ಮೂಡಿಗೆರೆಯಲ್ಲಿ ಕೊನೆಗೂ ಸೆರೆಯಾದ ನರಹಂತಕ ಕಾಡಾನೆ ಭೈರ
ಚಿಕ್ಕಮಗಳೂರು, ಡಿಸೆಂಬರ್, 12: ಕಳೆದ ನಾಲ್ಕೈದು ತಿಂಗಳಿನಿಂದ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಅರಣ್ಯ ಅಧಿಕಾರಿಗಳು ಹಾಗೂ ಜನರ ನಿದ್ದೆಗೆಡಿಸಿದ್ದ ಕಾಡಾನೆ ಭೈರನನ್ನು ಸೆರೆ ಹಿಡಿದಿದ್ದಾರೆ. ಮೂಡಿಗೆರೆ ಕಾಡಾನೆ ಭೈರನನ್ನು ಸೆರೆಹಿಡಿಯುವಲ್ಲಿ ಅರಣ್ಯ ಇಲಾಖೆ ಅಧಿಕಾರಿಗಳು ಯಶಸ್ವಿಯಾಗಿದ್ದಾರೆ.
ಜನರ ನಿದ್ದೆಗೆಡಿಸಿದ್ದ ಕಾಡಾನೆ ಭೈರ
ನಾಲ್ಕೈದು ತಿಂಗಳಿನಿಂದ ತಾಲೂಕಿನಾದ್ಯಂತ ದಾಳಿ ಮಾಡಿ, ಇಬ್ಬರು ವ್ಯಕ್ತಿಗಳ ಜೀವ ತೆಗೆದಿದ್ದ ಭೈರನಿಂದ ಜನ ಬೇಸತ್ತು ಹೋಗಿದ್ದರು. ಆಗಿನಿಂದ ಅಲ್ಲಿನ ಜನರು ಅರಣ್ಯ ಇಲಾಖೆ ವಿರುದ್ಧ ತೀವ್ರ ಆಕ್ರೋಶ ಹೊರಹಾಕಿದ್ದರು. ಆನೆ ಹಾವಳಿಯಿಂದ ತಿಂಗಳಿಗೊಂದು ಹೆಣ ಬೀಳುತ್ತಿದ್ದರಿಂದ ಜನರು ಆತಂಕಕ್ಕೆ ಒಳಗಾಗಿದ್ದರು. ಆದ್ದರಿಂದ ರೊಚ್ಚಿಗೆದ್ದ ಜನ ಶಾಸಕರ ಮೇಲೂ ಹಲ್ಲೆಗೆ ಮುಂದಾಗಿದ್ದರು. ಮಲೆನಾಡಿನಲ್ಲಿ ತೀವ್ರವಾಗಿ ದಾಳಿ ನಡೆಸುತ್ತಿದ್ದ ಮೂರು ಕಾಡಾನೆಗಳನ್ನು ಹಿಡಿಯಲು ಸರ್ಕಾರ ಕೂಡ ಅನುಮತಿ ನೀಡಿತ್ತು. ಅದರಂತೆಯೇ ಕಳೆದ ಎಂಟು ದಿನಗಳಿಂದ ಆರು ಸಾಕಾನೆಗಳೊಂದಿಗೆ ಮೂರು ಕಾಡಾನೆಗಗಳನ್ನ ಹಿಡಿಯಲು ಅಧಿಕಾರಿಗಳು-ಸ್ಥಳೀಯರು ಹಗಲಿರುಳು ಶ್ರಮ ಪಟ್ಟಿದ್ದರು.
ಸಾಕಾನೆಗಳನ್ನು ಬಳಸಿ ಕಾಡಾನೆ ಸೆರೆ
ಹೀಗೆ ಸಾಕಾನೆಗಳನ್ನು ಬಳಿಸಿಕೊಂಡು ಎರಡು ಕಾಡಾನೆಗಳನ್ನು ಸೆರೆ ಹಿಡಿದಿದ್ದರು. ಪುಂಡಾಟ ನಡೆಸಿ ಕಾಡಾನೆ ನಾಪತ್ತೆಯಾಗಿತ್ತು. ಅರಣ್ಯ ಅಧಿಕಾರಿಗಳ ಡ್ರೋನ್ ಕ್ಯಾಮರಕ್ಕೂ ಕಣ್ತಪ್ಪಿಸಿ ಎಸ್ಕೇಪ್ ಆಗಿ ಬೈರ ಓಡಾಡುತ್ತಿದ್ದ ಎಂದು ಅಲ್ಲಿನ ಅಧಿಕಾರಿಗಳು ಹೇಳುತ್ತಿದ್ದಾರೆ.

ಇದೀಗ ಮೂಡಿಗೆರೆ ತಾಲೂಕಿನ ಊರಬಗೆ ಗ್ರಾಮದಲ್ಲಿ ಭೈರ ಇರುವ ಖಚಿತ ಮಾಹಿತಿ ಪಡೆದ ಅಧಿಕಾರಿಗಳು ನಿರಂತರ ಕಾರ್ಯಾಚರಣೆ ನಡೆಸಿದ್ದರು. ಹೀಗೆ ಸತತವಾಗಿ ಕಾರ್ಯಾಚರಣೆ ನಡೆಸುವ ಮೂಲಕ ಕೊನೆಗೂ ಭೈರನನ್ನು ಬಲೆಗೆ ಬೀಳಿಸಿದ್ದಾರೆ. ಜನರ ನಿದ್ದೆಗೆಡಿಸಿದ್ದ ಮೂಡಿಗೆರೆ ಭೈರ ಎನ್ನುವ ಆನೆಯನ್ನು ಸೆರೆ ಹಿಡಿದಿದ್ದಾರೆ. ಕಾಡಾನೆ ಸೆರೆಯಾದ ಕಾರಣ ಜನರ ಜೊತೆ ಅರಣ್ಯ ಇಲಾಖೆ ಅಧಿಕಾರಿಗಳು ಕೂಡ ನಿಟ್ಟುಸಿರು ಬಿಟ್ಟಿದ್ದಾರೆ.

ಹಾಸನದಲ್ಲಿಯೂ ನಿಲ್ಲದ ಕಾಡಾನೆಗಳ ದಾಳಿ
ಇತ್ತೀಚೆಗಷ್ಟೇ ಕಾಡಾನೆಯೊಂದು ಒಂದು ಕುಟುಂಬವನ್ನು ಬೆನ್ನುಬಿಡದೇ ಕಾಟ ಕೊಡುತ್ತಿರುವ ಘಟನೆ ಹಾಸನ ಜಿಲ್ಲೆ ಸಕಲೇಶಪುರ ತಾಲೂಕಿನ ಕೆಸಗುಲಿ ಗ್ರಾಮದಲ್ಲಿ ನಡೆದಿತ್ತು. ಕೆಸಗುಲಿ ಗ್ರಾಮದ ಗಿರೀಶ್ ಕುಟುಂಬ ಕಾಡಾನೆ ದಾಳಿಯಿಂದ ಕಂಗಾಲಾಗಿದ್ದರು. ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಯಲ್ಲಿ ಕಾಡಾನೆಗಳ ಕಾಟದಿಂದ ಜನರು ತತ್ತರಿಸಿ ಹೋಗಿದ್ದರು. ಒಂದೆಡೆ ಕಾಡಾನೆಗಳು ಬೆಳೆದ ಬೆಳೆಗಳನ್ನು ನಾಶ ಮಾಡುತ್ತಿದ್ದರೆ, ಮತ್ತೊಂದೆಡೆ ಅನೇಕರು ಕಾಡಾನೆ ದಾಳಿಯಿಂದ ಸಾವನ್ನಪ್ಪಿದ್ದಾರೆ. ಅದೇ ರೀತಿ ಕೆಸಗುಲಿ ಗ್ರಾಮದಲ್ಲೂ ಕಾಡಾನೆ ಹಾವಳಿ ಇದ್ದು, ಗಿರೀಶ್ ಕುಟುಂಬಕ್ಕೆ ಕಾಡಾನೆ ಕೊಡುತ್ತಿರುವ ಕಾಟ ಎಲ್ಲರಿಗೂ ಅಚ್ಚರಿ ಉಂಟು ಮಾಡಿತ್ತು.












Click it and Unblock the Notifications