ಚಿಕ್ಕಮಗಳೂರು: ಒಂಟಿ ಸಲಗನ ಆರ್ಭಟ ನಿಯಂತ್ರಿಸಲು ಕಾಫಿನಾಡಿಗೆ ಬಂದ ಅರ್ಜುನ, ಭೀಮ
ಚಿಕ್ಕಮಗಳೂರು, ಮಾರ್ಚ್ 28: ಕಾಫಿನಾಡು ಚಿಕ್ಕಮಗಳೂರಿನ ಕೆಲ ಬಯಲುಸೀಮೆ ಭಾಗ ಹಾಗೂ ಬಹುತೇಕ ಮಲೆನಾಡು ಭಾಗ ಕಳೆದೊಂದು ದಶಕಗಳಿಂದ ಆನೆ ಹಾವಳಿಗೆ ಜನ ಹೈರಾಣಗಿದ್ದಾರೆ.
ಕಳೆದ ಎರಡ್ಮೂರು ವರ್ಷಗಳಿಂದ ಚಿಕ್ಕಮಗಳೂರು ತಾಲೂಕಿನ ಸುತ್ತಮುತ್ತವೂ ಆನೆ ಹಾವಳಿ ಮಿತಿ ಮೀರಿದೆ. ಸದ್ಯ ಸಾವು-ನೋವು ಸಂಭವಿಸಬಾರದು ಎಂದು ಅರಣ್ಯ ಇಲಾಖೆ ಸಾಕಾನೆಗಳನ್ನು ತಂದು ಒಂಟಿ ಸಲಗದ ಆಪರೇಷನ್‌ಗೆ ಮುಂದಾಗಿದ್ದಾರೆ. ಕಾಡಾನೆ ಕಾಡಿಗಟ್ಟಲು ಮೈಸೂರಿನ ದಸರಾ ಅಂಬಾರಿ ಹೊತ್ತ ಅರ್ಜುನ, ಭೀಮ ಆನೆಗಳು ಕಾಫಿನಾಡಿಗೆ ಆಗಮಿಸಿವೆ.
ಮಲೆನಾಡು ಭಾಗ ಕಳೆದೊಂದು ದಶಕಗಳಿಂದ ಆನೆ ಹಾವಳಿಗೆ ಜನ ಬೇಸತ್ತು ಹೋಗಿದ್ದಾರೆ. ಅದರಲ್ಲೂ ಮೂಡಿಗೆರೆ ತಾಲೂಕಿನಲ್ಲೇ ಹೆಚ್ಚು. ಮೂಡಿಗೆರೆಯ ಸಾರಗೋಡು, ಕೆಳಗೂರು, ಬೈರಾಪುರ, ಕುಂದೂರು, ಕೋಗಿಲೆ ಸೇರಿದಂತೆ ಹತ್ತಾರು ಹಳ್ಳಿಯ ಜನ ಆನೆ ಹಾವಳಿಯಿಂದ ಕಂಗಾಲಾಗಿದ್ದಾರೆ. ಆದರೆ ಕಳೆದ ಎರಡ್ಮೂರು ವರ್ಷಗಳಿಂದ ಚಿಕ್ಕಮಗಳೂರು ತಾಲೂಕಿನ ಸುತ್ತಮುತ್ತವೂ ಆನೆ ಹಾವಳಿ ಮಿತಿ ಮೀರಿದೆ.

ಚಿಕ್ಕಮಗಳೂರು ನಗರಕ್ಕೂ ಭೇಟಿ ನೀಡಿದ್ದ ಕಾಡಾನೆಗಳು ರಾಷ್ಟ್ರೀಯ ಹೆದ್ದಾರಿಯಲ್ಲಿ ವಾಕಿಂಗ್ ಮಾಡಿದ್ದವು. ಈ ಮಧ್ಯೆ ಕಳೆದ ಎರಡು ತಿಂಗಳಿಂದ ಚಿಕ್ಕಮಗಳೂರು ತಾಲೂಕಿನ ಬೀಕನಹಳ್ಳಿಯಲ್ಲಿ ಒಂಟಿ ಸಲಗದ ಕಾಟ ಹೆಚ್ಚಿತ್ತು. ದಿನಬಿಟ್ಟು ದಿನ ಕಾಡಾನೆ ನಡೆಸುತ್ತಿದ್ದ ದಾಂಧಲೆಗೆ ರೈತರು ಹೊಲಗದ್ದೆಗಳಿಗೆ ಹೋಗುವುದನ್ನೇ ಬಿಟ್ಟಿದ್ದರು.
ಕೆಲ ತೋಟದ ಮಾಲೀಕರು ತೋಟದಲ್ಲಿ ಡಿಜೆ ಸಿಸ್ಟಮ್ ಇಟ್ಟು ಆನೆ ಹಾವಳಿಗೆ ಬ್ರೇಕ್ ಹಾಕುವುದಕ್ಕೆ ಮುಂದಾಗಿದ್ದರು. ಆದರೆ, ಸಲಗದ ಕಾಟ ನಿಲ್ಲಲಿಲ್ಲ. ಹಾಗಾಗಿ, ಸಾವು-ನೋವು ಸಂಭವಿಸಬಾರದು ಎಂದು ಅರಣ್ಯ ಇಲಾಖೆ ಸಾಕಾನೆಗಳನ್ನು ತಂದು ಒಂಟಿ ಸಲಗದ ಆಪರೇಷನ್‌ಗೆ ಮುಂದಾಗಿದೆ.

ಕಾಫಿ ತೋಟವೇ ಹೆಚ್ಚಿರುವ ಚಿಕ್ಕಮಗಳೂರಿನಲ್ಲಿ ಕಾಫಿ ತೋಟ ಕೂಡ ಕಾಡಿನಂತೆಯೇ ಇರುತ್ತದೆ. ಹಾಗಾಗಿ, ಆನೆ ಹಾವಳಿಯನ್ನು ನಿಯಂತ್ರಿಸುವುದು ಕಷ್ಟ ಸಾಧ್ಯ. ಎರಡು ದಿನಗಳ ಹಿಂದಷ್ಟೆ ಆಲ್ದೂರು ಗ್ರಾಮದ ಬಳಿ ಕಾಫಿ ತೋಟದಲ್ಲಿ ಮೆಣಸು ಕೊಯ್ಯುತ್ತಿದ್ದ ಮಹಿಳೆಯನ್ನು ಆನೆ ತುಳಿದು ಸಾಯಿಸಿ, ಮತ್ತೋರ್ವನಿಗೆ ಗಂಭೀರ ಗಾಯವಾಗಿಸಿದೆ.
ಬೀಕನಹಳ್ಳಿ ಕೂಡ ಕಾಡಂಚಿನ ಗ್ರಾಮವಾಗಿರುವುದರಿಂದ ನಾಳೆ ಮತ್ತೊಂದು ಅನಾಹುತ ಸಂಭವಿಸುವ ಮುನ್ನವೇ ಎಚ್ಚೆತ್ತುಕೊಳ್ಳೋಣ ಎಂದು ಅರಣ್ಯ ಇಲಾಖೆ ಮೈಸೂರಿನ ಅಂಬಾರಿ ಹೊರುವ ಸಾಕಾನೆ ಅರ್ಜುನ ಹಾಗೂ ಭೀಮನನ್ನು ಕರೆಸಿ ಕಾಡಿನ ಒಂಟಿ ಸಲಗದ ಅಬ್ಬರಕ್ಕೆ ಬ್ರೇಕ್ ಹಾಕಿ ಕಾಡಿಗಟ್ಟಲು ಮುಂದಾಗಿದ್ದಾರೆ.

ಕಾರ್ಯಾಚರಣೆಯಲ್ಲಿ ಸುಮಾರು 60 ಸಿಬ್ಬಂದಿಗಳು ಭಾಗಿಯಾಗಿದ್ದು, ಒಂದೆರಡು ದಿನದಲ್ಲಿ ಒಂಟಿ ಸಲಗವನ್ನು ಕಾಡಿಗಟ್ಟಲಿದ್ದಾರೆ. ಬೀಕನಹಳ್ಳಿ ಕಾಡಂಚಿನ ಗ್ರಾಮವಾಗಿದ್ದು ಆನೆ ಹಾವಳಿ ಹೆಚ್ಚಿತ್ತು. ಬಾಳೆ-ಅಡಿಕೆ-ತೆಂಗು, ಕಾಫಿ-ಮೆಣಸು, ಭತ್ತ ಬೆಳೆದಿದ್ದು ರೈತರು ಅರ್ಧ ಕಳೆದುಕೊಂಡಿದ್ದರು. ಇದೀಗ, ಒಂಟಿ ಸಲಗವನ್ನು ಕಾಡಿಗಟ್ಟಲು ಮುಂದಾಗಿರುವುದರಿಂದ ಹಳ್ಳಿಗರು ನಿಟ್ಟುಸಿರು ಬಿಟ್ಟಿದ್ದಾರೆ.
ಇನ್ನು ಈ ಬಗ್ಗೆ ಮಾತಾನಾಡಿರುವ ಡಿಎಫ್ಓ ಕ್ರಾಂತಿ ಸಾರ್ವಜನಿಕರಿಂದ ಸಾಕಷ್ಟು ದೂರು ಬಂದಿದ್ದವು, ನಾವು ಎರಡು ತಿಂಗಳಿನಿಂದ ಕಾಡಾನೆ ಕಾಡಿಗೆ ಹೋಗಬಹುದೆಂದು ಕಾಯುತ್ತಿದ್ದೇವು. ಆದರೆ ಕಾಡಾನೆ ಉಪಟಳ ಹೆಚ್ಚಾಗಿರುವುದರಿಂದ ಆಪರೇಷನ್ ಕಾಡಾನೆ ಪ್ಲಾನ್ ಮಾಡಿ ಇಂದು ಕಾರ್ಯಾಚರಣೆ ಆರಂಭಿಸಿದ್ದೇವು. ಎರಡು, ಮೂರು ದಿನದಲ್ಲಿ ಆಪರೇಷನ್ ಮುಗಿಸುತ್ತೇವೆ. ವಿಶೇಷವಾಗಿ, ಮೈಸೂರಿನ ಅರ್ಜುನ, ಭೀಮ ಆನೆಗಳನ್ನು ಕರೆತಂದು ಕಾಡಾನೆ ಕಾಡಿಗಟ್ಟಲು ಮುಂದಾಗಿದ್ದೇವೆ, ಸುಮಾರು 60 ಜನ ಸಿಬ್ಬಂದಿಗಳಿಂದ ಕಾಡಾನೆ ಆಪರೇಷನ್ ಮಾಡುತ್ತಿದ್ದೇವೆ, ಖಂಡಿತವಾಗಿ ಈ ಕಾಡಾನೆಯನ್ನು ಕಾಡಿಗಟ್ಟುತ್ತೇವೆ ಎಂದರು.
ಒಟ್ಟಾರೆ ಆನೆಗಳಿಂದಾಗುತ್ತಿರುವ ಬೆಳೆ ಹಾನಿ ಹಾಗೂ ಪ್ರಾಣಹಾನಿಯನ್ನು ತಪ್ಪಿಸಿಕೊಳ್ಳಲು ಜನ ಕಷ್ಟಪಡುತ್ತಿದ್ದಾರೆ. ಕಾಡಂಚಿನ ಗ್ರಾಮಗಳ ಹಳ್ಳಿಗರು ಪ್ರಾಣಕ್ಕೂ ಆಪತ್ತು ಉಂಟಾಗಿದೆ. ಅನ್ನ ನೀಡುವ ಕಾಫಿ ತೋಟಗಳು ಕೂಡ ಕಾರ್ಮಿಕರ ಪಾಲಿಗೆ ಜೀವ ತೆಗೆಯುವ ತಾಣಗಳಾಗಿದ್ದು, ಎರಡು ದಿನದ ಹಿಂದಷ್ಟೆ ಮಹಿಳೆ ಕಾಫಿತೋಟದಲ್ಲಿ ಆನೆ ದಾಳಿಗೆ ತುತ್ತಾಗಿದ್ದಾಳೆ. ಎಲ್ಲವನ್ನು ಮನಗಂಡಿರುವ ಅರಣ್ಯ ಇಲಾಖೆ ಮುಂಜಾಗೃತ ಕ್ರಮವಾಗಿ ಒಂಟಿ ಸಲಗದ ಕಾರ್ಯಚರಣೆಗೆ ಮುಂದಾಗಿದ್ದಾರೆ. ಇದು ಯಶ್ವಸಿಯಾದರೆ ಇಲ್ಲಿನ ಜನರ ಪ್ರಾಣ ಹಾಗೂ ರೈತರ ಬೆಳೆ ಎರಡೂ ಉಳಿಯುತ್ತದೆ.












Click it and Unblock the Notifications