Legislative Council: ಪರಿಷತ್ ಚುನಾವಣೆ ಮರು ಮತ ಎಣಿಕೆ ಮುಕ್ತಾಯ, ಬಿಜೆಪಿ ನಾಯಕರಿಗೆ ಟೆಕ್ಷನ್
ಚಿಕ್ಕಮಗಳೂರು, ಮಾರ್ಚ್ 01: ಕರ್ನಾಟಕದ ಬಿಜೆಪಿ ನಾಯಕರು ಫುಲ್ ಟೆಕ್ಷನ್‌ನಲ್ಲಿದ್ದಾರೆ. ಚಿಕ್ಕಮಗಳೂರು ಸ್ಥಳೀಯ ಸಂಸ್ಥೆಗಳಿಂದ 2021ರಲ್ಲಿ ನಡೆದ ವಿಧಾನ ಪರಿಷತ್ ಚುನಾವಣೆ ಮರು ಮತ ಎಣಿಕೆ ಮುಕ್ತಾಯಗೊಂಡಿದೆ. ಕರ್ನಾಟಕ ಹೈಕೋರ್ಟ್ ಆದೇಶದಂತೆ ಮರು ಮತ ಎಣಿಕೆ ಪೂರ್ಣಗೊಂಡಿದೆ. ಚುನಾವಣೆಯಲ್ಲಿ ಬಿಜೆಪಿಯ ಎಂ. ಕೆ. ಪ್ರಾಣೇಶ್ ಜಯಗಳಿಸಿದ್ದು, ಸದ್ಯ ಅವರು ಪರಿಷತ್ ಉಪ ಸಭಾಪತಿಯಾಗಿದ್ದಾರೆ.
ಬಿಗಿ ಪೊಲೀಸ್ ಬಂದೋಬಸ್ತ್‌ನಲ್ಲಿ ಚಿಕ್ಕಮಗಳೂರು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸಮ್ಮುಖದಲ್ಲಿ ಶುಕ್ರವಾರ ಚಿಕ್ಕಮಗಳೂರು ನಗರದ ಐ.ಡಿ.ಎಸ್.ಜಿ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮರು ಮತ ಎಣಿಕೆ ನಡೆದಿದೆ. ಚುನಾವಣಾ ಫಲಿತಾಂಶವನ್ನು ಮುಚ್ಚಿದ ಲಕೋಟೆಯಲ್ಲಿ ಕರ್ನಾಟಕ ಹೈಕೋರ್ಟ್‌ಗೆ ಸಲ್ಲಿಕೆ ಮಾಡಲಾಗುತ್ತದೆ.

2021ರ ಡಿಸೆಂಬರ್ 10ರಂದು ನಡೆದ ವಿಧಾನ ಪರಿಷತ್ ಚುನಾವಣೆಯ ಮರು ಮತ ಎಣಿಕೆಯನ್ನು ಕರ್ನಾಟಕ ಹೈಕೋರ್ಟ್ ಆದೇಶ ಅನ್ವಯ ನಡೆಸಲಾಗಿದೆ. ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಎಂ. ಕೆ ಪ್ರಾಣೇಶ್ 6 ಮತಗಳ ಅಂತರದಿಂದ ಜಯಗಳಿಸಿದ್ದರು. ಸೋಲು ಕಂಡಿದ್ದ ಕಾಂಗ್ರೆಸ್ ಅಭ್ಯರ್ಥಿ ಎ. ವಿ. ಗಾಯತ್ರಿ ಶಾಂತೇಗೌಡ ಮರು ಮತ ಎಣಿಕೆಗೆ ಆಗ್ರಹಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಬಿಜೆಪಿ ನಾಯಕರಿಗೆ ಫುಲ್ ಟೆಕ್ಷನ್: ಮರು ಮತ ಎಣಿಕೆ ಬಳಿಕ ಕಾಂಗ್ರೆಸ್ ಅಭ್ಯರ್ಥಿ ಎ. ವಿ. ಗಾಯತ್ರಿ ಶಾಂತೇಗೌಡ ಬೆಂಬಲಿಗರು ಕಾಂಗ್ರೆಸ್‌ಗೆ ಜೈ ಎಂದು ಘೋಷಣೆಗಳನ್ನು ಕೂಗಿದ್ದಾರೆ. ಚುನಾವಣಾ ಫಲಿತಾಂಶ ಹೊರಬಾರದಿದ್ದರೂ ಸಹ ಬಿಜೆಪಿ ನಾಯಕರು ಟೆಕ್ಷನ್‌ನಲ್ಲಿದ್ದಾರೆ.
ಮರು ಮತಣಿಕೆಯ ಫಲಿತಾಂಶವನ್ನು ಕೋರ್ಟ್ ವೀಕ್ಷಣೆ ಮಾಡಿದ ಬಳಿಕ ತನ್ನ ಆದೇಶವನ್ನು ಹೊರಡಿಸಲಿದೆ. ಒಂದು ವೇಳೆ ಎ. ವಿ. ಗಾಯತ್ರಿ ಶಾಂತೇಗೌಡ ವಿಜೇತ ಅಭ್ಯರ್ಥಿ ಎಂದು ಘೋಷಣೆ ಮಾಡಿದರೆ, ಚಿಕ್ಕಮಗಳೂರು ರಾಜಕೀಯ ಕುತೂಹಲಕ್ಕೆ ಕಾರಣವಾಗಿದೆ.
2021ರಲ್ಲಿ ನಡೆದ ಚುನಾವಣೆಯಲ್ಲಿ ಸ್ಥಳೀಯ ಸಂಸ್ಥೆಗಳಾದ ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿ, ಪುರಸಭೆಯ ಚುನಾಯಿತ ಜನಪ್ರತಿನಿಧಿಗಳು ಮತದಾನ ಮಾಡಿದ್ದರು. 12 ಮಂದಿ ನಾಮ ನಿರ್ದೇಶನ ಸದಸ್ಯರು ಸಹ ಮತದಾನದಲ್ಲಿ ಪಾಲ್ಗೊಂಡಿದ್ದರು. ಬಿಜೆಪಿ ಅಭ್ಯರ್ಥಿ ಎಂ. ಕೆ. ಪ್ರಾಣೇಶ್ ಗೆಲುವು ಕಂಡಿದ್ದರು.
ಚುನಾವಣೆಯಲ್ಲಿ ಒಟ್ಟು 2,410 ಮತಗಳು ಚಲಾವಣೆಯಾಗಿದ್ದವು. 39 ಮತಗಳು ಅಸಿಂಧುವಾಗಿದ್ದವು. 2,371 ಮತಗಳ ಪೈಕಿ ಬಿಜೆಪಿಯ ಎಂ. ಕೆ. ಪ್ರಾಣೇಶ್ 1,188 ಮತಗಳನ್ನು ಪಡೆದು ಜಯಗಳಿಸಿದ್ದರು. ಎ. ವಿ. ಗಾಯತ್ರಿ ಶಾಂತೇಗೌಡ 1,182 ಮತಗಳನ್ನು ಪಡೆದು 6 ಮತಗಳ ಅಂತರದಿಂದ ಸೋತಿದ್ದರು.
ಪರಿಷತ್ ಚುನಾವಣೆಯಲ್ಲಿ ಜಯಗಳಿಸಿದ್ದ ಎಂ. ಕೆ. ಪ್ರಾಣೇಶ್ 2022ರಲ್ಲಿ ವಿಧಾನ ಪರಿಷತ್ ಉಪ ಸಭಾಪತಿಯಾಗಿ ಆಯ್ಕೆಯಾಗಿದ್ದಾರೆ. ಈಗ ಮರು ಮತ ಎಣಿಕೆಯಲ್ಲಿ ಎ. ವಿ. ಗಾಯತ್ರಿ ಶಾಂತೇಗೌಡ ಜಯಗಳಿಸಿದರೆ ಬಿಜೆಪಿ ನಾಯಕ ಎಂ. ಕೆ. ಪ್ರಾಣೇಶ್ ಪರಿಷತ್ ಉಪ ಸಭಾಪತಿ ಸ್ಥಾನವನ್ನು ಬಿಟ್ಟುಕೊಡಬೇಕಿದೆ. ಅವರು ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಸುಪ್ರೀಂಕೋರ್ಟ್‌ನಲ್ಲಿ ಕಾನೂನು ಹೋರಾಟವನ್ನು ಸಹ ನಡೆಸಬಹುದು.












Click it and Unblock the Notifications