ಚಿಕ್ಕಮಗಳೂರಿನಲ್ಲಿ ಭೀಕರ ಚಿರತೆ ದಾಳಿ: 31 ಕುರಿ, ಮೇಕೆಗಳು ಬಲಿ
ಚಿಕ್ಕಮಗಳೂರು, ಡಿಸೆಂಬರ್ 16: ಚಿಕ್ಕಮಗಳೂರು ಜಿಲ್ಲೆಯಲ್ಲಿ ವನ್ಯ ಜೀವಿಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇದೆ. ಈ ವರೆಗೂ ಕಾಡಾನೆಗಳು ತೋಟ ನಾಶ, ತೋಟಗಳ ಕಾರ್ಮಿಕರ ಸಾವಿಗೆ ಕಾರಣವಾಗುತ್ತಿದ್ದರೆ, ಇದರ ಜೊತೆಗೆ ಈಗ ಚಿರತೆಗಳ ಕಾಟವು ಹೆಚ್ಚಾಗುತ್ತಿದೆ.
ಚಿಕ್ಕಮಗಳೂರು ಜಿಲ್ಲೆಯ ಕಡೂರು ಪಟ್ಟಣದ ಹೊರವಲಯದ ಮಲ್ಲೇಶ್ವರದ ಬೈಪಾಸ್ ರಸ್ತೆ ಬದಿಯಲ್ಲಿರುವ ತೋಟದಲ್ಲಿ ಬೀಡುಬಿಟ್ಟಿದ್ದ ಕುರಿಮಂದೆ ಮೇಲೆ ಚಿರತೆ ದಾಳಿ ನಡೆಸಿದ್ದು, 14 ಮೇಕೆ ಮತ್ತು 17 ಕುರಿ ಮರಿಗಳನ್ನು ಕೊಂದು ಹಾಕಿದೆ.

ಕಡೂರು ಪಟ್ಟಣದ ನಿವಾಸಿಗಳಾದ ಚಂದ್ರಶೇಖರ್, ಬಸವರಾಜ್, ಮಂಜು ಹಾಗೂ ಲಕ್ಷ್ಮಣ ಎಂಬುವವರು ಈ ಕುರಿಗಳ ಮಾಲೀಕರಾಗಿದ್ದಾರೆ. ಸುಶೀಲಮ್ಮ ಎಂಬುವವರ ತೋಟದಲ್ಲಿ ಮಂದೆ ಕುರಿ ಮಂದೆಯನ್ನು ಮೇಯಲು ಬಿಡಲಾಗಿತ್ತು. ಈ ವೇಳೆ ಏಕಾಏಕಿ ದಾಳಿ ನಡೆಸಿದ ಚಿರತೆ 14 ಮೇಕೆ ಮತ್ತು 17 ಕುರಿ ಮರಿಗಳನ್ನು ಬಲಿ ಪಡೆದುಕೊಂಡಿದೆ.
ಪಶು ವೈದ್ಯ ಇಲಾಖೆಯ ಡಾ.ಉಮೇಶ್ ಮತ್ತು ಸಿಬ್ಬಂದಿ ಶುಕ್ರವಾರ ಮರಣೋತ್ತರ ಪರೀಕ್ಷೆ ನಡೆಸಿದರು. ಚಿರತೆ ದಾಳಿಯಿಂದ ಸುಮಾರು ಮೂರು ಲಕ್ಷ ರೂಪಾಯಿ ನಷ್ಟವಾಗುದೆ ಎಂದು ಅಂದಾಜಿಸಲಾಗಿದೆ. ಘಟನಾ ಸ್ಥಳಕ್ಕೆ ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ವಲಯ ಅರಣ್ಯಾಧಿಕಾರಿ ಲೋಕೇಶ್, ಉಪವಲ ಅರಣ್ಯಾಧಿಕಾರಿ ಹರೀಶ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕಾಫಿನಾಡಲ್ಲಿ ಮುಂದುವರೆದ ಕಾಡಾನೆ ದಾಂಧಲೆ, ಕಾಫಿ, ಅಡಿಕೆ ತೋಟ ನಾಶ
ಚಿಕ್ಕಮಗಳೂರು: ಮಲೆನಾಡು ಭಾಗದಲ್ಲಿ ಮತ್ತೆ ಕಾಡಾನೆಗಳ ಹಾವಳಿ ಆರಂಭವಾಗಿದ್ದು ಚಿಕ್ಕಮಗಳೂರು ತಾಲೂಕಿನ ಆನೆಗನ ಹಳ್ಳಿ ಗ್ರಾಮದಲ್ಲಿ 5 ಕಾಡಾನೆಗಳ ಹಿಂಡು ದಾಂಧಲೆ ನಡೆಸಿವೆ. ಗ್ರಾಮದ ಅಣ್ಣೇಗೌಡ ಹಾಗೂ ಹರೀಶ್ ಎಂಬುವವರ ಅಡಿಕೆ, ಕಾಫಿ ತೋಟಕ್ಕೆ ನುಗ್ಗಿ ಕಾಡಾನೆಗಳು ದಾಂಧಲೆ ನಡೆಸಿವೆ. ಒಂದು ಲಕ್ಷಕ್ಕೂ ಅಧಿಕ ಮೌಲ್ಯದ ಬೆಳೆ ನಾಶವಾಗಿದೆ.
ಕಾಡಾನೆ ದಾಳಿಯಿಂದ ನೂರಾರು ಅಡಿಕೆ ಮರಗಳನ್ನು ನೆಲಕ್ಕೆ ಉರುಳಿ ಬಿದ್ದಿವೆ, ನೆಲಕ್ಕೆ ಬಿದ್ದ ಅಡಿಕೆ ಮರಗಳನ್ನು ನೋಡಿ ರೈತರು ಕಣ್ಣೀರಿಡುವಂತಾಗಿದೆ. ದಿನ ಬಿಟ್ಟು ದಿನ, ದಾಳಿ ಮಾಡಿ ಅಡಿಕೆ, ಕಾಫಿ, ಬಾಳೆ, ತೆಂಗು ಬೆಳೆಗಳನ್ನು ಕಾಡಾನೆ ನಾಶ ಮಾಡುತ್ತಿದ್ದು ಕೂಡಲೇ ಅರಣ್ಯ ಅಧಿಕಾರಿಗಳಿಗೆ ಇತ್ತ ಗಮನ ಹರಿಸಬೇಕೆಂದು ಸ್ಥಳೀಯರು ಒತ್ತಾಯಿಸಿದ್ದಾರೆ. ಕಾಡಾನೆಗಳ ದಾಳಿಗೆ ಮಲೆನಾಡು ಭಾಗದ ರೈತರು ತತ್ತರಿಸಿದ್ದು, ರಾಜ್ಯ ಸರ್ಕಾರ ಈ ಸಮಸ್ಯೆಗೆ ಶಾಶ್ವತ ಪರಿಹಾರ ನೀಡುವಂತೆ ಮನವಿ ಮಾಡಿದ್ದಾರೆ.












Click it and Unblock the Notifications