ಶಾಲಾ ಮಕ್ಕಳ ಮತಾಂತರಕ್ಕೆ ಕಾಂಗ್ರೆಸ್ ಪ್ರೋತ್ಸಾಹ: ಆರ್.ಅಶೋಕ್ ಗಂಭೀರ ಆರೋಪ
ಚಿಕ್ಕಬಳ್ಳಾಪುರ, ನವೆಂಬರ್ 19: ರಾಜ್ಯದಲ್ಲಿನ ವಕ್ಫ್ ಕಬಳಿಕೆಯು ಚಿಕ್ಕಬಳ್ಳಾಪುರದ ಸರ್ ಎಂ.ವಿಶ್ವೇಶ್ವರಯ್ಯ ಅವರು ಓದಿದ ಶಾಲೆಗೂ ಹಬ್ಬಿದೆ. ಈ ಶಾಲೆಗೆ ಮಂಗಳವಾರ ಬಿಜೆಪಿ ವಿರೋಧ ಪಕ್ಷದ ನಾಯಕ ಆರ್.ಅಶೋಕ ಭೇಟಿ ನೀಡಿದರು. ಶಾಲೆಯ ಆವರಣದ ಜಾಗವನ್ನು ವಕ್ಫ್ ಜಾಗ ಎಂದು ಉಲ್ಲೇಖಿಸಿದ್ದನ್ನು ಖಂಡಿಸಿದ ಅವರು, 100 ವರ್ಷ ಇತಿಹಾಸದ ಶಾಲೆಯ ಆವರಣದೊಳಗೆ ದರ್ಗಾ ಬರಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದರು.
ವಕ್ಫ್ ಬೋರ್ಡ್ ಎಂದರೆ ಕೊಳ್ಳಿ ದೆವ್ವ. ಇದು ಎಲ್ಲ ಕಡೆ ಬೆಂಕಿ ಹಚ್ಚುತ್ತಿದೆ. ವಿಶ್ವವಿಖ್ಯಾತ ಎಂಜಿನಿಯರ್ ಸರ್ ಎಂ.ವಿಶ್ವೇಶ್ವರಯ್ಯ ಅವರ ಸಮಾಧಿ ಎಂದರೆ ಅದು ಪುಣ್ಯ ಸ್ಥಳ. ಈ ಸ್ಥಳ ಹಾಗೂ ಅವರು ಓದಿದ ಶಾಲೆ ಕೂಡ ವಕ್ಫ್‌ಗೆ ಸೇರಿದೆ ಎಂದು ಘೋಷಿಸಲಾಗಿದೆ.

ವಿಶ್ವೇಶ್ವರಯ್ಯನವರು ಒಂದರಿಂದ ನಾಲ್ಕನೇ ತರಗತಿವರೆಗೆ ವ್ಯಾಸಂಗ ಮಾಡಿದ್ದರು. ಈ ಶಾಲೆಯನ್ನು ಹಲವು ಕಂಪನಿಗಳು ಸಿಎಸ್‌ಆರ್ ಅನುದಾನದಲ್ಲಿ ಅಭಿವೃದ್ಧಿ ಮಾಡಿವೆ. ಈ ಶಾಲೆಗೆ ಕಾಂಪೌಂಡ್ ಕೂಡ ಇದೆ. ಆದರೂ ಶಾಲೆಯ ಆವರಣದೊಳಗೆ ಮಸೀದಿ ನಿರ್ಮಾಣವಾಗಿದೆ. 100 ವರ್ಷಗಳ ಇತಿಹಾಸವಿರುವ ಈ ಶಾಲೆ ವಕ್ಫ್‌ಗೆ ಸೇರಲು ಹೇಗೆ ಸಾಧ್ಯ ಎಂದರು.
ಶಾಲೆಯ ಒಳಗೆ ಬಾವುಟ- ಗೋರಿ ನಿರ್ಮಾಣ
ಶಾಲೆಯ ಒಳಗೆ ಬಂದು ಹಸಿರು ಬಾವುಟ ಹಾರಿಸಿ ಗೋರಿ ನಿರ್ಮಿಸಿದ್ದಾರೆ. ಇಲ್ಲಿ ಇಡೀ ವರ್ಷ ಬಾವುಟ ಹಾರಿಸುತ್ತಿದ್ದಾರೆ. ಇದರಿಂದ ಮಕ್ಕಳಿಗೆ ಯಾವ ಸಂದೇಶ ಹೋಗುತ್ತದೆ? ಶಾಲೆಯ ಒಳಗೆ ಹಸಿರು ಬಾವುಟವನ್ನು ಎಲ್ಲೂ ನೋಡಲು ಸಾಧ್ಯವಿಲ್ಲ. ಕಾಂಗ್ರೆಸ್‌ನವರು ತ್ರಿವರ್ಣ ಧ್ವಜದ ಬಗ್ಗೆ ಮಾತಾಡುತ್ತಾರೆ. ಆದರೆ ಇಲ್ಲಿ ಹಸಿರು ಬಾವುಟ ಹಾರಿಸಲು ಅವಕಾಶ ನೀಡಿದ್ದಾರೆ. ಪ್ರತಿ ದಿನ ಮಸೀದಿಯಲ್ಲಿ ಕೂಗಿದರೆ ಮಕ್ಕಳು ವ್ಯಾಸಂಗ ಮಾಡುವುದು ಹೇಗೆ? ಇದು ಮತಾಂತರಕ್ಕೆ ನೀಡುವ ಪ್ರೋತ್ಸಾಹ ಎಂದು ಅವರು ಗಂಭೀರ ಆರೋಪ ಮಾಡಿದರು.
ನಾನು ಈ ಶಾಲೆಗೆ ಭೇಟಿ ನೀಡುತ್ತೇನೆ ಎಂದು ಗೊತ್ತಾದ ಕೂಡಲೇ ಪಹಣಿಯಲ್ಲಿ ಬದಲಾವಣೆ ಮಾಡಲಾಗಿದೆ. ಇದು ವಿರೋಧ ಪಕ್ಷದ ಶಕ್ತಿ. ಸರ್.ಎಂ.ವಿಶ್ವೇಶ್ವರಯ್ಯನವರು ಕಾಲಿಟ್ಟ ಜಾಗವನ್ನು ಕಬಳಿಸಲು ವಕ್ಫ್ ಪ್ರಯತ್ನ ಮಾಡಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾವ ಪಹಣಿಯನ್ನೂ ಬದಲಾಯಿಸುವುದಿಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಈ ಭಾಗದ ರೈತರೊಬ್ಬರು ಮೂರು ತಲೆಮಾರಿನಿಂದ ಜಮೀನು ಹೊಂದಿದ್ದಾರೆ. ಈಗ ಅವರ ಪಹಣಿಯಲ್ಲೂ ವಕ್ಫ್ ಎಂದು ಹೆಸರು ಬಂದಿದೆ. ಶ್ರೀರಂಗಪಟ್ಟಣದ ಚಿಕ್ಕಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದಾಗ ಅದರ ಪಹಣಿಯಲ್ಲಿ ವಕ್ಫ್ ಹೆಸರು ತೆಗೆದುಹಾಕಿದ್ದಾರೆ. ಇದೇ ರೀತಿ ಎಲ್ಲ ಆಸ್ತಿಗಳಲ್ಲೂ ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದರು.












Click it and Unblock the Notifications