಿಜೆ ವಿಚಾರಕ್ಕೆ 2 ಗುಂಪುಗಳ ಮಧ್ಯೆ ಮತ್ತೆ ಗಲಾಟೆ- ಮಳೆ ಅಬ್ಬರಕ್ಕೆ ಕಾಫಿನಾಡು ತತ್ತರ!
ಚಿಕ್ಕಮಗಳೂರು ಅಕ್ಟೋಬರ್ 16: ಈದ್ ಮಿಲಾದ್ ಮುಗಿದು ತಿಂಗಳಾದರೂ ಚಿಕ್ಕಮಗಳೂರಿನಲ್ಲಿ ಗುಂಪು ಗಲಾಟೆ ಮುಗಿಯುವ ಲಕ್ಷಣಗಳು ಕಾಣಿಸುತ್ತಿಲ್ಲ. ಈದ್ ಮಿಲಾದ್ ವೇಳೆ ಡಿಜೆ ವಿಚಾರಕ್ಕೆ 2 ಗುಂಪುಗಳ ಮಧ್ಯೆ ಗಲಾಟೆ ನಡೆದಿತ್ತು. ಆ ಗಲಾಟೆ ಮತ್ತೆ ಶುರುವಾಗಿದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
ಚಿಕ್ಕಮಗಳೂರು ನಗರದ ಆಕ್ಸಾ ಮಸೀದಿ ಬಳಿ ಗುಂಪುಗಳ ನಡುವೆ ಗಲಾಟೆ ನಡೆದಿರುವ ವರದಿಯಾಗಿದೆ. ಈದ್ ಮಿಲಾದ್ ವೇಳೆ ಡಿಜೆ ಬಳಸುವ ವಿಚಾರಕ್ಕೆ ಶುರುವಾಗಿದ್ದ ಕಿರಿಕ್ ಮತ್ತೆ ತಲೆ ಎತ್ತಿದೆ. ಒಂದು ಗುಂಪು ಡಿಜೆ ಬೇಕೆಂದು, ಮತ್ತೊಂದು ಗುಂಪು ಡಿಜೆ ಬೇಡವೆಂದು ಗಲಾಟೆ ಮಾಡಿಕೊಂಡ ದೃಶ್ಯ ಸಿಸಿ ಟಿವಿಯಲ್ಲಿ ಸೆರೆಯಾಗಿದೆ.

ಇದೇ ವಿಚಾರವನ್ನು ಇತ್ಯಾರ್ಥಗೊಳಿಸಲು ಮೀಟಿಂಗ್ ನಡೆಸಲಾಗಿತ್ತು. ಈ ವೇಳೆ 2 ಗುಂಪುಗಳ ಮಧ್ಯೆ ಮತ್ತೆ ಮಾರಾಮಾರಿ ನಡೆದಿದೆ. ಗುಂಪು ಘರ್ಷಣೆ ವೇಳೆ ಜಮೀಲ್ ಮೇಲೆ ಮತ್ತೊಂದು ಗುಂಪು ಹಲ್ಲೆ ಮಾಡಿದೆ. ಜಮೀಲ್ ಮೇಲಿನ ಹಲ್ಲೆ ಖಂಡಿಸಿ ಚಿಕ್ಕಮಗಳೂರು ನಗರದ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಈ ಘಟನೆ ನಡೆದು ತಿಂಗಳಾದರೂ ಆರೋಪಿಗಳನ್ನ ಬಂಧಿಸಿಲ್ಲವೆಂದು ಮಹಿಳೆಯರು ಪ್ರತಿಭಟನೆ ಮಾಡಿದರು. ಮಳೆ ಮಧ್ಯೆಯೇ ನಗರ ಠಾಣೆ ಎದುರು ಜಮೀಲ್ ಪರ ಮಹಿಳೆಯರು ಪ್ರತಿಭಟನೆ ಮಾಡಿದ ದೃಶ್ಯ ಕಂಡು ಬಂದಿದೆ. ಈ ಹಿಂದೆ ಈದ್ ಮಿಲಾದ್ ವೇಳೆ ಗಲಾಟೆ ನಡೆದ ಸಂದರ್ಭದಲ್ಲಿ ರಾಹಿಲ್, ವಾರೀಸ್, ಮುಬಾರಕ್, ಕೈಫ್ ಎಂಬುವವರ ವಿರುದ್ಧ ಪ್ರಕರಣ ದಾಖಲಾಗಿತ್ತು. ತಿಂಗಳಾದರೂ ಆರೋಪಿಗಳನ್ನ ಬಂಧಿಸಿಲ್ಲವೆಂದು ಮಳೆ ಮಧ್ಯೆಯೇ ಮಹಿಳೆಯರು ಪ್ರತಿಭಟನೆ ಮಾಡಿ ಜಮೀಲ್ ಮೇಲೆ ಹಲ್ಲೆಗೈದವರ ಬಂಧಿಸುವಂತೆ ಆಗ್ರಹಿಸಿದ್ದಾರೆ. ಡಿವೈಎಸ್ಪಿ ಮನವೋಲಿಕೆ ಬಳಿಕ ಮಹಿಳೆಯರು ಪ್ರತಿಭಟನೆ ಕೈ ಬಿಟ್ಟಿದ್ದಾರೆ.
ಇತ್ತ ಈ ಈದ್ ಮಿಲಾದ್ ಗಲಾಟೆ ರಾಜಕೀಯ ಸ್ವರೂಪ ಪಡೆದಿರೋ ಆರೋಪ ಕೇಳಿ ಬಂದಿದೆ. ಈ ಘಟನೆಯಿಂದ ಕಾಂಗ್ರೆಸ್ ವರ್ಸಸ್ ಎಸ್.ಡಿ.ಪಿ.ಐ. ಮಧ್ಯೆ ಕೋಲ್ಡ್ ವಾರ್ ಶುರುವಾಗಿದ್ದು ಮತ್ತೆ ಗುಂಪು ಗಲಾಟೆ ನಡೆಯುವ ಲಕ್ಷಣಗಳು ಹೆಚ್ಚಾಗಿವೆ.
ಕಾಫಿನಾಡಲ್ಲಿ ಮುಂದುವರಿದ ಮಳೆ ಅಬ್ಬರ
ಕಾಫಿನಾಡು ಚಿಕ್ಕಮಗಳೂರಿನಲ್ಲಿ ಮಳೆ ಅಬ್ಬರ ಮುಂದುವರಿದಿದೆ. ಭಾರೀ ಮಳೆಗೆ ಮನೆ ಮುಂದೆಯೇ ಭೂಮಿ ಕುಸಿದು ಬಿದ್ದಿದೆ. ಭೂಮಿ ಕುಸಿದಿದ್ದರಿಂದ ಮನೆಯ ಗೋಡೆಗಳಲ್ಲಿ ಬಿರುಕು ಕಾಣಿಸಿಕೊಂಡಿದೆ. ಕೊಪ್ಪ ತಾಲೂಕಿನ ಗುಡ್ಡೆತೋಟ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಲೀಲಾ ಎಂಬ ಅಂಗವಿಕಲೆಗೆ ಸೇರಿದ ಮನೆ ಮುಂದೆ ಭೂಮಿ ಕುಸಿದು ಮನೆ ಗೋಡೆ ಬಿರುಕುಬಿಟ್ಟಿದೆ.
ಅಂಗವಿಕಲ ಮಹಿಳೆ ಪತಿ ಸಾವನ್ನಪ್ಪಿದ ಬಳಿಕ ಏಕಾಂಗಿಯಾಗಿ ಬದುಕುತ್ತಿದ್ದಾರೆ. ಇತ್ತ ಮನೆ ಬಿದ್ದು 2 ದಿನವಾದರೂ ಸ್ಥಳಕ್ಕೆ ಅಧಿಕಾರಿಗಳು ಭೇಟಿ ನೀಡಿಲ್ಲ. ಮತ್ತಷ್ಟು ಧರೆ ಕುಸಿದರೆ ಇಡೀ ಮನೆಯೇ ಬಿದ್ದುಹೋಗೋ ಸಾಧ್ಯತೆ ಇದ್ದು ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.












Click it and Unblock the Notifications