Assembly election 2023: ಚಿಕ್ಕಮಗಳೂರು ಜಿಲ್ಲೆಯ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸಿದ ಜೆಡಿಎಸ್
ಚಿಕ್ಕಮಗಳೂರು, ಡಿಸೆಂಬರ್, 19: 2023ರ ವಿಧಾನಸಭೆ ಚುನಾವಣೆಯ ಕಾವು ಕಾಫಿನಾಡಿನಲ್ಲಿ ದಿನದಿಂದ ದಿನಕ್ಕೆ ಏರುತ್ತಿದ್ದು, ರಾಜಕೀಯ ಕ್ಷೇತ್ರ ನಿಧಾನವಾಗಿ ರಂಗೇರುತ್ತಿದೆ. ಜೆಡಿಎಸ್ ಪಕ್ಷದಿಂದ ರಾಜ್ಯಾದ್ಯಂತ 93 ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಪ್ರಕಟಿಸಲಾಗಿದೆ. ಹಾಗೆಯೇ ಜಿಲ್ಲೆಯ ಮೂರು ಕ್ಷೇತ್ರಗಳ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಜೆಡಿಎಸ್ ಅರ್ಭರ್ಥಿಯಾಗಿ ಬಿ.ಎಂ.ತಿಮ್ಮಶೆಟ್ಟಿ, ಮೂಡಿಗೆರೆ ಕ್ಷೇತ್ರದಿಂದ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಹಾಗೂ ಶೃಂಗೇರಿ ವಿಧಾನಸಭಾ ಕ್ಷೇತ್ರದಿಂದ ಸುಧಾಕರ್ ಎಸ್.ಶೆಟ್ಟಿಯವರನ್ನು ಆಯ್ಕೆ ಮಾಡಲಾಗಿದೆ. ಜಿಲ್ಲೆ 5 ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಣೆ ಮಾಡಲಾಗಿದೆ. ಉಳಿದಂತೆ ತರೀಕೆರೆ ಮತ್ತು ಕಡೂರು ಕ್ಷೇತ್ರ ಮಾತ್ರ ಬಾಕಿ ಉಳಿದಿವೆ.
ಮುಂದಿನ ದಿನಗಳಲ್ಲಿ ಎರಡನೇ ಪಟ್ಟಿಯಲ್ಲಿ ಈ ಕ್ಷೇತ್ರಗಳ ಅಭ್ಯರ್ಥಿಗಳ ಹೆಸರನ್ನು ಘೋಷಣೆ ಮಾಡಲಾಗುತ್ತದೆ ಎಂದು ಜೆಡಿಎಸ್ ಮುಖಂಡರು ತಿಳಿಸಿದ್ದಾರೆ.
ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದಿಂದ ಬಿ.ಎಂ.ತಿಮ್ಮಶೆಟ್ಟಿ ಅವರು ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿ ಈಗಾಗಲೇ ಕಳೆದ ಕೆಲವು ತಿಂಗಳಿಂದ ಕ್ಷೇತ್ರದಲ್ಲಿ ಪ್ರವಾಸ ಕೈಗೊಂಡಿದ್ದಾರೆ. ಸದ್ಯ ಅವರನ್ನು ಚಿಕ್ಕಮಗಳೂರು ವಿಧಾನಸಭೆ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯನ್ನಾಗಿ ಘೋಷಣೆ ಮಾಡುವ ಮೂಲಕ ಅಧಿಕೃತವಾಗಿ ಹೆಸರನ್ನು ಘೋಷಣೆ ಮಾಡಲಾಗಿದೆ.

ಬಿಜೆಪಿ ಅಭ್ಯರ್ಥಿ ವಿರುದ್ಧ ಬಿ.ಬಿ. ನಿಂಗಯ್ಯ ಪರಾಭವ
ಮೂಡಿಗೆರೆ ಕ್ಷೇತ್ರದಿಂದ 2018ರ ಚುನಾವಣೆಯಲ್ಲಿ ಮಾಜಿ ಸಚಿವ ಬಿ.ಬಿ.ನಿಂಗಯ್ಯ ಅವರನ್ನು ಕಣಕಿಳಿಸಿದ್ದು, ಅವರು ಬಿಜೆಪಿಯ ಎಂ.ಪಿ.ಕುಮಾರಸ್ವಾಮಿ ವಿರುದ್ಧ ಪರಾಭವಗೊಂಡಿದ್ದರು. 2023ರ ಚುನಾವಣೆಯಲ್ಲಿ ಪಕ್ಷ ಟಿಕೆಟ್ ನೀಡುವುದಿಲ್ಲ ಎಂಬ ಮಾತುಗಳು ಕೇಳಿಬರುತ್ತದ್ದವು. ಆದರೆ ಪಕ್ಷದ ನಾಯಕರು ಮತ್ತೊಮ್ಮೆ ಬಿ.ಬಿ.ನಿಂಗಯ್ಯ ಅವರನ್ನು ಕಣಕ್ಕಿಳುವ ಮೂಲಕ ಅಗ್ನಿ ಪರೀಕ್ಷೆಗೆ ಮುಂದಾಗಿದೆ.

ಕ್ಷೇತ್ರದಲ್ಲೇ ಬೀಡುಬಿಟ್ಟಿದ್ದ ಸುಧಾಕರ್ ಎಸ್. ಶೆಟ್ಟಿ
ಶೃಂಗೇರಿ ಕ್ಷೇತ್ರಕ್ಕೆ ಉದ್ಯಮಿ ಸುಧಾಕರ್ ಎಸ್.ಶೆಟ್ಟಿ ಅವರನ್ನು ಅರ್ಭರ್ಥಿಯನ್ನಾಗಿ ಘೋಷಣೆ ಮಾಡಿದೆ. ಸುಧಾಕರ್ ಎಸ್.ಶೆಟ್ಟಿ ಅವರು ಅನೇಕ ತಿಂಗಳಿಂದ ಕ್ಷೇತ್ರದಲ್ಲೇ ಬೀಡುಬಿಟ್ಟು ಪಕ್ಷ ಸಂಘಟನೆಯಲ್ಲಿ ತೊಡಗಿದ್ದರು. ಜೆಡಿಎಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಅವರಿಗೆ ಪಕ್ಷದ ವರಿಷ್ಠರು ಗ್ರೀನ್ ಸಿಗ್ನಲ್ ನೀಡಿದ್ದಾರೆ. ಈ ಮೂಲಕ ಶೃಂಗೇರಿ ಕ್ಷೇತ್ರದ ಜನರ ಕುತೂಹಲಕ್ಕೆ ಪಕ್ಷ ತೆರೆ ಎಳೆದಿದೆ. ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಧಿಕೃತವಾಗಿ ಘೋಷಣೆ ಮಾಡಿ ಜೆಡಿಎಸ್ ಚುನಾವಣೆ ಅಖಾಡಕ್ಕಿಳಿದಿದೆ.

ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳ ಘೋಷಣೆ
ಸೋಮವಾರ ಜೆಡಿಎಸ್ ಪಕ್ಷ 93 ಕ್ಷೇತ್ರಗಳ ಅಭ್ಯರ್ಥಿಗಳನ್ನು ಘೋಷಣೆ ಮಾಡಿದ್ದು, ಚಿಕ್ಕಮಗಳೂರು ಜಿಲ್ಲೆಯ ಮೂರು ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಣೆ ಮಾಡಲಾಗಿದೆ. ಮೂವರ ಪೈಕಿ ಇಬ್ಬರು ಹೊಸ ಮುಖಕ್ಕೆ ಪಕ್ಷ ಮಣೆ ಹಾಕಿದೆ. ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಬಿ.ಎಂ.ತಿಮ್ಮಶೆಟ್ಟಿ ಹಾಗೂ ಶೃಂಗೇರಿ ಕ್ಷೇತ್ರದ ಅಭ್ಯರ್ಥಿ ಸುಧಾಕರ್ ಎಸ್.ಶೆಟ್ಟಿ 2023ರ ಚುನಾವಣೆಯ ಹೊಸಮುಖಗಳಾಗಿದ್ದು, ಈಗಾಗಲೇ ಕ್ಷೇತ್ರದಲ್ಲಿ ಚುನಾವಣಾ ತಯಾರಿಯನ್ನು ಬಿರುಸಿನಿಂದ ನಡೆಸುತ್ತಿದ್ದಾರೆ.

ಬಾಕಿ ಉಳಿದ ಕಡೂರು, ತರೀಕೆರೆ ಕ್ಷೇತ್ರಗಳು
ಕಡೂರು ಕ್ಷೇತ್ರ ಮತ್ತು ತರೀಕೆರೆ ಕ್ಷೇತ್ರದಿಂದ ಯಾರು ಅಭ್ಯರ್ಥಿಗಳು ಎಂಬ ಗೊಂದಲಕ್ಕೆ ಇನ್ನೂ ತೆರೆಬಿದ್ದಿಲ್ಲ. ಮುಂದಿನ ದಿನಗಳಲ್ಲಿ ಈ ಗೊಂದಲಕ್ಕೆ ತೆರೆಬೀಳುವ ನಿರೀಕ್ಷೆ ಇದೆ. ಕಡೂರು ಕ್ಷೇತ್ರದಿಂದ ಈ ಹಿಂದಿನ ಚುನಾವಣೆಯಲ್ಲಿ ವೈಎಸ್‍ವಿ ದತ್ತ ಅವರು ಅಭ್ಯರ್ಥಿ ಆಗಿದ್ದರು. ಆದರೆ, ವೈಎಸ್‍ವಿ ದತ್ತ ಇತ್ತೀಚೆಗೆ ಜೆಡಿಎಸ್ ತೊರೆದು ಡಿಸೆಂಬರ್ 18ರಂದು ಕಾಂಗ್ರೆಸ್ ಸೇರ್ಪಡೆಗೊಳ್ಳುವುದಾಗಿ ತಿಳಿಸಿದ್ದರು. ಆದರೆ ಇದುವರೆಗೂ ವೈಎಸ್‍ವಿ ದತ್ತ ಕಾಂಗ್ರೆಸ್ ಸೇರ್ಪಡೆಗೊಂಡಿಲ್ಲ. ಜೆಡಿಎಸ್ ನಾಯಕರು ವೈಎಸ್‍ವಿ ದತ್ತ ಅವರನ್ನು ಪಕ್ಷದಲ್ಲೇ ಉಳಿಸಿಕೊಳ್ಳುವ ಕಸರತ್ತು ನಡೆಸುತ್ತಿದ್ದಾರೆ ಎಂಬ ಮಾಹಿತಿ ಇದೆ. ವೈಎಸ್‍ವಿ ದತ್ತ ಕಾಂಗ್ರೆಸ್ ಸೇರುತ್ತಾರೆಯೋ ಅಥವಾ ಜೆಡಿಎಸ್ ಪಕ್ಷದಿಂದ ಕಡೂರು ಕ್ಷೇತ್ರದ ಅಭ್ಯರ್ಥಿಯಾಗುತ್ತಾರೆಯೋ ಎಂಬ ಗೊಂದಲ ಇದೆ. ಮುಂದಿನ ದಿನಗಳಲ್ಲಿ ಈ ಗೊಂದಲಕ್ಕೆ ತೆರೆ ಬಿಳಲಿದೆ. ಇನ್ನು ತರೀಕೆರೆ ಕ್ಷೇತ್ರದಿಂದ ಯಾರು ಅರ್ಭರ್ಥಿ ಆಗಲಿದ್ದಾರೆ ಎನ್ನುವ ಕುತೂಹಲ ಮುಂದುವರಿದಿದೆ. ತರೀಕೆರೆ ಕ್ಷೇತ್ರದಿಂದ ಜೆಡಿಎಸ್ ಯಾರನ್ನು ಅಭ್ಯರ್ಥಿಯನ್ನಾಗಿ ಕಣಕ್ಕಿಳಿಸಲಿದೆ ಎಂದು ಕಾದುನೋಡಬೇಕಿದೆ.












Click it and Unblock the Notifications