ಚಿಕ್ಕಮಗಳೂರು: ಒಂದು ತಿಂಗಳಿಗೆ 10 ಲಕ್ಷ ರೂ ವಿದ್ಯುತ್ ಬಿಲ್, ಮಾಲೀಕ ಫುಲ್ ಶಾಕ್
ಚಿಕ್ಕಮಗಳೂರು, ಸೆಪ್ಟೆಂಬರ್ 11: ಆಗಸ್ಟ್ 1ರಿಂದ ಸೆಪ್ಟೆಂಬರ್ 1ರವರೆಗೆ ಒಂದು ತಿಂಗಳ ಕರೆಂಟ್ ಬಿಲ್ 10 ಲಕ್ಷ ರೂಪಾಯಿ ಬಂದಿರುವುದನ್ನು ಕಂಡು ಅಂಗಡಿ ಮಾಲೀಕ ಶಾಕ್ ಆಗಿರುವ ಘಟನೆ ಜಿಲ್ಲೆಯ ಕಡೂರು ಪಟ್ಟಣದಲ್ಲಿ ನಡೆದಿದೆ.
ಕಡೂರು ಪಟ್ಟಣದ ಉಳುಕಿನಕಲ್ಲು ಸಮೀಪದ ಡಾಗಾ ಕಾಂಪ್ಲೆಕ್ಸ್‌ನಲ್ಲಿನ ಮೋಹಿತ್ ಏಜೆನ್ಸಿಗೆ ಆಗಸ್ಟ್ ತಿಂಗಳ ವಿದ್ಯುತ್ ಬಿಲ್ 10,26,054 ರೂಪಾಯಿ ಬಂದಿದೆ. ಪ್ರತಿ ತಿಂಗಳು ವಿದ್ಯುತ್ ಬಿಲ್ ಅಂದಾಜು 4,000 ಸಾವಿರದಿಂದ 4,500 ರೂಗಳು ಮಾತ್ರ ಬರುತ್ತಿತ್ತು. ಆಗಸ್ಟ್ ತಿಂಗಳ ಬಿಲ್ ಏಕಾಏಕಿ 10 ಲಕ್ಷ ಬಂದಿದೆ.

ಬಿಲ್ ಅವಧಿ 1/8/2023 ರಿಂದ 1/9/23ರವರೆಗೆ ಎಂದು ನಮೂದಿಸಲಾಗಿದೆ. ಬಿಲ್ ನಂ.259 ಆಗಿದ್ದು 8,35,737 ಬಿಲ್ ಎಫ್‍ಪಿಪಿಎಸಿ (1.16) ಟ್ಯಾಕ್ಸ್ 0.9% (75,216.33 ರೂಗಳು) ಒಟ್ಟು 10,260,54 ರೂ ಬಿಲ್ ಅನ್ನು ನೀಡಲಾಗಿದೆ.
ಈ ಹಿಂದೆ ವಿದ್ಯುತ್ ಬಿಲ್ ಅನ್ನು ಸಮಯಕ್ಕೆ ಸರಿಯಾಗಿ ಪಾವತಿಸುತ್ತಾ ಬಂದಿದ್ದೇವೆ. ಯಾವ ತಿಂಗಳು ಕೂಡ ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡಿಲ್ಲ. ಆದರೆ, ಈ ತಿಂಗಳು 10 ಲಕ್ಷ ರೂಪಾಯಿ ಬಿಲ್ ಬಂದಿದೆ ಎಂದು ಮೋಹಿತ್ ಏಜೆನ್ಸಿ ಮಾಲೀಕ ತಿಳಿಸಿದ್ದು. ಈಗಾಗಲೇ ಕಡೂರು ಮೆಸ್ಕಾಂ ಅಧಿಕಾರಿಗಳನ್ನು ಸಂಪರ್ಕಿಸಿದ್ದಾರೆ. ಬಿಲ್ ಪರಿಶೀಲಿಸಿದ ಕಡೂರು ಮೆಸ್ಕಾಂ ಸಿಬ್ಬಂದಿ ಇದನ್ನು ಸರಿ ಮಾಡಿಕೊಡುತ್ತೇವೆ ಎಂದು ಭರವಸೆ ನೀಡಿದ್ದಾರೆ.

ಮೆಸ್ಕಾಂ ಸಿಬ್ಬಂದಿ ಈ ಬಗ್ಗೆ ಹೇಳಿ 4 ದಿನವಾದರೂ ಈವರೆಗೂ ಯಾವುದೇ ಮಾಹಿತಿ ನೀಡಿಲ್ಲ ಎಂದು ಅಂಗಡಿ ಮಾಲೀಕ ಕಮಲ್ ಚಂದ್ ಡಾಗಾ ಹಾಗೂ ಮೊಹಿತ್ ಡಾಗಾ, ಮೆಸ್ಕಾಂ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. 500 ರೂಪಾಯಿ ಬರುವ ಜಾಗದಲ್ಲಿ 15 ಸಾವಿರ ಬಂದಿದೆ. ಇದು ಸಾಫ್ಟ್‍ವೇರ್ ಪ್ರಾಬ್ಲಂ. ಈ ಬಗ್ಗೆ ಪರಿಶೀಲನೆ ನಡೆಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಮೆಸ್ಕಾಂ ಸಿಬ್ಬಂದಿ ತಿಳಿಸಿದ್ದಾರೆ.
ಮಂಗಳೂರಿನ ಮನೆಯೊಂದಕ್ಕೆ 7 ಲಕ್ಷ ರೂ ವಿದ್ಯುತ್ ಬಿಲ್
ಇನ್ನು ಈ ಹಿಂದೆ ಮಂಗಳೂರಿನ ಉಳ್ಳಾಲದ ವ್ಯಕ್ತಿಯೊಬ್ಬರ ಮನೆಗೆ ಒಂದಲ್ಲ ಎರಡಲ್ಲ ಬರೋಬ್ಬರಿ 7 ಲಕ್ಷ ರೂಪಾಯಿ ವಿದ್ಯುತ್ ಬಿಲ್ ಬಂದಿತ್ತು. ಉಳ್ಳಾಲ ಬೈಲ್ ನಿವಾಸಿ ಸದಾಶಿವ ಆಚಾರ್ಯ ಎನ್ನುವವರ ಮನೆಗೆ 7,71,072 ರೂಪಾಯಿ ವಿದ್ಯುತ್ ಬಿಲ್ ಬಂದಿತ್ತು. ಕೂಡಲೇ ಅವರು ಮಾಹಿತಿ ಕಲೆ ಹಾಕಿ ಮನೆಯಲ್ಲಿ ಕೇವಲ 99,338 ಯೂನಿಟ್ ವಿದ್ಯುತ್ ಖರ್ಚಾಗಿದೆ, ಪ್ರತಿ ತಿಂಗಳು ಮೂರು ಸಾವಿರದಷ್ಟು ಬಿಲ್ ಬರುತ್ತಿತ್ತು ಎಂದು ಮೆಸ್ಕಾಂ ಕಚೇರಿಗೆ ದೂರು ನೀಡಿದ್ದರು. ದೂರಿನ ಮೇರೆಗೆ ಪರಿಶೀಲನೆ ನಡೆಸಿದ ಮೆಸ್ಕಾಂ ಸಿಬ್ಬಂದಿ ಬಳಿಕ 2,833 ರೂಪಾಯಿಗಳ ಪರಿಷ್ಕೃತ ಬಿಲ್ ತಲುಪಿಸಿದ್ದರು.












Click it and Unblock the Notifications