ಕಾಫಿ ತೋಟದ ಮಾಲೀಕನ ಮೇಲೆ ಹಲ್ಲೆಗೆ ಮುಂದಾದ ಅಸ್ಸಾಂ ಕಾರ್ಮಿಕರು
ಚಿಕ್ಕಮಗಳೂರು, ಡಿಸೆಂಬರ್ 19: ಕಾಡಾನೆಗಳ ಭಯ ಮತ್ತು ಇತರ ಕಾರಣಗಳಿಂದ ಜಿಲ್ಲೆಯ ಕಾಫಿ ತೋಟಗಳ ಕೆಲಸಕ್ಕೆ ಸ್ಥಳೀಯ ಕಾರ್ಮಿಕರು ಸಿಗದಂತಾಗಿದೆ. ಇತ್ತೀಚಿನ ದಿನಗಳಲ್ಲಿ ಕಾಫಿ ತೋಟದ ಮಾಲೀಕರು ಕೆಲಸಕ್ಕಾಗಿ ಇತರ ರಾಜ್ಯಗಳಿಂದ ಕಾರ್ಮಿಕರನ್ನು ಕರೆ ತರುವುತ್ತಿರುವುದು ಸಾಮಾನ್ಯವಾಗಿದೆ.
ಬೇರೆ ರಾಜ್ಯದ ಕಾರ್ಮಿಕರನ್ನು ಕರೆತಂದು ಅವರಿಗೆ ವಸತಿ, ಕೂಲಿ ನೀಡಿ ಕಾಫಿ ತೋಟದ ಕೆಲಸಗಳನ್ನು ಮಾಡಿಸಿಕೊಳ್ಳುತ್ತಿದ್ದ ಮಾಲೀಕರಿಗೆ ಇದೀಗ ಅವರೇ ಸಮಸ್ಯೆಯಾಗಿ ಪರಿಣಮಿಸಿದ್ದಾರೆ. ಕಾಫಿ ತೋಟದ ಮಾಲೀಕರ ಮೇಲೆ ಅಸ್ಸಾಂ ಕಾರ್ಮಿಕರು ಹಲ್ಲೆಗೆ ಯತ್ನಿಸಿರುವ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.
ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಹ್ಯಾರೀಸ್ ಎಸ್ಟೇಟ್‌ನಲ್ಲಿ ಕಾರ್ಮಿಕರೇ ತೋಟದ ಮಾಲೀಕರ ಮೇಲೆ ಹಲ್ಲೆಗೆ ಮುಂದಾಗಿದ್ದಾರೆ. ಅಡ್ವಾನ್ಸ್ ತೆಗೆದುಕೊಂಡಿದ್ದಾರೆ, ಆದರೆ ಕೆಲಸ ಮಾಡುತ್ತಿಲ್ಲ ಎನ್ನುವುದನ್ನು ಪ್ರಶ್ನಿಸಿದ ಮಾಲೀಕರ ಮೇಲೆ ಅಸ್ಸಾಂನ ಕಾರ್ಮಿಕರು ಮಚ್ಚು ಹಾಗೂ ದೊಣ್ಣೆಯಿಂದ ಹಲ್ಲೆಗೆ ಮುಂದಾಗಿದ್ದಾರೆ.

ಈ ಬಗ್ಗೆ ತೋಟದ ಮಾಲೀಕ ಪೊಲೀಸರಿಗೆ ದೂರು ಕೂಡ ನೀಡಿದ್ದಾರೆ. ಅಸ್ಸಾಂನವರು ಎಂದು ಹೇಳಿಕೊಂಡು ಕಾಫಿತೋಟದಲ್ಲಿ ಕೆಲಸ ಮಾಡುತ್ತಿರುವವರು ಶೇಖಡಾ ನೂರಕ್ಕೆ ನೂರು ಅಸ್ಸಾಂನವರು ಎಂದು ಯಾರೂ ಒಪ್ಪುತ್ತಿಲ್ಲ. ಹೀಗಾಗಿ ಜಿಲ್ಲೆಯ ಕಾಫಿತೋಟದ ಮಾಲೀಕರು ಈಗಲೇ ಎಚ್ಚೆತ್ತುಕೊಳ್ಳಬೇಕಾಗಿದೆ.
ಕಾಫಿತೋಟದ ಕೆಲಸಕ್ಕೆ ಉತ್ತರ ಕರ್ನಾಟಕ ಹಾಗೂ ಉತ್ತರ ಭಾರತದದಿಂದಲೂ ಕಾರ್ಮಿಕರು ಬರುತ್ತಾರೆ. ಬಂದವರು ಅಡ್ವಾನ್ಸ್ ಪಡೆದು, ಕೆಲಸ ಮುಗಿಸಿಕೊಂಡು ಹೋಗುತ್ತಾರೆ. ಅಗತ್ಯಿರುವ ಸಂದರ್ಭದಲ್ಲಿ ಮತ್ತೆ ಬರುತ್ತಾರೆ. ಅದು ಕಾರ್ಮಿಕರು ಮತ್ತು ಮಾಲೀಕರ ನಡುವಿನ ಸಂಬಂಧ ಹಾಗೂ ನಂಬಿಕೆ ಬಿಟ್ಟಿರುವ ವಿಚಾರವಾಗಿದೆ.
ಅಸ್ಸಾಂ ಎಂದು ಹೇಳಿಕೊಂಡು ಬರುವವರು ಒಂದು ತೋಟದಲ್ಲಿ ಕೆಲಸ ಮಾಡುತ್ತೇವೆಂದು ಮುಂಗಡ ಹಣ ಪಡೆದು ತಿಂಗಳು ಕೆಲಸ ಮಾಡಿ, ಮತ್ತೊಂದು ತೋಟಕ್ಕೆ ಹೋಗಿ ಅಲ್ಲೂ ಹಣ ಪಡೆದು ಎಲ್ಲೂ ಕೆಲಸ ಮಾಡದೆ ನಾಟಕ ಮಾಡಿರುವ ಅನೇಕ ಘಟನೆಗಳು ನಡೆದಿವೆ. ಇದೀಗ ಹ್ಯಾರೀಸ್ ಎಸ್ಟೇಟ್‌ನಲ್ಲೂ ಸಹ ಇಂತಹದ್ದೇ ಘಟನೆ ನಡೆದಿದೆ. ಹೀಗಾಗಿ ಜಿಲ್ಲೆಯ ಕಾಫಿ ತೋಟದ ಮಾಲೀಕರು ಕೂಡಲೇ ಎಚ್ಚೆತ್ತುಕೊಳ್ಳಬೇಕಾಗಿದೆ.
ಇನ್ನು ಈ ಬಗ್ಗೆ ಜಿಲ್ಲಾ ಪೊಲೀಸ್ ಇಲಾಖೆ ಕೂಡ ಗಮನಹರಿಸಬೇಕಾಗಿದ್ದು, ಅಸ್ಸಾಂನವರು ಎಂದು ಹೇಳಿಕೊಂಡು ಬಂದು ಕಾಫಿ ತೋಟದಲ್ಲಿ ಕೆಲಸ ಮಾಡುವ ಅಕ್ರಮ ಬಾಂಗ್ಲಾ ವಲಸಿಗರ ಮೇಲೆ ನಿಗಾ ವಹಿಸಬೇಕು ಎನ್ನುವುದು ಸ್ಥಳೀಯರ ಆಗ್ರಹವಾಗಿದೆ. ಜೊತೆಗೆ ಕಾಫಿ ತೋಟ ಮಾಲೀಕರು ಒಂದಾಗಿ ಮುಂದೆ ಇಂತಹ ಸನ್ನಿವೇಶ ಬರದಂತೆ ಎಚ್ಚೆತ್ತುಕೊಳ್ಳಬೇಕಾಗಿದೆ.












Click it and Unblock the Notifications