ಕಾವೇರಿ ಕಾಳಗ: ಕಳಸದಲ್ಲಿ ಕೈ ಕೊಯ್ದುಕೊಂಡು ರಕ್ತವನ್ನು ರಸ್ತೆ ಚಿಮ್ಮಿದ ಕನ್ನಡಪರ ಹೋರಾಟಗಾರ
ಚಿಕ್ಕಮಗಳೂರು, ಸೆಪ್ಟೆಂಬರ್, 29: ತಮಿಳುನಾಡಿಗೆ ಕಾವೇರಿ ನೀರು ಬಿಟ್ಟಿರುವುದನ್ನು ವಿರೋಧಿ ಇಂದು ಕರ್ನಾಟಕ ಬಂದ್‌ಗೆ ಕರೆ ಕೊಡಲಾಗಿದ್ದು, ಈಗಾಗಲೇ ಹಲವು ಜಿಲ್ಲೆಗಳಲ್ಲಿ ಆಕ್ರೋಶಗಳು ಭುಗಿಲೆದ್ದಿವೆ. ಹಾಗೆಯೇ ಚಿಕ್ಕಮಗಳೂರು ಜಿಲ್ಲೆಯ ಕಳಸ ತಾಲೂಕಿನಲ್ಲಿ ಕನ್ನಡಪರ ಸಂಘಟನೆಯ ಹೋರಾಟಗಾರರೊಬ್ಬರು ರಕ್ತ ಕೊಡ್ತೀವಿ, ನೀರು ಕೊಡುವುದಿಲ್ಲ ಎಂದು ಕೈ ಕೊಯ್ದುಕೊಂಡು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕಳಸ ಪಟ್ಟಣದಲ್ಲಿ ರೈತ ಸಂಘ ಹಾಗೂ ಕನ್ನಡ ಪರ ಸಂಘಟನೆಗಳು ಪ್ರತಿಭಟನೆ ನಡೆಸುವ ವೇಳೆ ರೈತರಿಗೆ ಅನುಕೂಲವಾಗಬೇಕು, ಕೂಡಲೇ ತಮಿಳುನಾಡಿಗೆ ನೀರು ನಿಲ್ಲಿಸಬೇಕು ಎಂದು ಕನ್ನಡ ರಾಜು ಕೈಯನ್ನ ಕೊಯ್ದುಕೊಂಡು ಸರ್ಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನೆ ವೇಳೆ ಜೊತೆಗಿದ್ದ ರೈತ ಸಂಘ ಹಾಗೂ ಇತರೆ ಹೋರಾಟಗಾರರು ರಾಜು ಅವರನ್ನ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇನ್ನು ಪ್ರತಿಭಟನೆ ವೇಳೆ ಬಿಜೆಪಿ ಕಾರ್ಯಕರ್ತರು ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಪ್ರತಿಕೃತಿ ದಹಿಸಲು ಮುಂದಾದರು. ಈ ವೇಳೆ, ಬಿಜೆಪಿ ಕಾರ್ಯಕರ್ತರು ಹಾಗೂ ಪೊಲೀಸರ ಮಧ್ಯೆ ಪ್ರತಿಕೃತಿ ಎಳೆದಾಡುವ ಸನ್ನಿವೇಶ ನಿರ್ಮಾಣವಾಗಿತ್ತು. ಪೊಲೀಸರು ಪ್ರತಿಕೃತಿ ದಹಿಸುವುದು ಬೇಡ ಎಂದು. ಆದರೆ, ಬಿಜೆಪಿ ಕಾರ್ಯಕರ್ತರು ಸಿದ್ದು ಹಾಗೂ ಡಿಕೆಶಿ ಪ್ರತಿಕೃತಿ ದಹಿಸಬೇಕು ಎಂದು ಬಿಜೆಪಿ ಕಚೇರಿ ಮುಂದೆ ಪಟ್ಟುಹಿಡಿದಿದ್ದರು. ಅಂತಿಮವಾಗಿ, ಬಿಜೆಪಿ ಕಚೇರಿ ಮುಂದೆ ಬಿಜೆಪಿ ಕಾರ್ಯಕರ್ತರು ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಅವರ ಪ್ರತಿಕೃತಿ ದಹಿಸಿದರು.
ಚಾಮರಾಜನಗದಲ್ಲಿ ಕಾವೇರಿ ಕಿಚ್ಚು
ಚಾಮರಾಜನಗರ, ಸೆಪ್ಟೆಂಬರ್, 29: ತಮಿಳುನಾಡಿಗೆ ನೀರು ಬಿಟ್ಟಿರುವುದನ್ನು ವಿರೋಧಿಸಿ ಇಂದು ಕರ್ನಾಟಕ ಬಂದ್‌ಗೆ ಕರೆ ನೀಡಲಾಗಿದ್ದು, ಬಹುತೇಕ ಜಿಲ್ಲೆಗಳಲ್ಲಿ ಈ ಬಂದ್‌ಗೆ ವ್ಯಾಪಕ ಬೆಂಬಲ ವ್ಯಕ್ತವಾಗಿದೆ. ಹಾಗೆಯೇ ಚಾಮರಾಜನಗರದಲ್ಲಿ ರೈತರ ಪ್ರತಿಭಟನೆ ಕ್ಷಣ ಕ್ಷಣಕ್ಕೂ ತೀವ್ರ ಸ್ವಾರೂಪ ಪಡೆಯುತ್ತಲೇ ಇದ್ದು, ಪ್ರತಿಭಟನಾಕಾರರು ಜಿಲ್ಲೆಗೆ ಆಗಮಿಸುಬ ಮತ್ತು ಇಲ್ಲಿಂದ ತೆರಳುವ ತಮಿಳುನಾಡು ವಾಹನಗಳಿಗೆ ಕಾಲಿನಲ್ಲಿ ಒದ್ದು ಆಕ್ರೋಶ ಹೊರಹಾಕುತ್ತಿದ್ದಾರೆ. ಇದರಿಂದ ತಮಿಳುನಾಡು ಮೂಲದ ವಾಹನ ಸವಾರರು ಬೆಚ್ಚಿಬಿದ್ದಿದ್ದಾರೆ.
ಕಾವೇರಿ ನೀರನ್ನು ತಮಿಳುನಾಡಿಗೆ ಹರಿಸಬಾರದೆಂದು ಕರೆಕೊಟ್ಟಿರುವ ಕರ್ನಾಟಕ ಬಂದ್‌ಗೆ ಚಾಮರಾಜನಗರ ಜಿಲ್ಲಾದ್ಯಂತ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪ್ರತಿಭಟನೆ ಕ್ಷಣ ಕ್ಷಣಕ್ಕೂ ತೀವ್ರಗೊಳ್ಳುತ್ತಲೇ ಇದೆ. ಇನ್ನು ನಗರದ ಸತ್ಯಮಂಗಲಂ ರಸ್ತೆಯಲ್ಲಿರುವ ಸಿದ್ಧಾರ್ಥ ಚಿತ್ರಮಂದಿರಕ್ಕೆ ನುಗ್ಗಿದ ಕಬ್ಬು ಬೆಳೆಗಾರರು ರಾಘವ ಲಾರೆನ್ಸ್ ಅಭಿನಯದ "ಚಂದ್ರಮುಖಿ-2" ಚಿತ್ರದ ಪೋಸ್ಟರ್ ಅನ್ನು ಹರಿದು ಹಾಕಿ ಆಕ್ರೋಶ ಹೊರಹಾಕಿದ್ದಾರೆ.
ಕಾವೇರಿ ಕ್ಯಾತೆ ನಿಲ್ಲಿಸದಿದ್ದರೇ ತಮಿಳು ಚಿತ್ರಗಳು ಪ್ರದರ್ಶನ ಮಾಡುವಂತಿಲ್ಲ ಎಂದು ಆಕ್ರೋಶಗೊಂಡು ತಮಿಳು ಚಿತ್ರದ ಪೋಸ್ಟರ್‌ಗಳನ್ನು ಹರಿದುಹಾಕಿ ತಮಿಳುನಾಡು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಇನ್ನು, ಸತ್ಯಮಂಗಲಂ ರಸ್ತೆಯಲ್ಲಿ ಪ್ರತಿಭಟಿಸುತ್ತಿದ್ದ ಉಡಿಗಾಲ ಮಂಜುನಾಥ್ ಎಂಬವರು ಹಸಿರು ಟವೆಲ್‌ನಿಂದ ನೇಣು ಬಿಗಿದುಕೊಳ್ಳು ಯತ್ನಿಸಿ ಅಸ್ವಸ್ಥರಾಗಿದ್ದಾರೆ. ಇನ್ನು, ಪೊಲೀಸ್ ಜೀಪ್ ನಲ್ಲೇ ಅವರನ್ನು ಆಸ್ಪತ್ರೆಗೆ ರವಾನಿಸಿ ಪ್ರಥಮ ಚಿಕಿತ್ಸೆ ಕೊಡಿಸಲಾಗಿದೆ.
ತಮಿಳುನಾಡು ವಾಹನವೊಂದನ್ನು ಕಂಡ ಪ್ರತಿಭಟನಾಕಾರರು ಉದ್ರಿಕ್ತರಾಗಿ ಕಾರಿಗೆ ಒದ್ದು ಆಕ್ರೋಶ ಹೊರಹಾಕಿದ ಘಟನೆ ಚಾಮರಾಜನಗರ ಹೊರವಲಯದಲ್ಲಿ ನಡೆದಿದ್ದು, ಪೊಲೀಸರು ಮಧ್ಯ ಪ್ರವೇಶ ಮಾಡಿ ಪರಿಸ್ಥಿತಿ ಶಾಂತಗೊಳಿಸಿದ್ದಾರೆ.
ಚಾಮರಾಜನಗರದಲ್ಲಿ ನಿರಂತರ ಪ್ರತಿಭಟನೆ ನಡೆಯುತ್ತಿರುವ ಹಿನ್ನೆಲೆ ಮುನ್ನೆಚ್ಚರಿಕೆ ಕ್ರಮವಾಗಿ ಧರ್ಮಪುರಿ ಜಿಲ್ಲಾಡಳಿತ ಟಿಎನ್ ನೋಂದಣಿ ವಾಹನಗಳನ್ನು ಕರ್ನಾಟಕಕ್ಕೆ ಕಳುಹಿಸದೇ ನಿರ್ಬಂಧ ಹೇರಿದೆ. ಬಣ್ಣಾರಿ ಚೆಕ್ ಪೋಸ್ಟ್‌ನಲ್ಲಿ ಕಿಲೋ ಮೀಟರ್‌ಗಟ್ಟಲೇ ಸರಕು ತುಂಬಿದ ವಾಹನಗಳು, ಕಾರುಗಳು ಸರತಿ ಸಾಲಿನಲ್ಲಿ ನಿಂತಿದ್ದು, ವಾಹನ ಸಂಚಾರ ಸಂಪೂರ್ಣ ಅಸ್ತವ್ಯಸ್ತವಾಗಿದೆ.
ತಮಿಳುನಾಡು ಗಡಿಯಾದ ಚಾಮರಾಜನರ ತಾಲೂಕಿನ ಪುಣಜನೂರು ಮತ್ತು ಎಲ್ಲೆಕಟ್ಟೆ ಬಳಿ ಎರಡೂ ರಾಜ್ಯದ ಪೊಲೀಸರು ಹೈ ಅಲರ್ಟ್ ಆಗಿದ್ದಾರೆ. ಹೀಗೆ ಕಾವೇರಿ ಕಿಚ್ಚು ಚಾಮರಾಜನಗರದಲ್ಲಿ ಜೋರಾಗಿದ್ದು, ಬೆಳಗ್ಗೆಯಿಂದ ಹತ್ತಾರು ಸಂಘಟನೆಗಳು ನಿರಂತರವಾಗಿ ಧರಣಿ ನಡೆಸುತ್ತಿವೆ. ಮಧ್ಯಾಹ್ನವಾದರೂ ಸಾರಿಗೆ ಸಂಸ್ಥೆ ಬಸ್‌ಗಳು ರಸ್ತೆಗೆ ಇಳಿದಿಲ್ಲ. ಎಪಿಎಂಸಿ ಹಾಗೂ ತರಕಾರಿ ಮಾರುಕಟ್ಟೆಗಳು, ಅಂಗಡಿಗಳು, ಹೋಟೆಲ್‌ಗಳು ಕ್ಲೋಸ್ ಆಗಿವೆ.












Click it and Unblock the Notifications