ಚಿಕ್ಕಮಗಳೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಚಿಕ್ಕಮಗಳೂರಲ್ಲಿ ಉಪಾಧ್ಯಕ್ಷನ ಅಕ್ರಮಕ್ಕೆ ಗ್ರಾಪಂ ಅಧಿಕಾರಿಗಳ ಸಾಥ್

By ಚಿಕ್ಕಮಗಳೂರು ಪ್ರತಿನಿಧಿ
|
Google Oneindia Kannada News

ಚಿಕ್ಕಮಗಳೂರು, ಏಪ್ರಿಲ್ 21: ಅಮ್ಮನ ಹೆಸರಿಗೆ ಒಂದು ಗ್ರ್ಯಾಂಟ್, ಅದೇ ಯೋಜನೆಯಡಿ ಹೆಂಡತಿಯ ಹೆಸರಿಗೂ ಒಂದು ಗ್ರ್ಯಾಂಟ್. ಒಂದೇ ವರ್ಷಕ್ಕೆ ಮಳೆಯಿಂದ ಮನೆ ಬಿದ್ದೋಯ್ತು ಅಂತಾ ಮತ್ತೊಂದು ಯೋಜನೆಯಡಿ ಗ್ರ್ಯಾಂಟ್, ಹೀಗೆ ಸರ್ಕಾರದ ಯೋಜನೆಗಳನ್ನು ಜನರಿಗೆ ತಲುಪಿಸಬೇಕಾದ ಜನಪ್ರತಿನಿಧಿಯೇ ನುಂಗಿ‌ ನೀರು ಕುಡಿದಿರುವ ಘಟನೆ ಚಿಕ್ಕಮಗಳೂರು ತಾಲ್ಲೂಕಿನ ಲಕ್ಕುಮ್ಮನಹಳ್ಳಿ ಗ್ರಾಮ‌ ಪಂಚಾಯತ್ ನಲ್ಲಿ ನಡೆದಿದೆ.

ಲಕ್ಕುಮ್ಮನಹಳ್ಳಿ ಗ್ರಾಮ ಪಂಚಾಯತ್ ಉಪಾಧ್ಯಕ್ಷ ತಮ್ಮೇಗೌಡ 2010 -11ರ ಬಸವ ವಸತಿ ಯೋಜನೆಯಡಿಯಲ್ಲಿ ತಮ್ಮ ಪತ್ನಿ ಮಹಾದೇವಿ ತಮ್ಮೇಗೌಡ ಮತ್ತು ತಾಯಿ ಕೊಲ್ಲಾಪುರದಮ್ಮ ಕಲ್ಲೇಗೌಡ ಹೆಸರಿನಲ್ಲಿ ಬಸವ ವಸತಿ ಯೋಜನೆಯಡಿಯಲ್ಲಿ ಎರಡು ಮನೆ ಮಂಜೂರು ಮಾಡಿಸಿಕೊಂಡು ಎರಡು ಅಂತಸ್ಥಿನ ಒಂದೇ ಮನೆ ನಿರ್ಮಾಣ ಮಾಡಿಕೊಂಡಿದ್ದು, ಸರ್ಕಾರದ ಯೋಜನೆಯನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ಮನೆಯ ನಿರ್ಮಾಣದಲ್ಲಿಯೂ ಸರ್ಕಾರದ ಯೋಜನೆಯ ಹಣವನ್ನು ದುರುಪಯೋಗ ಮಾಡಲು ಸಹಕಾರ ನೀಡಿದ್ದಲ್ಲದೇ, ಅತಿವೃಷ್ಟಿ ಹಣವನ್ನು ಅರ್ಹನಲ್ಲದ ವ್ಯಕ್ತಿಗೆ ಮಂಜೂರು ಮಾಡುವ ಮೂಲಕ ಗ್ರಾಮ‌ ಪಂಚಾಯತ್ ನ ಅಧಿಕಾರಿಗಳು ಉಪಾಧ್ಯಕ್ಷನ ತಾಳಕ್ಕೆ ತಕ್ಕಂತೆ ಹೆಜ್ಜೆ ಹಾಕಿದ್ದಾರೆ.

ಉಪಾಧ್ಯಕ್ಷನ ಅಕ್ರಮದಲ್ಲಿ ಅಧಿಕಾರಿಗಳು ಶಾಮೀಲು

ಉಪಾಧ್ಯಕ್ಷನ ಅಕ್ರಮದಲ್ಲಿ ಅಧಿಕಾರಿಗಳು ಶಾಮೀಲು

ಇನ್ನು ಈ ಗ್ರಾಮ‌ ಪಂಚಾಯತ್ ಉಪಾಧ್ಯಕ್ಷನ ಈ ಅಕ್ರಮದಲ್ಲಿ ಸ್ಥಳೀಯ ಗ್ರಾಮ‌ ಪಂಚಾಯತ್ ಅಧಿಕಾರಿಗಳು ಶಾಮೀಲಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ. ಬಸವ ವಸತಿ ಯೋಜನೆ ಅಡಿಯಲ್ಲಿ ಮನೆ ಮಂಜೂರು ಮಾಡುವ ವೇಳೆ ಫಲಾನುಭವಿ ಅರ್ಜಿ ಸಲ್ಲಿಸಬೇಕು. ನಂತರ ಗ್ರಾಮ ಪಂಚಾಯತ್ ಸಾಮಾನ್ಯ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಿ ಫಲಾನುಭವಿ ಇದಕ್ಕೆ‌ ಅರ್ಹನಾಗಿದ್ದಾನಾ ಎಂಬುದನ್ನು ಪರಿಶೀಲನೆ ಮಾಡಬೇಕು. ಅದಾದ ಬಳಿಕ‌ ಪಿಡಿಓ ಸ್ಥಳ‌ ಪರಿಶೀಲನೆ ನಡೆಸಿ, ಜಿಪಿಎಸ್ ಮಾಡಬೇಕು. ಇಷ್ಟೆಲ್ಲಾ ಪ್ರಕ್ರಿಯೆ ಇದ್ದರೂ ಒಂದೇ ಮನೆಗೆ ಎರಡು ಬಿಲ್ ಮಂಜೂರು ಆಗಿರುವುದು ಸ್ಥಳೀಯರಲ್ಲಿ ಅನುಮಾನ ಮೂಡಿಸಿದೆ.

ಅತಿವೃಷ್ಟಿ ಹಣವೂ ದುರಪಯೋಗ

ಅತಿವೃಷ್ಟಿ ಹಣವೂ ದುರಪಯೋಗ

ಕಳೆದ ವರ್ಷ ಮಲೆನಾಡಿನಲ್ಲಿ ಸುರಿದ ಮಳೆ ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಭಾರೀ ಅನಾಹುತವನ್ನು ಸೃಷ್ಟಿ ಮಾಡಿತ್ತು. ಅತಿವೃಷ್ಟಿಯಿಂದ ಅದೆಷ್ಟೋ ಕುಟುಂಬಗಳು ತೋಟ, ಮನೆಗಳನ್ನು ಕಳೆದುಕೊಂಡು ಅಕ್ಷರಶಃ ಬೀದಿಗೆ ಬಿದ್ದಿದ್ದವು. ಈ ಹಿನ್ನೆಲೆ ಸರ್ಕಾರ RGHCL (ರಾಜೀವ್ ಗಾಂಧಿ ವಸತಿ ನಿಗಮ) ವತಿಯಿಂದ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡವರರಿಗೆ ಅನುದಾನ ನೀಡಲಾಗಿತ್ತು. ಆದರೆ ಈ ಯೋಜನೆಯನ್ನೂ ದುರುಪಯೋಗ ಪಡಿಸಿಕೊಂಡು ತಮ್ಮೇಗೌಡ ತಮ್ಮ ಹೊಸ ಮನೆಯ ಪಕ್ಕದಲ್ಲಿರುವ ಹಳೆಯ ಮನೆಯನ್ನು, ಜೆಸಿಬಿ ಮೂಲಕ ಡೆಮಾಲಿಶ್ ಮಾಡಿಸಿ RGHCL ಗೆ ಅರ್ಜಿ ಸಲ್ಲಿಸಿ ಮೊದಲ‌ ಕಂತಿನ‌ ಒಂದು ಲಕ್ಷ ಅನುದಾನ ಪಡೆದಿದ್ದರು. ಇನ್ನು ಒಂದು ಹೆಜ್ಜೆ ಮುಂದೆ ಹೋಗಿ ಈತ ಅತಿವೃಷ್ಟಿಯಿಂದ ಎಲ್ಲವನ್ನು ಕಳೆದುಕೊಂಡವರಿಗೆ ರಗ್ಗು, ಹಾಸಿಗೆಗಳಿಗೆ ನೀಡಿದ ಹತ್ತು ಸಾವಿರ ಹಣವನ್ನು ತಮ್ಮ ಖಾತೆಗೆ ಜಮಾ ಮಾಡಿಸಿಕೊಂಡಿದ್ದರು.

ಉಪಾಧ್ಯಕ್ಷನ ತಾಳಕ್ಕೆ ತಕ್ಕಂತೆ ಕುಣಿದ ಗ್ರಾ.ಪಂ ಅಧಿಕಾರಿಗಳು

ಉಪಾಧ್ಯಕ್ಷನ ತಾಳಕ್ಕೆ ತಕ್ಕಂತೆ ಕುಣಿದ ಗ್ರಾ.ಪಂ ಅಧಿಕಾರಿಗಳು

ಈತನ‌ ಮನೆ ಅತಿವೃಷ್ಟಿಯಿಂದ ಹಾನಿಗೊಳಗಾಗಿದೆ ಎಂದು ಉಲ್ಲೇಖ(1) ರಲ್ಲಿ ತಹಶೀಲ್ದಾರ್ ಸೇರಿದಂತೆ ಗ್ರಾಮಲೆಕ್ಕಾಧಿಕಾರಿ, ವೃತ್ತ ರಾಜಸ್ವ ನಿರೀಕ್ಷಕರು, ಹಾಗೂ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಸಹಾಯಕ ಇಂಜಿನಿಯರ್ ಗ್ರಾಮ ಪಂಚಾಯತ್ ಉಪಾಧ್ಯಕ್ಷನ ಪತ್ನಿ ಮಹಾದೇವಿ ತಮ್ಮೇಗೌಡ ಇವರ ಬೀರನಹಳ್ಳಿ ಗ್ರಾಮದಲ್ಲಿರುವ ಮನೆ 2019 -20 ನೇ ಸಾಲಿನಲ್ಲಿ ಅತಿಯಾದ ಮಳೆಯಾದ ಕಾರಣ ಶೇ 60% ರಷ್ಟು ಹಾನಿಯಾಗಿದೆ ಎಂದು ದೃಢೀಕರಿದ್ದಾರೆ. ಅಲ್ಲದೇ ರಾಜೀವ್ ಗಾಂಧಿ ವಸತಿ ನಿಗಮದಡಿಯಲ್ಲಿ ಪ್ರಕೃತಿ ವಿಕೋಪಕ್ಕೆ ನೀಡುವ ಮೊದಲ ಕಂತಿನ ಒಂದು ಲಕ್ಷ ರುಪಾಯಿ ಉಪಾಧ್ಯಕ್ಷನ ಪತ್ನಿ ಖಾತೆಗೆ ಜಮಾ ಆಗಿದೆ. ಇದರಿಂದ ಈ ಅಕ್ರಮದಲ್ಲಿ ಸ್ಥಳೀಯ ಅಧಿಕಾರಿಗಳು ಭಾಗಿಯಾಗಿದ್ದಾರೆ ಎಂಬುದು ಮೇಲ್ನೋಟಕ್ಕೆ ಕಂಡು ಬಂದಿದೆ.‌

ಸ್ಥಳೀಯರ ದೂರಿನ ಮೇಲೆ ತನಿಖೆ, ಅಕ್ರಮ‌ ಬಯಲು

ಸ್ಥಳೀಯರ ದೂರಿನ ಮೇಲೆ ತನಿಖೆ, ಅಕ್ರಮ‌ ಬಯಲು

ಗ್ರಾಮ‌ ಪಂಚಾಯತ್ ಉಪಾಧ್ಯಕ್ಷ ತಮ್ಮೇಗೌಡ ತಾನು ಹೊಸದಾಗಿ ಕಟ್ಟಿಸಿದ ಮನೆಯ ಪಕ್ಕದಲ್ಲಿದ್ದ ಹಳೆಯ ಮನೆಯನ್ನು ಮಳೆಗಾಲ ಮುಗಿದ ಕೆಲವೇ ದಿನಗಳಲ್ಲಿ ತಾನೇ ಜೆಸಿಬಿಯಿಂದ ಕೆಡವಿಸಿದ್ದಾನೆ. ಅಲ್ಲದೇ ಪ್ರಕೃತಿ ವಿಕೋಪದಡಿಯಲ್ಲಿ ರಾಜೀವ್ ಗಾಂಧಿ ವಸತಿ ನಿಗಮದ

ಆರ್ ಜಿಎಚ್ ಸಿಎಲ್ ತಂತ್ರಾಶ ಅಳವಡಿಸಿ 'ಬಿ' ಕೆಟಗರಿಯಲ್ಲಿ ಮೊದಲನೆ ಕಂತು ಒಂದು ಲಕ್ಷ ಹಣವನ್ನು ಪಡೆದಿರುವುದು ಬೆಳಕಿಗೆ ಬಂದಿದೆ.‌

ಈ ಬಗ್ಗೆ ಅನುಮಾನಗೊಂಡ ಬೀರನಹಳ್ಳಿ ಗ್ರಾಮಸ್ಥರು ಚಿಕ್ಕಮಗಳೂರು ಉಪವಿಭಾಗಾಧಿಕಾರಿಗಳಿಗೆ ದೂರು ನೀಡಿದ್ದಾರೆ.‌ ಈ ವೇಳೆ ಸ್ಥಳ ಪರಿಶೀಲನೆ ಮಾಡಿ ವಿಚಾರಣೆ ನಡೆಸಿದ ವೇಳೆ ಅಕ್ರಮ‌ ಎಸಗಿರುವುದು ಸಾಭೀತಾಗಿದೆ. ಅಲ್ಲದೇ ಅಕ್ರಮದಲ್ಲಿ ಸ್ಥಳೀಯ ಅಧಿಕಾರಿಗಳು ಶಾಮೀಲಾಗಿರುವುದು ಬೆಳಕಿಗೆ ಬಂದಿದ್ದು, ಅಕ್ರಮ ಎಸಗಿದವರ ವಿರುದ್ಧ ಸೂಕ್ತ ಕ್ರಮಕ್ಕೆ ಜಿಲ್ಲಾಧಿಕಾರಿಗಳಿಗೆ ತಿಳಿಸಲಾಗಿದೆ.

English summary
Abuse Of Power By Gram Panchayat Vice Chairman In Lakkummanahalli, Chikkamagaluru District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X