ಸಾರಕ್ಕಿ ಕೆರೆಗೆ ಆಯುಕ್ತರ ಭೇಟಿ: ಆಯುಕ್ತ ಕೆ ಎನ್ ರಮೇಶ್ ಅಧಿಕಾರಿಗಳಿಗೆ ಖಡಕ್ ವಾರ್ನಿಂಗ್
ಬೆಂಗಳೂರು ದಕ್ಷಿಣ ನಗರ ಪಾಲಿಕೆಯ ಆಯುಕ್ತ ಕೆ.ಎನ್. ರಮೇಶ್ ಅವರು ನಿನ್ನೆ ಸಾರಕ್ಕಿ ಕೆರೆ ವ್ಯಾಪ್ತಿಯಲ್ಲಿ ಹಮ್ಮಿಕೊಂಡಿದ್ದ ಸುದೀರ್ಘ ಪಾದಯಾತ್ರೆ ನಡೆಸಿ ಸ್ಥಳೀಯ ಸಮಸ್ಯೆಗಳ ಪರಿಶೀಲನೆ ಮಾಡಿದರು. ಈ ವೇಳೆ ಒಳಚರಂಡಿ ಸಮಸ್ಯೆ, ಕಸದ ವಿಲೇವಾರಿ, ಶೌಚಾಲಯ ಕಾಮಗಾರಿ ಹಾಗೂ ನೀರಿನ ಮಾಲಿನ್ಯ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು.
ಯುಜಿಡಿ ವ್ಯವಸ್ಥೆಯ ಸಮಗ್ರ ತಾಂತ್ರಿಕ ಪರಿಶೀಲನೆ
ಕೆರೆಯ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಒಳಚರಂಡಿ ನೀರು ಹಿಮ್ಮುಖವಾಗಿ ಹರಿಯುತ್ತಿರುವುದು ಮತ್ತು ಪೈಪ್‌ಲೈನ್‌ಗಳ ಬ್ಲಾಕೇಜ್ ಬಗ್ಗೆ ಸಾರ್ವಜನಿಕರು ಆಯುಕ್ತರ ಗಮನಕ್ಕೆ ತಂದರು. ಈ ಕೂಡಲೇ ಇಡೀ ಯುಜಿಡಿ ಜಾಲದ ಸಾಮರ್ಥ್ಯ, ಹೂಳು ತೆಗೆಯುವಿಕೆ ಮತ್ತು ಎಸ್‌ಟಿಪಿ ಘಟಕಗಳ ಕಾರ್ಯಕ್ಷಮತೆಯ ಬಗ್ಗೆ ವೈಜ್ಞಾನಿಕ ಸಮೀಕ್ಷೆ ನಡೆಸಿ ವರದಿ ನೀಡುವಂತೆ ಬಿಡಬ್ಲ್ಯೂಎಸ್ಎಸ್‌ಬಿ ಅಧಿಕಾರಿಗಳಿಗೆ ಆಯುಕ್ತರು ಸೂಚಿಸಿದರು.

ಸಾರ್ವಜನಿಕ ಶೌಚಾಲಯ ಕಾಮಗಾರಿಯ ತುರ್ತಾಗಿ ಪೂರ್ಣಗೊಳಿಸಿ
ಕಳೆದ ಎರಡು ವರ್ಷಗಳಿಂದ ಕೆರೆಯ ಆವರಣದಲ್ಲಿ ಎರಡನೇ ಶೌಚಾಲಯದ ಕಾಮಗಾರಿ ಬಾಕಿ ಇರುವುದನ್ನು ಗಂಭೀರವಾಗಿ ಪರಿಗಣಿಸಿದ ಆಯುಕ್ತರು, ಸ್ಥಳದಲ್ಲೇ ಗುತ್ತಿಗೆದಾರರನ್ನು ತರಾಟೆಗೆ ತೆಗೆದುಕೊಂಡರು. ನೀರಿನ ಸಂಪರ್ಕದ ನೆಪವೊಡ್ಡಿ ವಿಳಂಬ ಮಾಡುವುದನ್ನು ಸಹಿಸುವುದಿಲ್ಲ ಎಂದು ತಿಳಿಸಿದ ಅವರು, ತಕ್ಷಣವೇ ನೀರಿನ ಸಂಪರ್ಕ ಕಲ್ಪಿಸಿ ಶೌಚಾಲಯವನ್ನು ಸಾರ್ವಜನಿಕರ ಬಳಕೆಗೆ ಮುಕ್ತಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ನೈರ್ಮಲ್ಯ ಮತ್ತು ತ್ಯಾಜ್ಯ ಮುಕ್ತ ಕೆರೆ ಆವರಣ
ಅಷ್ಟಲಕ್ಷ್ಮಿ ಲೇಔಟ್ ಮತ್ತು ಕೆರೆಯ ಬದುಗಳಲ್ಲಿ ಅವೈಜ್ಞಾನಿಕವಾಗಿ ಕಸ ಸುರಿಯುತ್ತಿರುವುದನ್ನು ವೀಕ್ಷಿಸಿದ ಆಯುಕ್ತರು, ಕಸ ವಿಲೇವಾರಿ ಗುತ್ತಿಗೆದಾರರಿಗೆ ದಂಡ ವಿಧಿಸಲು ಸೂಚಿಸಿದರು. ಕೆರೆಯ ಆವರಣದಲ್ಲಿ ಬಿದ್ದಿರುವ ಕಟ್ಟಡ ತ್ಯಾಜ್ಯ ಮತ್ತು ಹಳೆಯ ಕಾಂಕ್ರೀಟ್ ಸ್ಲ್ಯಾಬ್‌ಗಳನ್ನು ತಕ್ಷಣವೇ ತೆರವುಗೊಳಿಸುವಂತೆ ಪಾಲಿಕೆಯ ಅಧಿಕಾರಿಗಳಿಗೆ ಆದೇಶಿಸಿದರು.

ಎಲಿಟಾ ಬ್ರಿಡ್ಜ್ ಬಳಿ ಮಾಲಿನ್ಯ ತಡೆಗೆ ಕ್ರಮ
ಎಲಿಟಾ ಅಪಾರ್ಟ್‌ಮೆಂಟ್ ಬಳಿ ನಿಂತಿರುವ ನೀರಿನ ಮೂಲದ ಬಗ್ಗೆ ತನಿಖೆ ನಡೆಸಲು ಮತ್ತು ಅಲ್ಲಿಂದ ಹರಿಯುವ ನೀರು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ನಿಯಮಗಳನ್ನು ಪಾಲಿಸುತ್ತಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಿದರು. ಅಲ್ಲದೆ, ಕೆರೆ ಆವರಣದಲ್ಲಿರುವ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳ ಮಾಲೀಕತ್ವದ ಬಗ್ಗೆ ವರದಿ ನೀಡಲು ಬೆಸ್ಕಾಂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸಾರ್ವಜನಿಕರ ಅಹವಾಲಿಗೆ ಸ್ಪಂದನೆ
ಸರಿಸುಮಾರು 2.5 ಕಿ.ಮೀ ಉದ್ದದ ಈ ಪರಿಶೀಲನಾ ಮಾರ್ಗದಲ್ಲಿ ಸಾರಕ್ಕಿ ವಾಕರ್ಸ್ ಗ್ರೂಪ್‌ನ ಶ್ರೀ ಉಮೇಶ್ ಗೌಡ ಮತ್ತು ನೂರಾರು ಸ್ಥಳೀಯ ನಿವಾಸಿಗಳು ಪಾಲ್ಗೊಂಡು ತಮ್ಮ ಸಮಸ್ಯೆಗಳನ್ನು ಹಂಚಿಕೊಂಡರು. ಸಾರ್ವಜನಿಕರ ದೂರುಗಳನ್ನು ದಾಖಲಿಸಿಕೊಂಡು ಕ್ರಮ ಕೈಗೊಳ್ಳುವಂತೆ ಆಯುಕ್ತರು ಸಂಬಂಧಪಟ್ಟ ನಿರ್ದೇಶನ ನೀಡಿದರು.
ಈ ವೇಳೆ ಕಾರ್ಯಪಾಲಕ ಅಭಿಯಂತರರಾದ ಶ್ರೀ ರವಿ, ಶ್ರೀಮತಿ ದೀಪಶ್ರಿ ಹಾಗೂ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು.














Click it and Unblock the Notifications