Cycling from Chikkaballapur to Ayodhya: 29 ದಿನಗಳ ಬಳಿಕ ಅಯೋಧ್ಯೆಗೆ ತಲುಪಿದ ಯುವ ರಾಮಭಕ್ತ
ಚಿಕ್ಕಬಳ್ಳಾಪುರ ಜೂನ್ 14: ಅಯೋಧ್ಯೆಯ ಶ್ರೀರಾಮನ ದರ್ಶನ ಪಡೆಯಲು ಚಿಕ್ಕಬಳ್ಳಾಪುರದ 22 ವರ್ಷದ ಯುವ ರಾಮಭಕ್ತನೊಬ್ಬ ಬರೋಬ್ಬರಿ 29 ದಿನಗಳ ಬಳಿಕ ಅಯೋಧ್ಯೆಗೆ ತಲುಪಿದ್ದಾನೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಮಂಚೇನಹಳ್ಳಿ ತಾಲೂಕಿನ ರಾಯನಕಲ್ಲು ಗ್ರಾಮದ ನರಸಿಂಹರೆಡ್ಡಿ, ಜಯಲಕ್ಷ್ಮಮ್ಮ ಪುತ್ರ ಬಾನುಪ್ರಸಾದ್‍ರೆಡ್ಡಿ (22) ಎಂಬ ಯುವಕ ಮೇ 16 ರಂದು ಚಿಕ್ಕಬಳ್ಳಾಪುರದಿಂದ ಅಯೋಧ್ಯೆಗೆ ಸೈಕಲ್ ಮೂಲಕ ಪ್ರಯಾಣ ಬೆಳೆಸಿದ್ದನು.

ಅಯೋಧ್ಯೆಗೆ ತೆರಳುವ ಮುನ್ನ ಬಾನುಪ್ರಸಾದ್ ಮಂಚೇನಹಳ್ಳಿ ಸರ್ಕಾರಿ ಶಾಲೆಯ ಆವರಣದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸುವ ಮೂಲಕ ಸ್ನೇಹಿತರು, ಬಂಧುಗಳು ಶುಭ ಹಾರೈಕೆಯೊಂದಿಗೆ ಅಯೋಧ್ಯೆಗೆ ತಮ್ಮ ಸೈಕಲ್ ಯಾತ್ರೆ ಕೈಗೊಂಡಿದ್ದನು. ಜೂನ್ 13 (ಗುರುವಾರ) ಬಾನುಪ್ರಸಾದ್ ಅಯೋಧ್ಯೆಗೆ ತಲುಪಿದ್ದಾನೆ.
ಎಲ್ಲರೂ ಜೈ ಶ್ರೀರಾಮ್ ಅನ್ನಿ. ನಾನು 29 ದಿನಗಳ ಬಳಿಕ ಅಯೋಧ್ಯೆಗೆ ತಲುಪಿದ್ದೇನೆ. ಇಲ್ಲಿಗೆ ಸುಮಾರು 2000 ಸಾವಿರ ಕಿ.ಮೀ ಆಗಿದೆ. ನನ್ನ ಸೈಕಲ್ ಜರ್ನಿ ಕಂಪ್ಲಿಟ್ ಆಗಿದೆ. ನಾನು ಇಟ್ಟ ಗುರಿಯನ್ನು ಸಾಧಿಸಿದ್ದೇನೆ. ಇದಕ್ಕೆ ತುಂಬಾ ಖುಷಿಯಾಗುತ್ತಿದೆ' ಎಂದು ಗುರುವಾರ ಅಯೋಧ್ಯೆಗೆ ತಲುಪಿರುವ ಖುಷಿಯಲ್ಲಿ ಬಾನುಪ್ರಸಾದ್ ತಮ್ಮ ಚಿಕ್ಕಬಳ್ಳಾಪುರ-ಅಯೋಧ್ಯೆ ಸೈಕಲ್ ಪ್ರಯಾಣದ ಅನುಭವದ ವಿಡಿಯೊವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾನೆ. ಈತನ ಸಾಧನೆಗೆ ಚಿಕ್ಕಬಳ್ಳಾಪುರದ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸೈಕಲ್ ಸವಾರಿಗೂ ಮುನ್ನ ಪೂಜೆ
ಅಯೋಧ್ಯೆಗೆ ತೆರಳುವ ಮುನ್ನ ಮಂಚೇನಹಳ್ಳಿ ಸರ್ಕಾರಿ ಶಾಲೆಯ ಆವರಣದಲ್ಲಿರುವ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಿದ ಬಾನುಪ್ರಸಾದ್, ಈ ಸಂದರ್ಭದಲ್ಲಿ ನೆರೆದಿದ್ದ ಹಿತೈಷಿಗಳು, ಸ್ನೇಹಿತರು, ಬಂಧುಗಳು ಶುಭ ಹಾರೈಕೆಗಳೊಂದಿಗೆ ಅಯೋಧ್ಯೆಗೆ ತಮ್ಮ ಸೈಕಲ್ ಯಾತ್ರೆಯನ್ನು ಆರಂಭಿಸಿದರು.
ಈ ವೇಳೆ ಮಾತನಾಡಿದ್ದ ಬಾನುಪ್ರಸಾದ್‍ರೆಡ್ಡಿ, ಅಯೋಧ್ಯೆಗೆ ಬೈಕ್, ರೈಲು ಸೇರಿದಂತೆ ಬೇರೆಬೇರೆ ರೀತಿಯಲ್ಲಿ ಸಾಕಷ್ಟು ಭಕ್ತರು ಪ್ರಯಾಣಿಸುತ್ತಾರೆ. ಆದರೆ ನನಗೆ ಸೈಕಲ್ ಮೂಲಕವೇ ಅಯೋಧ್ಯೆಗೆ ಹೋಗಲು ಇಷ್ಟ. ಇದನ್ನು ನಿರ್ಧರಿಸಿ ಇಂದು ಮಂಚೇನಹಳ್ಳಿಯ ಶ್ರೀ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿ ಸೈಕಲ್ ಮೂಲಕ ಅಯೋಧ್ಯೆಗೆ ಪ್ರಯಾಣ ಆರಂಭಿಸಿದ್ದೇನೆ ಎಂದು ತಿಳಿಸಿದರು.
ಪೊಲೀಸ್ ಆಗುವ ಇಚ್ಚೆ ಹೊಂದಿದ ರಾಮ ಭಕ್ತ
ನಾನು ಪೊಲೀಸ್ ಉದ್ಯೋಗ ಪಡೆಯಲು ಓದುತ್ತಿರುವೆ. ಉದ್ಯೋಗ ಸಿಗುವ ಮುನ್ನವೇ ಅಯೋಧ್ಯೆ ಸೇರಿದಂತೆ ದೇಶದ ವಿವಿಧೆಡೆ ಇರುವ ಪ್ರಸಿದ್ಧ ತಾಣಗಳನ್ನು ವೀಕ್ಷಿಸಬೇಕೆಂಬುದು ನನ್ನ ಬಯಕೆ. ಇದಕ್ಕಾಗಿ ಸಾಮಾಜಿಕ ಜಾಲತಾಣಗಳಲ್ಲಿ ಎಲ್ಲೆಲ್ಲಿ ಪ್ರಸಿದ್ಧ ತಾಣಗಳಿವೆ, ದೇವಾಲಯಗಳು ಇವೆ ಎಂಬುದನ್ನು ಈಗಾಗಲೇ ತಿಳಿದುಕೊಂಡಿರುವೆ ಎಂದು ಹೇಳಿದ್ದರು.












Click it and Unblock the Notifications