ಚಿಕ್ಕಮಗಳೂರು: ದಲಿತ ಯುವತಿಯನ್ನು ಮದುವೆಯಾಗಿದ್ದಕ್ಕೆ ಗ್ರಾಮದಿಂದ ಬಹಿಷ್ಕಾರ; ಮತಾಂತರಕ್ಕೆ ಚಿಂತನೆ
ಚಿಕ್ಕಮಗಳೂರು, ಫೆಬ್ರವರಿ 4: ವ್ಯಕ್ತಿಯೊಬ್ಬರು ದಲಿತ ಯುವತಿಯನ್ನು ಮದುವೆಯಾಗಿದ್ದಕ್ಕೆ ಸ್ವಜಾತಿಯವರಿಂದ ಬಹಿಷ್ಕಾರ ಹಾಕಿಸಿಕೊಂಡ ಘಟನೆ ಚಿಕ್ಕಮಗಳೂರು ಜಿಲ್ಲೆ ತರೀಕೆರೆ ತಾಲೂಕಿನ ಲಿಂಗದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಲಿಂಗದಹಳ್ಳಿ ಗ್ರಾಮದ ಸೋಮಶೇಖರ್ ಕುಟುಂಬಕ್ಕೆ ಸ್ವಜಾತಿ ಮುಖಂಡರು ಬಹಿಷ್ಕಾರ ಹಾಕಿದ್ದಾರೆ. ವ್ಯಕ್ತಿಯು ದಲಿತ ಯುವತಿಯನ್ನು ಪ್ರೀತಿಸಿ ಮದುವೆಯಾಗಿದ್ದರು. ದಲಿತ ಯುವತಿಯನ್ನು ಮದುವೆಯಾಗಿದಕ್ಕೆ ಈ ದಂಪತಿಯ ಜೊತೆ ಗ್ರಾಮದಲ್ಲಿ ಯಾರು ಮಾತನಾಡುವಂತಿರಲಿಲ್ಲ. ಹಾಗೇನಾದರೂ ಅವರ ಜೊತೆ ಯಾರಾದರೂ ಮಾತನಾಡಿದ್ದಲ್ಲಿ 5 ಸಾವಿರ ರೂ. ದಂಡ ವಿಧಿಸಲಾಗುವುದು ಎಂದು ಬಹಿಷ್ಕಾರ ಹಾಕಿದ್ದಾರೆ.

ಊರಿನ ದೇವಾಲಯಕ್ಕೆ ಪ್ರವೇಶವನ್ನು ಕೊಡುತ್ತಿಲ್ಲ. ಯಾರೂ ಕೂಡ ಇವರನ್ನು ಯಾವುದೇ ಕಾರ್ಯಕ್ರಮಕ್ಕೂ ಕರೆಯಬಾರದು ಅಂತಾ ಆದೇಶ ಹೊರಡಿಸಿದ್ದಾರೆ. ಬಹಿಷ್ಕಾರಗೊಂಡಿರುವ ಈ ಕುಟುಂಬದವರನ್ನು ಮಾತನಾಡಿಸಿದರೂ 5 ಸಾವಿರ ರೂ. ದಂಡ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರಂತೆ. ಇದರಿಂದ ಮಾನಸಿಕವಾಗಿ ನೊಂದಿರುವ ಸೋಮಶೇಖರ್ ಕುಟುಂಬ, ನ್ಯಾಯ ಕೊಡಿಸುವಂತೆ ಜಿಲ್ಲಾಡಳಿತದ ಮೊರೆ ಹೋಗಿದೆ.

ಈ ಬಗ್ಗೆ ಕಳೆದ ಕೆಲ ತಿಂಗಳಿನಿಂದ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರೂ ಈ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ. ನಮ್ಮ ಪಾಡಿಗೆ ನಾವು ಜೀವನ ಮಾಡಿಕೊಂಡು ಇರುತ್ತೇವೆ ಅಂತಾ ಸುಮ್ಮನಿದ್ದರು. ಸೋಮಶೇಖರ್ ಕುಟುಂಬಕ್ಕೆ ಕಿರುಕುಳ ತಪ್ಪಿಲ್ಲವಂತೆ. ಹೀಗಾಗಿ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರವಾಗಲು ತಯಾರಿ ನಡೆಸಿದ ಸೋಮಶೇಖರ್ ಕುಟುಂಬವನ್ನು ಹಿಂದೂ ಸಂಘಟನೆಗಳ ಮುಖಂಡರು ಮನವೊಲಿಸಿ ನ್ಯಾಯ ಕೊಡಿಸುವ ಭರವಸೆ ತುಂಬಿದ್ದಾರೆ. ಹೀಗಾಗಿ ಮತಾಂತರ ಹೊಂದುವ ನಿರ್ಧಾರದಿಂದ ಸೋಮಶೇಖರ್ ಕುಟುಂಬ ಹಿಂದೆ ಸರಿದಿದೆ.
ಪ್ರೀತಿಸಿದ ಹುಡುಗಿ ಜೊತೆ ನಾನು ಮದುವೆಯಾಗಿದ್ದೇನೆ. ಅನ್ಯ ಜಾತಿಯ ಹುಡುಗಿಯನ್ನು ಮದುವೆಯಾಗಬಾರದು ಅಂತಾ ಯಾವ ಕಾನೂನಿನಲ್ಲಿಯೂ ಇಲ್ಲ. ಹೀಗಿರುವಾಗ ನಮ್ಮ ಕುಟುಂಬದ ಮೇಲೆ ಬಹಿಷ್ಕಾರ ಹೇರಲು ಇವರಿಗೇನು ಅಧಿಕಾರವಿದೆ ಅಂತಾ ಸೋಮಶೇಖರ್ ಪ್ರಶ್ನೆ ಮಾಡಿದ್ದಾರೆ. ಸಾಮಾಜಿಕ ಬಹಿಷ್ಕಾರದ ಅನಿಷ್ಟ ಪದ್ಧತಿಯನ್ನು ಈ ಕುಟುಂಬಕ್ಕೆ ಸ್ವಜಾತಿಯ ಮುಖಂಡರೇ ಹೇರಿದ್ದರು. ಈ ವಿಚಾರವನ್ನು ಜಿಲ್ಲಾಡಳಿತ ಇನ್ನೂ ಗಂಭೀರವಾಗಿ ತೆಗೆದುಕೊಳ್ಳದೇ ಇರುವುದು ನಿಜಕ್ಕೂ ದುರಂತವೇ ಸರಿ. ಇನ್ನಾದರೂ ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಿ, ಸಮಾಜಕ್ಕೆ ಮಾರಕವಾಗಿರುವ ಸಾಮಾಜಿಕ ಬಹಿಷ್ಕಾರವನ್ನು ತೊಡೆದು ಹಾಕುತ್ತಾರಾ ಅನ್ನುವುದನ್ನು ಕಾದು ನೋಡಬೇಕು.

Recommended Video
ಪ್ರಕರಣದ ಬಗ್ಗೆ ಗಮನ ಹರಿಸಲಾಗುವುದು; ಜಿಲ್ಲಾಧಿಕಾರಿ ಕೆ.ಎನ್. ರಮೇಶ್
ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಚಿಕ್ಕಮಗಳೂರು ಜಿಲ್ಲಾಧಿಕಾರಿ ಕೆ.ಎನ್. ರಮೇಶ್, ನಿನ್ನೆ ಅಪರ ಜಿಲ್ಲಾಧಿಕಾರಿಗೆ ನೊಂದ ಕುಟುಂಬದವರು ಮನವಿ ಸಲ್ಲಿಸಿದ್ದಾರೆ. ಕುಟುಂಬಕ್ಕೆ ಅವರ ಜನಾಂಗದವರು ಕಿರುಕುಳ ನೀಡಿದ್ದರೆ, ಸೂಕ್ತ ಕ್ರಮವಹಿಸಲಾಗುವುದು. ಈಗಾಗಲೇ ಪೊಲೀಸ್ ಅಧಿಕಾರಿಗಳು ಹಾಗೂ ತಾಲೂಕು ಅಧಿಕಾರಿ ಸ್ಥಳ ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದ್ದೇನೆ,. ತಪ್ಪು ಕಂಡು ಬಂದಲ್ಲಿ, ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು. ಕಾಫಿನಾಡಿನಲ್ಲಿ ಬಹಿಷ್ಕಾರದ ಪಿಡುಗು ಈ ಪರಿ ಸದ್ದು ಮಾಡಿರುವುದು ನಿಜಕ್ಕೂ ವಿಪರ್ಯಾಸವೇ ಸರಿ.












Click it and Unblock the Notifications