ಬೈಕ್ ಸವಾರರ ಮೇಲೆ ಕಾಡುಕೋಣ ದಾಳಿ: ಇಬ್ಬರಿಗೆ ಗಂಭೀರ ಗಾಯ
ಒಂದೆಡೆ ಕಾಡಾನೆ ಹಾವಳಿ, ಮತ್ತೊಂದೆಡೆ ಕಾಡು ಕೋಣಗಳ ದಾಳಿಯಿಂದ ಚಿಕ್ಕಮಗಳೂರು ಜಿಲ್ಲೆಯ ಜನರು ಆತಂಕದಲ್ಲೇ ದಿನ ಕಳೆಯುವ ಪರಿಸ್ಥಿತಿ ಎದುರಾಗಿದೆ. ಮೂಡಿಗೆರೆ ತಾಲೂಕಿನ ಮತ್ತಿಕಟ್ಟೆ ಗ್ರಾಮದಲ್ಲಿ ಕಾಡು ಕೋಣವೊಂದರ ದಾಳಿಯಿಂದಾಗಿ ಇಬ್ಬರು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡ
ಚಿಕ್ಕಮಗಳೂರು, ಜನವರಿ 28: ಕಾಫಿನಾಡಿನಲ್ಲಿ ಕಾಡಾನೆ, ಕಾಡುಕೋಣಗಳ ಹಾವಳಿಗೆ ಕೊನೆಯೇ ಇಲ್ಲದಂತಾಗಿದ್ದು, ಮೂಡಿಗೆರೆ ತಾಲೂಕಿನ ಮತ್ತಿಕಟ್ಟೆ ಗ್ರಾಮದಲ್ಲಿ ಕಾಡು ಕೋಣವೊಂದರ ದಾಳಿಯಿಂದಾಗಿ ಇಬ್ಬರು ಬೈಕ್ ಸವಾರರು ಗಂಭೀರವಾಗಿ ಗಾಯಗೊಂಡು ಆಸ್ಪತ್ರೆ ಸೇರಿದ್ದಾರೆ.
ಮೂಡಿಗೆರೆ ತಾಲೂಕಿನ ಕಲ್ಯಾಣಗದ್ದೆ ಗ್ರಾಮದ ನಿವಾಸಿಗಳಾದ ದಿಲೀಪ್ ಹಾಗೂ ಆಶಾ ಕಾಡುಕೋಣ ದಾಳಿಯಿಂದಾಗಿ ಗಂಭೀರವಾಗಿ ಗಾಯಗೊಂಡವರು ಎಂದು ಗುರುತಿಸಲಾಗಿದೆ. ಕಾಡು ಕೋಣ ದಾಳಿಯಲ್ಲಿ ಬೈಕ್ ಸವಾರರು ಪ್ರಾಣಾಪಾಯದಿಂದ ಪಾರಾಗಿದ್ದರೂ, ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.
ಗುರುವಾರ ರಾತ್ರಿ ಮೂಡಿಗೆರೆ ಪಟ್ಟಣದಿಂದ ಕಲ್ಯಾಣಗದ್ದೆ ಗ್ರಾಮಕ್ಕೆ ದಿಲೀಪ್ ಹಾಗೂ ಆಶಾ ತೆರಳುತ್ತಿದ್ದ ಸಂದರ್ಭದಲ್ಲಿ ಬಣಕಲ್ ಹೋಬಳಿ ವ್ಯಾಪ್ತಿಯ ಮತ್ತಿಕಟ್ಟೆ ಎಂಬಲ್ಲಿ ಕಾಡುಕೋಣ ಬೈಕ್ ಮೇಲೆ ದಿಢೀರ್ ದಾಳಿ ನಡೆಸಿದೆ. ದಾಳಿಯಿಂದಾಗಿ ಬೈಕ್‍ನಲ್ಲಿದ್ದ ದಿಲೀಪ್ ತಲೆಗೆ ಪೆಟ್ಟಾಗಿದ್ದರೇ, ಆಶಾ ಅವರ ಕಾಲಿಗೆ ಗಂಭೀರ ಗಾಯವಾಗಿದೆ. ಘಟನೆಯಲ್ಲಿ ಬೈಕ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದೆ.

ಕಾಡುಕೋಣದ ದಾಳಿಯಿಂದ ಗಾಯಗೊಂಡು ರಸ್ತೆಯಲ್ಲಿ ಬಿದ್ದಿದ್ದವರನ್ನು ಸ್ಥಳೀಯವರು ಮೂಡಿಗೆರೆ ಸರಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಇಬ್ಬರೂ ಪ್ರಾಣಾಪಾಯದಿಂದ ಪಾರಾಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿ ಘಟನೆ ಬಗ್ಗೆ ಮಾಹಿತಿ ಕಲೆ ಹಾಕಿದ್ದಾರೆ.
ಒಂದೆಡೆ ಕಾಡಾನೆ ಹಾವಳಿ, ಮತ್ತೊಂದೆಡೆ ಕಾಡು ಕೋಣಗಳ ದಾಳಿಯಿಂದ ಜಿಲ್ಲೆಯ ಜನರು ಆತಂಕದಲ್ಲೇ ದಿನ ಕಳೆಯುವ ಪರಿಸ್ಥಿತಿ ಎದುರಾಗಿದೆ. ಜಿಲ್ಲೆಯ ಮಲೆನಾಡು ಭಾಗದಲ್ಲಿ ಇತ್ತೀಚೆಗೆ ಕಾಡುಕೋಣಗಳ ಹಾವಳಿ ಹೆಚ್ಚುತ್ತಿದ್ದು, ಜಿಲ್ಲೆಯ ಕಳಸ ತಾಲೂಕಿನ ತೋಟದೂರು ವ್ಯಾಪ್ತಿಯಲ್ಲಿ ಕೃಷಿಕರೊಬ್ಬರ ಮೇಲೆ ಕಾಡುಕೋಣ ದಾಳಿ ನಡೆಸಿದ ಪರಿಣಾಮ ರೈತ ಸ್ಥಳದಲ್ಲೇ ಮೃತಪಟ್ಟಿರುವ ಘಟನೆ ಇತ್ತೀಚೆಗೆ ನಡೆದಿದೆ.

ಅಲ್ಲದೇ ಚಿಕ್ಕಮಗಳೂರು ತಾಲೂಕಿನ ಮಲ್ಲಂದೂರು ಗ್ರಾಮದಲ್ಲೂ ಕಾಡುಕೋಣ ದಾಳಿಯಿಂದ ವ್ಯಕ್ತಿಯೊಬ್ಬರು ಗಾಯಗೊಂಡಿದ್ದರು. ಕಾಡುಕೋಣಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಅಧಿಕಾರಿಗಳು ಅಗತ್ಯ ಕ್ರಮವಹಿಸಬೇಕೆಂದು ಸಾರ್ವಜನಿಕರು, ರೈತರು ಆಗ್ರಹಿಸಿದ್ದಾರೆ.












Click it and Unblock the Notifications